fbpx
ದೇವರು

ವೈದ್ಯನಾಥೇಶ್ವರ ಸ್ವಾಮಿ ನೆಲೆಸಲು ರಾವಣ ಹೇಗೆ ಕಾರಣ ಓದಿ ಈ ಕಥೆ

ಶ್ರಾವಣ ಮಾಸದಲ್ಲಿ ವೈದ್ಯನಾಥೇಶ್ವರ ವಿಶೇಷತೆ ತಿಳಿಯಿರಿ.

ಶ್ರಾವಣ ಮಾಸ ಅತ್ಯಂತ ಶುಭ ಮತ್ತು ಶ್ರೇಷ್ಠ.ಈ ಮಾಸದಲ್ಲಿ ಏನು ಕೆಲಸ ಮಾಡಿದರು ಒಳ್ಳೆಯದು ಮತ್ತು ಒಳ್ಳೆಯ ಕೆಲಸಗಳನ್ನು ಮಾಡಲು ಇದು ಸೂಕ್ತ ಕಾಲ.ಹಿಂದೂಗಳು  ಇದು ಅತ್ಯಂತ ಪವಿತ್ರ ಮಾಸ ಎಂದು ಸಹ ನಂಬಿದ್ದಾರೆ.ಈ ಮಾಸದಲ್ಲಿ ಅಧಿಕವಾಗಿ ಹಬ್ಬಗಳು ಸಹ ಬರುತ್ತವೆ. ರಕ್ಷಾ ಬಂಧನ, ಮಂಗಳ  ಗೌರಿ ವ್ರತ,ಭೀಮನ ಅಮಾವಾಸ್ಯೆ,ನಾಗರ ಪಂಚಮಿ, ಶ್ರೀ ಕೃಷ್ಣ ಜನ್ಮಾಷ್ಟಮಿ , ಹೀಗೆ ಇನ್ನೂ ಅನೇಕ ಹಬ್ಬಗಳ ಸಾಲೇ ಬರಲಿದೆ.ಹಾಗೇ ಪ್ರತಿ ಉರಲ್ಲಿಯೂ  ಈ ಶ್ರಾವಣ ಮಾಸವನ್ನು ಆಚರಿಸುತ್ತಾರೆ. ಊರ ದೇವರಿಗೆ ಜಾತ್ರೆಯನ್ನು ಮಾಡಿ ಉರಿನವರೆಲ್ಲ ಓಟ್ಟಾಗಿ ಸೇರಿ ಊರ  ಹಬ್ಬದಂತೆ ಆಯಾ ಊರಿನಲ್ಲಿರುವ ದೇವರನ್ನು ಆರಾಧಿಸುತ್ತಾರೆ.ಇನ್ನೂ ಮದುವೆ,ಗೃಹ ಪ್ರವೇಶ ಹೀಗೆ ಎಲ್ಲಾ ಶುಭ  ಕೆಲಸವನ್ನು ಈ ಮಾಸದಲ್ಲಿ ಮಾಡುತ್ತಾರೆ.

ಈ ಶ್ರಾವಣ ಮಾಸದಲ್ಲಿ ಬರುವ ಎಲ್ಲಾ ದಿನಗಳು ಸಹ ಅದರದ್ದೇ ಆದ ವಿಶೇಷ ಮಹತ್ವವನ್ನು ಹೊಂದಿವೆ.ಆ ವಿಶೇಷ ದಿನಗಳ ಬಗ್ಗೆ ತಿಳಿಯೋಣ.

ಶ್ರಾವಣ ಮಾಸ ಈ ವರ್ಷ ಅಂದರೆ 2017 ರಲ್ಲಿ ಜುಲೈ 23 ರಂದು ಸೋಮವಾರದಂದು ಪ್ರಾರಂಭವಾಗುವ ಇದು  ಬಹಳ ವಿಶೇಷತೆಯನ್ನು ಒಳಗೊಂಡಿದೆ.ಯಾಕೆಂದರೆ ಶ್ರಾವಣ ಮಾಸ ಎಂದರೆ ಶಿವನಿಗೆ ಶ್ರೇಷ್ಠ ಆದ್ದರಿಂದ ಸೋಮವಾರವೇ ಶ್ರಾವಣ ಬಂದಿರುವುದು ಇನ್ನೂ ವಿಶೇಷ.ಸೋಮವಾರ ಶಿವನಿಗೆ ಮೀಸಲು,ಪ್ರತಿ ಶ್ರಾವಣ ಸೋಮವಾರವು  ವ್ರತ ಉಪವಾಸವನ್ನು ಕೈಗೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಅವರ ಆಸೆಗಳು ಈಡೇರುತ್ತವೆ ಎನ್ನುವ ನಂಬಿಕೆ ಹಿಂದಿನಿಂದಲೂ ಬಂದಿದೆ.

