fbpx
ದೇವರು

ಶ್ರೀ ವರಮಹಾಲಕ್ಷ್ಮೀ ಪೂಜೆಯ ವ್ರತ ಮತ್ತು ಪೂಜಾ ವಿಧಾನ, ಕಳಸ ಮತ್ತು ದಾರಗಳ ಮಹತ್ವ

ಶ್ರೀ ವರಮಹಾಲಕ್ಷ್ಮೀ ಪೂಜೆಯ ವ್ರತ  ಮತ್ತು ಪೂಜಾ ವಿಧಾನ.

ಶ್ರಾವಣ ಮಾಸ ಪ್ರಾರಂಭವಾಗಿದೆ.ಕೆಲವೇ ಕೆಲವು ದಿನಗಳು ಕಳೆದಿವೆ. ಒಂದು ವಾರ ಕಳೆದು ಶ್ರಾವಣ ಮಾಸದ  ಎರಡನೇ ವಾರಕ್ಕೆ  ಬಂದಿದ್ದೇವೆ.ಎರಡನೇ ವಾರದಲ್ಲಿ ಒಂದು ವಿಶೇಷತೆ ಇದೆ ಅದು ಎಲ್ಲರಿಗೂ ಗೊತ್ತಿರಲೇಬೇಕಾಲ್ಲ ? ಅತೀ ಮುಖ್ಯವಾಗಿ ಗೃಹಿಣಿಯರು  ಆಚರಿಸುವ ವ್ರತ,ಪೂಜೆ,ಹಬ್ಬವಿದು ಅದೇ ವರಮಹಾಲಕ್ಷ್ಮೀ ಹಬ್ಬ.ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ.

ಬಹಳ ವಿಶೇಷವಾಗಿ ಶ್ರಾವಣ ಮಾಸದಲ್ಲಿ ಪ್ರಕೃತಿಯಲ್ಲಿ ಬದಲಾವಣೆಗಳು ಕಂಡುಬರುತ್ತದೆ. ಅಷಾಡ ಮಾಸದಲ್ಲಿ ರಭಸವಾಗಿ ಗಾಳಿಯು ಬೀಸುತ್ತಿರುತ್ತದೆ.ಅದೇ ಶ್ರಾವಣ ಮಾಸದಲ್ಲಿ ದಿಢೀರನೆ ಗಾಳಿಯ ವೇಗ ತಗ್ಗುತ್ತದೆ.ಮಳೆಗಾಲ ವಿರುತ್ತದೆ.ಆಕಾಶದಲ್ಲಿ ಮೋಡಗಳ ಚಿತ್ತಾರ,ತುಂತುರು ಮಳೆ ಹನಿಯಿಂದ ಮಳೆಗಾಲ ಪ್ರಾರಂಭವಾಗುತ್ತದೆ.

ಇಂತಹ ಶ್ರಾವಣ ಮಾಸದಲ್ಲಿ ಬರುವ ಹಬ್ಬ ಹರಿ ದಿನಗಳು ಎಂತಹ ನಾಸ್ತಿರನ್ನು ಬೇಕಾದರೂ ದೇವರ ಮೇಲೆ ಭಕ್ತಿ ಶ್ರದ್ದೆ ತಂತಾನೆ ಮನಸ್ಸಿನಲ್ಲಿ ಮೂಡುವಂತೆ ಮಾಡುತ್ತದೆ. ಈಗಿನ ಯಾಂತ್ರಿಕ ಬದುಕಿನಲ್ಲಿ ನಾವೆಲ್ಲರೂ ನಮ್ಮ ಪೂರ್ವಿಕರು ಮಾಡುತ್ತಿದ್ದ ಸಂಪ್ರದಾಯಗಳನ್ನು ಆಚಾರ ವಿಚಾರಗಳನ್ನು ಮರೆತು ಹೋಗುತ್ತಿದ್ದೇವೆ ನಿರ್ಲಕ್ಷ್ಯ ವಹಿಸುತ್ತಿದ್ದೇವೆ.ಹೀಗೆ ಆಗಬಾರದು.ನಾವು ಸಂಪ್ರದಾಯವನ್ನು ಪಾಲಿಸಿ ನಮ್ಮ ಮುಂದಿನ ಪೀಳಿಗೆಯವರು ಅವೆಲ್ಲವನ್ನೂ ಆಚರಿಸುವಂತೆ  ಮಾಡಬೇಕು.

