ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಳ್ಳೋದು ಸರ್ವೇ ಸಾಮಾನ್ಯ, ಒಂದು ವರದಿಯ ಪ್ರಕಾರ ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿಗಳಷ್ಟು ಮೋಸದಿಂದಲೇ ಸೋರಿಹೊಗುತ್ತದೆ ಎಂದು ನಮಗೆ ತಿಳಿದು ಬಂದಿದೆ. ಗ್ರಾಹಕರು ಮೈಯೆಲ್ಲಾ ಕಣ್ಣಾಗಿದ್ದು ಎಚ್ಚರದಿಂದ ಇದ್ದರೆ ಖಂಡಿತವಾಗಿಯೂ ಈ ಒಂದು ಮೋಸವನ್ನು ತಡೆಗಟ್ಟಬಹುದು..
ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವವರು ನಾನಾ ತಂತ್ರಗಳಿಂದ ನಿಮ್ಮನ್ನು ಮೋಸಗೊಳಿಸಬಹುದು, ಅವರು ಉಪಯೋಗಿಸುವ ಕೆಲವು ತಂತ್ರಗಳು ಮತ್ತು ಅದರಿಂದ ಹೇಗೆ ಬಚಾವ್ ಆಗಬಹುದು ಎಂದು ಇಲ್ಲಿ ತಿಳಿಸಿ ಕೊಡುವ ಸಣ್ಣ ಪ್ರಯತ್ನ…
ಉದ್ದದ ಪೈಪ್:
ಇದು ವಾಸ್ತವವಾಗಿ ಪೆಟ್ರೋಲ್ ಹಾಕುವ ಪೈಪ್‌ನ ವಿನ್ಯಾಸದ ದೋಷ. ಇದನ್ನೇ ಪೆಟ್ರೋಲ್ ಹಾಕುವ ಹುಡುಗರು ತಮ್ಮ ಬಂಡವಾಳವಾಗಿ ಮಾಡಿಕೊಳ್ಳುತ್ತಾರೆ. ಆವಶ್ಯಕತೆಗಿಂತ ಹೆಚ್ಚು ಉದ್ದ ಇರುವ ಈ ಪೈಪ್‌ನಲ್ಲಿ ಹೆಚ್ಚುವರಿ ಪೆಟ್ರೋಲ್ ಹಾಗೆಯೇ ನಿಂತಿರುತ್ತದೆ. ಆದರೆ ಮೀಟರ್ ಸರಿಯಾಗಿ ಓಡಿದ್ದರಿಂದ ನಮಗೆ ಅನುಮಾನ ಬರುವುದಿಲ್ಲ. ಕನಿಷ್ಠವೆಂದರೂ 100 ಮಿಲಿ ಲೀಟರ್‌ನಷ್ಟು ಪೆಟ್ರೋಲ್ ಪಂಪ್ ಮಾಲೀಕನಿಗೆ ಲಾಭವಾಗುತ್ತದೆ. ಆದ್ದರಿಂದ ಸಂಪೂರ್ಣ ಪೆಟ್ರೋಲ್ ಟ್ಯಾಂಕ್‌ಗೆ ಬಿದ್ದಿರುವುದನ್ನು ಖಾತರಿ ಮಾಡಿಕೊಳ್ಳಬೇಕು.
ಚಿಲ್ಲರೆ ವಂಚನೆ:
ಇದು ನಮ್ಮ ಆತುರದ ಲಾಭ ಪಡೆದುಕೊಳ್ಳುವ ತಂತ್ರ. ಸಾಮಾನ್ಯ ಚಿಕ್ಕ ಮೊತ್ತಕ್ಕೆ ಪೆಟ್ರೋಲ್ ಹಾಕಿಸಿಕೊಂಡು, ಸಾವಿರ ಅಥವಾ ಐನೂರು ರೂ. ನೋಟು ನೀಡುವವರಿಗೆ ವಂಚನೆ ಮಾಡಲಾಗುತ್ತದೆ. ನಮ್ಮದೆರು ಚಿಲ್ಲರೆಯನ್ನು ಸರಿಯಾಗಿ ಲೆಕ್ಕ ಹಾಕಿ ಕೊಡುವಾಗ ಮಾತ್ರ 100, 50 ರೂ. ಕಡಿಮೆ ನೀಡುತ್ತಾರೆ. ಆತುರದಲ್ಲಿರುವಾಗ ಅದರತ್ತ ಗಮನ ನೀಡದೆ ಚಿಲ್ಲರೆಯನ್ನು ಎಣಿಸದೆಯೇ ಜೇಬಿಗೆ ತುಂಬಿಕೊಂಡರೆ ಕಥೆ ಮುಗಿಯಿತು ಎಂದೇ ಅರ್ಥ.
