fbpx
ದೇವರು

ರಾಮಾಯಣದಲ್ಲಿ ಹನುಮಂತನ ಪ್ರವೇಶವಾಗುವುದು ಕನ್ನಡ ನಾಡಿನ ಹಂಪೆಯ ಪ್ರದೇಶವಾದ ‘ಕಿಷ್ಕಿಂಧೆ’ಯಲ್ಲಿ.

ರಾಮಾಯಣದಲ್ಲಿ ಹನುಮಂತನ ಪ್ರವೇಶವಾಗುವುದು ಕನ್ನಡ ನಾಡಿನ ಹಂಪೆಯ ಪ್ರದೇಶವಾದ ‘ಕಿಷ್ಕಿಂಧೆ’ಯಲ್ಲಿ.

 

ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.

ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ

ರಾಮಾಯಣ ಮತ್ತು ಮಹಾಭಾರತಗಳು ರಾಷ್ರೀಯ ಮಹಾಕಾವ್ಯಗಳೆಂದೇ ಪ್ರಸಿದ್ದಿ ಪಡೆದಿದೆ. ಇದು ಗಂಗಾ ಹಿಮಾಲಯದಂತೆ ಶಾಶ್ವತವಾದವು. ಇವುಗಳಿಗೆ ಸಮಾನವಾದ ಮಹಾಕಾವ್ಯಗಳು ಜಗತ್ತಿನಲ್ಲೆಲ್ಲಿಯೂ ಇಲ್ಲ. ಇವು ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮಗಳಾಗಿ ಅಕ್ಷಯ ನಿಧಿಗಳಾಗಿವೆ.ಆದಿಕಾವ್ಯವಾದ ವಾಲ್ಮೀಕಿ ಮಹರ್ಷಿಯ ರಾಮಾಯಣದ ಪಾತ್ರಗಳು ನಮ್ಮ ಜೀವನದ ಮೇಲೆ ವಿಶೇಷ ಪ್ರಭಾವವನ್ನು ಬೀರಿವೆ. ರಾಮಲಕ್ಷ್ಮಣರು ಎಂದರೆ ನಮ್ಮ ಜನರಿಗೆ ತಮ್ಮ ಮನೆಯವರಷ್ಟೇ ಹತ್ತಿರದವರು ಎಂಬ ಭಾವನೆಯಿದೆ. ಇಂಥ ರಾಮಾಯಣದ ಪಾತ್ರಗಳಲ್ಲಿ ಜನಮನಸ್ಸಿನ ಮೇಲೆ ರಾಮನಷ್ಟೇ ಪರಿಣಾಮವನ್ನು ಬೀರಿದ ಇನ್ನೊಂದು ಪಾತ್ರವೆಂದರೆ ಆಂಜನೇಯ. ರಾಮನ ಗುಡಿಯಿಲ್ಲದ ಊರಿರಬಹುದು ಆಂಜನೇಯನ ಗುಡಿಯಿಲ್ಲದ ಊರೇ ಇಲ್ಲ. ಜಾತಿ-ಮತ-ಪಂಥಗಳನ್ನು ಮೀರಿ ಜನ ಆಂಜನೇಯನನ್ನು ಆರಾಧಿಸುತ್ತಾರೆ. ಎಷ್ಟರ ಮಟ್ಟಿಗೆ ಹನುಮಂತನ ಪ್ರಭಾವವಿದೆ ಎಂದರೆ ‘ರಾಮಾಯಣ’ ಎನ್ನುವ ಕಾವ್ಯಕ್ಕೆ ಇನ್ನೊಂದು ಹೆಸರಿಡಬಹುದಾದರೆ ‘ಸೀತಾಯಾಶ್ಚರಿತಂ’ ಎಂದು ಕರೆಯಬಹುದಂತೆ. ಮತ್ತೊಂದು ಹೆಸರಿನಿಂದ ಕರೆಯಬಹುದಾದರೆ ಅದು ‘ಹನುಮಾಯಣ’. ಅಂದರೆ ರಾಮಾಯಣದಲ್ಲಿ ಆಂಜನೇಯನ ಪಾತ್ರ ಅಷ್ಟು ಪ್ರಾಮುಖ್ಯವಾಗಿದೆ. ಆಂಜನೇಯನ ಮಹಿಮೆಯೇ ಮುಖ್ಯವಾಗಿರುವ ಕಾಂಡಕ್ಕೆ ರಾಮಾಯಣದಲ್ಲಿ ‘ಸುಂದರಕಾಂಡ’ವೆಂದು ಕರೆದಿದ್ದರೆ.

