fbpx
ದೇವರು

ದೀರ್ಘ ಸೌಮಂಗಲ್ಯ ಹಾಗು ಸಂತಾನಕ್ಕಾಗಿ ಮಾಡುವ, ಶ್ರೀ ಕೃಷ್ಣ ಹೇಳುವ ಮಂಗಳ ಗೌರೀ ವ್ರತದ ಕಥೆ..

ಶ್ರೀ ಮಂಗಳ ಗೌರೀ ವ್ರತ ಕಥೆ 

 

ಮಹಾ ಮಹಿಮಾನದ ಶ್ರೀ ಕೃಷ್ಣನ ಕುರಿತು ಧರ್ಮರಾಯನು, “ಎಲೈ ಸ್ವಾಮಿಯೇ, ನಾವು ಮಾಡುತ್ತಿರುವ ಅರಣ್ಯ ವಾಸದಲ್ಲಿ ನಮಗೆ ಯಾವ ತೊಂದರೆಯೂ ಆಗದಂತೆ, ದ್ರೌಪದಿಗೆ ದೀರ್ಘ ಸೌಮಂಗಲ್ಯ ಉಳಿಯುವಂತಹ  ವ್ರತ ಇದ್ದರೆ ಹೇಳಿ ನಮ್ಮಿಂದ ವ್ರತವನ್ನು ಮಾಡಿಸುವಂತಹವನಾಗು”ಎನಲು,

ಶ್ರೀ ಕೃಷ್ಣನು, “ಎಲೈ ನಂದನನೇ, ಕೇಳು,ಲೋಕದಲ್ಲಿ ಸ್ತ್ರೀಯರ ಪಾತಿವ್ರತ್ಯವನ್ನು ಕಾಪಾಡಿ,ಮಾಂಗಲ್ಯವನ್ನು ರಕ್ಷಿಸಿ, ಸದಾ ಸಂತೋಷ, ಸುಖವನ್ನು ನೀಡುವ “ ಮಂಗಳಗೌರಿ ವ್ರತ”  ಎಂಬುದೊಂದು ವ್ರತವಿದೆ.

ಅದನ್ನು ಮಾಡಿ,ನೀವು ಸುಖವಾಗಿ ಕಾಲ ಕಳೆದು,ಘೋರ ಅರಣ್ಯದಲ್ಲಿ ಎಂತಹ ಅಪಮೃತ್ಯುವನ್ನಾದರೂ ಜಯಿಸಿ,ಆರೋಗ್ಯವಂತರಾಗಿರಿ”.

ಹಿಂದೆ  ರಾಕ್ಷಸರೊಡನೆ ನಾನು ಯುದ್ಧ ಮಾಡುತ್ತಿರುದ್ದಾಗ ಲಕ್ಷ್ಮೀದೇವಿಯೂ ವೈಕುಂಠದಲ್ಲಿ ಸರ್ವಮಂಗಳ ರೂಪಿಯಾದ  ಶ್ರೀ ಚಕ್ರ ದೇವತೆಯ ರೂಪದಲ್ಲಿ ಮಂಗಳಗೌರಿ  ವ್ರತವನ್ನು ಮಾಡಿದ್ದರಿಂದ ನನ್ನ ಶಕ್ತಿ ಹೆಚ್ಚಾಗಿ ದುಷ್ಟರನ್ನು ಸಂಹಾರ ಮಾಡಿ,ಲೋಕರಕ್ಷಣೆ ಮಾಡಿದೆನು”

ಎಂದು ಹೇಳಿ, “ಶ್ರಾವಣ ಮಾಸದ ಮಂಗಳವಾರದ ದಿನ  ತಾಯಿಯನ್ನು ವಿದ್ಯುಕ್ತವಾಗಿ ಪೂಜಿಸಿ, ತಾಯಿಗೆ ಬಾಗಿನ ಕೊಟ್ಟರೆ ದ್ರೌಪದಿಯು  ದೀರ್ಘ ಸುಮಂಗಲಿ ಆಗುವಳು” ಎಂದು ಹೇಳಿ,ವ್ರತವನ್ನು ಧೌಮ್ಯರ ಮೂಲಕ ಮಾಡಿಸುವಂತೆ ಹೇಳಿದನು.

