ಯಮನಿಂದ ಸಾವಿತ್ರಿ ವರಪಡೆದ ಕಥೆ.
ಹಿಂದೆ ಮದ್ರ ದೇಶದಲ್ಲಿ ಅಶ್ವಪತಿ ಎಂಬ ರಾಜನು ರಾಜ್ಯವನ್ನಾಳುತ್ತಿದ್ದನು. ಬಹಳ ಕಾಲದವರೆಗೆ ಅವನಿಗೆ ಮಕ್ಕಳಿರಲಿಲ್ಲ.ಸಾವಿತ್ರಿ ಮಂತ್ರವನ್ನು ಜಪಿಸಿ ಹೆಣ್ಣು ಮಗುವನ್ನು ಪಡೆದಾಗ ಮಗುವಿಗೆ ಸಾವಿತ್ರಿಯೆಂದೇ ಹೆಸರಿಟ್ಟನು.
ಮಗಳು ದೈರ್ಯಶಾಲಿಯಾಗಿ ಶಸ್ತ್ರಾಸ್ತ್ರಗಳನ್ನು ಸಹ ಕಲಿತಳು.ಕುದುರೆ ಸವಾರಿ, ಕತ್ತಿ ವರಸೆ ಮಾಡುತ್ತಾ ಕಳ್ಳರನ್ನು ಹಿಡಿದು ಶಿಕ್ಷಿಸುತ್ತಿದ್ದಳು. ಹೀಗೆ ಅವಳು ಪ್ರಾಪ್ತ ವಯಸ್ಕಳಾದಾಗ ಅವಳನ್ನು ಯಾವುದೇ ರಾಜಕುಮಾರನು ಮದುವೆಯಾಗಲು ಬರಲಿಲ್ಲ,ಬಂದರೂ ಒಪ್ಪಲಿಲ್ಲ.
ಕೊನೆಗೆ ಅಶ್ವಪತಿಯು ಸಾವಿತ್ರಿಗೆ ನಿನಗೆ ಸರಿಯಾದ ವರನನ್ನು ಹುಡುಕಿ ಬಾರೆಂದು ಹೇಳಿದನು.ಸಾವಿತ್ರಿಯು ಅರಣ್ಯದಲ್ಲಿ ತಿರುಗಾಡುತ್ತಾ ವೃದ್ದರ ಸೇವೆ ಮಾಡುತ್ತಿರುವವರನ್ನು ಗಮನಿಸಿದಳು.ಹಾಗೆಯೇ ಬರುವಾಗ ದ್ಯುಮತ್ಸೆನ ಎಂಬ ರಾಜನು ಇರುವ ಆಶ್ರಮವನ್ನು ಪ್ರವೇಶಿಸಿದಳು. ಶಾಲ್ವ ದೇಶದ ರಾಜನಾದವನು ವಾನಪ್ರಸ್ಥದಲ್ಲಿದ್ದನು. ಅವನು ಕುರುಡನು ಸಹ ಆಗಿದ್ದನು.ಅವನ ಮಗ ವಿವಾಹ ವಯಸ್ಕನಾದಾಗ,ಸತ್ಯವಂತನಾಗಿ ಕ್ಷಮಾಗುಣ ಹೊಂದಿ ತಾಯಿ ತಂದೆಯರ ಸೇವೆ ಮಾಡುತ್ತ ಇದ್ದನು.
ಸತ್ಯವಾನನನ್ನು ನೋಡಿದಾಗ ಅವನೇ ತನಗೆ ಯೋಗ್ಯ ಪತಿ ಎಂದು ತಿಳಿದು ಬಂದು ತಂದೆಗೆ ಹೇಳಿದಳು.ಸತ್ಯವಾನನು ರಾಜ್ಯವಿಲ್ಲದ ರಾಜಕುಮಾರ. ಅಶ್ವಪತಿ ಬಂದು ಅವನ ಬಗ್ಗೆ ವಿಚಾರಿಸಿದಾಗ ನಾರದರು ಅಶ್ವಪತಿಗೆ “ಸತ್ಯವಾನ ಅಲ್ಪಾಯು” ಎಂದು ಹೇಳಿದರು.ಅದುದರಿಂದ ಬೇರೆ ಯಾರನ್ನಾದರೂ ಹುಡುಕಿರಿ ಎಂದು ಹೇಳಿದರು.ಆದರೆ ಸಾವಿತ್ರಿ “ನಾನು ನನ್ನ ಮನಸ್ಸನ್ನು ಆವರಿಸಿದ ಸತ್ಯವಾನನೇ ನನ್ನ ಪತಿಯಾಗುವನು” ಎಂದಳು.ಅದರಂತೆ ಸಾವಿತ್ರಿ ಸತ್ಯವಾನರ ಮದುವೆ ನಡೆಯಿತು.