ರಾಮಾಯಣದಲ್ಲಿ ಕಿಷ್ಕಿಂಧಾಕಾಂಡದ ನಂತರ ರಾಮಾಯಣದ ಕಥೆಯು ಆಂಜನೇಯನನ್ನೇ ಅವಲಂಬಿಸಿದೆ. ಶ್ರೀರಾಮನಿಗೂ ಸುಗ್ರೀವನಿಗೂ ಸಖ್ಯವನ್ನು ಮಾಡಿಸಿದವನು, ವಾಲಿವಧೆಯ ನಂತರ ತಾರಾದೇವಿಯೂ, ಅಂಗದನೂ, ಸುಗ್ರೀವನೂ ಶೋಕದಲ್ಲಿ ಮುಳುಗಿದ್ದಾಗ ಅವರಿಗೆ ವಿವೇಕವನ್ನು ಹೇಳಿ ಮುಂದಿನ ಕರ್ತವ್ಯವನ್ನು ಸೂಚಿಸಿದವನು ಈತನೇ. ದಕ್ಷಿಣದ ದಿಕ್ಕಿನಲ್ಲಿ ಸೀತಾನ್ವೇಷಣೆಗೆ ಹೊರಟ ವಾನರರ ಮುಖಂಡನಾಗಿ ಲಂಕೆಗೆ ಹೋಗಿ ಸೀತೆಯ ವಿಷಯ ತಿಳಿಸಿದವನು ಆಂಜನೇಯನೇ. ಯುದ್ಢ ಸಮಯದಲ್ಲಿ ರಾಮನಿಗೊರಗಿದ ಅನೇಕ ಕಷ್ಟಗಳನ್ನು ತನ್ನ ಮಹತ್ ಶಕ್ತಿ ಹಾಗೂ ಬುದ್ದಿವಂತಿಕೆಯಿಂದ ನಿವಾರಣೆ ಮಾಡಿದವನೂ ಈತನೇ. ಇಂಥ ಮಹಾಮಹಿಮನನ್ನು ಇಡೀ ಭರತಖಂಡವೇ ಹಾಡಿ ಹೊಗಳುತ್ತಿದೆ. ಪುರಾಣಗಳು ಸ್ತುತಿಸುತ್ತಿವೆ. ಸೃಷ್ಟಿಕರ್ತನಾದ ಬ್ರಹ್ಮನಿಗೆ ನೇರವಾಗಿ ಪೂಜೆಯಿಲ್ಲ. ಆದರೆ ಮುಂದಿನ ಬ್ರಹ್ಮನಾಗುವ ಆಂಜನೇಯನಿಗೆ ಪೂಜೆ ಇದೆ. ಇವತ್ತು ಏಕಮುಖೀ ಹನುಮಂತನಿಂದ ಹಿಡಿದು ಸಹಸ್ರಮುಖಿ ಹನುಮಂತನವರೆಗೆ ಅನೇಕ ರೂಪಗಳಲ್ಲಿ ಅವನ ಉಪಾಸನೆ ನಡೆಯುತ್ತಿದೆ.
ಆಂಜನೇಯನು ಅಂಜನಾದೇವಿಯ ಪುತ್ರನು. ವಾಯುದೇವನಿಂದ ಹುಟ್ಟಿದವನು. ಆತನು ಹುಟ್ಟುತ್ತಿದ್ದ ಹಾಗೆಯೇ ಸೂರ್ಯನನ್ನು ನೋಡಿ ಹಣ್ಣೆಂದು ಭ್ರಮಿಸಿ ಹಿಡಿಯುವುದಕ್ಕೆಂದು ಹಾರಿದನು. ಇವನನ್ನು ನಿಗ್ರಹಿಸಬೇಕೆಂದು ಇಂದ್ರನು ವಜ್ರಾಯುಧವನ್ನು ಪ್ರಯೋಗಿಸಿದ. ಅದರಿಂದ ಹನುಮಂತ ಮೂರ್ಛೆಹೋದ. ಇದಕ್ಕೆ ಕೋಪಗೊಂಡ ವಾಯು ಚಲಿಸದೆ ನಿಂತ. ಆಗ ಲೋಕದ ಚರಾಚರ ಪ್ರಾಣಿಗಳು ಮರಣ ಬಂದಂತಾಗಿ ತತ್ತರಿಸಿದವು. ಆಗ ಬ್ರಹ್ಮನು ವಾಯುವನ್ನು ಸಮಾಧಾನಪಡಿಸಿದ. ಆ ಸಮಯದಲ್ಲಿ ದೇವಾನುದೇವತೆಗಳು ಆಂಜನೇಯನಿಗೆ ವರದಾನ ಮಾಡಿದರು. ಜೊತೆಗೆ ತನ್ನ ಬಲ, ವೀರ್ಯ, ಸಾಮರ್ಥ್ಯಗಳಿಂದ ಆಂಜನೇಯ ಗರುಡನಿಗೂ, ವಾಯುವಿಗೂ ಸಮಾನನಾದನು. ಯೋಗಶಾಸ್ತ್ರದ ಪರಮ ರಹಸ್ಯವೆಲ್ಲವನ್ನೂ ಅರಿತನು. ಅವನ ಸಾಮರ್ಥ್ಯ ಕೇವಲ ದೇಹದ್ದು ಮಾತ್ರವಲ್ಲ; ಬುದ್ಧಿಯದು, ಮನಸ್ಸಿನದು ಕೂಡ.

ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬ, ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ, ಸಂಗೀತ ತಿಳಿದವ, ವಾಸ್ಕೋವಿದ, ಕುಶಲಮತಿ, ಕವಿಕುಲಯೋಗಿ, ನೀತಿಕೋವಿದ, ಇಚ್ಛಾರೂಪಿ, ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ. ಇಂಥ ಸಾಮರ್ಥಗಳೆಲ್ಲ ಇದ್ದುದರಿಂದಲೇ ರಾಮನ ಪರಮಭಕ್ತನಾದ. ಇಂದಿಗೂ ಚಿರಂಜೀವಿಯೆಂದೇ ಪ್ರಸಿದ್ಧನಾಗಿರುವ ಆಂಜನೇಯ, ಎಲ್ಲಿ ರಾಮಕಥೆ, ರಾಮಕೀರ್ತನ ಜರುಗುತ್ತಿದೆಯೋ ಅಲ್ಲಿ ಭಕ್ತಿಯಿಂದ ಕೈಮುಗಿದು ಸಹೃದಯನಾಗಿ ಕೇಳುತ್ತಾನೆಂದೇ ಜನರ ನಂಬಿಕೆ ಇದೆ. ಆದ್ದರಿಂದ ವೇದಿಕೆಯಲ್ಲಿ ಒಂದು ಮಣೆ ಹಾಕಿ ಅವನನ್ನು ಆಹ್ವಾನಿಸುತ್ತಾರೆ
ತ್ರಯತ್ರ ರಘುನಾಥ ಕೀರ್ತನಂ
ತತ್ರತತ್ರ ಕೃತ ಮಸ್ತಕಾಂಜಲಿಂ
ಭಾಷ್ಫಾವಾರಿ ಪರಿಪೂರ್ಣ ಲೋಚನಂ
ಮಾರುತಿಂ ನಮತಾ
ರಾಮಾಯಣ ಕಥೆಯಲ್ಲಿ ಹನುಮಂತನ ಪ್ರವೇಶವಾಗುವುದು ಕಿಷ್ಕಿಂಧಾಕಾಂಡದಲ್ಲಿ. ‘ಕಿಷ್ಕಿಂಧೆ’ ಎಂದರೆ ನಮ್ಮ ಕನ್ನಡ ನಾಡಿನ ಹಂಪೆಯ ಪ್ರದೇಶ. ಇಲ್ಲಿಂದ ಮುಂದೆ ಹನುಮನ ಸಾಧನೆಯ ಪ್ರಭಾವ ವಿಶೇಷವಾಗಿದೆ. ಆತನ ದೇಹಬಲ, ಮನೋಬಲ, ಬುದ್ಧಿಬಲ, ತಪೋಬಲ, ಯೋಗಶಕ್ತಿ ಎಲ್ಲವೂ ಕಂಡುಬರುವುದು ಇಲ್ಲಿಯೇ. ರಾಮಚಂದ್ರ ವನವಾಸಕ್ಕೆ ಬರಲು ಕೈಕೆ-ಮಂಥರೆಯರು ಹೇಗೆ ಕಾರಣರೋ ಹಾಗೆ ಆಂಜನೇಯ ರಾಮಚಂದ್ರನ ಆಗಮನಕ್ಕಾಗಿ ಅಂತರಂಗದಲ್ಲಿ ಹಾರೈಸುತ್ತಿದ್ದನಂತೆ. ಭಗವಂತ ಭಕ್ತನ ಹಾರೈಕೆಯನ್ನು ಈಡೇರಿಸಲು ಪ್ರತ್ಯಕ್ಷವಾಗುವಂತೆ ರಾಮಚಂದ್ರ ಆಂಜನೇಯನಿಗೆ ಕಂಡ. ಶ್ರೀರಾಮನ ಸಂದರ್ಶನವಾಗುವುದಕ್ಕೆ ಒಂದೆರೆಡು ದಿನ ಮುಂಚಿತವಾಗಿ ಆಂಜನೇಯ ಬೆಟ್ಟದ ಮೇಲೆ ಧ್ಯಾನ ಮಗ್ನನಾಗಿದ್ದ. ನಂತರ ಕಣ್ದೆರೆದು ನೋಡಿದರೆ ದೂರದಲ್ಲಿ ಪಂಪಾ ಸರೋವರದ ತೀರದಲ್ಲಿ ನಡೆದುಬರುತ್ತಿರುವ ನರಾಕೃತಿಗಳನ್ನು ಕಂಡನಂತೆ. ಹಾಗೆಯೇ, ರಾಮ ಬೆಟ್ಟದ ತುದಿಯನ್ನು ದಿಟ್ಟಿಸಿ ನೋಡಿ ಹೇಳುತ್ತಾನೆ. “ಲಕ್ಶ್ಮಣಾ, ಇಲ್ಲಿಯೋ ಎಲ್ಲಿಯೋ ಕಾಣೆ! ಆದರೆ ನನ್ನ ಮನಸ್ಸಿಗೆ ಸುಳಿದಿದೆ ಇಲ್ಲಿಯೇ ನನ್ನ ಬಾಳ ಗೆಳೆಯನನ್ನು ಕಾಣುವೆನೆಂದು”. ಕೊನೆಗೆ ಎದುರಿಗಿದ್ದ ಕಲ್ಬಂಡೆಯನ್ನು ಉದ್ದೇಶಿಸಿ ಆಂಜನೇಯನನ್ನು ಎಚ್ಚರಿಸಿ ಎಬ್ಬಿಸುತ್ತಾನೆ. ಇಬ್ಬರೂ ಪರಸ್ಪರ ನೋಡಿದರು. ಒಂದಾದರು. ರಾಮ-ಆಂಜನೇಯ ಎಂಬ ಎರಡು ನದಿಗಳು ಕೂಡಿ ಒಂದಾಗಿ ಮುಂದುವರಿದಂತೆ ಆಯಿತು. ರಾಮ ಮೊದಲ ನೋಟದಲ್ಲೇ ಆಂಜನೇಯನ ಹಿರಿಮೆ ತಿಳಿದ. ಅವನ ಶುದ್ಧವಾದ ಮಾತು, ಮಿತ ಭಾಷೆ, ಶಾಂತ ಸ್ವಭಾವ, ಬ್ರಹ್ಮಚರ್ಯದ ತೇಜಸ್ಸು ಕಂಡು ರಾಮನಿಗೆ ಅಚ್ಚರಿ. ಆಂಜನೇಯನೇ ರಾಮನಿಗೆ ಕಿಷ್ಕಿಂದೆಯನ್ನು ಪರಿಚಯಿಸಿ, ರಾಮಾ ಸುಗ್ರೀವರಿಗೆ ಸಖ್ಯ ಉಂಟಾಗುವಂತೆ ಮಾಡುತ್ತಾನೆ.

‘ಸೀತಾನ್ವೇಷಣೆ’ ಆಂಜನೇಯನ ಬಹುಮುಖ್ಯ ಸಾಹಸಗಳಲ್ಲೊಂದು. ಸುಗ್ರೀವನ ಸೈನ್ಯದಲ್ಲಿದ್ದ ಉಳಿದೆಲ್ಲ ವೀರರ ಶಕ್ತಿ ಒಂದು ತೂಕವಾದರೆ ಆಂಜನೇಯನೊಬ್ಬನದೇ ಒಂದು ತೂಕ. ಕುವೆಂಪು ರಾಮಾಯಣ ದರ್ಶನದಲ್ಲಿ ಈ ಭಾಗ ಬಹಳ ಸುಂದರವಾಗಿ ಬರುತ್ತದೆ. ಸುಗ್ರೀವ, ಆಂಜನೇಯನನ್ನು ‘ನೀನು ನಮ್ಮ ಕುಲದ ಕಣ್ಣು, ಸಾಹಸದ ಧೈರ್ಯ, ಎಲ್ಲವೂ. ವಾಯುಪುತ್ರನಾದ್ದರಿಂದ ನೀನು ಚಲಿಸದ ಪ್ರದೇಶವೇ ಇಲ್ಲ. ಮೂರು ಲೋಕಗಳಲ್ಲಿ ನಿನಗೆ ಬುದ್ಧಿಯಲ್ಲೂ ಬಲದಲ್ಲೂ ಸಮಾನರಿಲ್ಲ’ ಎಂದು ಕೊಂಡಾಡಿ ಸೀತಾನ್ವೇಷಣೆಗೆ ಕಳುಹಿಸುತ್ತಾನೆ.