ಶ್ರಾವಣ ಮಾಸದಲ್ಲಿ ವಿಶೇಷವಾಗಿ ಹೂವಿನ ರಾಶಿ, ಸೇವಂತಿಗೆ, ಮಲ್ಲಿಗೆ, ತರ  ತರದ ಹಣ್ಣುಗಳು.ಹೀಗೆ ಹಬ್ಬಗಳಿಗೆ ಹೊಸ ಬಟ್ಟೆಗಳನ್ನು ಖರೀದಿಸಿವುದು.ಹಾಗೆ ಹೂವು ಹಣ್ಣುಗಳ ಬೆಲೆ ಗಗನಕ್ಕೆ ಏರಿದ್ದರು,ದವಸ,ಧಾನ್ಯ ,ಎಣ್ಣೆ, ಬಟ್ಟೆ ಪದಾರ್ಥಗಳ ಬೆಲೆ ಏರುತ್ತಲೇ ಇದ್ದರೂ ಶ್ರಾವಣ ಮಾಸದಲ್ಲಿ ಬರುವ ವಿಶೇಷ ಹಬ್ಬವನ್ನು ಆಚರಿಸದೆ ಇರುವುದಿಲ್ಲ. ಅದರಲ್ಲೂ ವರಮಹಾಲಕ್ಷ್ಮೀ ಹಬ್ಬವಂತೂ ಇನ್ನೂ ವಿಶೇಷವಾಗಿ ಗೃಹಿಣಿಯರು ಆಚರಿಸುತ್ತಾರೆ.ಬನ್ನಿ ಇಂದು ನಾವು ವರಮಹಾಲಕ್ಷ್ಮೀ ಹಬ್ಬವನ್ನು, ಗೃಹಿಣಿಯರು ಮಾಡುವ ವ್ರತವನ್ನು  ಹೇಗೆ ಆಚರಿಸಬೇಕು ಎಂದು ವಿವರವಾಗಿ ತಿಳಿಯೋಣ….

 

ಶ್ರೀ ವರಮಹಾಲಕ್ಷ್ಮೀ ವ್ರತ.

ಶ್ರಾವಣದ ಎರಡನೇ ಶುಕ್ರವಾರ ಬರುವ ವ್ರತ ಪೂಜೆಯೇ ವರಮಹಾಲಕ್ಷ್ಮೀ ಹಬ್ಬ.

ಮೊದಲು ಗೃಹಿಣಿಯರು ಶ್ರಾವಣ ಮಾಸ ಬಂದ ನಂತರ ಮನೆಯನ್ನು ಪೂರ್ತಿಯಾಗಿ ಸ್ವಚ್ಛಗೊಳಿಸಬೇಕು ದೇವರ ಮನೆಯನ್ನು ಸ್ವಚ್ಛಗೊಳಿಸಬೇಕು. ವರಮಹಾಲಕ್ಷ್ಮೀ ಹಬ್ಬದ ದಿನ ರಂಗೋಲಿ ಹಾಕಿ ಕಲಶವನ್ನು ಪ್ರತಿಷ್ಠಾಪಿಸಿ,ಕಲಶದಲ್ಲಿ ಲಕ್ಷ್ಮೀ ದೇವಿಯನ್ನು  ಪ್ರತಿಷ್ಠಾಪಿಸಿ ದೇವರ ಮನೆಯನ್ನು ಸುಂದರವಾದ ಮಂಟಪದಂತೆ ಶೃಂಗಾರ ಮಾಡುತ್ತೇವೆ.