ಎಲೈ ಧರ್ಮತನಯ ,ಕೇಳು,ಹಿಂದೆ ಕುಂಡಿನೀಪುರವೆಂಬ ರಾಜ್ಯ ಒಂದಿತ್ತು. ಅಲ್ಲಿ ಧರ್ಮಪಾಲನೆಂಬ ವರ್ತಕನು ಹೆಸರಿಗೆ ತಕ್ಕಂತೆ  ಧರ್ಮಪಾಲನೆ ಮಾಡಿ,ದೇವ ಬ್ರಾಹ್ಮಣರನ್ನು ಆರಾಧಿಸುತ್ತಾ ಇದ್ದಾಗ,ಪ್ರತಿದಿನವೂ ಒಬ್ಬ ಯತಿಯೂ ಬಿಕ್ಷೆಗಾಗಿ ಬೀದಿಯಲ್ಲಿ ಬಂದರೂ ವರ್ತಕನು ನೀಡಿದ  ದಾನವನ್ನು ಸ್ವೀಕರಿಸುತ್ತಿರಲಿಲ್ಲ.

ಇದ್ದನ್ನು ಕಂಡ ಸತಿಪತಿಯರು ಒಂದು ದಿನ ಆತನನ್ನು ಕುರಿತು ಬಿಕ್ಷೆಗಾಗಿ ಬಂದರು ತಮ್ಮಿಂದ ಸ್ವೀಕರಿಸದಿರಲು ಕಾರಣವೇನೆಂದು ಕೇಳಲು.

ಎಲೈ ದಂಪತಿಗಳೇ,ನಿಮಗೆ ಸಂತಾನವಿಲ್ಲದ ಕಾರಣ ನಾವು ಭಿಕ್ಷೆ ಸ್ವೀಕರಿಸುವಂತಿಲ್ಲ ಎಂದು ನುಡಿದರು.

ಆಗ ಸತಿಪತಿಯರು ಬಲವಂತ ಮಾಡಿ ,ಬಿಕ್ಷೆಯನ್ನು ಆತನ ಉಡಿಗೆ ಹಾಕಿದ್ದರಿಂದ ಕುಪಿತಗೊಂಡ ಯತಿಯೂ, ‘ನಿಮಗೆ ಸಂತಾನವಾಗದೇ   ಇರಲಿ’ ಎಂದು ಶಪಿಸಿ ಮುಂದೆ ಹೋಗಲು ಯತ್ನಿಸಿದನು.

ಅಷ್ಟರಲ್ಲಿ ಇದರಿಂದ ಮನನೊಂದ ಸತಿಪತಿಯರು ಬಹು ದುಃಖಿತರಾಗಿ ಯತಿಯನ್ನು ಪರಿಪರಿಯಾಗಿ ಬೇಡಿಕೊಂಡರು.

ಆಗ ಯತಿಯು ಕರುಣೆ ತೋರಿ.’ಎಲೈ ದಂಪತಿಗಳೇ,ನೀವು ಕರಿ ಕುದುರೆ ಏರಿ, ಕರಿ ಬಟ್ಟೆ ಧರಿಸಿ,ಪೂರ್ವ ದಿಕ್ಕಿಗೆ ಪ್ರಯಾಣ ಮಾಡುವಾಗ ಎಲ್ಲಿ ಕುದುರೆಯು ನಿಲ್ಲುವುದೋ ಅಲ್ಲಿ ನಿಮಗೊಂದು ಶಿವಾಲಯವು ಕಾಣುವುದು.ಅದರಲ್ಲಿರುವ ದೇವಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ಆರಾಧಿಸಿದರೆ ನಿಮಗೆ ಸಂತಾನ ಆಗುವುದು’ ಎಂದು ಆಶೀರ್ವದಿಸಿ, ಮುಂದೆ ಹೋದರು.

ಅದರಂತೆಯೇ ಅಂದೇ ಪ್ರಯಾಣ ಮಾಡಿದಾಗ ಬಹುದೂರ ಹೋದರು.ಭಯಂಕರವಾದ ಕಾಡು,ಭೀತಿ ಹುಟ್ಟಿಸುವ ವಾತಾವರಣ ಅಂತಹ ಸಮಯದಲ್ಲಿ ಕುದುರೆಯು ಒಂದು ತಟಾಕ ಸಮೀಪದಲ್ಲಿ ಬಂದು ನಿಂತಿತು.

ಆಗ ವರ್ತಕರು ಇಳಿದು,ಬಳಲ್ಲಿದ್ದರ ಕಾರಣ ಅಲ್ಲಿ ತಟಾಕದಲ್ಲಿ ವಿಶ್ರಾಂತಿ ಪಡೆದು ಯೋಚಿಸುತ್ತಿರುವಾಗ ಅವರಿಗೆ ಅಲ್ಲಿ ಒಂದು ಶಿವಾಲಯವು ಕಂಡಿತು.

