fbpx
ವಿಶೇಷ

ನಿಮಗೆ ಗೊತ್ತಾ ಬೆಂಗಳೂರಲ್ಲಿ ನಾಯಿ ,ಬೆಕ್ಕುಗಳಿಗೂ ಸ್ಮಶಾನ ಇದೆ , ನೋಡಿದ್ರೆ ಕಣ್ಣೀರು ಬರದೇ ಇರೋಲ್ಲ.

ಒಮ್ಮೆ ಭೇಟಿಕೊಡಲೆಬೇಕಾದ ಸ್ಥಳ  ಪ್ರಾಣಿಪ್ರಿಯರಿಗೆ ಮಾತ್ರ 

ಇದು ನಾಯಿ ಬೆಕ್ಕುಗಳಿಗಾಗೆಯಿರುವ ಸ್ಮಶಾನ

ಇತ್ತಿಚಿಗೆ ನಮ್ಮ ಪಕ್ಕದ ಮನೆಯವರು ಮುದ್ದಿನಿಂದ ಸಾಕಿದ ನಾಯಿ ವಯೋಸಹಜವಾಗಿ ಸತ್ತು ಹೋಯಿತು.ಅವರು ಅದರ ಅಂತ್ಯ ಸಂಸ್ಕಾರ ಮಾಡಿ ಅದರ ಅವಶೇಷಗಳನ್ನು ಕಾಶಿಗೆ ತೆಗೆದುಕೊಂಡು ಹೋಗಿ ಹೇಗೆ ಮನೆಯ ಸದ್ಯಸ್ಯರೊಬ್ಬರ ಕ್ರೀಯಾಕರ್ಮಗಳನ್ನು ನೇರೆವೆರಿಸುತ್ತಾರೊ ಹಾಗೆ ನೆರವೇರಿಸಿ ಬಂದರು.ಅದನ್ನು ಕಂಡು ಕೆಲವರು ಅವರ ಪ್ರಾಣಿಪ್ರೀತಿಯನ್ನು ಕೊಂಡಾಡಿದರೆ ಕೆಲವರು ಇದೆಂತಾ ಹುಚ್ಚುಯೆಂದರು.ಆದರೆ ನನಗೆ ನೆನಪು ಆಗಿದ್ದು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಅಭಿಮಾನ ಸ್ಟೂಡಿಯೋ ಪಕ್ಕಯಿರುವ ಪೀಪಲ್ ಫಾರ್ ಅನಿಮಲ್ಸ್ ಅವರ ಸಾಕು ಪ್ರಾಣಿಗಳಿಗೆಂದೆಯಿರುವ ಸ್ಮಶಾನ.

 


ಇಲ್ಲಿ ಬೆಂಗಳೂರಿನ ಪ್ರಾಣಿಪ್ರಿಯರು ಮನೆಯಲ್ಲಿ ಸಾಕಿದ ಪ್ರಾಣಿಗಳು ತೀರಿಹೋದಾಗ ಅಲ್ಲಿಗೆ ತಂದು ಅವುಗಳಿಗೆ ಪರ್ಮನೆಂಟ್ ಸಮಾಧಿಮಾಡುತ್ತಾರೆ ಮತ್ತು ತಮ್ಮ ಪ್ರೀತಿಯ ನಾಯಿಗಳನ್ನ ಬೆಕ್ಕುಗಳ ವರ್ಷದ ದಿವಸ ಅಲ್ಲಿ ಬಂದು ಅವುಗಳ ಸಮಾಧಿ ಮೇಲೆ ಹೂವು ಹಾಕಿ ಸ್ವಲ್ಪ ಹೊತ್ತು ಕೂತಿದ್ದು ನಂತರ ಅಲ್ಲಿಯ ಪ್ರಾಣಿಗಳ ಅನಾಥಾಲಯಕ್ಕೆ ಕೈಲಾದ ಆರ್ಥಿಕ ಸಹಾಯ ಮಾಡಿ ಹೋಗುತ್ತಾರೆ .