ಲಕ್ಷ್ಮೀಯು ಸಮುದ್ರದಿಂದ ಉದ್ಭವಿಸಿದವಳು,ಸಮುದ್ರ ರಾಜನ ಪುತ್ರಿ,ಚಂದ್ರನ ಸಹೋದರಿ ಎಂದು ಕರೆಯಲಾಗುತ್ತದೆ.

ವ್ರತ.

“ಶುಕ್ಲೇ ಶ್ರಾವಣಿಕೆ ಮಾಸೇ ಪೌರ್ಣಿಮೋಪಾಂತ್ಯ ಭಾಗವೇ 

 ವರಲಕ್ಷಮ್ಯಾವ್ರತಂ ಕಾರ್ಯಾಂ  ಸರ್ವಸಿದ್ದಿ ಪ್ರದಾಯಕಮ್ (ಸರ್ವ ಮಾಂಗಲ್ಯ ಸಿದ್ದಯೇ) ”

ಶ್ರಾವಣ ಶುಕ್ಲ ಪಕ್ಷ ಪೌರ್ಣಮಿಯ ದಿವಸ ಶುಕ್ರಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ ,ಅಂದರೆ ಶುಕ್ರವಾರ ಅಥವಾ ಶುಕ್ಲ ಶ್ರಾವಣ ಪೌರ್ಣಮಿಯು ಹತ್ತಿರವಿರುವ ಶುಕ್ರವಾರದಂದು,ವರಮಹಾಲಕ್ಷ್ಮೀ ದೇವಿಯ  ಆರಾಧನೆ ಮಾಡಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ವ್ರತ ವಿಧಾನ.

ಸ್ತೀಯರು ವರಮಹಾಲಕ್ಷ್ಮೀ ಹಬ್ಬದ ದಿನ ಶಕ್ರವಾರ  ಬೆಳಗ್ಗೆ ಬೇಗ ಎದ್ದು ಮಂಗಳ ಸ್ನಾನ ಮಾಡಬೇಕು.ವ್ರತ ಮಾಡುವವರು ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ಉಪವಾಸವಿರಬೇಕು,ಉಪವಾಸವಿದ್ದು ವ್ರತ ಸಂಕಲ್ಪ ಮಾಡಬೇಕು.

ಮನೆಯಲ್ಲಿರುವ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ,ಬಾಳೆಕಂದು, ಮಾವಿನ ಎಲೆಗಳಿಂದ ಶೃಂಗರಿಸಬೇಕು. ರಂಗೋಲಿ ಹಾಕಬೇಕು.ಅದರ ಮೇಲೆ ಕಲಶ ಸ್ಥಾಪಿಸಬೇಕು.ಒಂದು ತಾಮ್ರದ ಚೊಂಬಿನಲ್ಲಿ ಸ್ವಲ್ಪ ನೀರನ್ನು ತುಂಬಿ.ಒಂದು ಬೆಳ್ಳಿ,ತಾಮ್ರ ಅಥವಾ ಪಂಚಲೋಹದ ತೆಟ್ಟೆಯಲ್ಲಿ ಅಕ್ಕಿಯನ್ನು ಹರಡಿ ,ಅರಿಶಿನದ ಕೊಂಬು, ವೀಳ್ಯದೆಲೆ ,ಅಡಿಕೆ,ಬೆಳ್ಳಿ ನಾಣ್ಯಗಳನ್ನು ದೇವಿಯ ಮುಂದೆ ಇಟ್ಟು. ನೀರನ್ನು ತುಂಬಿದ ಕಲಶದ ಚೊಂಬಿನ ಮೇಲೆ ತೆಂಗಿನ ಕಾಯಿ ಇಟ್ಟು.ಅದರ ಮೇಲೆ ಅರಿಶಿಣ, ಕುಂಕುಮವನ್ನು ಇಟ್ಟು. ತೆಂಗಿನಕಾಯಿಯ ಮೇಲೆ ಮುಖದ ಆಕಾರದ ಚಿತ್ರ ಬರೆಯಬೇಕು.ಹರಿಷಿನವನ್ನು ನೀರಿನಲ್ಲಿ ಕಲಸಿ ಅದರಿಂದ ತೆಂಗಿನಕಾಯಿಗೆ ಕಣ್ಣುಕಿವಿ ಬರೆಯಬಹುದು.