ಸೀತೆಯನ್ನು ಅರಸುತ್ತಾ ಹೋದಂತೆ ಸಂಪಾತಿಯಿಂದ, ರಾವಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿ ಬಚ್ಚಿಟ್ಟಿರುವ ಸುದ್ದಿ ತಿಳಿಯುತ್ತದೆ. ಲಂಕೆಗೆ ಹೋಗುವುದು ಹೇಗೆ ಎಂಬ ಪ್ರಶ್ನೆ ಏಳುತ್ತದೆ. ಆಗ ಜಾಂಬವಂತ ಈ ಮಹಾಕಾರ್ಯಕ್ಕೆ ಆಂಜನೇಯನೇ ಸಮರ್ಥನೆಂದು ಹೇಳುತ್ತನೆ. ಉಳಿದ ಕಪಿವೀರರೆಲ್ಲಾ ಸಮುದ್ರ ಲಂಘನಕ್ಕೆ ತಮ್ಮತಮ್ಮ ಸಾಮರ್ಥವೆಷ್ಟು ಎಂದು ಜಂಭದ ಮಾತಾಡುತ್ತಿರುವಾಗ, ಆಂಜನೇಯ ಒಂದು ಬಂಡೆಯ ಮೇಲೆ ಕುಳಿತು ಕಣ್ಣಿನಲ್ಲೇ ಸಮುದ್ರದ ದೂರವನ್ನು, ತನ್ನ ಸಾಮರ್ಥ್ಯವನ್ನು ಅಳೆಯುತ್ತಿದ್ದನಂತೆ. ಆಗ ಜಾಂಬವಂತ
ಯೋಗಿ ನೀನಭ್ಯಾಸದಿಂದೆಯುಂ ತಪದಿಂದೆ, ಮೇಣ್
ಬ್ರಹ್ಮಚರ್ಯದ ಮಹಿಮೆಯಿಂದಷ್ಟಸಿದ್ಧಿಗಳ್
ನಿನಗಿಷ್ಟ ಕಿಂಕರರಲಾ, ಹನುಮಂತ ದೇವಾ ನೀಂ
ಧ್ಯಾನದಿಂದಿಕ್ಕಿಸಿದರಾವುದಾಗದೊ? ನಿನಗೆ
ಎಂದು ಅವನ ಮಹಿಮೆಯನ್ನು ಸ್ತುತಿಸಿ, ಶಕ್ತಿಯ ಅರಿವನ್ನು ನೆನಪಿಸುತ್ತಾನೆ. ಅವನಿಗೆ ಅಣಿಮಾದಿ ಸಿದ್ಧಿಗಳೆಲ್ಲಾ ತನ್ನಿಷ್ಟದಂತೆ ವರ್ತಿಸುವ ಸೇವಕರು. ಅವನು ಇಚ್ಛೆಯಿಂದ ಏನು ಬೇಕಾದರೂ ಸಾಧಿಸಬಲ್ಲ ಸಿದ್ಧಪುರುಷ. ಇಷ್ಟಾದರೂ ಯಾರಿಗೂ ಅದನ್ನು ತೋರಗೊಡದೆ ದೂರದ ಬಂಡೆಯ ಮೇಲೆ ಕುಳಿತಿದ್ದಾನೆ. ಅಹಂಕಾರವನ್ನೇ ಕಾಣದವನು ಹನುಮಂತ. ಜಾಂಬವಂತ ಹೇಳುವವರೆಗೆ ಆಂಜನೇಯ ಏಕೆ ಸುಮ್ಮನಿದ್ದ ಎಂದು ನಮಗೆ ಅನಿಸಬಹುದು. ಆದರೆ ತನ್ನ ನಿಶ್ಚಯವನ್ನು ಆತ ಮೊದಲೇ ಮಾಡಿದ್ದ. ಮಾಡುವುದನ್ನು ಆಡದೆಯೇ ಮಾಡಿ ತೋರಿಸುವ ಗುಣ ಇವನದು.

ಆಂಜನೇಯ ಸಮುದ್ರ ಲಂಘನ ಮಾಡುವ ಸನ್ನಿವೇಶ ಸುಂದರವಾಗಿದೆ. ತನ್ನ ಯೋಗಶಕ್ತಿಯನ್ನು ಜಾಗೃತಗೊಳಿಸಿ, ತನ್ನ ಜಡದೇಹವನ್ನು ಬಿಟ್ಟು ಚೇತನವಾಗಿ ರೂಪಾಂತರ ಹೊಂದಿದ. ಅದನ್ನು ನೋಡಿ ಕಪಿವೀರರೆಲ್ಲ ಜಯ-ಘೋಷವನ್ನು ಮಾಡಿದರು. ಅನಂತರ ಆಂಜನೇಯ ರುದ್ರರೂಪವನ್ನು ತಾಳಿ, ಮನುಷ್ಯನ ಕಲ್ಪನೆಯೇ ತತ್ತರಿಸುವಂತೆ ನೆಲಕ್ಕೂ ಬಾನಿಗೂ ಒಂದೇಯ ಆಗಿ ನಿಲ್ಲುತ್ತಾನೆ. ಹನುಮನ ಪಾದದ ಹೊಡೆತಕ್ಕೆ ಇಡೀ ಬೆಟ್ಟವೆ ಅಲುಗಾಡಿ ಪ್ರಾಣಿ-ಪಕ್ಷಿಗಳ ಚಿತ್ಕಾರದಿಂದ ಆ ವನಭೂಮಿ ಮಗುವಿನ ಕೈಯ್ಯ ಗಿಲಿಗಿಚ್ಚಿಯಾಯಿತಂತೆ. ಹನುಮತ ಆಗಸದಲ್ಲಿ ಹಾರುತ್ತಿದ್ದರೆ, ಆಕಾಶಕ್ಕೆ ಸಿಡಿದ ಪರ್ವತದಂತೆ ಕಾಣುತ್ತಿದ್ದ. ಹೀಗೆ ಸಾಹಸದಿಂದ ಲಂಕೆಯನ್ನು ತಲುಪಿ ಸೀತೆಗೆ ರಾಮನ ಮುದ್ರಿಕೆ ಕೊಟ್ಟ. ಭಗವಂತನ ಕೆಲಸವನ್ನು ಭಕ್ತಿಯಿಂದ ಮಾಡಿದ.

