ಅವರು ಚಿಕ್ಕಂದಿನಲ್ಲಿಯೇ ಐಪಿಎಸ್ ಆಫೀಸರ್ ಆಗೋ ಕನಸು ಕಂಡವರು. ಕನಸು ಕಂಡರೇನು ಬಂತು, ಆ ಕನಸು ನನಸಾಗಲು ಪೂರಕ ವಾತಾವರಣವೂ ಬೇಕಲ್ವಾ? ದುಡ್ಡಿನ ಜಮಾನದಲ್ಲಿ ಕನಸುಗಳ ಸಾಕಾರಕ್ಕೆ ದುಡ್ಡು ಬೇಕೇ ಬೇಕು. ಅದೇ ದುಡ್ಡು ದೊಡ್ಡ ಕನಸಿನ ಮೂಟೆಯನ್ನು ಹೊತ್ತಿದ್ದ ಆ ಹುಡುಗನ ಗುರಿಗೂ ಅಡ್ಡಿ ಆಗುತ್ತೆ, ಆದರೂ ಛಲ ಬಿಡದೆ ಕಷ್ಟಪಟ್ಟು ಓದ್ತಾರೆ, ಕೊನೆಗೂ ಅಂದುಕೊಂಡಿದ್ದನ್ನು ಸಾದಿಸಿ ಬಿಡುತ್ತಾರೆ…
ಹೌದು, ಈಗ ನಿಮ್ಮ ತಲೆಯಲ್ಲಿ ಬಂದಿರುವ ಯೋಚನೆ ಸರಿ, ಅವರು ಬೇರೆ ಯಾರೂ ಅಲ್ಲ ಒನ್ ಅಂಡ್ ಓನ್ಲಿ “ರವಿ ಡಿ ಚೆನ್ನಣ್ಣನವರ್” ಐಪಿಎಸ್ ಆಫೀಸರ್. ಅಂದು ಬಾರ್ ಸಪ್ಲೇಯರ್ ಆಗಿ, ಹಮಾಲಿಯಾಗಿ, ಕಸ ಗುಡಿಸುವವನಾಗಿ ಕಷ್ಟ ಪಟ್ಟಿದ್ದ ರವಿ ದ್ಯಾಮಪ್ಪ ಚೆನ್ನಣ್ಣನವರ್ ಇಂದು ರೌಡಿಗಳ, ದಂಧೆಕೋರರ ಪುಡಾರಿಗಳ ಪಾಲಿಗೆ ದುಸ್ವಪ್ನ..!
ಆ ಸಾಧಕ ಇವತ್ತು ದುಷ್ಟರ ಪಾಲಿಗೆ ಸಿಂಹಸ್ವಪ್ನ, ಆತ ಎದುರು ನಿಂತ ಅಂದ್ರೆ ಒಂದಷ್ಟು ಜನ ಗಡಗಡ ನಡಗ್ತಾರೆ. ಸಜ್ಜನರು, ನೀನು ನೂರುಕಾಲ ಚೆನ್ನಾಗಿ ಬಾಳಪ್ಪ ಅಂತ ಮನತುಂಬಿ ಹರಸುತ್ತಾರೆ. ಈ “ಗ್ರೇಟ್ ಮ್ಯಾನ್ ಆಫ್ ಇಂಡಿಯಾ ಫ್ರಮ್ ಉತ್ತರ ಕರ್ನಾಟಕ”, ಬೆಳೆದು ಬಂದ ಹಾದಿ ಇದೆಯಲ್ಲಾ ಅದು ಪ್ರತಿಯೊಬ್ಬ ಯುವಕನಿಗೂ ಸ್ಪೂರ್ತಿ! ಅವರ್ಯಾರು ಅನ್ನೋ ಮೊದಲು ಅವರ ಸ್ಟೋರಿ ಹೇಳ್ತೀನಿ, ಆಮೇಲೆ ಅವರ್ಯಾರು ಅಂಥ ನಾನು ಹೇಳೋ ಮೊದಲೇ ನಿಮ್ಗೇ ಗೊತ್ತಾಗಿರುತ್ತೆ! ಆದ್ರೆ, ಈ ಸೂಪರ್ ಮ್ಯಾನ್ ನಡೆದು ಬಂದ ದಾರಿ ಮಾತ್ರ ಹೂವಿನ ಹಾಸಿಗೆ ಅಲ್ಲ, ಅದು ಮುಳ್ಳಿನ ಹಾದಿ!
