ನೀವೆಲ್ಲರೂ ತಿಳಿಯಲೇ ಬೇಕಾದ ನಾಗರ ಪಂಚಮಿ ಆಚರಣೆಯ ಹಿಂದಿರುವ ಸತ್ಯ!!!
ಅನೇಕರು ನಾಗರ ಪಂಚಮಿ ಹಬ್ಬದ ಹಿಂದಿರುವ ಮಹತ್ವ ತಿಳಿಯದೇ ಆಚರಿಸುತ್ತಾರೆ!! ಈ ಹಬ್ಬವು ಭಾರತದ ನಾನಾ ಭಾಗಗಳಲ್ಲಿ ಅನೇಕ ರೀತಿಯಲ್ಲಿ ಆಚರಿಸಲ್ಪಡುತ್ತದೆ, ಇದರ ಹಿಂದೆ ಹಲವಾರು ಬಗೆಯ ಕಥೆಗಳೂ ಉಂಟು, ಒಂದು ಮಹಾಭಾರತದ ಕೃಷ್ಣನ ಕಥೆಯಾದರೆ ಕರ್ನಾಟಕದಲ್ಲಿ ಈ ಹಬ್ಬಕ್ಕೆ ಜಾನಪದ ಪರಂಪರೆಯಿದೆ.
ಈ ಹಬ್ಬದ ಮಹತ್ವ ಮತ್ತು ಆಚರಣ ವಿಧಾನ:
ಈ ಹಬ್ಬವನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ / ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ ಆಚರಿಸುತ್ತಾರೆ. ಬೆಳಿಗ್ಗೆ ಮಂಗಳ ಸ್ನಾನ ಮಾಡಿ, ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡುತ್ತಾರೆ. ಕೆಲವರು ಹಾವಿನಾಕಾರದ ರಂಗೋಲಿಯನ್ನು ಬರೆಯುತ್ತಾರೆ. ನಾಗಪ್ಪನಿಗೆ ಹಾಲು, ನೀರಿನಿಂದ ತನಿ ಎರೆಯುತ್ತಾರೆ.
ನೈವೇದ್ಯಕ್ಕೆ ಚಿಗಳಿ ( ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು) ತಂಬಿಟ್ಟು ( ಅಕ್ಕಿ, ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು) ಮಾಡುತ್ತಾರೆ. ಪೂಜೆಯ ನಂತರ ದೇವರ ಮುಂದೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುತ್ತಾರೆ. ಅಣ್ಣ , ಅಕ್ಕನಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ.
ನಾಗರ ಪಂಚಮಿ ಹಬ್ಬದ ವಿಶೇಷತೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ಅಣ್ಣ ತಮ್ಮ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಮತ್ತು ಬೆನ್ನಿಗೆ ಸವರಿ , ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ – ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ , ಬೆನ್ನು ಎಂದರೆ ಹಿಂದಿನಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಒಡಹುಟ್ಟಿದವರು ಮತ್ತು ಅವರ ಮಕ್ಕಳು ಎಲ್ಲರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗಾಗಿ ಇದನ್ನು ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಊಟಕ್ಕೆ ಕಾಯಿ ಕಡುಬು, ಉದ್ದಿನ ಕಡುಬು ಮಾಡುತ್ತಾರೆ. ನಾಗಪ್ಪನಿಗೆ ಘಾಟು ಆಗಬಾರದೆಂದು ಯಾವುದೇ ಕರಿದ ತಿಂಡಿ ಮಾಡುವುದಿಲ್ಲ, ಅಡಿಗೆಗೆ ಒಗ್ಗರಣೆ ಹಾಕುವುದಿಲ್ಲ.
ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನಿಗೆ ಹಾಲೆರೆದು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ.
ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಪಂಚಮಿ ಹಬ್ಬ ಎನ್ನುತ್ತಾರೆ. ಇದನ್ನು ಅದ್ಧೂರಿಯಿಂದ ಮಾಡುತ್ತಾರೆ. ೩ – ೫ ದಿನಗಳ ಹಬ್ಬ ನಡೆಸುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಅಣ್ಣ/ತಮ್ಮ ಅತ್ತೆ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗಲು ಬರುತ್ತಾರೆ.
ಮಹಾಭಾರತ ಕಥನ:
ಕೃಷ್ಣ ತನ್ನ ಬಾಲ್ಯಾವಸ್ಥೆಯಲ್ಲಿದ್ದಾಗ ತನ್ನ ಆಟದ ಚೆಂಡು ಯಮುನಾ ನದಿಯಲ್ಲಿ ಬಿದ್ದಾಗ ಅದನ್ನು ತರಲು ಕೃಷ್ಣ ಯಮುನಾ ನದಿಗೆ ಇಳಿದಾಗ ಕಾಲಿಯ ಎಂಬ ಕಾಳಿಂಗ ಸರ್ಪವು ಕೃಷ್ಣನಿಗೆ ತನ್ನ ಅಪ್ಪಣೆಯಿಲ್ಲದೆ ಈ ನದಿಗೆ ಹೇಗೆ ಬಂದೆ ಎಂದು ಕೇಳಲು ಕೃಷ್ಣ ಮತ್ತು ಕಾಲಿಯ ವಾಗ್ವಾದಕ್ಕೆ ಇಳಿಯಲು ಅದು ಸೆಣಸಾಟಕ್ಕೆ ತಲುಪಿ, ಬಾಲಕೃಷ್ಣ ಇನ್ನೇನು ಕಾಲಿಯನನ್ನು ಇನ್ನೇನು ಕೊಲ್ಲಲು; ಕೃಷ್ಣನ ಮಹಾತ್ಮೆ ಕಾಲಿಯಾಗೆ ತಿಳಿದು ಇನ್ನು ಜನರಿಗೆ ತೊಂದರೆ ಕೊಡುವುದಿಲ್ಲ ಎನ್ನಲು, ದಯಾಮಯಿ ಕೃಷ್ಣ ಆತನಿಗೆ ಕರುಣೆ ತೋರಿಸಿದ್ದ ಕಾರಣ ಈ ನಾಗರ ಪಂಚಮಿ ಹಬ್ಬ ಆಚರಿಸುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