ಸಂತೋಷದಿಂದ ವರ್ತಕನು ಮತ್ತು ಅವನ ಪತ್ನಿಯು ಒಳಗೆ ಹೋಗಿ ನೋಡಿದಾಗ, ಅಲ್ಲಿ ಪಾರ್ವತೀ ದೇವಿಯ ವಿಗ್ರಹವೊಂದು ಕಾಣಿಸಿತು.ಭಕ್ತಿಯಿಂದ ವಿಗ್ರಹಕ್ಕೆ ತಮ್ಮ ಕೈಲಾದ ಸೇವೆಯನ್ನು ಬಹುಕಾಲ ಮಾಡಿದರು.

ಇದರಿಂದ ಸಂತುಷ್ಟಗೊಂಡ ದೇವಿಯೂ ಒಂದು ದಿನ ದಂಪತಿಯರಿಗೆ  ಪ್ರತ್ಯಕ್ಷವಾಗಿ ‘ಎಲೈ ದಂಪತಿಗಳಿರಾ,ನಿಮ್ಮ ಭಕ್ತಿಗೆ ಸಂತೋಷಗೊಂಡಿದ್ದೇನೆ. ವರವನ್ನು ಕೇಳಿರಿ’.ಎನಲು,

ಆಗ ಧರ್ಮಪಾಲನು, ‘ಎಲೈ ತಾಯಿಯೇ, ಲೋಕವನ್ನು ಪಾಲಿಸುವ ತಾಯಿ ನೀನು .ನಮಗೆ ಸಂತಾನ ಇಲ್ಲದ ವ್ಯತೆ ಇದೆ .ಅನುಗ್ರಹಿಸಿ ನಮ್ಮನ್ನು ಉದ್ಧರಿಸು ತಾಯಿ……….’ ಎನ್ನಲು,

ದೇವಿಯು ,ದಂಪತಿಯರೇ, ವೈಧವ್ಯ ಭರಿಸುವ  ಧೀರ್ಘಾಯುವಾದ ಪುತ್ರಿಯು ಬೇಕೇ ಅಥವಾ ಅಲ್ಪಾಯುವಾದ ಕುರುಡನಾದ ಪುತ್ರನು ಬೇಕೆ? ಎನಲು,

ತಾಯಿಯೇ, ವೈಧವ್ಯವನ್ನು ನೋಡಿ ಹಗಲಿರುಳು ಚಿಂತೆ ಪಡುವುದಕ್ಕಿಂತಲೂ ಅಲ್ಪಾಯುವಾದ ಪುತ್ರನನ್ನು ಕೊಟ್ಟು ಉದ್ಧರಿಸು’ಎಂದು ಪ್ರಾರ್ಥಿಸಿದರು.

ತಾಯಿಯು ಹಾಗೇ ಅಗಲೆಂದು  ತಿಳಿಸಿ, ‘ದೇವಸ್ಥಾನದ ಪಕ್ಕದಲ್ಲಿರುವ ಮರದ ಹಣ್ಣನ್ನು ಭಕ್ತಿಯಿಂದ ಸೇವಿಸಿರಿ.ನಿಮ್ಮ ಇಷ್ಟಾರ್ಥವು ನೆರವೇರುವುದು’ ಎಂದು ತಿಳಿಸಿ ಅಂತರ್ಧಾನಳಾದಳು.

ದೇವಿಯ ಪ್ರಸಾದದಂತೆ ಮರದ ಹಣ್ಣನ್ನು ತಂದು ಸತಿಪತಿಯರು ಭಕ್ತಿಯಿಂದ ಸೇವಿಸಿದರು.

ತಾಯಿಯ ಕರುಣೆಯಿಂದ ವರ್ತಕನ ಪತ್ನಿಯು  ಗರ್ಭಧರಿಸಿ, ಓಂಬತ್ತು ತಿಂಗಳು  ತುಂಬಿದ ಮೇಲೆ  ಒಂದು ಸುಮೂಹೂರ್ತದಲ್ಲಿ ಗಂಡು ಮಗುವಿಗೆ ಜನ್ಮವಿತ್ತಳು.