ಇವರು ಗದಗ ಜಿಲ್ಲೆಯ ನೀಲಗುಂದ ಎಂಬ ಹಳ್ಳಿಯಲ್ಲಿ ಹುಟ್ಟಿದ್ರು. ಬಡತನವೂ ಹುಟ್ಟಿನೊಂದಿಗೇ ಬಂದಿತ್ತು. ತಂದೆ ದ್ಯಾಮಪ್ಪ, ತಾಯಿ ರತ್ನಮ್ಮ, ಸೋದರ ರಾಘವೇಂದ್ರ ಅವರಿಗೆ ಕೃಷಿಯೇ ಜೀವನಾಧಾರ, ಅದರಲ್ಲಿಯೇ ಬದುಕು ಸವೆಸ ಬೇಕಿತ್ತು. ಹಿಂಗಿರುವಾಗ ಆ ಹುಡಗನ ಐಪಿಎಸ್ ಕನಸು ಈಡೇರಿಕೆಗೆ ಹಣ ಹೊಂದಿಸೋದು ಅಪ್ಪ ಅಮ್ಮನಿಗೆ ತುಂಬಾನೇ ಕಷ್ಟ ಆಗುತ್ತೆ, ಹಂಗಂತ ತನ್ನ ಕನಸಿಗೆ ಎಳ್ಳು ನೀರು ಬಿಟ್ಟು ಕುಳಿತುಕೊಳ್ಳಲು ಇವರು ರೆಡಿ ಇರಲಿಲ್ಲ, ಕಷ್ಟ ಪಟ್ಟು ದುಡಿದು ಓದಿದ್ರು, ಪ್ರಾಥಮಿಕ ಶಿಕ್ಷಣ, ಫ್ರೌಡ ಶಿಕ್ಷಣವನ್ನೂ ಹಂಗೋ ಹಿಂಗೋ ಮುಗಿಸಿದ್ರು! ವಿದ್ಯಾಕಾಶಿ ಧಾರವಾಡದಲ್ಲಿ ಡಿಗ್ರಿಯನ್ನೂ ಮುಗಿಸಿದರು.
ಎಲ್ಲರಂತೆ ಮನೆಯಲ್ಲಿ ಅಪ್ಪ ಕೊಟ್ಟ ದುಡ್ಡಿನಲ್ಲಿ ಡಿಗ್ರಿ ಮುಗಿಸಿದ ಗಂಡು ಇವರಲ್ಲ, ಬಾರ್ ಸಪ್ಲೇಯರ್ ಆಗಿ ಕೆಲಸ ಮಾಡಿದ್ರು, ಧಾರವಾಡದಲ್ಲಿ ಹಮಾಲಿಯಾಗಿ ಮೂಟೇನೂ ಹೊತ್ತರು. ಇಷ್ಟೊಂದು ಕಷ್ಟಪಟ್ಟು ಪದವಿ ಪಡೆದ ಮಾತ್ರಕ್ಕೆ ಇವರ ಕನಸು ನನಸಾಗುತ್ತಾ? ನೋ ಚಾನ್ಸೇ, ಇಲ್ಲವೇ ಇಲ್ಲ. ಆ ಗುರಿ ಮುಟ್ಟೋದು ಅಷ್ಟು ಸುಲಭವಾಗಿರಲ್ಲ! ಅದನ್ನ ತಲುಪಬೇಕು ಅಂದ್ರೆ ಹಗಲು ರಾತ್ರಿ ಅಂತ ನೋಡ್ದೆ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಓದಬೇಕು, ಸರಿ, ಮನೆಯ ಕಡೆ ಏನೂ ಪ್ರಾಬ್ಲಂ ಇಲ್ಲದೆ ಇದ್ದರೆ ಹಂಗೆ ಓದಬಹುದು! ಆದರೆ ಈ ರಿಯಲ್ ಸ್ಟೋರಿ ಹೀರೊಗೆ ಮನೆಕಡೆ ಸಿಕ್ಕಾಪಟ್ಟೆ ಪ್ರಾಬ್ಲಂ! ಕಾಂಪಿಟೇಟಿವ್ ಎಕ್ಸಾಮ್ ಗೆ ಬೇಕಾದ ಕೋಚಿಂಗ್ ತಗೋಳದಕ್ಕೂ ದುಡ್ಡಿರಲಿಲ್ಲ, ಆದ್ರೂ ಹೈದರಾಬಾದ್ ಕಡೆ ಹೆಜ್ಜೆ ಹಾಕ್ತಾರೆ ಈ ರಿಯಲ್ ಸ್ಟಾರ್. ಹೈದರಾಬಾದಿನ “ಟಾರ್ಗೆಟ್” ಎಂಬ ಕೋಚಿಂಗ್ ಸೆಂಟರ್ ಗೆ ENTRY ನೂ ಕೊಟ್ಟೇ ಬಿಡ್ತಾರೆ… ಆದರೆ ಅವರು ನೀಡುವ ಕೋಚಿಂಗ್ ಗೆ ನೀಡುವಷ್ಟು ಹಣ ಇರಲಿಲ್ಲ, ಹಣ ಇಲ್ಲದೆ ಹೋದರೆ ಏನ್ ಅಂತೆ ಸಾರ್, ಸಾದಿಸುತ್ತೇನೆ ಎನ್ನುವ ಛಲ ಸಾಕಾಗಿತ್ತು, ಆ ಹಠ, ಛಲ, ಕಣ್ಣೆದರುರಿಗೇ ಇದ್ದ ಸ್ಪಷ್ಟ ಗುರಿ ಅವರನ್ನ ಆ ಕೋಚಿಂಗ್ ಸೆಂಟರ್ ನ ಕಸ ಗುಡಿಸುವಂತೆ ಮಾಡಿತ್ತು, ಹೌದು, ಸಾರ್ ರವಿಯವರು ಹೇಗಾದ್ರು ಮಾಡಿ UPSC ಎಕ್ಸಾಮ್ ನಲ್ಲಿ ಕ್ಲಿಕ್ ಆಗಲೇ ಬೇಕು ಎಂದು ಅಲ್ಲಿ ಕಸ ಗುಡಿಸಿದ್ರು, ನೆಲ ವರಿಸಿದರು! ಅಲ್ಲೇ ಹಾಗೇ ಕೆಲಸ ಮಾಡ್ತಾ ಮಾಡ್ತಾ ಕೋಚಿಂಗ್ ಕೂಡ ತೆಗೆದುಕೊಂಡರು. ಇಷ್ಟು ಕಷ್ಟ ಪಟ್ಟ ಮೇಲೆ ಫಲ ದೊರಕದೆ ಇರುತ್ತಾದೆಯೇ…?
ಅವರು 2008ರಲ್ಲಿ ಯು.ಪಿ.ಎಸ್.ಸಿ ನಡೆಸಿದ ಪರೀಕ್ಷೆ ತೆಗೆದುಕೊಂಡರು ಹಾಗು 2009ರಲ್ಲಿ ಅದರ ರಿಸೆಲ್ಟ್ ಕೂಡ ಬಂತು. 703ನೇ ರಾಂಕ್ ಪಡೆಯುವುದರೊಂದಿಗೆ ಆ ವ್ಯಕ್ತಿಯ ಕನಸು ನನಸಾಗಿತ್ತು! ಅವರು ಕಲಬುರ್ಗಿಯಲ್ಲಿ ಪ್ರೊಬೇಷನರಿ ಪಿರಿಯಡ್ ಮುಗಿಸಿ ಹೆಚ್ಚುವರಿ ಎಸ್ಪಿ ಆಗಿ ಬೆಳಗಾವಿಯಲ್ಲಿ ಕೆಲಸ ಶುರು ಕೂಡ ಮಾಡಿದರು, ನಂತರ ದಾವಣಗೆರೆ ಎಸ್ಪಿಯಾಗಿ, ತದನಂತರ ಬೆಂಗಳೂರಿನಲ್ಲಿ ಸಿಐಡಿ ಎಸ್ಪಿಯಾಗಿ, ಅದಾದ ನಂತರ ಹಾಸನ ಜಿಲ್ಲೆಯಲ್ಲಿ ಸೇವೆಸಲ್ಲಿಸಿ ಶಿವಮೊಗ್ಗ ಎಸ್ಪಿಯಾಗಿದ್ದಾರೆ!