ಹನುಮಂತನ ಯೋಗಶಕ್ತಿಯನ್ನು ಗುರುತಿಸುವ ಮತ್ತೊಂದು ಸಂದರ್ಭ ನಿಕುಂಭಿಲಾ ಯಾಗ. ರಾವಣ ಮಗ ಇಂದ್ರಜಿತು ಈ ಯಾಗದಲ್ಲಿ ಶಕ್ತಿ ಸಂಪಾದಿಸಲು ತೊಡಗಿದ್ದ. ಅದನ್ನು ಕೆಡಿಸಲು ಲಕ್ಷ್ಮಣ ಬರುತ್ತಾನೆ. ಎಲ್ಲೆಲ್ಲೂ ಅಗ್ನಿಯೇ ಇರುತ್ತದೆ. ಅದನ್ನು ದಾಟುವಾಗ ಲಕ್ಷ್ಮಣ ಸೀದ ಶವದಂತಾಗುತ್ತಾನೆ. ಅವನನ್ನು ಬದುಕಿಸಲು ಇದ್ದುದು ಒಂದೇ ದಾರಿ. ಓಷಧೀ ಪರ್ವತದಲ್ಲಿದ್ದ ಸಂಜೀವಿನೀ ಬಳ್ಳಿ ತರುವುದು. ಅದನ್ನು ತರಲು ಆಂಜನೇಯ ಯೋಗಶಕ್ತಿಯನ್ನು ಬಳಸಬೇಕಾಯಿತು. ಸಾಮಾನ್ಯ ಮಾರ್ಗದಲ್ಲಿ ಸಂಚರಿಸಿದರೆ ಪರ್ವತಕ್ಕೆ ಹೋಗಿ ಬರಲು ಒಂದು ದಿನ ಬೇಕು. ಆಂಜನೇಯ ತನ್ನ ಯೋಗಶಕ್ತಿಯಿಂದ ಪರ್ವತಕ್ಕೆ ತೆರಳಿ ಸಂಜೀವಿನಿ ತಂದು ಲಕ್ಷ್ಮಣನಿಗೆ ಬಂದ ವಿಪತ್ತು ಪರಿಹಾರವಾಗಲು ಸಹಾಯ ಮಾಡುತ್ತಾನೆ.

ಆಂಜನೇಯ ಎಂತಹ ನೀತಿ ವಿಶಾರದ ಎಂಬುದನ್ನು ‘ವಿಭೀಷಣ ಶರಣಾಗತಿ’ಯಲ್ಲಿ ನೋಡಬೇಕು. ಅದು ಯುಧ್ಹದ ಸಂದರ್ಭ. ವಿಭೀಷಣನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಪಿವೀರರು ಚರ್ಚೆಮಾಡುತ್ತಿದ್ದರು. ಆಗ ಆಂಜನೇಯ ಎರಡೇ ಎರಡು ಮಾತಿನಿಂದ ತನ್ನ ಅಭಿಪ್ರಾಯವನ್ನು ರಾಮನಿಗೆ ತಿಳಿಸುತ್ತಾನೆ “ಮಹಾ ಪ್ರಭುವೆ ನಿನಗೆ ಬೃಹಸ್ಪತಿಯೂ ಸಮನಲ್ಲ ಆದರೂ ನಮ್ಮ ಸಲಹೆಗಳನ್ನು ಕೇಳುತ್ತಿರುವೆ. ವಿಭೀಷಣನನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಇದು ಸರಿಯಾದ ಕಾಲ. ಅಣ್ಣನ ದುಷ್ಟತನವನ್ನು ನಿನ್ನ ಗುಣ ಎರಡನ್ನೂ ಕಂಡು ನಿನಗೆ ಶರಣಾಗಿದ್ದಾನೆ. ನನಗೇನೋ ಅವನು ಕಪಟಿಯಲ್ಲ ಎನ್ನಿಸುತ್ತಿದೆ. ಇದರ ಮೇಲೆ ನಿಮ್ಮ ಚಿತ್ತ” ಎಂದು ಹೇಳುತ್ತಾನೆ. ಅಪರಿಚೆತನನ್ನೂ ಸೂಕ್ಷ್ಮ ದೃಷ್ಟಿಯಿಂದ ಅಳೆಯುವ ಗುಣ ಈತನದು.
ಆಂಜನೇಯನ ಇಂಥಾ ಗುಣಗಳೇ ಇಂದಿಗೂ ಜನಸಾಮಾನ್ಯರಲ್ಲಿ ನೆಲೆಸಿದೆ. ಜನಪದರು, ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತು ತಮ್ಮ ಊರುಗಳಾ ಮುಂದೆಯೇ ಹೋದನೆಂದು ನಂಬುತ್ತಾರೆ. ಮಕ್ಕಳು ರಕ್ಷೆಗಾಗಿ ಆಂಜನೇಯನ ತಾಯತ ಕಟ್ಟುತ್ತಾರೆ. ಊರಿನ ಗಡಿಯಲ್ಲಿ ಆಂಜನೇಯನವ ಗುಡಿ ಕಟ್ಟಿಸಿ ಊರ ರಕ್ಷಕನೆಂದು ಭಾವಿಸುತ್ತಾರೆ. ಹಾಗೆಯೇ ಕನ್ನಡದ ಕವಿಗಳು ತಮ್ಮ ವಿಶೇಷ ದರ್ಶನವನ್ನು ಆಂಜನೇಯನ ಪಾತ್ರದಲ್ಲಿ ಕಾಣಿಸಿದ್ದಾರೆ.