ಮಗುವಿಗೆ ಕುರುಡು ಇದ್ದಿತು. ತಂದೆ,ತಾಯಿ ಶೋಕತಪ್ತರಾದರು.ಆದರೂ ಧೈರ್ಯದಿಂದ ಸಂಸ್ಕಾರಾದಿಗಳನ್ನು ಮಾಡಿ,ಮಗುವಿಗೆ ಶಿವ ಎಂದು ನಾಮಕರಣ ಮಾಡಿದರು.

ಮಗುವು ಬೆಳೆದು ದೊಡ್ಡವನಾದಾಗ ತಾಯಿಯು ಮದುವೆ  ಮಾಡಬೇಕೆಂದು ಚಿಂತನೆ ಮಾಡಿದಳು.ತನ್ನ ಬಯಕೆಯನ್ನು ಗಂಡನಿಗೆ  ತಿಳಿಸಿದಳು.

ಆಗ ವರ್ತಕನು , ‘ಮೊದಲು ಇವನನ್ನು  ಕಾಶೀ ಯಾತ್ರೆಗೆ ಕಳುಹಿಸೋಣ ಅಲ್ಲಿಂದ ಬಂದ ಮೇಲೆ ವಿವಾಹ ಮಾಡಿದರಾಯಿತು’ಎಂದು ತಿಳಿಯ ಹೇಳಿದನು.

ಅನಂತರ ತನ್ನ ಮಗನನ್ನು ಭಾವ ಮೈದುನನ ಜೊತೆಯಲ್ಲಿ ಕಾಶಿಯಾತ್ರೆಗೆ ಕಳುಹಿಸಿದನು.

 

ಹೀಗೆ ಇವರಿಬ್ಬರು ಕುಂಡಿನೀಪುರ ಬಿಟ್ಟು ಅನೇಕ ಪುಣ್ಯಕ್ಷೇತ್ರಗಳ ದರ್ಶನ ಮಾಡಿಕೊಂಡು ಕಡೆಗೆ ಕಾಶಿ ಸೇರಿದರು.

ಅಲ್ಲಿ ಒಂದು ಕಡೆ ವಾಸ ಮಾಡಿಕೊಂಡು ಪ್ರತಿ ದಿನವೂ ಗಂಗಾ ಸ್ನಾನ ಮಾಡಿ, ವಿಶ್ವನಾಥನ ದರ್ಶನ ಮಾಡುತ್ತಾ ,ಸ್ವಾಮಿ, ನನಗೆ ಆಯಸ್ಸು ಕೊಟ್ಟು ಕಾಪಾಡು’ ಎಂದು ಕೇಳುತ್ತಿದ್ದನು.

ಹೀಗೆ ಇರಲು ಒಂದು ದಿನ ನದೀ ತೀರದಲ್ಲಿ ಅನೇಕ ರಮಣಿಯರು  ಸ್ನಾನ ಮಾಡಿ ಕಾಲ ಕಳೆಯುತ್ತಿರುವಾಗ ಅಲ್ಲಿದ್ದ ಸುಶೀಲೆ ಎಂಬ ಯುವತಿಯು ತನ್ನ  ಸ್ನೇಹಿತೆಯರನ್ನು ತಮಾಷೆ ಮಾಡುತ್ತಿರಲು, ಸ್ನೇಹಿತೆಯು ಕೋಪೋದ್ರಿಕ್ತಳಾಗಿ ಸುಶೀಲೆಯನ್ನು  ಕುರಿತು, ‘ನೀನು ವಿಧವೆಯಾಗು’ ಎಂದು ಬಯ್ಯುತ್ತಿದ್ದಳು.

ಇದನ್ನು ಕೇಳಿದ ಸುಶೀಲೆಯು ಯುವತಿಗೆ, ನೀನು ಬೈದ ಮಾತ್ರಕ್ಕೆ ನನಗೆ ಏನೂ ಆಗುವುದಿಲ್ಲ.ನಮ್ಮ ತಾಯಿಯು ಮಾಡುತ್ತಿರುವ ಮಂಗಳಗೌರಿಯ ವ್ರತ ಪ್ರಭಾವದಿಂದ ನಾನು ಪಾರಗಬಲ್ಲೆ” ಎಂದಳು.

