fbpx
ದೇವರು

ಶ್ರೀ ಕ್ಷೇತ್ರ ಧರ್ಮಸ್ಥಳದ ,ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಪುರಾಣ ಕಥೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ,ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಪುರಾಣ ಕಥೆ.

ಧರ್ಮದ ನೆಲೆಯ ಧಾರ್ಮಿಕ ತಾಣವಾಗಿರುವ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿ ದಕ್ಷಿಣ ಭಾರತೀಯರ ಆರಾಧ್ಯ ಕ್ಷೇತ್ರವಾಗಿದೆ.ಶ್ರೀ ಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ.

ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ  ಸ್ವಾಮಿ ದೇವಾಲಯಕ್ಕೆ 8 ಶತಮಾನಗಳ ಇತಿಹಾಸವಿದ್ದು.ನೇತ್ರಾವತಿ ನದಿಯ ದಡದಲ್ಲಿ ನೆಲೆಸಿದೆ.ಇಲ್ಲಿನ ದೇವಸ್ಥಾನದಲ್ಲಿ ಇರುವ ಆರಾಧ್ಯ ದೈವ ಮಂಜುನಾಥ ಸ್ವಾಮಿ.ಮಂಜುನಾಥ ಸ್ವಾಮಿಯ  ವಿಗ್ರಹವನ್ನು ಮಂಗಳೂರಿನ ಕದ್ರಿ ಎಂಬ ಸ್ಥಳದಿಂದ ಉಡುಪಿಯ ಯತಿಗಳಾಗಿದ್ದ ಶ್ರೀ ವಾದಿ ರಾಜರು ಸ್ವತಃ ತಂದು ಪ್ರತಿಷ್ಠಾಪಿಸಿದ್ದರು ಎಂದು ಪುರಾಣಗಳು ಹೇಳುತ್ತವೆ. ಧರ್ಮಸ್ಥಳ ದಾನ, ಧರ್ಮಕ್ಕೆ ಪ್ರಸ್ಸಿದ್ದವಾಗಿರುವುದು .ಅಲ್ಲದೆ  ಭಕ್ತರಿಗೆ ನೈತಿಕ ,ಸಾಂಸ್ಕೃತಿಕ ಕೇಂದ್ರವಾಗಿಯೂ ಆಕರ್ಷಿಸುತ್ತದೆ.

ಭಕ್ತರು ನೇತ್ರಾವತಿಯ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಬಹಿರಂಗ ಶುದ್ದಿಯೊಂದಿಗೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನದೊಂದಿಗೆ ಅಂತರಂಗ ಶುದ್ದಿಯನ್ನು ಮಾಡಿಕೊಂಡು ಮಾನಸಿಕ ಶಾಂತಿ ಮತ್ತು ನೆಮ್ಮದಿಯನ್ನು ಹೊಂದುತ್ತಾರೆ.ಮನದ ದುಃಖ ನೋವನ್ನು ಮರೆಯುತ್ತಾರೆ.

 

ಪುರಾಣ ಕಥೆ.

ಧರ್ಮಸ್ಥಳವು ರೋಚಕವಾದ ಹಿನ್ನಲೆಯನ್ನು ಹೊಂದಿದೆ.ಹಿಂದೆ ಧರ್ಮಸ್ಥಳವನ್ನು “ಕುಡುಮ” ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಈ ಪ್ರಾಂತ್ಯದಲ್ಲಿರುವ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಭೀಮಣ್ಣ ಪರ್ಗಡೆ ಮತ್ತು ಅಮ್ಮು ಬಲ್ತಾಳಿ ದಂಪತಿಗಳು ವಾಸಿಸುತ್ತಿದ್ದರು.ಇವರ ಮನೆಗೆ ಬಂದ ನಾಲ್ವರು ಅತಿಥಿಗಳಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ  ದಂಪತಿಗಳು ನೋಡಿಕೊಂಡಿದ್ದರು.ಅದೇ ದಿನ ರಾತ್ರಿಯಲ್ಲಿ ಆ ನಾಲ್ವರು ಅತಿಥಿಗಳು ದೈವದ ರೂಪದ ಮೂಲಕ ಭೀಮಣ್ಣನವರ ಕನಸಿನಲ್ಲಿ ಬಂದು ತಾವು ಇಲ್ಲಿ ನೆಲೆಸಲು ಇಚ್ಚಿಸಿರುವುದಾಗಿ ತಿಳಿಸಿದರು.

