fbpx
ದೇವರು

ಮಾರ್ಕಂಡೇಯ ಮುನಿಗಳು ಧರ್ಮ ಅಂದ್ರೆ ಏನು ಅಂತ ಪಾಂಡವರಿಗೆ ಹೇಳಿದ ಧರ್ಮವ್ಯಾಧನ ಕಥೆ

ಧರ್ಮ ರಹಸ್ಯವನ್ನು ತಿಳಿಸಿದ ಧರ್ಮವ್ಯಾಧನ ಕಥೆ.

ಒಂದು ಊರಿನಲ್ಲಿ ಕೌಶಿಕನೆಂಬ ಬ್ರಾಹ್ಮಣನಿದ್ದನು.ಅವನು ವೇದ ಶಾಸ್ತ್ರಗಳನ್ನು ಅಭ್ಯಾಸ ಮಾಡಿದವನಾದರೂ ಸಹ ವಿದ್ಯೆಯಲ್ಲಿ ಅದ್ವಿತೀಯ ಸಾಧನೆ ಮಾಡಬೇಕೆಂಬ ಛಲದಿಂದ ತನ್ನ ವಯಸ್ಸಾದ ತಂದೆ ತಾಯಿಯರನ್ನು ಬಿಟ್ಟು ಬಂದು ತಪಸ್ಸನ್ನು ಆಚರಿಸುತ್ತಿದ್ದನು.

ಒಮ್ಮೆ ಕೌಶಿಕನು ವೇದ ಪಾರಾಯಣ ಮಾಡುತ್ತಿರುವಾಗ ಮೇಲೆ ಮರದಲ್ಲಿ ಕುಳಿತ ಬಲಾಕ ಪಕ್ಷಿಯು ಚಿಲಿಪಿಲಿಗುಟ್ಟಿತು.ಅನಂತರ ಮಲ ವಿಸರ್ಜನೆ ಮಾಡಿತು.ಅದರಿಂದ ಕುಪಿತಗೊಂಡ ಕೌಶಿಕನು ದುರದುರನೇ ಪಕ್ಷಿಯನ್ನು ನೋಡಿದಾಗ ಅದು ಅಲ್ಲಿಯೇ ಉರಿದು ಸತ್ತು ಹೋಯಿತು. ಅನಂತರ ಕೌಶಿಕನಿಗೆ ಸಹ ಪಶ್ಚಾತ್ತಾಪವಾಯಿತು.ತಾನು ಈ ರೀತಿ ತಪಸ್ಸಿನಿಂದ ಸಾಧನೆ ಮಾಡಿದೆನೆಂದು ಕೌಶಿಕನು ಸಂತೋಷದಿಂದ ಇದ್ದನು.

ಒಂದು ದಿನ ಮಧ್ಯಾಹ್ನದ ಸಮಯದಲ್ಲಿ ಕೌಶಿಕನು  ಒಂದು ಮನೆಯ ಮುಂದೆ ಬಂದು ನಿಂತು  “ಭವತಿ ಭಿಕ್ಷಾಂದೇಹಿ” ಎಂದು ಭಿಕ್ಷೆಗಾಗಿ ಕೇಳಿದನು. ಆಗ ತಾನೇ ಮನೆಗೆ ಯಜಮಾನ ಬಂದಿದ್ದನು.ಅವನ ಪತ್ನಿಯು ಗಂಡನ ಸೇವೆಯಲ್ಲಿದ್ದಳು. ಆದುದರಿಂದ ಸ್ವಲ್ಪ ತಡವಾಗಿ ಭಿಕ್ಷೆಯನ್ನು ತಂದು ಕೊಟ್ಟಳು.

ಇದರಿಂದ ಅತಿಥಿಗೆ ಅವಮಾನವಾಯಿತು ಎಂದು ಕೌಶಿಕನು ಅಸಮಾಧಾನದಿಂದ ಆಕೆಯನ್ನು ಸಹ ದುರದುರನೆ ನೋಡಿದನು. ಆಗ ಆ ಪತಿವ್ರತೆಯು “ಅಯ್ಯಾ,ಕೌಶಿಕನೇ, ನೀನು ಈ ರೀತಿ ನೋಡಿದರೆ ನಾನು ಸತ್ತುಹೋಗಲು   ಬಲಾಕ ಪಕ್ಷಿಯಲ್ಲ” ಎಂದಾಗ ಕೌಶಿಕನಿಗೆ ಈ ವಿಷಯ ಹೇಗೆ ತಿಳಿಯಿತೆಂದು ಆಶ್ಚರ್ಯವಾಯಿತು.