ಸಮಾಧಿ ಮಾಡೋದಕ್ಕೆ ಇಂತಿಷ್ಟು ಅಂತ ಚಾರ್ಜ್ ಮಾಡ್ತಾರೆ ಮತ್ತು ಅದರಿಂದ ಪ್ರಾಣಿಗಳ ಆರೈಕೆಗೆ ಆರ್ಥಿಕ ಸಹಾಯ ದೊರೆಯುತ್ತದೆ .

ಇವೆಲ್ಲಕಿಂತ ಅಲ್ಲಿರುವ ಪ್ರಾಣಿಗಳ ಸಮಾಧಿಗಳ ಮೇಲಿನ ಮನಕಲಕುವ ಬರಹಗಳು ನಿಮ್ಮನ್ನ ಬೇರೊಂದು ಪ್ರಪಂಚಕ್ಕೆ ಕೊಂಡೊಯ್ಯುತ್ತವೆ ,

ಮತ್ತು ಇಂದಿಗೆ ಮನುಷ್ಯ ಮನುಷ್ಯರ ನಡುವೆಯೇ ಕೊಲೆ ಸುಲಿಗೆ ನಡೆಯುವಾಗ ಅಲ್ಲಿ ತಮ್ಮ ಮನೆಯ ನಾಯಿ ಬೆಕ್ಕಿಗಾಗಿ ಜನ ಅತ್ತು ಕರೆದು ಗೋಳಾಡೋದನ್ನ ಕಂಡಾಗ ,ಆ ಪ್ರಾಣಿಗಳು ಬದುಕಿರುವ ಅತೀ ಕಡಿಮೆ ಸಮಯದಲ್ಲಿ ಆ ಮನೆಯ ಸದಸ್ಯರಿಗೆ ಅದೆಷ್ಟು ಪ್ರೀತಿಯನ್ನ ನಿಸ್ವಾರ್ಥತೆಯಿಂದ ಮೊಗೆಮೊಗೆದು ಕೊಟ್ಟು ಇಲ್ಲಿ ಬಂದು ಮಲಗಿದೆಯೋ ಅನಿಸದಿರುವುದಿಲ್ಲ .

ಅಲ್ಲಿನ ಸಮಾಧಿಗಳ ಮೇಲಿನ ಅನೇಕ ಸಾಲುಗಳಂತೂ
ನಿಮ್ಮ ಕಣ್ಣಕೊನೆಯಲ್ಲೊಂದು ತೆಳುವಾದ ನೀರಿನ ಪಸೆಯನ್ನಾದರೂ ತರೆಸುತ್ತವೆ…