ಇನ್ನೂ  ಶ್ರಾವಣ ಮಂಗಳವಾರವೂ ಸಹ  ಹಲವು ವಿಶೇಷತೆಗಳನ್ನು ಹೊಂದಿದೆ. ಮಂಗಳ ಗೌರೀ ವ್ರತವನ್ನು ಹೆಣ್ಣು ಮಕ್ಕಳು ಮತ್ತು ಗೃಹಿಣಿಯರು ಭಕ್ತಿಯಿಂದ ಆಚರಿಸುತ್ತಾರೆ.ಮಂಗಳ ಗೌರಿಯ ಕಥೆಯನ್ನು  ಓದಿದರು ,ಆ ಕಥೆಯನ್ನು ಓದುವಾಗ ಭಕ್ತಿಯಿಂದ ಕೇಳಿಸಿಕೊಂಡರು ಸಹ ವ್ರತ ಮಾಡಿದಷ್ಟೇ  ಪುಣ್ಯ ಲಭಿಸುತ್ತದೆ.ಹೆಣ್ಣು ಮಕ್ಕಳು  ಮದುವೆಯಾಗಲು ವರನನ್ನು ಪಡೆಯಲು ಈ ವ್ರತ ಮಾಡಿದರೆ, ಗೃಹಿಣಿಯರು ತಮ್ಮ ಪತಿಗೆ ದೀರ್ಘಾಯುಷ್ಯ  ,ಆರೋಗ್ಯ ಭಾಗ್ಯ ಕೊಟ್ಟು ಕಾಪಾಡು, ದೀರ್ಘ ಸುಮಂಗಲಿ ಆಗಿರುವಂತೆ ಆಶೀರ್ವದಿಸು ಎಂದು ಕೇಳಿಕೊಳ್ಳುತ್ತಾರೆ.

ಶ್ರಾವಣ ಶುಕ್ರವಾರ ಸಹ  ವಿಶೇಷವೇ.ಶುಕ್ರವಾರ ಲಕ್ಷ್ಮೀಯ ದಿನ ಹಲವು ಮಹತ್ವಗಳನ್ನು ಹೊಳಗೊಂಡಿದೆ.ಇದೇ  ಶ್ರಾವಣ ಮಾಸದಲ್ಲಿಯೇ ವರಮಹಾಲಕ್ಷ್ಮೀ ಹಬ್ಬವು ಶುಕ್ರವಾರವೇ ಬರುತ್ತದೆ. ಎಲ್ಲರೂ ಅಂದು ಅವರವರ ಮನೆಯಲ್ಲಿ ಭಕ್ತಿಯಿಂದ ಲಕ್ಷ್ಮೀಯನ್ನು ಆರಾಧಿಸುತ್ತಾರೆ. ಹೆಣ್ಣುಮಕ್ಕಳು ಹೊಸ ಬಟ್ಟೆಯನ್ನು ಧರಿಸಿ,ಗೃಹಿಣಿಯರು ರೇಶಿಮೇ ಸೀರೆಯನ್ನುಟ್ಟು ,ಲಕ್ಷ್ಮೀಗೆ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯವಾಗಿ ಅರ್ಪಿಸುತ್ತಾರೆ.

ಶ್ರಾವಣ ಶನಿವಾರವನ್ನು  ಇನ್ನೂ ವಿಶೇಷವಾಗಿ ಆಚರಿಸುತ್ತಾರೆ. ಮಹಾವಿಷ್ಣು,ಆಂಜನೇಯ,ವೆಂಕಟೇಶ್ವರ,ಶನೈಶ್ಚರ  ದೇವಸ್ಥಾನಗಳಲ್ಲಿ ಪ್ರತಿ ಶ್ರಾವಣ ಶನಿವಾರವೂ ಭಕ್ತಾದಿಗಳಿಂದ ಅಪಾರ ಸಂಖ್ಯೆಯಲ್ಲಿ  ಬಂದು ದೇವರ ದರ್ಶನ ಪಡೆಯುತ್ತಾರೆ.