ಮನಸ್ಸಿನಲ್ಲಿ ಗೊಂದಲವಾದಾಗ ಅವಳನ್ನೇ ಕೇಳಿದರಾಯಿತು ಎಂದು ಆ ಕ್ಷಣ ಅವಳನ್ನೇ “ನಾನು ಬಲಾಕ ಪಕ್ಷಿಯನ್ನು ಕೊಂದ ವಿಷಯವನ್ನು ಹೇಗೆ ತಿಳಿದಿರಿ” ಎಂದು ಕೇಳಿದನು.ಆಗ ಅವಳು ನಾನು ಪತಿವ್ರತೆಯಾಗಿ ನನ್ನ ಧರ್ಮವನ್ನು ಮಾಡಿದ್ದರಿಂದಲೇ ತಿಳಿಯಿತು.ಆದರೆ ನೀನು ವ್ಯರ್ಥವಾಗಿ ಕಾರ್ಯ ಮಾಡಿ ಸಂಯಮ ಹಾಳು ಮಾಡುತ್ತಿರುವೆ.ನಿನಗೆ ಯೋಗ್ಯವಾದ ಧರ್ಮದ ಬಗ್ಗೆ ತಿಳಿಯಬೇಕಾದರೆ ನೀನು ಈಗಲೇ ಮಿಥಿಲಾ ನಗರದಲ್ಲಿರುವ ಧರ್ಮವ್ಯಾಧನನ್ನು ಭೇಟಿ ಮಾಡು ಎಂದಳು.

ಕೌಶಿಕನು ತನಗೆ ಬುದ್ದಿ ಹೇಳಿದ ಸ್ತ್ರೀಯ ಮಾತಿನಂತೆಯೇ ಏನನ್ನು ಹೇಳಿದ್ದಾಳೆ ?ಎಂದು ನೋಡೋಣ ಎಂಬ  ಮನಸ್ಸಿನಿಂದ ಹೊರಟನು.ಮಿಥಿಲಾ ಪಟ್ಟಣದಲ್ಲಿ ಧರ್ಮವ್ಯಾಧನು ಪ್ರಸ್ಸಿದ್ದನಾದ ಕಟುಕನಾಗಿದ್ದ,ಮಾಂಸದ ಅಂಗಡಿಯಲ್ಲಿರುವ ಧರ್ಮವ್ಯಾಧನನ್ನು ಕಂಡನು.ಅವನು  ಕೌಶಿಕನನ್ನು “ಕಂಡ ಕೂಡಲೇ ನಿನ್ನನ್ನು ಆ ಪತಿವ್ರತೆ ನನ್ನಲ್ಲಿಗೆ ಕಳಿಸಿದಳಲ್ಲವೇ ?” ಎಂದಾಗ ಮತ್ತೇ ಆಶ್ಚರ್ಯವಾಯಿತು ಕೌಶಿಕನಿಗೆ.

ಆ ಪತಿವ್ರತೆಗೆ ಈ ಕಟುಕನಿಗೆ ವಿಷಯವೆಲ್ಲವೂ ಹೇಗೆ ತಿಳಿಯಿತು ?ಎಂದು ಚಿಂತಿಸುತ್ತ ಅವರನ್ನೇ ಕೇಳಿ ಯೋಗ್ಯವಾದ ಕಾರ್ಯವನ್ನು  ಮಾಡುವ ನಿರ್ಧಾರದಿಂದ ಧರ್ಮವ್ಯಾಧನನ್ನು  “ನಾನು ಮಾಡಬಹುದಾದ ಕಾರ್ಯವನ್ನು ತಿಳಿಸಿರಿ” ಎಂದನು.

ಧರ್ಮವ್ಯಾಧನು “ನೀವು ಬಹಳಷ್ಟು ವಿದ್ಯೆ ಕಲಿತವರು. ನೀವು ತಿಳಿಯಲಾರದ್ದು  ಏನು ಇಲ್ಲ.ಆದರೆ ಈಗ ನೀವು ತಿಳಿಯುವ ಧರ್ಮ ರಹಸ್ಯವು ಈ  ರೀತಿಯಲ್ಲಿದೆ” ಕೇಳಿರು ಎಂದು ವಿವರವಾಗಿ ತಿಳಿಸಿದನು.