ಅಥವಾ ಲಕ್ಷ್ಮೀ ದೇವಿಯ ಬೆಳ್ಳಿಯ ಅಥವಾ ಬಂಗಾರದ ಮುಖವಾಡ ಇದ್ದರೆ ಅದನ್ನೇ ತೆಂಗಿನಕಾಯಿಗೆ ಲಕ್ಷ್ಮೀಯ ಮುಖವಾಗಿ ಜೋಡಿಸಬೇಕು. ನಂತರ ಕಲಶಕ್ಕೆ ವೀಳ್ಯದೆಲೆ, ಮಾವಿನ ಎಲೆಯನ್ನು ಇಡಬೇಕು. ಕಲಶವನ್ನು ಅಕ್ಕಿ ಹರಡಿರುವ ತೆಟ್ಟೆಯ ಮೇಲೆ ಸ್ಥಾಪಿಸಬೇಕು. ತೆಟ್ಟೆಯನ್ನು ಕಲಶದ ಸಮೇತ ರಂಗೋಲಿಯ ಮೇಲೆ ಇಡಬೇಕು. ಕಲಶಕ್ಕೆ ಹೊಸ ಸೀರೆ ಅಥವಾ ರವಿಕೆ ಬಟ್ಟೆಯನ್ನು  ತೊಡಿಸಿ,ಒಡವೆ ಹಾಕಿ ಶೃಂಗಾರ ಮಾಡಿ ಅಲಂಕರಿಸಬೇಕು.

ಹೂವುಗಳಾದ ಮಲ್ಲಿಗೆ,ಗುಲಾಭಿ,ಜಾಜಿ,ಕೆಂಪು ದಾಸವಾಳ ಹೂವುಗಳಿಂದ ಅಲಂಕರಿಸಬೇಕು.ಲಕ್ಷ್ಮೀಗೆ ತಾವರೆ ಹೂವು ಎಂದರೆ ಪ್ರಿಯ ,ಶ್ರೇಷ್ಠ ಆದ್ದರಿಂದ ಒಂದು ದಿನವಾದರೂ ತಾವರೆ ಹೂವನ್ನು ಸಮರ್ಪಿಸಿ.

ನೈವೇದ್ಯವಾಗಿ ಹಣ್ಣುಗಳಾದ ದಾಳಿಂಬೆ,ಕಿತ್ತಳೆ,ಮೋಸಂಬಿ,ಸೇಬು,ದ್ರಾಕ್ಷಿ ಹಣ್ಣುಗಳನ್ನು ಸಮರ್ಪಿಸಬಹುದು.

ಇನ್ನೂ ಮನೆಯಲ್ಲಿ ಮಾಡಿದ ಸಿಹಿ ಪದಾರ್ಥಗಳನ್ನು ಸಹ ನೈವೇದ್ಯವಾಗಿ ಸಮರ್ಪಿಸಬಹುದು. ಕಾಯಿಸದೆ ಇರುವ ಶುದ್ದವಾದ ಹಸುವಿನ ಹಾಲು ಲಕ್ಷ್ಮೀಗೆ ಶ್ರೇಷ್ಠ.

ತುಪ್ಪದಿಂದ ದೀಪ ಹಚ್ಚಿದರೆ ಲಕ್ಷ್ಮೀಗೆ  ಶ್ರೇಷ್ಠ.

ಕಲಶ ಸ್ಥಾಪಿಸುವ ಇನ್ನೊಂದು ವಿಧಾನ.