ಮದುವೆಯ ನಂತರದಲ್ಲಿ ಸಾವಿತ್ರಿ ಮಹಾರಾಣಿಯಂತೆ ವಸ್ತ್ರ ಧರಿಸದೇ ತಪಸ್ವಿನಿಯಂತೆ ಜೀವನ ನಡೆಸಿದಳು.ಅತ್ತೆ ಮಾವಂದಿರ ಸೇವೆಯೊಂದಿಗೆ ಗಂಡನನ್ನು ಎಚ್ಚರಿಕೆಯಿಂದ ನೋಡಿಕೊಂಡಳು. ಗಂಡನ ಪ್ರೀತಿಯನ್ನು ಸಹ ಪಡೆದಳು. ನಾರದರು ಸತ್ಯವಾನನಿಗೆ ಒಂದೇ ವರ್ಷ ಆಯುಷ್ಯ ಎಂದು ತಿಳಿಸಿದ್ದರು.ಇನ್ನೂ ಕೆಲವೇ ದಿನಗಳಿವೆ ಎಂದಾಗ ವ್ರತ ನಿಯಮಗಳನ್ನು ಅನುಸರಿಸಿದಳು.ಪೂಜೆ ಕೈಗೊಂಡಳು.
ಸತ್ಯವಾನನು ಹೂ ಸಮೇತ ಇತ್ಯಾದಿಗಳನ್ನು ತರಲು ಅಡವಿಗೆ ಹೊರಟಾಗ ತಾನು ಸಹ ಹೊರಟಳು.ಆಗ ಸತ್ಯವಾನನು ಸಾವಿತ್ರಿ ಇಂದು ನೀನು ಬರುವುದು ಬೇಡ ಎಂದನು.ಆದರೆ ಸಾವಿತ್ರಿ ಬಿಡದೇ ಇಂದು ನಾನು ಬರುವವಳೇ ಎಂದು ಸತ್ಯವಾನನನ್ನೇ ಅನುಸರಿಸಿದಳು. ಅರಣ್ಯದಲ್ಲಿರುವ ಸುಂದರವಾದ ಹೂಗಳ ಮರಗಳನ್ನು ನೋಡಿದರು. ಕೆಲಸ ಮಾಡುವಾಗಲೇ ಅವನಿಗೆ ತಲೆ ತಿರುಗಿದಂತಾಯಿತು.ಅವನು ಸಾವಿತ್ರಿಯ ತೊಡೆಯ ಮೇಲೆ ತಲೆ ಇಟ್ಟು ಮಲಗಿಕೊಂಡನು.
ಸಾವಿತ್ರಿ ನೋಡುತ್ತಿದ್ದಂತೆ ಯಮನು ಪಾಶವನ್ನು ಹಿಡಿದು ಸತ್ಯವಾನನ ಜೀವವನ್ನು ಒಯ್ಯತೊಡಗಿದನು.ಸಾವಿತ್ರಿ ಅವನನ್ನು ಅನುಸರಿಸಿದಾಗ ಯಮನು “ಸಾವಿತ್ರಿ ನೀನೇಕೆ ನನ್ನನ್ನು ಅನುಸರಿಸುತ್ತಿರುವೆ ? ಸತ್ಯವಾನನ ಪ್ರಾಣ ಇನ್ನೂ ಈ ಭೂಮಿಯಲ್ಲಿ ಇರಲು ಸಾಧ್ಯವಿಲ್ಲ.ಅವನ ಆಯುಷ್ಯ ಮುಗಿದಿದೆ.ಅದಕ್ಕಾಗಿ ಅವನ ಜೀವವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ನೀನು ಹಿಂತಿರುಗಿ ಹೋಗು ಎಂದನು ಯಮರಾಜ.
ಆಗ ಸಾವಿತ್ರಿ ಸತಿಗೆ ಪತಿಯೇ ಪರದೈವ ಎಂದು ಹೇಳುತ್ತ ಯಮನೊಂದಿಗೆ ಮಾತನಾಡಿದಳು.ಒಟ್ಟಿಗೆ ನಡೆದಾಗ ಗೆಳೆಯರಾಗುತ್ತಾರೆ. ಆದುದರಿಂದ ನಿನ್ನ ಸಂಗಡ ನಡೆದು ಬರುತ್ತಿರುವುದರಿಂದಾಗಿ ನಿನ್ನಲ್ಲಿ ಸ್ನೇಹ ಉಂಟಾಗಿರುವುದು.ಆದುದರಿಂದ ನಾನು ನನ್ನ ಪತಿಯೂ ಸೇರಿ ಮಾಡುವ ಕಾರ್ಯವನ್ನು ತಡೆಯುವುದು ಸರಿಯೇ ? ಎಂದಾಗ ಯಮನು ಸಾವಿತ್ರಿ ನೀನು ಪತಿವ್ರತೆ,ಧರ್ಮದಲ್ಲಿ ನೆಡೆಯುವವಳು ಬೇಕಾದ ವರವನ್ನು ಕೇಳು ಎಂದನು.