ಮುದ್ದು ಮರಿಯಾಗಿ

 ನನ್ನ ಮಡಿಲಿಗೆ ಬಂದೆ

ಎಲ್ಲರ ಕಣ್ಮಣಿಯಾಗಿ

ಸುಂದರಾತೀ ಸುಂದರನಾಗಿ ಬೆಳೆದೆ

ಎಲ್ಲರಲ್ಲೂ ಪ್ರೀತಿ ಮಿಡಿದೆ

ಎಲ್ಲರಿಂದ ಪ್ರೀತಿ ಪಡದೆ

ಬಾಳಿ ಬದುಕುವ ವಯಸ್ಸಿನಲ್ಲೇ

ಬಾರದ ಲೋಕಕ್ಕೆ ಹೋದೆ

ಹೃದಯ ಭಾರವಾಗಿದೆ

ನೀನಿಲ್ಲದೆ ಮನೆಯೂ ಬರಿದಾಗಿದೆ

ಬೇಡುವೆನು ದೇವರಲ್ಲಿ

ಕಂದಾ…ನೆಮ್ಮದಿಯಿಂದಿರು

ನಮ್ಮೆಲ್ಲರ ಹೃದಯಗಳಲ್ಲಿ

ಸದಾ….ನೀ..ನೆಲಸಿರು…

ಪ್ರೀತಿಯಿಂದ ನಿನ್ನ

ಮಮ್ಮಿ, ಡಾಡಿ

ಕೆಲವು ಸಮಾಧಿಯ ಮೇಲೆ ಅಮೃತಶಿಲೆಯಲ್ಲಿ ಕೆತ್ತಿಸಲಾಗಿರುವ ತಮ್ಮ ಅಗಲಿದ ಸಾಕು ಮಕ್ಕಳ(ನಾಯಿ) ಕುರಿತಾಗಿ ಬರೆದ ಸಾಲುಗಳು ಓದಿದಾಗ ಮೈ ಜುಮ್ಮ್ ಯೆನ್ನುತ್ತದೆ.ಅದೆಂತಹ ಸಂಬಂಧ …ಅದೆಂತಹ ವಾತ್ಸಲ್ಯ ಅವರುಗಳದ್ದು.ಕೊನೆಗೆ ಬರೆಯಲಾದ ಇಂತಿ ನಿನ್ನ ಅಮ್ಮ ಅಪ್ಪ ಇತ್ಯಾದಿ ನೋಡಿದಾಗ ಹೀಗೂ ಊಂಟೆ…! ಅನ್ನಿಸುತ್ತದೆ.

ಈ ಸಶ್ಮಾನದ ಪ್ರಚಾರ ಕಾರ್ಯಮಾಡಿದ್ದ  ಸುನಿಲ್ ಕಶ್ಯಪ್ ಅವರು ಹೇಳುವ ಪ್ರಕಾರ ಕೆಲವರು ತಾವು ಸಾಕಿದ ನಾಯಿಗಳ ದೇಹವನ್ನು ಕೆಡದಂತೆ ಸೌಂರಕ್ಷಿಸಿ ಗಾಜಿನ ಪೆಟ್ಟಿಗೆಯಲ್ಲಿ ಹಾಕಿ ಇಲ್ಲಿ ಸಮಾಧಿಮಾಡಿದ್ದಾರೆ.ಕೆಲವರು ತಾವು ಸಾಕಿದ ಪ್ರಾಣಿಗಳ ಕಾಲ್ಗುಣದಿಂದ ತಮ್ಮ ಅದೃಷ್ಟ ಬದಲಾಯಿತು ಅನ್ನುವವರು ಇದ್ದಾರೆ ಅಂತೆ.ಅದು ಏನೆಯಾಗಿರಲಿ ಪ್ರಾಣಿಪ್ರಿಯರಿಗೆ ಬೆಂಗಳೂರಿನಂತಹ ಕಾಂಕ್ರೀಟ್  ಕಾಡಿನಲ್ಲಿ ತಮ್ಮ ಮಕ್ಕಳಂತೆ ಸಾಕಿದ ಪ್ರಾಣಿಗಳನ್ನು ಮಣ್ಣು ಮಾಡಿ ತಮ್ಮದೆ ರೀತಿಯಲ್ಲಿ ಸಮಾಧಿ ಕಟ್ಟಿಸಿ ,ಪ್ರೀತಿ ವ್ಯಕ್ತ ಪಡಿಸಲು ಸ್ಥಳವೊಂದು ಬೇಕಿತ್ತು….ಆ ಅವಶ್ಯಕತೆ, ಆಸೆಯನ್ನು ಪೀಪಲ್ ಫಾರ್ ಅನಿಮಲ್ಸ್ ದವರು  ನಾಯಿ ಬೆಕ್ಕು ಹೀಗೆ ಸಾಕು ಪ್ರಾಣಿಗಳಿಗೆಂದೆ ಸ್ಮಶಾನ್ ನಿರ್ಮಿಸುವ ಮೂಲಕ ಪೂರ್ಣಗೊಳಿಸಿದ್ದಾರೆ.