ಹಿಂದೂಗಳು ಶ್ರಾವಣಕ್ಕೆ ವಿಶೇಷವಾದ ಪ್ರಾಮುಖ್ಯತೆ ಕೊಟ್ಟಿರುವುದರಿಂದ ಈ  ಮಾಸದಲ್ಲಿ ಯಾರಾದರೂ ಜನಿಸಿದರು ಸಹ ಒಳ್ಳೆಯದು. ಅವರು ಪ್ರಸ್ಸಿದ್ದಿಯನ್ನು ಗಳಿಸಿ ಮನೆಗೆ ಒಳ್ಳೆಯ ಮಕ್ಕಳಾಗಿ ತಂದೆ ತಾಯಿಯರಿಗೆ ಅವರ ಮನೆತನಕ್ಕೆ ಹೆಸರು ತರುತ್ತಾರೆ ಎನ್ನುವ  ನಂಬಿಕೆ ಜನರಲ್ಲಿ ಇದೆ.ಈ ಶ್ರಾವಣ ಮಾಸದಲ್ಲಿ ಜನಿಸಿದವರು ಶ್ರೀ ಕೃಷ್ಣ, ಹಯಗ್ರೀವ,ಸಮುದ್ರ ಮಂಥನದಲ್ಲಿ ಜನಿಸಿದ ಲಕ್ಷ್ಮೀ, ಚಂದ್ರ,ಗೋ ಮಾತೇ.

ಶ್ರಾವಣ ಮಾಸದ ವಿಶೇಷತೆ.

ಉತ್ತರ ಭಾರತದಲ್ಲಿರುವ ಶಿವನ ದೇವಸ್ಥಾನದಲ್ಲಿ ಶ್ರಾವಣ ಮಾಸವನ್ನು ಒಂದು ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಾರೆ.ಅದರಲ್ಲೂ ಶಿವನ ದೇವಸ್ಥಾನದಲ್ಲಿ ಬಹಳ ವಿಶೇಷ. “ಹರ ಹರ ಮಹಾದೇವ” ಎಂದು ಘೋಷಣೆ ಕೂಗುತ್ತಾ ಯಾತ್ರಾರ್ಥಿಗಳು ಕಾಲ್ನಡಿಗೆಯಲ್ಲಿ ಯಾತ್ರೆಯನ್ನು ಕೈಗೊಳ್ಳುತ್ತಾರೆ.12 ಜ್ಯೋತಿರ್ಲಿಂಗ ಹೊಂದಿರುವ ಕ್ಷೇತ್ರಗಳಿಗೂ ಸಹ ಯಾತ್ರೆ ಹೋಗುತ್ತಾರೆ.ಇಂದು ನಾವು ವೈದ್ಯನಾಥ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ.

ವೈದ್ಯನಾಥ ಜ್ಯೋತಿರ್ಲಿಂಗ ಜಾರ್ಖಂಡ್ ರಾಜ್ಯದ  ಡಿಯೋಘರ ಜಿಲ್ಲೆಯ ಬೈದ್ಯನಾಥ ಧಾಮದಲ್ಲಿದೆ.ಶ್ರಾವಣ ಮಾಸದಲ್ಲಿ ಸಾವಿರಾರು ಭಕ್ತಾದಿಗಳು ಸುಲ್ತಾನ್ ಗಂಜ್ ನಿಂದ ತಮ್ಮ ಮಡಿಕೆಗಳಲ್ಲಿ ಗಂಗಾ ನದಿಯ ನೀರನ್ನು ತುಂಬಿಕೊಂಡು 109 ಕಿಲೋಮೀಟರ್ ಗಳಷ್ಟು ದೂರ ಶಿವನನ್ನು ನೆನೆಸುತ್ತಾ  ನಡೆದುಕೊಂಡೇ ದೇವಾಲಯಕ್ಕೆ ಹೋಗುತ್ತಾರೆ.

ಪೌರಾಣಿಕ ಹಿನ್ನೆಲೆ.

ಒಮ್ಮೆ ರಾವಣನು ಶಿವನನ್ನು ಕೈಲಾಸದಲ್ಲಿ ಪೂಜಿಸಿದನು. ಶಿವನು ಅವನ ಪೂಜೆಯನ್ನು ಮೆಚ್ಚಲಿಲ್ಲ. ಆಗ ಶಿವನನ್ನು ಪ್ರಸನ್ನ ಗೊಳಿಸಲು ಘೋರ ತಪ್ಪಸನ್ನು ಮಾಡಿದನು.ಒಂದು ಹಳ್ಳವನ್ನು ಮಾಡಿ,ಅಲ್ಲಿ ಬೆಂಕಿಯನ್ನು ಹೊತ್ತಿಸಿ ಶಿವಲಿಂಗವನ್ನು ಇಟ್ಟು ಹೋಮಗಳನ್ನು ಮಾಡಿದನು.ಬೇಸಿಗೆ ಕಾಲದಲ್ಲಿ ತನ್ನ ಸುತ್ತಲೂ ಐದು ಕಡೆ ಬೆಂಕಿಯನ್ನು ಹೊತ್ತಿಸಿ ಪಂಚಾಗ್ನಿ ತಪಸ್ಸನ್ನು ಮಾಡಿದನು.