ತಾಮ್ರದ ಅಥವಾ ಪಂಚಲೋಹದ ಕಲಶದ ಚೊಂಬಿನಲ್ಲಿ ಅಕ್ಕಿ ತುಂಬಿಸಿ ಅದರೊಳಗೆ ಗೋಡಂಭಿ,ಬಾದಾಮಿ,ಖರ್ಜೂರ,ಒಣ ದ್ರಾಕ್ಷಿ,ಕಲ್ಲು ಸಕ್ಕರೆಯನ್ನು ಇಡಬೇಕು. ಕಳಸದ ಮೇಲೆ ತೆಂಗಿನಕಾಯಿಯನ್ನು ಇಟ್ಟು ಕಲಶ ಸ್ಥಾಪಿಸಬೇಕು. ಕಲಶಕ್ಕೆ ಲಕ್ಷ್ಮೀ ಕಲಶ ಎನ್ನುತ್ತಾರೆ.

ನೆನಪಿಡಿ ವರಮಹಾಲಕ್ಷ್ಮೀ ವ್ರತ ಪೂಜೆ ಮಾಡುವ ಸ್ತ್ರೀಯರು ಮೊದಲು ತಾವು ಅಲಂಕಾರ ಮಾಡಿಳ್ಳಬೇಕು. ರೇಶಿಮೇ ಸೀರೆಯುಟ್ಟು, ಹಸಿರು ಬಳೆಗೆಳನ್ನು ತೊಟ್ಟು, ಅಲಂಕಾರ ಮಾಡಿಕೊಂಡು,ಹಣೆಗೆ ಕುಂಕುಮ,ಕೆನ್ನೆಗೆ ಹರಿಷಿಣ ಹಚ್ಚಿಕೊಂಡು,ಹೂವನ್ನು ಮುಡಿದು ಮುತೈದೆಯರು ಮತ್ತು ಹೆಣ್ಣುಮಕ್ಕಳು  ಹೀಗೆ ಅಲಂಕಾರಗೊಂಡು ನಂತರ ದೇವಿಯನ್ನು ಶೃಂಗಾರ ಗೊಳಿಸಿ, ಪೂಜಿಸುವುದು, ವ್ರತವನ್ನು ಆಚರಿಸಲು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಶ್ರೇಷ್ಠ.

ಪೂಜೆಯನ್ನು ಪ್ರಾರಂಭ ಮಾಡುವ ಮುನ್ನ ಕನಿಷ್ಠ ವೆಂದರೂ ಐದು ಜನ ಮುತೈದೆಯರನ್ನು  ಮನೆಗೆ ಕರೆದು.ನಂತರ ಪೂಜೆ ಮಾಡಿ ಅವರಿಗೆ ತಾಂಬೂಲ ನೀಡಿ,ಅದರ ಜೊತೆಗೆ ಹರಿಷಿನ,ಕುಂಕುಮ,ಹೂವು, ಬಾಳೆಹಣ್ಣು, ಮತ್ತು ಹಸಿರು ಬಳೆಗಳನ್ನು ಸಾಧ್ಯವಾದಷ್ಟು ದಕ್ಷಿಣೆಯನ್ನು ಕೊಟ್ಟು ಆಶೀರ್ವಾದವನ್ನು ಪಡೆಯಬೇಕು.

ದಾರಗಳ ಮಹತ್ವ.

ವರಮಾಹಾಲಕ್ಷ್ಮೀ ಪೂಜೆಯಲ್ಲಿ  ವಿಶೇಷವಾಗಿ ದಾರಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ.ಹೊಸದಾಗಿ 12 ದಾರಗಳಿಗೆ,12 ಗಂಟುಗಳನ್ನು ಹಾಕಿ,ಅರಿಶಿನದ ನೀರಿನಲ್ಲಿ ಸ್ವಲ್ಪ ನೆನೆಸಿ,ಅರಿಶಿನ ಹಚ್ಚಿ,ದೇವಿಯ ಪಕ್ಕದಲ್ಲಿ ಇರಿಸಿ ಆರಾಧಿಸಬೇಕು. ದಾರಕ್ಕೆ ಹರಿಷಿನ,ಕುಂಕುಮ,ಹೂವು, ಪತ್ರೆಗಳಿಂದ ಪೂಜಿಸಿ ನೈವೇದ್ಯ ಅರ್ಪಿಸಬೇಕು.ನೈವೇದ್ಯವಾಗಿ ಸಜ್ಜಿಗೆಯನ್ನು ತಯಾರಿಸಿ ಸಮರ್ಪಿಸಬೇಕು.