ರವಿ ಸರ್ ರವರು LBSNA (Lal Bahadur Shastri National Academy of Administration , Mussoorie – Uttarakhand)ತರಬೇತಿಯ ಸಂದರ್ಭದಲ್ಲಿ…
ಇವರು ಶಿವಮೊಗ್ಗಕ್ಕೆ ಬರುವಾಗ ಶಿವಮೊಗ್ಗ ಕೋಮುದಳ್ಳುರಿಯಲ್ಲಿ ಬೇಯುತ್ತಿತ್ತು, ಶಿವಮೊಗ್ಗಾದಲ್ಲಿ ಪುಡಿರೌಡಿಗಳು, ಮೀಟರ್ ಬಡ್ಡಿದಂಧೇಕೋರರಿಂದಾಗಿ ಶಿವಮೊಗ್ಗದ ಜನರ ನಿದ್ರೆಗೆಟ್ಟಿತ್ತು. ಯಾವಾಗ ಏನ್ ಆಗುತ್ತದೋ ಎಂಬ ಭಯದಲ್ಲೇ ಶಿವಮೊಗ್ಗದ ಜನ ದಿನ ದಬ್ಬುತ್ತಿದ್ದರು.
ಅದು ಫೆಬ್ರವರಿ 19, 2015 ಶಿವಮೊಗ್ಗದ ಶಾಂತಿ ಕದಡಿ ಹೋಗಿದ್ದ ದಿನ, ಅದಾದ ಹದಿನೈದು ದಿನದೊಳಗೆ ಅಂದ್ರೆ ಮಾರ್ಚ್ 03ರಂದು ಶಿವಮೊಗ್ಗ ಎಸ್ಪಿ ಆಗಿ ಇವರು ಬಂದರು ಇವರು ಶಿವಮೊಗ್ಗಕ್ಕೆ ಎಂಟ್ರೀ ಕೊಟ್ಟಿದ್ದೇ ತಡ, ಶಿವಮೊಗ್ಗದಲ್ಲಿ ಬಾಲಬಿಚ್ಚಿದ ಪುಡಾರಿ, ಪಂಟ್ರು, ರೌಡಿಗಳೆಲ್ಲಾ ಬಾಲ ಮುದುರಿಕೊಂಡರು. ಇಂದು ಶಿವಮೊಗ್ಗದಲ್ಲಿ ಶಾಂತಿ ಮನೆ ಮಾಡಿದೆ.
ಒಳ್ಳೆಯವರಿಗೆ ಒಳ್ಳೇದನ್ನ ಮಾಡ್ಬೇಕು, ಕೆಟ್ಟವರನ್ನು ತಿದ್ದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟರೂ ಮೇಲಿಂದ ಮೇಲೆ ತಪ್ಪು ಮಾಡುತ್ತಾ ಇದ್ದರೆ ಪೊಲೀಸ್ ಪವರ್ ತೋರಿಸಬೇಕು ಎನ್ನುವ ಈ ಸೂಪರ್ ಪೊಲೀಸ್ ಐಎಎಸ್, ಐಪಿಎಸ್ ನಂತಹ ದೊಡ್ಡದೊಡ್ಡ ಕನಸುಗಳಿಗೆ ಪ್ರೇರಣೆ ಅಲ್ವೇ?! ಈ ರಿಯಲ್ ಹೀರೋಗೊಂದು ಸಲಾಂ! ನಿಮ್ ಕಡೆಯಿಂದಲೂ ಹೇಳಿ ನಿಮಗೆ ಶುಭವಾಗಲಿ ಸಾರ್ ಅಂತ!
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