ಮಳೆಗಾಲದಲ್ಲಿ ನೆಲದ ಮೇಲೆ ಕುಳಿತು ತಪಸ್ಸನ್ನು ಮಾಡಿದನು. ಚಳಿಗಾಲದಲ್ಲಿ ನೀರೊಳಗೆ ಕುಳಿತು ತಪಸ್ಸನ್ನು ಮಾಡಿದನು.ಇಂತಹ ಘೋರ ತಪಸ್ಸಿನಿಂದಲೂ ಸಹ ಶಿವನನ್ನು ಪ್ರಸನ್ನ ಗೊಳಿಸಲು ಆಗಲಿಲ್ಲ. ಏಕೆಂದರೆ ರಾವಣನಲ್ಲಿ ಅಹಂಕಾರ ಹಾಗೂ ದುಷ್ಟತನ ತುಂಬಿತ್ತು.ನಂತರ ರಾವಣನು ತನ್ನ ಅಹಂಕಾರ ಹಾಗೂ ದುಷ್ಟತನಕ್ಕೆ ಪ್ರತೀಕವಾದ 10 ತಲೆಗಳನ್ನು ಒಂದರ ನಂತರ ಮತ್ತೊಂದನ್ನು ಕಡಿಯುತ್ತಾ ಶಿವನಿಗೆ ಅರ್ಪಿಸಲು ಶುರು ಮಾಡಿದನು.ಕೊನೆಯ ತಲೆಯನ್ನು ಇನ್ನೇನು ಕಡಿಯಬೇಕು ಎನ್ನುವಷ್ಟರಲ್ಲಿ ಶಿವ ಪ್ರತ್ಯಕ್ಷನಾಗಿ. ಶಿವನು ಎಲ್ಲಾ ತಲೆಗಳನ್ನು ಮತ್ತೊಮ್ಮೆ ಮರು ಸ್ಥಾಪಿಸಿ ಜೋಡಿಸಿದನು. ಕಡೆಗೂ ರಾವಣನ ಭಕ್ತಿಗೆ ಮೆಚ್ಚಿ ಕೃಪೆ ತೋರಿ ರಾವಣನಿಗೆ ತನ್ನ ಶ್ರೇಷ್ಠ ಭಕ್ತ ಎಂಬ ಬಿರುದನ್ನು ಕೊಟ್ಟನು.

ರಾವಣನು ವರದ ರೂಪದಲ್ಲಿ ಶಿವನನ್ನೇ ಬೇಡಿದನು.ಶಿವನು ತನ್ನ ಜೊತೆಗೆ  ಲಂಕೆಗೆ ಬಂದು  ಅಲ್ಲಿಯೇ ನೆಲೆಸುವಂತೆ ಪ್ರಾರ್ಥಿಸಿದನು. ಶಿವನು  ಆತ್ಮಲಿಂಗವನ್ನು ಕೊಟ್ಟು ಅದನ್ನು ರಾವಣನು  ಎಲ್ಲಿ ನೆಲದ ಮೇಲೆ ಇಡುತ್ತಾನೋ ಅಲ್ಲಿಯೇ ಅದು ಶಾಶ್ವತವಾಗಿ ನೆಲೆಯಾಗುತ್ತದೆ ಎಂದು ಹೇಳಿದನು.