ಇದನ್ನು ಕೇಳಿಸಿಕೊಂಡ ಸೋದರಮಾವನು ಅವಳ ವಿಳಾಸವನ್ನು ತಿಳಿದು,ಅವರ ತಂದೆಯವರಾದ ಹರಿಯನ್ನು ಭೇಟಿಯಾಗಿ ತಾನು ಕನ್ಯಾರ್ಥಿಯಾಗಿ  ಬಂದಿರುವೆನೆಂದು ತಿಳಿಸಿದನು ಹಾಗೂ ತನ್ನ ಸೋದರಳಿಯನನ್ನು ತೋರಿಸಿದನು.ಸುಂದರನೂ,ಸ್ಪುರದ್ರೂಪಿಯೂ ಆದ ಬಾಲಕನನ್ನು ನೋಡಿ, ಮನದಲ್ಲಿ ಸಂತೋಷಗೊಂಡು ತನ್ನ ಸತಿಗೆ ಹಾಗೂ ಮಗಳಿಗೆ ವರನ ವಿಷಯವಾಗಿ  ಹೇಳಿ, ತೋರಿಸಿದನು.

ಎಲ್ಲರೂ ಒಪ್ಪಿಕೊಂಡು ಒಂದು ಸುಮುಹೂರ್ತದಲ್ಲಿ ಮದುವೆ ಮಾಡಿದರು. ಇದರಿಂದ ನೂತನ ದಂಪತಿಯರು ಸಂತೋಷಗೊಂಡಿರಲು, ಅಂದಿಗೆ ವರನಿಗೆ  16 ನೇ ವಯಸ್ಸು ಪ್ರಾಪ್ತವಾಯಿತು.

ಅಂದು ರಾತ್ರಿಯೇ ದೇವಿಯೂ ಸ್ವಪ್ನದಲ್ಲಿ ಕಾಣಿಸಿಕೊಂಡು, “ಎಲೈ ಮಗಳೇ, ನಿನ್ನ ಗಂಡನ ಆಯಸ್ಸು ತೀರಿತೆಂದು, ಒಂದು ನಾಗವು ಬರುತ್ತಿದೆ  ಎಚ್ಚರವಾಗಿ ಇದ್ದು ಅದನ್ನು ನೀನು ಪೂಜೆ ಮಾಡಿದ  ಕಲಶದಲ್ಲಿ ಬಂಧಿಸಿ,ನಾಳೆ ಮಂಗಳವಾರ ನಿಮ್ಮ ತಾಯಿಗೆ ಬಾಗಿನ ಕೊಡು.ಒಳ್ಳೆಯದಾಗುವುದು” ಎಂದು ತಿಳಿಸಿ, ಅಂತರ್ಧಾನಳಾದಳು.

ತಾಯಿಯು ಸೂಚಿಸಿದ ರೀತಿಯಲ್ಲಿ ಒಂದು ಸರ್ಪವು ಸರಸರನೇ ಬರುತ್ತಿದ್ದುದ್ದನ್ನು ಕಂಡು ಸುಶೀಲೆಯು ಎಚ್ಚೆತ್ತವಳಾಗಿ, ಪೂಜೆಗಾಗಿ ಇಟ್ಟಿದ್ದ ಪಾತ್ರೆಯಲ್ಲಿ ಹಾಲನ್ನು  ತುಂಬಿ ನಾಗನಿಗೆ ಉಣಿಸಿದಳು.

ಇದರಿಂದ ಸುಪ್ರೀತನಾದ ನಾಗವು ಪಾತ್ರೆಯಲ್ಲಿ ಸೇರಿಕೊಂಡಿತು.ತಕ್ಷಣ ಸುಶೀಲೆಯು ಅದರ ಮೂತಿಯನ್ನು ಬಟ್ಟೆಯಿಂದ ಕಟ್ಟಿ ರಾತ್ರಿ ಜಾಗರಣೆ ಮಾಡಿದಳು.

ಬೆಳ್ಳಗ್ಗೆ ಎದ್ದು ನಿತ್ಯ ವಿಧಿಗಳನ್ನು ಮಾಡಿಕೊಂಡು, ರಾತ್ರಿ ನೆಡೆದ ವಿಷಯವನ್ನು ತಾಯಿಗೆ ಹೇಳಿ,ಪಾತ್ರೆಯನ್ನು ಸೇರಿಸಿ, ಬಾಗಿನ ನೀಡಿದಳು.

ಇತ್ತ ಆಕೆಯು ಅದನ್ನು ಸ್ವೀಕರಿಸಿ,ಅದರಲ್ಲಿ ಕೈಹಾಕಿ, ವಜ್ರದ ಹಾರವನ್ನು ತೆಗೆದು ಮಗಳಿಗೆ ಆಶೀರ್ವದಿಸಿಕೊಟ್ಟಳು.