ಗಮನ ತಪ್ಪಿಸುವುದು:
ಇಲ್ಲಿ ಇಬ್ಬರು ಒಟ್ಟು ಸೇರಿ ವಂಚಿಸುತ್ತಾರೆ. ನಾವು ಪೆಟ್ರೋಲ್ ಮೀಟರ್ ನೋಡುತ್ತಿರುವಾಗ ಮತ್ತೊಬ್ಬ ನಮ್ಮ ಗಮನ ಬೇರೆಡೆಗೆ ಸೆಳೆಯುತ್ತಾನೆ. ಆಗ ಪೆಟ್ರೋಲ್ ಹಾಕುವುದನ್ನು ನಿಲ್ಲಿಸಲಾಗುತ್ತದೆ. ಆಗ ಸಾವಿರ ರೂ. ಬದಲು 950 ರೂ. ಮೌಲ್ಯದ ಪೆಟ್ರೋಲ್ ಮಾತ್ರ ಹಾಕಿರುತ್ತಾರೆ. ಇದು ಸಾಮಾನ್ಯವಾಗಿ ಹಳೆಯ ಪೆಟ್ರೋಲ್ ಪಂಪ್‌ಗಳಲ್ಲಿ ನಡೆಯುತ್ತದೆ.
ತಡೆಯುವ ಟ್ರಿಕ್:
ಕೆಲವೊಮ್ಮೆ ಪೆಟ್ರೋಲ್ ಹಾಕುವವರು ಆಗಾಗ ನಿಲ್ಲಿಸಿ, ಮತ್ತೆ ಆರಂಭ ಮಾಡುವುದು ಕಾಣುತ್ತೇವೆ. ಇದರಿಂದ ಏರ್ ಲಾಕ್ ಆಗಿ ಒಂದಿಷ್ಟು ಪೆಟ್ರೋಲ್ ಉಳಿಯುತ್ತದೆ. ಆದರೆ ಆಗಲೇ ಅದರ ಮೀಟರ್ ಓಡಿರುತ್ತದೆ. ಹೀಗೆ ಮಾಡುವುದರಿಂದ 10 ಲೀಟರ್ ಪೆಟ್ರೋಲ್‌ನಲ್ಲಿ 150ರಿಂದ 200 ಮಿ.ಲೀ. ಪೆಟ್ರೋಲ್ ಪಂಪ್‌ನವರಿಗೆ ಉಳಿಯುತ್ತದೆ.
ಡಿಜಿಟಲ್ ವಂಚನೆ:
ಇತ್ತೀಚೆಗೆ ಡಿಜಿಟಲ್ ಎಲೆಕ್ಟ್ರಾನಿಕ್ ಡಿವೈಸ್ ಬಂದಿರುವುದರಿಂದ ವಂಚನೆ ಕಡಿಮೆಯಾಗಿದೆ ನಿಜ. ಆದರೆ ದೇಶದ ಕೆಲವು ಭಾಗದಲ್ಲಿ ಅದರಲ್ಲೂ ಪಂಜಾಬ್‌ನಲ್ಲಿ ಡಿಜಿಟಲ್ ಮೀಟರ್‌ನ್ನು ಟ್ಯಾಂಪರ್ ಮಾಡುವ ಜಾಲವೊಂದು ಪತ್ತೆಯಾಗಿದೆ. ಮೀಟರ್‌ನ್ನು ವಿರೂಪಗೊಳಿಸುವ ಮೂಲಕ ಅಲ್ಲಿ ತೋರಿಸಿದ ಸಂಖ್ಯೆಗಿಂತಲೂ ಕಡಿಮೆ ಪೆಟ್ರೋಲ್ ಟ್ಯಾಂಕ್‌ಗೆ ಬೀಳುವಂತೆ ಮಾಡಲಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
