fbpx
ಸಣ್ಣ ಕಥೆ

ಅಲ್ಪ ವಿದ್ಯೆ ಪಡೆದೋನಿಗೆ ಅಹಂಕಾರ ಜಾಸ್ತಿ

ಕರ್ಮಗಳಿಂದ ಮನ್ನಣೆ.

ಈ ಪ್ರಪಂಚದಲ್ಲಿ ಇತಿಹಾಸವನ್ನು ಪರಿಶೀಲಿಸಿದರೆ ಅಲ್ಲಿ ಅನೇಕ ಅರಸರು,ಮಂತ್ರಿಗಳು, ಸೇನಾಧಿಪತಿಗಳು, ವೀರರು, ವಿದ್ವಾಂಸರು, ಶ್ರೀಮಂತರೇ ಮೊದಲಾದ ಗಣ್ಯರುಗಳ ವಿವರಗಳನ್ನು ಕಾಣುತ್ತೇವೆ.ಇವರ ಪೈಕಿ ಕೆಲವರು ಉತ್ತಮ ಕುಲದಲ್ಲಿ ಜನಿಸಿದವರೂ ಇರಬಹುದು. ಇನ್ನೂ ಕೆಲವರು ಜನ ಸಾಮಾನ್ಯರ ವಂಶದಲ್ಲಿ ಜನಿಸಿರಬಹುದು.ಕೇವಲ ಉತ್ತಮ ಕುಲದಲ್ಲಿ ಜನಿಸಿದ ಮಾತ್ರಕ್ಕೆ ಅರ್ಹತೆ, ಯೋಗ್ಯತೆಗಳು, ಬರುತ್ತವೆಯೇ ?

ಇಲ್ಲ ದೊಡ್ಡಸ್ತಿಕೆ ಅಹಂಕಾರಗಳಿಂದ ಮೆರೆಯುವ,ಜಗಳವಾಡುವ ಕೆಲವು ಜನರಿರುತ್ತಾರೆ.ಅಂಥವರ ಕಣ್ಣು ತೆರೆಸಿದ ಗ್ರೀಕ  ತತ್ವವಿಜ್ಞಾನಿ ಯೊಬ್ಬರ ನಿದರ್ಶನ ತುಂಬಾ ರೋಚಕವಾಗಿದೆ.

ಗ್ರೀಸ್ ದೇಶದಲ್ಲಿ ಹಿಂದೆ ಡಯಾಸೀನಿಸ್ ಎಂಬ ಹೆಸರಿನ ಸಂತರಿದ್ದರು. ಅವರು ಅರಿಸ್ಟಾಟಲ್ ನ ಸಮಕಾಲೀನರಾಗಿದ್ದರು. ಮಹಾನ ವಿದ್ವಾಂಸರಾಗಿದ್ದರೂ ನಿರಹಂಕಾರಿಯಾಗಿ,ಸರಳರೂ ಆಗಿದ್ದು ಅವರ ಖ್ಯಾತಿಯು ದೇಶ ವಿದೇಶಗಳಲ್ಲಿ ಹರಡಿತ್ತು. ಅವರು ವಿಶ್ವ ವಿಜಯಿಯಾಗಿದ್ದ ಅಲೆಕ್ಸಾಂಡರ್ ನಿಗೂ ಮಾರ್ಗದರ್ಶನ ಉಪದೇಶ ನೀಡಿದವರೆಂದು ಖ್ಯಾತರಾಗಿದ್ದರು ಹಾಗೂ ಸಾರ್ವತ್ರಿಕ ಮನ್ನಣೆ ಗಳಿಸಿದ್ದರು.

ಅವರ ಕೀರ್ತಿಯನ್ನು ನೋಡಿ ಸಹಿಸಲಾಗದೇ ಇನ್ನೊಬ್ಬ ವಿದ್ವಾಂಸನು ಅವರೊಡನೆ ಚರ್ಚೆ ನೆಡಿಸಿ,ಹೀಯಾಳಿಸಬೇಕೆಂಬ ಉದ್ದೇಶದಿಂದ ಅವರ ಬಳಿಗೆ ಬಂದು ಅವನು ಸಂತರೊಡನೆ ಹೀಗೆಂದ – ನೀವು ದೊಡ್ಡ ವಿದ್ವಾಂಸರೆಂದು ಕೇಳಿದ್ದೇನೆ.ನಾನಿಂದು ನಿಮ್ಮ ವಿದ್ವತ್ತೆಯನ್ನು ಪರೀಕ್ಷಿಸಲೆಂದೇ ಬಂದಿದ್ದೇನೆ.ನಿಮ್ಮ ಭ್ರಮೆಯನ್ನು ದೂರ ಮಾಡಲೆಂದೇ ಬಂದಿದ್ದೇನೆ. ನಿಮಗಿಂತಲೂ ದೊಡ್ಡ -ದೊಡ್ಡ ವಿದ್ವಾಂಸರೂ ಈ ಪ್ರಪಂಚದಲ್ಲಿದ್ದಾರೆ.ನನಗವರ ಪರಿಚಯವುಂಟು,ನಿಮಗೇನು ಗೊತ್ತು ?  ಸಂತರು ಸಿಟ್ಟಾಗಲಿಲ್ಲ.