2005-2006 ಕ್ಕಿಂತ ಮುಂಚೆ ಬೆಂಗಳೂರಿನಲ್ಲಿ  ನಾಯಿ ಬೆಕ್ಕು ಹೀಗೆ ಸಾಕು ಪ್ರಾಣಿಗಳಿಗೆಂದೆ ಸ್ಮಶಾನ್ ಇರಲಿಲ್ಲ.ಆಗ ಜನ ತಮ್ಮ ಸಾಕುಪ್ರಾಣಿಗಳು ಸತ್ತಾಗ ಮನೇಯ ಸುತ್ತ ಮುತ್ತ ಸ್ಥಳವಿದ್ದರೆ  ಅಲ್ಲೇ ಮಣ್ಣು ಮಾಡುತ್ತಿದ್ದರು, ಕೆಲವರು ಅನಿವಾರ್ಯವಾಗಿ ಬೀದಿ ಬದಿಯೆಸೆಯಿತ್ತಿದ್ದರು.ಮುನಿಸಿಪಾಲಟಿಯವರಿಗೆ ಕರೆ ಮಾಡಿ ಮಾಡಿ ಜನ  ಸುಸ್ತಾಗಿ ಬಿಡುತ್ತಿದ್ದರು.ಇದನ್ನೆಲ್ಲ ಮನಗೊಂಡ ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಯವರು ಮೇನಕಾ ಗಾಂಧಿಯವರಿಗೆ ಮನವಿ ಸಲ್ಲಿಸಿ ಸರ್ಕಾರಿ ಜಾಗವನ್ನು ಇದಕ್ಕಾಗಿಯೆಂದು ಮಂಜೂರು ಮಾಡಿಸಿಕೊಂಡರು.ಇದು ಬೆಂಗಳೂರಿನ ಮಾತ್ರವಲ್ಲದೆ ದೇಶದ ಮೊದಲ ನಾಯಿ ಬೆಕ್ಕು ಹೀಗೆ ಸಾಕು ಪ್ರಾಣಿಗಳಿಗೆಂದೆ ನಿರ್ಮಾಣವಾದ ಸ್ಮಶಾನ್ ವಾಗಿದೆ.ಮೇನಕಾ ಗಾಂಧಿಯವರೆ ಖುದ್ದು ಇದರ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.ಮೇನಕಾ ಗಾಂಧಿಯವರು ನನ್ನನ್ನು ಕರೆಯಿಸಿ ನನಗೆ ಸ್ಮಶಾನದ ಪ್ರಚಾರ ಕಾರ್ಯವನ್ನು ವಹಿಸಿದಾಗ…ಒಂದು ಕ್ಷಣ ಏನು ಹೇಳಬೇಕು ಅಂತ ಅರ್ಥವಾಗದೆ ಮೌನವಾಗಿದ್ದೆ…!ಸ್ಮಶಾನದ ಪ್ರಚಾರ….ಹಂ….

ಅದನ್ನು ಒಂದು ಸವಾಲಾಗಿ ಸ್ವೀಕರಿಸಿದೆ.ಅದಕ್ಕಾಗಿ ಒಂದು ಬೀದಿ ನಾಟಕ ಹಾಗು ಬ್ಯಾಲೆ ಡಾನ್ಸ್ ರೂಪಕ ಸಿದ್ದಗೊಳಿಸಿ ಅದನ್ನ ನಿರ್ದೇಶನ ಮಾಡಿದೆ.ಒಂದು ನಾಯಿ ಮರಿ ಮನೆಗೆ ಬಂದಾಗಿಂದ ಹಿಡಿದು ಅದು ಮನೆ ಸದ್ಯಸ್ಯನಂತೆ ಆಗುವುದು, ಕೊನೆಗೆ ವಯೊ ಸಹಜವಾಗಿ ಅದು ಸತ್ತಾಗ ಮನೆ ಜನ ಅದನ್ನು ಮಣ್ಣು ಮಾಡಲು ಪಡುವ ಕಷ್ಟ ಹೀಗೆ ಅನೇಕ ಅಂಶಗಳನ್ನು ಅದು ಹೊಂದಿತ್ತು. ಚೌಡಯ್ಯಾ ಮೆಮೋರಿಯಲ್ ಹಾಲ್ ದಲ್ಲಿ ಪ್ರದರ್ಶನಗೊಂಡ ಬ್ಯಾಲೆ ಡಾನ್ಸ್ ರೂಪಕವನ್ನು ಕಂಡು ಮೇನಕಾ ಗಾಂಧಿಯವರು ಶ್ಲಾಘೀಸಿದ್ದು ಮರೆಯಲಾಗದ ಕ್ಷಣ ಅನ್ನುತ್ತಾರೆ ಸುನಿಲ್ ಕಶ್ಯಪ್.