ಇತ್ತ ಶಿವನು ತನ್ನ ದುರದೃಷ್ಟಕ್ಕೆ ಶಪಿಸುತ್ತಾ ಹೇಳದೆ,ಕೇಳದೆ ತನ್ನ ಸೋದರ ಮಾವನೊಡನೆ ಹರಿದ್ವಾರಕ್ಕೆ ಪ್ರಯಾಣ ಮಾಡಿದನು.

ಪ್ರತಿದಿನವೂ ಗಂಗೆಯಲ್ಲಿ ಮಿಂದು ಶಿವನನ್ನು ಪ್ರಾರ್ಥಿಸುತ್ತಿದ್ದರು.ಅಲ್ಲಿ ಅನೇಕ ಯತಿವರ್ಯರು ತಪ್ಪಸ್ಸು ಮಾಡುತ್ತಿದ್ದರು. ಅವರ ಶುಶ್ರೂಷೆಗಳನ್ನು ಮಾಡಿ ಅವರಿಂದ ಧೀರ್ಘಾಯು ಆಗಲೆಂದು ಆಶೀರ್ವಾದ ಪಡೆದನು.

ಇತ್ತ  ಸುಶೀಲೆಯು ತಂದೆಯ ನೆರವಿನಿಂದ ಅನೇಕ ಧರ್ಮ ಕಾರ್ಯಗಳನ್ನು ಮಾಡುತ್ತಾ ಅತಿಥಿ ಸತ್ಕಾರ ಮಾಡುತ್ತಿದ್ದಳು.

ಶಿವನಂತೆ ಹೋಲುತ್ತಿದ್ದ ವ್ಯಕ್ತಿಯನ್ನು ಮಗಳಿಗೆ ತೋರಿಸಿದರು. ಆದರೆ,ಆಕೆಯು ಪಾದಗಳನ್ನು ಮುಟ್ಟಿ ‘ಇವರು ನನ್ನ ಪತಿ ಅಲ್ಲ’ ಎಂದು ಹೇಳಿದಳು.

ಇದರಿಂದ ಸಂತೋಷಗೊಂಡ ಪರಶಿವನು  ಒಳ್ಳೆಯದಾಗಲೆಂದು ಹರಸಿ ಅಂತರ್ದಾನ ಹೊಂದಿದನು.

ಹೀಗೆ ಅನೇಕ ವರ್ಷಗಳು ಕಳೆದವು. ಈಕೆಯು ಮಾಡಿದ ಮಂಗಳಗೌರಿ  ವ್ರತ ಪ್ರಭಾವದಿಂದ ಶಿವನು ಮತ್ತೆ ಬಂದು ಸೇರಿದನು. ಪುನಃ  ಎಲ್ಲರೂ ಒಂದಾಗಿ ವ್ರತವನ್ನು ಮಾಡಿದರು.

ಆಗ ಎಲ್ಲರೂ ದೇವಿಯನ್ನು ಕೊಂಡಾಡಿದರು. ಧರ್ಮತನಯ, ದ್ರೌಪದಿಯು ವ್ರತ ಮಾಡಲು ನೀನು ಸಹಕರಿಸು. ಭಯಂಕರ ಅರಣ್ಯದಲ್ಲಿ ನಿರ್ಬೀತರಾಗಿ ನೀವು ವಾಸಿಸಬಹುದು” ಎಂದು ತಿಳಿಯಹೇಳಿ ವ್ರತವನ್ನು ಮಾಡಿಸಿ,ತಾನೂ ಸಂತುಷ್ಟಗೊಂಡನು.

ಧರ್ಮರಾಜ, ವ್ರತವು ಸ್ತ್ರೀಯರಿಗೆ ಅಮೂಲ್ಯವಾದದ್ದು.ಯಾರು ಇದನ್ನು ಮಾಡಿಸುವರೋ, ಮಾಡುವರೋ, ಕಥೆಯನ್ನು ಪ್ರತಿ ಮಂಗಳವಾರ ಪಠಿಸುವರೋ ಅವರೆಲ್ಲರಿಗೂ ಮಂಗಳಗೌರಿಯು ಹರಸಿ,ಸುಖ,ಸಂತೋಷ ನೀಡುವಳು” ಎಂದು ನುಡಿದಿರುವುದಾಗಿ ಹೇಮಾದ್ರಿ ಭವಿಷ್ಯೋತ್ತರ ಪುರಾಣದಲ್ಲಿ ಹೇಳಿದ ಮಂಗಳಗೌರಿ ವ್ರತಕಥಾರ್ಥವು ಸಂಪೂರ್ಣವಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top