ಆ ನಾಲ್ವರು ದೇವತೆಗಳಿಗೆ ಅಣತಿಯಂತೆ ಮನೆಯನ್ನು ಬಿಟ್ಟುಕೊಟ್ಟರು. ಭೀಮಣ್ಣ ಎಂಬುವವರು ದೇವಾಲಯ ನಿರ್ಮಿಸಿದರು. ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದರು.ಆ ನಾಲ್ಕು ದೈವಗಳು ಯಾವುವು ಎಂದರೆ

1.ಕಾಳರಾಹು – ಪುರುಷ ದೈವ

2.ಕಳರ್ಕಾಯಿ -ಸ್ತ್ರೀ ದೈವ

3.ಕುಮಾರಸ್ವಾಮಿ -ಪುರುಷ ದೈವ.

4.ಕನ್ಯಾಕುಮಾರಿ-ಸ್ತ್ರೀ ದೈವ.

ದಿನ ಕಳೆದಂತೆ ಅರ್ಚಕರು ಗುಡಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವಂತೆ ಭೀಮಣ್ಣನವರಿಗೆ ಸಲಹೆ ಕೊಟ್ಟರು.

ಇದರಂತೆ ಧರ್ಮ ದೇವತೆಗಳೂ ಕೂಡ ಕದ್ರಿಯಲ್ಲಿರುವ ಶ್ರೀ ಮಂಜುನಾಥ ಸ್ವಾಮಿಯ  ಶಿವ ಲಿಂಗವನ್ನು ತಂದು ಪ್ರತಿಷ್ಠಾಪಿಸುವಂತೆ ತಿಳಿಸಿದರು. ಈ ಕಾರ್ಯ ಸಂಪನ್ನಗೊಳಿಸಲು ತಮ್ಮ  ಪ್ರತಿನಿಧಿಯಾಗಿ ಅಣ್ಣಪ್ಪ ಸ್ವಾಮಿಯನ್ನು ಕಳುಹಿಸಿದರು.ಅಣ್ಣಪ್ಪ ಸ್ವಾಮಿಯವರು ಕದ್ರಿಗೆ ತೆರಳಿ ಅಲ್ಲಿಂದ ಶಿವಲಿಂಗವನ್ನು ಇಲ್ಲಿಗೆ ತರುವುದರೊಳಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯ ನಿರ್ಮಾಣವಾಗಿತ್ತು ಎಂದು ಹೇಳುತ್ತವೆ ಇಲ್ಲಿನ ಧರ್ಮ ಗ್ರಂಥಗಳು.

ವಿಶೇಷವೆಂದರೆ ಈ ದೇವಸ್ಥಾನವು ಮೊದಲಿನಿಂದಲೂ ಜೈನ ಸಮುದಾಯದವರಿಂದ  ನೆಡೆಸಲ್ಪಡುತಿತ್ತು.ಆಡಳಿತ ಮಂಡಳಿಯು ಜೈನ ಸಮುದಾಯವಾಗಿದ್ದರೂ ಸಹ ಇಲ್ಲಿನ ಪೂಜಾ ವಿಧಿ ವಿಧಾನಗಳು ಬ್ರಾಹ್ಮಣ ಸಮುದಾಯದಂತೆ,ಬ್ರಾಹ್ಮಣ ಅರ್ಚಕರಿಂದಲೇ ನಡೆಯುತ್ತಿತ್ತು.ಇದು ಮೊದಲಿನಿಂದಲೂ ನೆಡೆದುಕೊಂಡು ಬಂದ ಪದ್ದತಿಯಾಗಿದೆ.

ಪುರಾತನ ಕಾಲದಿಂದಲೂ ಹೆಗ್ಗಡೆ ಮನೆತನದವರು ಇಲ್ಲಿ ಧರ್ಮದರ್ಶಿಗಳಾಗಿ ತಮ್ಮ ಅಮೂಲ್ಯ ಸೇವೆಯನ್ನು ದೇವಾಲಯಕ್ಕೆ ನೀಡುತ್ತಾ ಬಂದಿದ್ದಾರೆ.ಇನ್ನುಳಿದಂತೆ ಧರ್ಮಸ್ಥಳದಲ್ಲಿ ಚಂದ್ರನಾಥ ಬಸದಿ,ಬಾಹುಬಲಿ ಪ್ರತಿಮೆ,ಜಮಾ ಉಗ್ರಾಣ, ವಿಮಾನ ವೀಕ್ಷಣಾ ಸ್ಥಳ, ಅನ್ನಪೂರ್ಣ ಭೋಜನಾಲಯ, ಮಂಜೂಷ ಸಂಗ್ರಹಾಲಯ, ಲಲಿತೋದ್ಯಾನ ಹೀಗೆ ಹಲವು ಆಕರ್ಷಣೆಗಳಿಗೆ ಭೇಟಿ ನೀಡಬಹುದಾಗಿದೆ.