12 ದಾರಗಳನ್ನೂ 12 ದ್ವಾದಶ ನಾಮಾವಳಿಯೆಂದು ಪೂಜಿಸುವರು. ಹೆಸರುಗಳು ಹೀಗಿವೆ ರಮೆ, ಸರ್ವಂಗಳೇ, ಕಮಲವಾಸಿನೆ,ಮನ್ಮಥ ಜನನಿ, ವಿಷ್ಣುವಲ್ಲಭೆ, ಕ್ಷೀರಾಬ್ಡಿ ಕನ್ಯಕೆ,ಲೋಕಮಾತೆ, ಭಾರ್ಗವಿ,ಪುಶ್ಪೇ, ಪದ್ಮಹಸ್ತೆ,ತುಷ್ಟೆ, ಮತ್ತು ವರಲಕ್ಷ್ಮೀ.ಶ್ರೀ ಸೂಕ್ತ ಪಠಿಸುವುದು, ಮಹಾಲಕ್ಷ್ಮೀ ಅಷ್ಟಕಂ ಓದುವುದು ಒಳ್ಳೆಯದು.

ದೇವಿಯ ಮೂರ್ತಿಗೆ ಅರಿಶಿನ ,ಕುಂಕುಮ,ಹೂವು ,ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ,ಪೂಜಿಸಿದ ಹೆಣ್ಣುಮಕ್ಕಳು. ದಾರಗಳಿಗೆ ಹೂವುಗಳನ್ನು ಕಟ್ಟಿ ಹಿರಿಯರಿಗೆ ಕಂಕಣದಂತೆ ಬಲಗೈಗೆ ಕಟ್ಟಬೇಕು.ನಂತರ ಹಿರಿಯರ ಆಶೀರ್ವಾದವನ್ನು ಪಡೆಯಬೇಕು, ಹಿರಿಯರು ದಕ್ಷಿಣೆಯೊಂದಿಗೆ ದಾನವನ್ನು ಸಹ ಕೊಡುತ್ತಾರೆ.

 

ದಾರವನ್ನು ಕಟ್ಟುವ  ಸಮಯದಲ್ಲಿ ಹೇಳುವ ಶ್ಲೋಕ.

ದ್ವಾದಶ ಗ್ರಂಥಿ ಸಂಯುಕ್ತo ಕೃತಂ ದ್ವಾದಶತಂತುಭಿ ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವ ಮಂಗಳೇ

ಹೀಗೆ ಮಹಾಲಕ್ಷ್ಮೀಯನ್ನು ಧೂಪ,  ತುಪ್ಪದ ದೀಪ,ಉದುಬತ್ತಿ, ಕರ್ಪುರದ ಆರತಿಯೊಂದಿಗೆ  ಶ್ರದ್ದೆ,ಭಕ್ತಿಯಿಂದ ಪೂಜಿಸಿ ವರಗಳನ್ನು ಕೇಳಿದರೆ ಲಕ್ಷ್ಮೀ ಕೊಡದೇ ಇರುವುದಿಲ್ಲ.ಎಲ್ಲರಿಗೂ ವರಕೊಡುವ ವರಮಹಾಲಕ್ಷ್ಮೀ ಒಳ್ಳೆಯದನ್ನೇ ಮಾಡಲಿ .

ನಿಮಗೆ ಪೂಜೆ ವ್ರತಗಳನ್ನು ಮಾಡಲು ಬರುವುದಿಲ್ಲ ಕಷ್ಟ ಎಂದಾದರೆ ಅರ್ಚಕರನ್ನು ಕರೆಸಿ ದಿನ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿಸಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top