ಆಗ ಸಾವಿತ್ರಿಯು ಒಳ್ಳೆಯತನವನ್ನು ತಿಳಿದ ಯಮರಾಜನು ಅನೇಕ ವರಗಳನ್ನು ಕೊಟ್ಟನು.
ಮೊದಲ ವರದಿಂದ ದ್ಯುಮತ್ಸೆನನಿಗೆ ಕಣ್ಣುಗಳು ಬರಲೆಂದು ಕೇಳಿದಳು.
ಎರಡನೇ ವರವಾಗಿ ಅವರ ರಾಜ್ಯಗಳು ಮತ್ತೆ ಬರಲೆಂದು ಕೇಳಿ ಬರುವಂತೆ ಮಾಡಿದಳು.
ಮೂರನೇ ವರದಿಂದ ತಂದೆಗೆ ನೂರು ಮಕ್ಕಳಾಗಲೆಂದು ಕೇಳಿದಳು.
ನಾಲ್ಕನೇಯ ವರವಾಗಿ ತನಗೆ ಸಹ ನೂರು ಮಕ್ಕಳಾಗಲೆಂದು ಕೇಳಿದಳು.
ಸಾವಿತ್ರಿಗೆ ಗಂಡನ ಪ್ರಾಣವನ್ನು ಮಾತ್ರ ಕೇಳಬೇಡ ಉಳಿದಂತೆ ಏನಾದರೂ ಕೇಳು ಎಂದಾಗ ಸಾವಿತ್ರಿಯು ಈ ರೀತಿ ವಿವರಿಸಿದಳು.ಗಂಡನಿಲ್ಲದೆ ನಾನು ಏನನ್ನು ಬಯಸುವುದಿಲ್ಲ.ಸ್ವರ್ಗ ಸಂಪತ್ತು ಏನೂ ಬೇಡ ಗಂಡನಿಲ್ಲದೇ ನಾನು ಬದುಕಲು ಬಯಸುವುದಿಲ್ಲ ಎಂದು ಐದನೇಯ ವರವಾಗಿ ನಾಲ್ಕನೇಯ ವರಕ್ಕೆ ಅನುಕೂಲವಾಗುವಂತೆ ಗಂಡನ ಪ್ರಾಣವನ್ನು ಬೇಡಿದಳು.ಯಮನು ಇಂದು ನಾನು ಪತಿವ್ರತೆಯಿಂದ ನ ಸೋತಿದ್ದೇನೆ ಎಂದು ಹೇಳಿ ಅವನನ್ನು ಬಿಟ್ಟು ಹೊರಟನು.
ಸಾವಿತ್ರಿ ಸತ್ಯವಾನರು ಆಶ್ರಮಕ್ಕೆ ಮರಳಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು.ರಾಜ ದ್ಯುಮತ್ಸೆನನಿಗೆ ಕಣ್ಣು ಬಂದಿತ್ತು ಎಲ್ಲರೂ ಸಾವಿತ್ರಿ ಸತ್ಯವಾನರನ್ನೇ ಕಾಯುತ್ತಿದ್ದರು.ಸತ್ಯವಾನನಿಗೆ ಎಚ್ಚರವಾದಾಗ ರಾತ್ರಿ ಬಹಳವಾಗಿದ್ದು ನೆನಪಾಯಿತು.
ಸಾವಿತ್ರಿಯೊಂದಿಗೆ ಆಶ್ರಮಕ್ಕೆ ಬಂದಾಗ ಅವನಿಗೆ ಸಹ ಆಶ್ಚರ್ಯ ಕಾದಿತ್ತು.ಎಲ್ಲರೆದುರಿಗೆ ಸಾವಿತ್ರಿಯನ್ನು ನಾನು ಮಲಗಿದಾಗಿನಿಂದ ಏನಾಯಿತು ಎಂದು ಹೇಳಲು ಕೇಳಿದನು.ಸಾವಿತ್ರಿ ಯಮನೊಂದಿಗೆ ಸಂವಾದ ನೆಡೆಸಿದ್ದು,ವರ ಪಡೆದಿದ್ದು ಎಲ್ಲವನ್ನು ತಿಳಿಸಿದಳು.ಸಾವಿತ್ರಿಯು ಪತಿಭಕ್ತಿಯನ್ನು ತಿಳಿದು ಅವಳು ಗಂಡನ ಜೀವವನ್ನು ಮರಳಿ ಪಡೆದಿರುವುದನ್ನು ಕೊಂಡಾಡಿದರು.
ಈ ಕಥೆಯನ್ನು ಮಾರ್ಕಂಡೇಯ ಮಹರ್ಷಿಗಳು ಪಾಂಡವರಿಗೆ ಎಲ್ಲವನ್ನು ವಿವರವಾಗಿ ತಿಳಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