ಮೇನಕಾ ಗಾಂಧಿ ಅವರ ಹಸ್ತದಿಂದ  ಉದ್ಘಾಟಿಸಲ್ಪಟ್ಟ ಪೀಪಲ್ ಫಾರ್ ಅನಿಮಲ್ಸ್ ಎಂಬ ಶೂಶ್ರೂಷಾ ಕೇಂದ್ರಕ್ಕೆ  ಜಾಕಬ್ ವರ್ಗೀಸ್ ಸಲ್ಲಿಸಿದ ಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲಯೆಂದು ಹೇಳಲು ಸುನೀಲ್ ಕಶ್ಯಪ್ ಮರೆಯೋಲ್ಲ…

ಇವರದ್ದು ಆಂಬುಲೆನ್ಸ್ ಕೂಡ ಇದೆ. ಪ್ರಾಣಿಗಳು ಸಂಕಷ್ಟ ದಲ್ಲಿದ್ದರೆ 819715504,080-28603986 ಈ ನಂಬರಿಗೆ

ಕರೆ ಮಾಡಿದರೆ ಸಾಕು. (ಸಾಕು ಪ್ರಾಣಿಗಳಾದ ದನ ನಾಯಿ ಬೆಕ್ಕು ಕುರಿ ಇತ್ಯಾದಿಗಳ ಸಹಾಯಕ್ಕೆ ಇವರು ಬರುವುದಿಲ್ಲ. ಅದಕ್ಕೆಂದೇ ಇತರ ಹಲವಾರು ಸಂಸ್ಥೆಗಳು ಇರುವ ಕಾರಣ. ಇವರು ಸಹಾಯ ಮಾಡುವುದು ಕೇವಲ ವೈಲ್ಡ್ ಆನಿಮಲ್ಸ್ ಆಂಡ್ ಬರ್ಡ್ಸ್.)

ಪ್ರಾಣಿ , ಪಕ್ಷಿಗಳ ಪ್ರಿಯರು ಮತ್ತು ಅವುಗಳ ಬಗ್ಗೆ ಮತ್ತಷ್ಟು ತಿಳಿಯಲಿಚ್ಚಿಸುವವರು ನಂ.67,ಉತ್ತರಹಳ್ಳಿ ರೋಡ್,(ಅಭಿಮಾನ ಸ್ಟೂಡಿಯೋ ಹತ್ತಿರ)ಕೆಂಗೇರಿ ಹತ್ತಿರ BGS ಆಸ್ಪತ್ರೆ ಪಕ್ಕ ಇರುವ ಪೀಪಲ್ ಫಾರ್ ಅನಿಮಲ್ಸ್ ಎಂಬ ಶೂಶ್ರೂಷಾ ಕೇಂದ್ರಕ್ಕೆ ಭೇಟಿಕೊಡಬಹುದು .

ಅಲ್ಲಿ ಆಕ್ಸಿಡೆಂಟಲ್ಲಿ ಕಾಲು ಕಳೆದುಕೊಂಡ ಪ್ರಾಣಿಗಳು , ಕರೆಂಟ್ ಹೊಡೆಸಿಕೊಂಡ ಪಕ್ಷಿಗಳು , ಬಾವಲಿಗಳು ,ನರಿ , ಮಂಗಗಳು ,ಗೂಬೆ , ಗಿಡುಗ , ಹಾವುಗಳನ್ನ ರೀಹ್ಯಾಬಿಲಿಟೇಷನ್ ಮಾಡಿ , ಸ್ವತಂತ್ರವಾಗಿ ಬದುಕಲು ಯೋಗ್ಯವಾದ ಪ್ರಾಣಿಗಳನ್ನ ಮತ್ತೆ ಕಾಡಿಗೆ ಬಿಡುತ್ತಾರೆ , ಉಳಿದವುಗಳನ್ನ ಅವರ ಅನಾಥಾಲಯದಲ್ಲಿ ಸಾಕುತ್ತಾರೆ .

ಭೇಟಿಕೊಟ್ಟರೆ ಪ್ರಾಣಿಗಳ ಒಂದು ಅದ್ಬುತ ಲೋಕದ ಅನಾವರಣದೊಂದಿಗೆ ಪ್ರಾಣಿ ,ಪಕ್ಷಿಗಳ ಬಗ್ಗೆ ಮತ್ತಷ್ಟು ತಿಳಿಯಬಹುದು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top