ಧರ್ಮ ರಹಸ್ಯ.

ನನಗೆ ತಿಳಿದಂತೆ ಧರ್ಮವೆಂದರೆ ಸತ್ಯವನ್ನೇ ಹೇಳುವುದು. ಸ್ವಧರ್ಮದಲ್ಲಿರುವುದು  ಸಹನೆ ,ದಯೆ. ವರ್ತನೆಯಲ್ಲಿ ಇಟ್ಟುಕೊಳ್ಳುವುದು ದ್ವೇಷ, ಆತ್ಮಪ್ರಷಂಸೆ ಮಾಡದಿರುವುದು.ಕುಗ್ಗದಿರುವುದು ಇತರರಿಗೆ ಹಿತಕಾರಿ ಕಾರ್ಯ ಮಾಡುವುದು.ತೀರ್ಥಕ್ಷೇತ್ರಗಳನ್ನು ಸಂದರ್ಶಿಸುವುದು. ಮತ್ತು ಜನ್ಮದಾತೃಗಳಾದ  ತಾಯಿ ತಂದೆಯರಿಗೆ,ವಿದ್ಯೆ ಕಲಿಸಿದ ಗುರುಗಳಿಗೆ ವಿಧೇಯರಾಗಿದ್ದು ,ಅವರ ಸೇವೆ ಮಾಡುವುದು.ಇದೇ ಧರ್ಮರಹಸ್ಯ ಎಂದು ಧರ್ಮವ್ಯಾಧನು ಧರ್ಮ ಸೂಕ್ಷ್ಮವನ್ನು ತಿಳಿಸಿದನು.

ನಾನು ಕುಲದಿಂದ ಬಂದ ವೃತ್ತಿ ಮಾಂಸ ಮಾರುವುದನ್ನೇ ನೆಡೆಸಿಕೊಂಡು ಬಂದಿದ್ದೇನೆ. ವ್ಯಾಪಾರದಲ್ಲಿ ಸುಳ್ಳು ,ಮೋಸ, ವಂಚನೆ ಮಾಡುವುದಿಲ್ಲ. ಈ ಕಾರ್ಯವನ್ನು ಮುಗಿಸಿ ವೃದ್ಧರಾದ ತಾಯಿ ತಂದೆಯರ ಸೇವೆ ಮಾಡುತ್ತೇನೆ.ಅವರ ಆಶೀರ್ವಾದ ನನ್ನ ಮೇಲಿದೆ.ನಾನು ಇಲ್ಲಿಯವರೆಗೆ ಸುಳ್ಳು ಹೇಳಿಲ್ಲ.ನೀವೇ ಬಂದು ನೋಡಿರಿ ಎಂದು ಮನೆಗೆ ಕರೆದೊಯ್ದನು.

ಕೌಶಿಕನು ಸಹ ಆ ಹಿರಿಯರಿಗೆ ವಂದಿಸಿ,ಧರ್ಮವ್ಯಾಧನಿಗೆ ಧರ್ಮವನ್ನು ತಿಳಿಸಿದ್ದಕ್ಕಾಗಿ ವಂದಿಸಿ ತನ್ನ ಮನೆಗೆ ನಡೆದನು.ವಿದ್ಯಾವಂತನಾಗಬೇಕು ಎಂಬ ಆಸೆಯಿಂದ ಆಶಕ್ತರಾದ  ತನ್ನ ತಾಯಿ ತಂದೆಯರನ್ನು  ಬಿಟ್ಟು ಬಂದಿದ್ದ ಕೌಶಿಕನು ತನ್ನ ಮನೆ ಸೇರಿ ಹಿರಿಯರ ಸೇವೆ ಮಾಡಿಕೊಂಡು ಉತ್ತಮ ಮಾನವನಾದನು.

ಹೀಗೆ ಧರ್ಮರಹಸ್ಯವನ್ನು ತಿಳಿಸುವವರು ಎಲ್ಲಾ ವರ್ಗದವರಲ್ಲಿಯೂ ಇದ್ದಾರೆ ಎಂದು ಮಾರ್ಕಂಡೇಯ ಮಹಾ ಮುನಿಗಳು ಈ ಕಥೆಯನ್ನು ಪಾಂಡವರಿಗೆ ವಿವರವಾಗಿ ತಿಳಿಸಿ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top