ಇತ್ತೀಚೆಗೆ ಆಂಜನೇಯನನ್ನು ಕುರಿತು ಕನ್ನಡದಲ್ಲಿ ಒಂದು ಸ್ವತ೦ತ್ರ ಕಾವ್ಯವೇ ರಚನೆಯಾಗಿದೆ. ಇದುವರೆಗೆ ರಾಮಾಯಣದ ಕಥೆಯಲ್ಲಿ ಬರುವ ಹನುಮ೦ತಹ ಮಹತ್ವವನ್ನು ಹೇಳಿದರೆ ಇಲ್ಲಿ ಹನುಮ೦ತನ ಕಥೆಯೇ ‘ವತಾಲ್ಯಾಲಿಂಗನ’ ಎಂಬ ಕಾವ್ಯದಲ್ಲಿ ಮುಖ್ಯವಾಗಿದೆ. ಈ ಗದ್ಯ ಕಾವ್ಯವನ್ನು ಡಾ||ಎ.ಎಸ್.ವೇಣುಗೋಪಾಲರವರು ಬರೆದಿದ್ದಾರೆ. ರಾಮಾಯಣದ ಕಥೆಗೆ ವಿರಾಮವೇ ಇಲ್ಲ. ಕಾಲಕಾಲಕ್ಕೆ ಈ ಕಥೆ ಅನೇಕ ಕವಿಗಳಿಂದ ಪುನಃ ಸೃಷ್ಟಿಯಾಗುತ್ತಲೇ ಇದೆ. ‘ಮೌಲ್ಯಾಲಿ೦ಗನ’ ಕಾವ್ಯದಲ್ಲಿ ರಾಮಾಯಣದ ಆಂಜನೇಯನ ಪಾತ್ರವನ್ನು ಮುಖ್ಯವಾಗಿ ಚಿತ್ರಿಸಿದ್ದಾರೆ. ಈ ಕಾವ್ಯದಲ್ಲಿ ರಾಮಾಯಣದ ಕಿಷ್ಯಂಧಾ ಕಾಂಡದ ಕಥೆಯನ್ನು ಮಾರ್ಪಾಡು ಮಾಡಿಕೊ೦ಡು ಬರೆದಿದ್ದಾರೆ. ಈ ಕಾವ್ಯದ ಕಥೆ ವಿಶಿಷ್ವವಾಗಿದೆ. ಇದು ಪ್ರಾರ೦ಭವಾಗುವುದು ಅಂಜನಾದೇವಿಯ ಗರ್ಭವತರಣದಿಂದ. ಜನನಿಯೇ ಮಗುವಿಗೆ ಮೊದಲ ಗುರುವಾಗುತ್ತಾಳೆ. ಆ ಮಗು ಅದೆಷ್ಟು ಚುರುಕಾಗಿತ್ತೆಂದರೆ ಅದರ ಪ್ರೌಢಿಮೆಗೆ ಎಲ್ಲಿರೂ ಬೆರಗಾಗುತ್ತಾರೆ. ಕಿಷ್ಯ೦ಧೆಯ ನಿಸರ್ಗದ ಜೊತೆಯಲ್ಲೇ ಅವನ ಬಾಲಲೀಲೆ. ದಿನನಿತ್ಯದ ಅಭ್ಯಾಸ. ಒಂದು ರಾತ್ರಿಯ೦ತೂ ವಾಯುದೇವನೇ ಬ೦ದು ಆಂಜನೇಯನಿಗೆ ಸೃಷ್ಟಿಯ ರಹಸ್ಯ ಬೋಧಿಸುತ್ತಾನೆ. ಸೂರ್ಯದೇವನೂ ಅನೇಕ ವಿದ್ಯೆಯನ್ನು ಬೋಧಿಸುತ್ತಾನೆ.

ಬಾಲ್ಯದಲ್ಲೇ ಪ್ರಾಬುದ್ಧನಾದ ಆ೦ಜನೇಯ ಉತ್ತರ ದೇಶದಿ೦ದ ದಕ್ಷಿಣ ಕಡೆಗೆ ಬರುವ ಅಗಸ್ತ್ಯಮನಿಯನ್ನು ನೋಡುತ್ತಾನೆ. ಆದರೆ ಆಂಜನೇಯನ ತೇಜಸ್ವನ್ನು ಕ೦ಡಾಗ ಅಗಸ್ತ್ಯರಿಗೇ ಆಶ್ಚರ್ಯವಾಗುತ್ತದೆ. ಆ೦ಜನೇಯ ಕೇಳುತ್ತಾನೆ, ‘ಪುಣ್ಯಭೂಮಿಯೆ೦ದು ಹೆಸರಾದ ಉತ್ತರ ಭಾರತವನ್ನು ತೊರೆದು ಬರಲು ಕಾರಣವೇನು’ ಎಂದು. ಅದಕ್ಕೆ ಅವರು “ದಕ್ಷಿಣದ ಭಾಷೆಗಳ ಸತ್ಯ ಸೌಂದರ್ಯಗಳ ಹೃದಯವನ್ನು ಪಿಡಿದಾಡುವ ಹುಚ್ಚು ಹಂಬಲ ನನ್ನನಿತ್ತಲು ಸೆಳೆಯಿತು” ಎಂದು ಹೇಳುತ್ತಾರೆ. ಅಗಸ್ತ್ಯರಂತಹ ಖುಷಿಗಳು ಈ ನಾಡಿನ ಭಾಷೆ, ಸಂಸೃತಿಗಳನ್ನು ತಿಳಿಯಬೇಕೆಂದು ಹೇಳುವಲ್ಲಿ ಈ ನಾಡಿನ ಹಿರಿಮೆ ವ್ಯಕ್ತವಾಗುತ್ತದೆ.