ಲಕ್ಷ ದೀಪೋತ್ಸವ.

ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ನೆಡೆಯುವ ಲಕ್ಷ ದೀಪೋತ್ಸವಕ್ಕೆ ನಾಡಿನ ಎಲ್ಲೆಡೆಯಿಂದಲೂ ಲಕ್ಷಕ್ಕೂ ಮೀರಿ ಭಕ್ತಾದಿಗಳು ಬರುತ್ತಾರೆ.ಜ್ಞಾನದ ಬೆಳಕನ್ನು ನೀಡುವುದರೊಂದಿಗೆ ಲಕ್ಷ ದೀಪೋತ್ಸವ ಜನಮನದ ಅಂತರಂಗ ಹಾಗೂ ಬಹಿರಂಗ ಅಂಧಕಾರವನ್ನು ತೊಲಗಿಸುವಲ್ಲಿ ಯಶಸ್ವಿಯಾಗಿದೆ.

ಅನ್ನ ದಾಸೋಹ.

ಧರ್ಮಸ್ಥಳಕ್ಕೆ ಆಗಮಿಸಿದ ಯಾವುದೇ ಯಾತ್ರಿಕರು ಅನ್ನ ಆಹಾರ ದೊರಕದೇ ಹಸಿದುಕೊಂಡು   ಹೋಗಬಾರದು ಎಂದು ಇಲ್ಲಿ ಅನಾ ದಾಸೋಹವು ಇದೆ. “ಅನ್ನಂ ಪರಂ ಬ್ರಹ್ಮಮ್ ” , “ಅನ್ನಕ್ಕಿಂತ ಶ್ರೇಷ್ಠದಾನ ಬೇರೊಂದಿಲ್ಲ” ಅನ್ನಕ್ಕಿಂತ  ಮಿಗಿಲಾದ  ಮಹಾದಾನ ಬೇರೊಂದಿಲ್ಲ.ಇಲ್ಲಿನ  ಅಚ್ಚುಕಟ್ಟಾದ ವ್ಯವಸ್ಥೆ ಧರ್ಮಸ್ಥಳದಲ್ಲಿ  ಅನ್ನ ದಾಸೋಹಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ.ಸುಸೂತ್ರವಾಗಿ ಸಹಸ್ರಾರು ಮಂದಿಗೆ ಏಕ ಕಾಲದಲ್ಲಿ ದಾಸೋಹ ಕಲ್ಪಿಸಲಾಗುತ್ತದೆ.

ಅಷ್ಟೇ ಅಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಇಡೀ ದಕ್ಷಿಣ ಭಾರತದಲ್ಲೇ  ಅತ್ಯಂತ ಸ್ವಚ್ಛ ಕ್ಷೆತ್ರ ಎನ್ನುವ ಹೆಸರು ಸಹ ಬಂದಿದೆ.

ಧರ್ಮಸ್ಥಳಕ್ಕೆ ತೆರಳುವ ಮಾರ್ಗ.

ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರಕ್ಕೆ ಬೆಂಗಳೂರಿನಿಂದ ಸುಮಾರು 300 ಕಿಲೋಮೀಟರ್ ಹಾಗೂ ಮಂಗಳೂರಿನಿಂದ 76 ಕಿಲೋಮೀಟರ್ ಗಳಷ್ಟು ದೂರದಲ್ಲಿದೆ.ಬೆಂಗಳೂರು ಹಾಗೂ ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಲು ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ  ಬಸ್ಸುಗಳ ಸಾರಿಗೆ ವ್ಯವಸ್ಥೆ ಇದೆ.ರೈಲು ಮಾರ್ಗದಲ್ಲಿ ತೆರಳಲು ರೈಲಿನ ಸೇವೆ ಇದೆ.ದಟ್ಟ ಕಾನನದ ನಡುವೆ ಪ್ರಯಾಣಿಸುವಾಗ ಹೊಸ ಉತ್ಸಾಹ,ಚೈತನ್ಯ ನವೋಲ್ಲಾಸ ಮೂಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top