ದೇವತೆಗಳು ರಾವಣನ ಈ ಯೋಜನೆಯಿಂದ ಭಯಗೊಂಡರು.ಒಮ್ಮೆ ರಾವಣನು ಆತ್ಮಲಿಂಗವನ್ನು ಲಂಕೆಯಲ್ಲಿ ಸ್ಥಾಪಿಸಿದರೆ ಅವನನ್ನು ಯುದ್ಧದಲ್ಲಿ ಸೋಲಿಸುವುದು ಅಸಾಧ್ಯ. ಆದ್ದರಿಂದ ದೇವತೆಗಳು ಒಂದು ಉಪಾಯ ಮಾಡಿದರು.ವರುಣ ದೇವನನ್ನು ಹೇಗಾದರೂ ಮಾಡಿ ರಾವಣನ ಹೊಟ್ಟೆಯನ್ನು ಪ್ರವೇಶಿಸುವಂತೆ ಕೇಳಿಕೊಂಡರು.ಅಂತೆಯೇ ವರುಣ ದೇವನು ತನ್ನ ಶಕ್ತಿಯಿಂದ ರಾವಣನಿಗೆ ತಿಳಿಯದಂತೆ ಪ್ರವೇಶಿಸಿದನು. ಆಗ ರಾವಣನಿಗೆ ಮೂತ್ರವನ್ನು ಮಾಡುವ ಒತ್ತಡ ಶುರುವಾಯಿತು.ಅವನು ಆತ್ಮಲಿಂಗವನ್ನು ಅಲ್ಲಿಯೇ ಇದ್ದ ಒಬ್ಬ ಬ್ರಾಹ್ಮಣನ ಕೈಗೆ ಕೊಟ್ಟು ನೆಲದ ಮೇಲೆ ಇಡಬೇಡ ನಾನು ಬರುವವರೆಗೂ ಕೈಯಲ್ಲೇ ಹಿಡಿದುಕೊಂಡಿರು ಎಂದು ಹೇಳಿ ಮೂತ್ರ ಮಾಡಲು ಹೋದನು.

ಸಾಕ್ಷಾತ್ ಗಣೇಶನೇ ಬ್ರಾಹ್ಮಣ ವೇಷದಲ್ಲಿ ಅಲ್ಲಿಗೆ ಬಂದಿದ್ದ.ರಾವಣ ಸುಮಾರು ಸಮಯ ಕಳೆದರು  ಬರಲೇ ಇಲ್ಲ.ಅವನಿಗೆ ಮೂತ್ರ ನಿಲ್ಲಲೂ ಇಲ್ಲ.ಕೊನೆಗೆ ಬ್ರಾಹ್ಮಣ ವೇಷದಲ್ಲಿದ್ದ ಗಣೇಶನು ಆತ್ಮಲಿಂಗವನ್ನು ಅಲ್ಲಿಯೇ ನೆಲದ ಮೇಲೆ ಇಟ್ಟನು.

ಭಗವಂತನಾದ ಶಿವನು ಅಲ್ಲಿಯೇ ನೆಲೆ ನಿಂತನು.ನಂತರ ಹಿಂತಿರುಗಿ ಬಂದ ರಾವಣನು ನೆಲದ ಮೇಲೆ ಇದ್ದ ಆತ್ಮಲಿಂಗವನ್ನು ಕಂಡು ತನ್ನ ಬಲವನ್ನೆಲ್ಲಾ ಉಪಯೋಗಿಸಿ ಆತ್ಮಲಿಂಗವನ್ನು ಮೇಲೆತ್ತಲು ಪ್ರಯತ್ನಿಸಿದರೂ ಆಗಲಿಲ್ಲ. ಕೊನೆಗೆ ಆತ್ಮಲಿಂಗಕ್ಕೆ ಕಾಲಿನಿಂದ ಒದ್ದನು.ಅವನು ಕಾಲಿನಿಂದ ಒದ್ದಾಗ ಆದ ಗುರುತು ಈಗಲೂ ಸಹ ಹಾಗೆಯೇ ಉಳಿದಿದೆ.ಇದು ಈ ಭೂಮಿಯ ಮೇಲೆ ನೆಲೆ ನಿಂತಿರುವ  12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.

ವೈದ್ಯನಾಥೇಶ್ವರ ಎನ್ನುವ ಹೆಸರು ಹೇಗೆ ಬಂತು?

ಆತ್ಮಲಿಂಗವು ವೈದ್ಯನಾಥ ಜ್ಯೋತಿರ್ಲಿಂಗ ಎಂದು ಪ್ರಸ್ಸಿದ್ದವಾಯಿತು ಯಾಕೆಂದರೆ ಶಿವನು ರಾವಣನ ಕಡಿದ  9 ತಲೆಗಳನ್ನು ಮರು ಸ್ಥಾಪಿಸಿ ಜೋಡಿಸಿದನು ಆದ ಕಾರಣ ಮತ್ತು ರಾವಣನ ವೇದನೆಯನ್ನು ದೂರ ಮಾಡಿದ್ದರಿಂದ  ವೈದ್ಯನಾಥ ಎನ್ನುವ ಹೆಸರು ಬಂತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top