ಈ ಕಾವ್ಯದಲ್ಲಿ ಬೇರೆ ರಾಮಾಯಣಗಳಲ್ಲಿ ಅಪೂರ್ವವಾದ ಒಂದು ದೃಶ್ಯವಿದೆ. ಲಂಕೆಯ ಯುದ್ಧ ಮುಗಿಯುತ್ತಿದಂತೆ ಸೀತಾ ರಾಮ ಲಕ್ಷ್ಮಣರು ಭರತನಿಗೆ ನೀಡಿದ್ದ ವಾಗ್ದಾನ ಈಡೇರಿಸಲು (೧೪ ವರ್ಷಗಳ ನಂತರ ಮರಳಿ ಅಯೋಧ್ಯೆಗೆ ಬರುವುದಾಗಿ) ನಂದಿಗ್ರಾಮಕ್ಕೆ ಬರುತ್ತಿದ್ದಾರೆ. ಆದರೆ ಬರುವಾಗ ಅವರು ತಮಗಾಗಿ ಸೇವೆ ಮಾಡಿದ ವಾನರವೀರರಿಗೆ ತಮ್ಮ ಕೃತಜ್ನತೆಯನ್ನು ಸಲ್ಲಿಸಬೇಕಾದುದು ಅವರ ಕರ್ತವ್ಯವಾಗಿತ್ತು. ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. ‘ಲೋಕದಲ್ಲಿ ಮಾನವರಿಗೆ ಕೃತಜ್ನತೆ ಎಂಬುದೇ ಪರಮ ಮೌಲ್ಯ’. ಎಂದು ಭಾವಿಸಿದ ರಾಮ. ಅಯೋಧ್ಯೆಯಲ್ಲಿ ರಾಮನ ಪಟ್ಟಭಿಷೇಕ ಮುಗಿದ ಮೇಲೆ ಸೀತಾ ಲಕ್ಷ್ಮಣರ ಸಮೇತ ಕಿಷ್ಯಂಧೆಗೆ ಬರುತ್ತಾನೆ. ಅಲ್ಲಿ ಸೀತಾ ರಾಮ ಲಕ್ಶ್ಮಣರಿಗೆ ಸಂಭ್ರಮದ ಸ್ವಾಗತವಿತ್ತು. ಆದರೆ ಸುಗ್ರೀದ ಸಹ ಅಧಿಕಾರ ಬಂದೊಡನೆ ಸಾನಮತ್ತನಾಗಿ, ಕಾಮಿನೀಲೋಲನಾಗಿ ಮೆರೆಯುತ್ತಿದ. ಇದನ್ನು ಕಂಡ ಲಕ್ಶ್ಮಣನಿಗೆ ದುಃಖವಾಗುತ್ತದೆ. ಆದರೆ ಆಂಜನೇಯ ಬ್ರಹ್ಮಚಾರಿಯಾಗಿ ಮೆರೆದವನು. ಕಿಷ್ಯಂಧೆಯ ಅರಮನೆಯ ವಿಲಾಸ ವಿಕೃತಿಗಳನ್ನು ಮನ್ನಿಸುವಂತೆ ಕೇಳಿಕೋಳುತ್ತಾನೆ. ಎಲ್ಲ ದೇಶದಲ್ಲೂ ಹೀಗೆಯೇ ಅಲ್ಲವೆ. ಇಡೀ ಭರತ ಖಂಡದ ದೃಶ್ಯವೇ ಇಂದಿಗೂ ಹೀಗೆಯೇ ಆಗಿದೆ ಎನ್ನುತ್ತಾರೆ ಕವಿ.

ಈ ಕಾವ್ಯದಲ್ಲಿ ಬಹಳ ವಿಶೇಷವಾದದ್ದು ಏನೆಂದರೆ ಆಂಜನೇಯ ಮತ್ತು ಕನ್ನಡನಾಡು. ಇದು ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿದಿದೆ. ಕನ್ನಡ ನಾಡಿನ ಸೌಂದರ್ಯ, ಅನನ್ಯಪ್ರೇಮ, ಕಾಡು, ಬೆಟ್ಟ, ನದಿಗಳು, ಹಿರಿಯರ ನಡೆನುಡಿ-ಸ್ನೇಹ, ಕಾರ್ಯ ಸಾಧನೆ ಇವೆಲ್ಲವು ಆಕರ್ಷಸುತ್ತದೆ.

ಆಂಜನೇಯನನ್ನು ಇಲ್ಲಿ ಮುಖ್ಯವಾಗಿ ‘ಕನ್ನಡದ ಕುವರ’ನೆಂದೇ ವರ್ಣಿಸುತ್ತಾರೆ. ಕರುನಾಡ ಸಂಸ್ಕ್ರತಿಯ ಸಾರಸ್ವರುಪ, ಕರುನಾಡು ಕಣ್ಮಣಿ, ಕರುನಾಡ ಸಂಸ್ಕ್ರತಿಯ ಸಂವರ್ಧನ- ಹೀಗೆ ಹನುಮಂತನನ್ನು ಎಷ್ಟು ಬಣ್ಣಿಸಿದರೂ ಕವಿಗೆ ತೃಪ್ತಿಯಿಲ್ಲ. ಆಂಜನೇಯನ ವ್ಯಕ್ತಿತ್ವ ಅದೆಷ್ಟು ಎತ್ತರದಲ್ಲಿದೆ ಎಂಬುದನ್ನು-ಅರಿಯಲು ಆಂಜನೇಯ ಸೀತೆಯ ಬಗ್ಗೆ ತೋರಿದ ಮಾತೃಪ್ರೇಮವೇ ಉದಹರಣೆಯಾಗಿದೆ. ಆಂಜನೇಯನಿಗೆ ಸೀತೆಯ ಬಗ್ಗೆ ಪರಮಭಕ್ತಿ, ಮಾತೃಪ್ರೇಮ. ಹೆಣ್ಣನ್ನು ಭೋಗದ ದೃಷ್ಠಿಯಿಂದ ಕಾಣುವ ಸಮಾಜದಲ್ಲಿ ಆಂಜನೇಯ ಅದೆಷ್ಟು ಗೌರವದಿಂದ ಹೆಣ್ಣನ್ನು ನೋಡಿದ ಎನ್ನುವುದೇ ಅವನ ಹಿರಿಮೆ. ಒಮ್ಮೆಯಂತೂ ಸೀತೆಯನ್ನು ಕಂಡ ಆಂಜನೇಯ ಮಗುವಾಗಿ ಅವಳ ತೊಡೆಯ ಮೇಲೆ ಮಲಗಬೇಕೆಂದು ಬಯಸಿದನಂತೆ. ರೂಪರಾವರ್ತನ ವಿದ್ಯೆಯನ್ನು ಪಡೆದಿರುವ ಆಂಜನೇಯ ತನ್ನ ರೂಪವನ್ನು ಕಿರಿದಾಗಿಸಿಕೊಂಡು ಶಿಶುವಾಗಿ ಸೀತೆಯ ತೊಡೆಯ ಮೇಲೆ ಮಲಗಿ ಆಕೆಯ ಮುಖವನ್ನು ಮಾತೃಪ್ರೇಮದಿಂದ ನೋಡತೊಡಗಿದ. ಮಹಾಯೋಗಿಯಾದವನು ವಾತ್ಸಲ್ಯವೆಂದ ಸುಧೆಯನ್ನು ಸವಿಯುತ್ತಾ ತೊದಲು ನುಡಿಯಲ್ಲಿ ಅಮ್ಮ ಅಮ್ಮ ಎಂದು ನುಡಿದನಂತೆ. ಈ ಸನ್ನಿವೇಶದಲ್ಲಿ ಸೀತೆಯು ಮೈಮರೆತಳು. ತಾನು ಲೋಕಮಾತೆ, ರಾಮಚಂದ್ರನ ಪತ್ನಿ, ಅಯೋಧ್ಯೆಯ ರಾಣಿ ಎನ್ನುವುದನ್ನೆಲ್ಲ ಮರೆತು ಕೇವಲ ಒಬ್ಬ ತಾಯಿಯಾಗಿ ಆ ಶಿಶುವನ್ನು ಅಕ್ಕರೆಯಿಂದ ಎತ್ತಿ ಮುದ್ದಾಡಿದಳು ನಲಿದಳು. ಇದನ್ನು ಕಂಡ ರಾಮ ಹೇಳುತ್ತಾನೆ, ‘ಜನ ಮನೆ ಮನೆಗಳಲಿ ಈ ವೀರ ಮಾರುತಿಯಂತೆ ಸ್ನೇಹ-ಪ್ರೀತಿ-ಸಾಹಸ ಎಲ್ಲ ಗುಣಗಳನ್ನು ಪಡೆದ ಮಕ್ಕಳು ಬೆಳೆಯಲಿ’ ಎಂದು ಹೇಳುತ್ತಾ ಅವನ್ನು ಮಾರುತಿಯನ್ನು ಬಾಚಿ ತಬ್ಬಿದನಂತೆ.