ತಾಳ್ಮೆಯಿಂದ ಉತ್ತರಿಸಿದರು- ಇರಬಹುದು ಈ ಪ್ರಪಂಚದಲ್ಲಿ ನನಗಿಂತಲೂ ದೊಡ್ಡ ವಿದ್ವಾಂಸರೂ ಇರಬಹುದು. ಅಹಂಕಾರಿ ವಿದ್ವಾಂಸನು ತನ್ನ ವಾದವನ್ನು ಮುಂದುವರೆಸಿದ – ‘ ಅಂಥವರೆದುರು ನೀನ್ಯಾವ ಸೀಮೆಯ ವಿದ್ವಾಂಸ ? ಬಾವಿಯೊಳಗಿನ ಕಪ್ಪೆಯಂತೆ- ಅಥೆನ್ಸ್ ನಗರವನ್ನೇ ಪ್ರಪಂಚವೆಂದು ಭಾವಿಸಿದ್ದೀಯ!  ನಾನು ಇಡೀ ಪ್ರಪಂಚವನ್ನು ಸುತ್ತಾಡಿದ್ದೇನೆ.ನನಗೆ  ಅನೇಕ ವಿದ್ವಾಂಸರೂ, ತತ್ವ ಜ್ಞಾನಿಗಳ ಪರಿಚಯವಿದೆ. ಗೊತ್ತೇ ?!  ಎಂದು ಅಹಂಕಾರದಿಂದ ಪ್ರಶ್ನಿಸಿದಾಗ ಸಂತರು ಕೋಪಗೊಳ್ಳದೇ ಸಮಾಧಾನದಿಂದ ಹೇಳಿದರು- “ ಲೋ ತಮ್ಮ, ನನಗೂ ಈ ಪ್ರಪಂಚದಲ್ಲಿ ದೊಡ್ಡ ದೊಡ್ಡ ಧನಿಕರು, ಶ್ರೀಮಂತರ ಗೆಳೆತನ- ಪರಿಚಯವೇನೋ  ಇದೆ.ಆದರೆ ನಾನೆಂದು ಶ್ರೀಮಂತನಾಗಲಿಲ್ಲ.ಆಗಲೂ ಸಾಧ್ಯವಾಗದು”.

 

ಈ ಮಾತನ್ನು ಕೇಳಿದಾಗ ಆ ಆಹಂಕಾರಿ  ವಿದ್ವಾಂಸನಿಗೆ ತಣ್ಣೀರಿನಲ್ಲಿ ಅದ್ದಿದಂತಾಯಿತು. ತನ್ನ ತಪ್ಪಿನ ಅರಿವಾಯಿತು.ನಂತರ ಕಾಲುಗಳಿಗೆ ನಮಸ್ಕರಿಸುತ್ತಾ ಕ್ಷಮೆ ಯಾಚಿಸಿ ಹೊರಟು ಹೋದ.

ನೀತಿ :-

ನಾವು ಗಮನಿಸಬೇಕಾದ ಸಂಗತಿ ಏನೆಂದರೆ  ಮನುಷ್ಯನಿಗೆ ಹಿರಿಮೆ- ಗರಿಮೆಗಳು ಕೇವಲ ಹುಟ್ಟಿನಿಂದ ಬರುವುದಲ್ಲ.ಆತನು ಮಾಡುವ ಕರ್ಮಗಳಿಂದ ಬರುತ್ತವೆ. ಕೇವಲ ಕುಲ-ವಂಶ,ಮತ-ಧರ್ಮ, ಹುದ್ದೆ ಸ್ಥಾನಗಳ ಬಗ್ಗೆ  ಅಹಂಕಾರ ಪಡಬಾರದು. ಉತ್ತಮ ಗುಣ, ಅರ್ಹತೆ,ಕಾರ್ಯಗಳಿಂದಾಗಿ ವ್ಯಕ್ತಿಗೆ  ಅವನು ಬಯಸಿದರೂ, ಬಯಸದಿದ್ದರೂ,  ಮನ್ನಣೆ ಗೌರವಗಳು ದೊರೆಯುತ್ತವೆ. ಅಂತಹ ಗೌರವ ಮನ್ನಣೆಗಳಿಗೆ ಸೂಕ್ತವಾದ ಕಾರ್ಯ ಕಲಾಪಗಳಲ್ಲಿ  ಜನರು ತಮ್ಮ ಬದುಕನ್ನು  ಸಾರ್ಥಕ  ಪಡಿಸಿಕೊಳ್ಳಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top