ಈ ಕಾವ್ಯದ ಮೂಲಕ ಕವಿ ಹೇಳುತ್ತಾರೆ. ಆಂಜನೇಯ ಭಕ್ತನೆಂದರೆ ಭಕ್ತ, ವೀರವಿರಕ್ತ, ಪರಮಜ್ನನಿ, ಅಮ್ಮನ ಅಕ್ಕರೆಯ ಕಂದ, ಕರುನಾಡ ಕುವರ. ಜೀವನದ ಎಲ್ಲ ಮಹಾ ಮೌಲ್ಯಗಳ ಗಣಿ ಇವನು ಎಳೆತನದಲ್ಲಿ ತುಂಟಾಟವಾಡಿದ. ಅನಂತರ ಆಕಾಶದೆತ್ತರಕ್ಕೆ ಬೆಳೆದ ವ್ಯಕ್ತಿತ್ವ, ಲೋಕದ ಶೋಕವನ್ನು ನಾಶಮಾಡಿದವನು. ಲೋಕದಲ್ಲಿ ಶುದ್ಧವಾದ ಜೀವನ ಎಂದರೆ ಹೀಗಿರಬೇಕು ಎನ್ನುವುದಕ್ಕೆ ಅವನು ನಿದರ್ಶನ. ಇಂಥ ಗುಣಗಳಿರುವುದರಿಂದಲೇ ನಮ್ಮ ಸಮಾಜ ಅವನನ್ನು ಪೂಜಿಸಿ ಕೊಂಡಾಡುತ್ತಿದೆ. ಎಲ್ಲ ದೇವರುಗಳಿಗಿಂತ ಮೇಲೆ ಸ್ಥಾನ ನೀಡಿದೆ. ಈತನ ಚರಿತ್ರೆಯಲ್ಲಿ ಬರುವ ಅದ್ಭುತಗಳನ್ನು ಅರ್ಥ ಮಾಡಿಕೊಂಡರೆ ನಾವೂ ಪವಿತ್ರರಾಗುತ್ತೇವೆಂದೇ ಹೇಳುತ್ತಾರೆ.
ಇಂತಹ ಆಂಜನೇಯನ್ನು ಹೃದಯದೊಳಗೆ ಇಟ್ಟುಕೊಂಡು ಪೂಜಿಸಬೇಕಂತೆ ಏಕೆಂದರೆ
ನಿಮ್ಮ ಮಕ್ಕಳಿಗೆ ರಕ್ಷೆಯಿವ, ಕೊರಳಪದಕ
ನಿಮ್ಮ ಗ್ರಾಮವ ಕಾಪಿಡುವುದವನದೇ ವಿಸಕ
ನಮಗಾಗಿ ನಿಮಗಾಗಿ ಇಳೆಗಿಳಿದು ಬಂದ
ಆಪದಕ್ಕೊದಗಿ ಬಹ ಕಾರುಣ್ಯಮೂರ್ತಿ
ಯುಗಯುಗದಿ ರಾಮಕೀರ್ತನ ಕವನು ನಿತ್ಯಸುಖಿ
ರಾಮಾಯಣ ಪಾರಾಯಣಕವನು ಸಿದ್ಧಿಶ್ರೋತಾರ,
ಸಿದ್ಧಿವಿರಿಸಿ ಅಲ್ಲಿ ಮೀಸಲು ಮಣೆಯೊಂದ,
ಎಂದೊಮ್ಮೆ ಬಂದು ಕೂಡುವನಲ್ಲಿ ಎಂದೆಲ್ಲಿ ಕೇಳಿ
ಅದೊ ಬಂದು ಕುಳಿತಿಹನು ಕೈಮುಗಿದು ಶ್ರದ್ಧೆಯಲಿ
ನಿತ್ಯಶಾಶ್ವತ ಸುಚಿವೇಶಕ್ಕೆ ಜಯವೆನ್ನಿ ಜಯವೆನ್ನಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top