fbpx
ದೇವರು

ಪಾಕ ಪ್ರವೀಣಾ ನಳ ಹಾಗೂ ಸುಂದರಿ ದಮಯಂತಿಯರ ವಿವಾಹದ ಕಥೆ

ನಳದಮಯಂತಿಯರ ವಿವಾಹ ಕಥೆ.

ಪಾಂಡವರಲ್ಲಿ ಅರ್ಜುನನು ಇಂದ್ರಕೀಲ ಪರ್ವತಕ್ಕೆ ನಡೆದಾಗಲೇ ಒಮ್ಮೆ ಬೃಹದಶ್ವರ ಆ ವನಕ್ಕೆ ಬಂದರು.ಅವರನ್ನು ಸ್ವಾಗತಿಸಿ ಸತ್ಕರಿಸಿದ ಧರ್ಮರಾಜನು ಜೂಜಾಟದಲ್ಲಿ ಸೋಲು ಉಂಟಾಗಿ ತಾವು ಆಡವಿಯನ್ನು ಸೇರಿದ್ದನ್ನು ತಿಳಿಸಿದರು.ಮಹರ್ಷಿಗಳೇ ನಾವು ಈಗ ಈ ಆಡವಿಯಲ್ಲಿಯೇ ವಾಸ ಮಾಡುತ್ತಿದ್ದೇವೆ.ಇಲ್ಲಿಂದ ಅರ್ಜುನನು ಸಹ ವಿಶೇಷ ಕಾರ್ಯಕ್ಕಾಗಿ ಹೊರಟು ಹೋದನು.ಹೀಗೆ ನಾನಾ ರೀತಿಯ  ಸಂಕಟಗಳನ್ನು ಅನುಭವಿಸುವುದು ನನಗೆ ಉಂಟಾಗಿರುವದು ಈ ಜಗತ್ತಿನಲ್ಲಿಯೇ ನನ್ನಂತಹ ದುರಾದೃಷ್ಟ ಶಾಲಿಯಿಲ್ಲ ಎಂದನು.

ಆಗ ಅವರು ಧರ್ಮರಾಜನಿಗೆ ಸಮಾಧಾನ ಮಾಡಿ ನೀನು ನಳರಾಜನ ಕಥೆಯನ್ನು ಕೇಳಿರಲಿಕ್ಕಿಲ್ಲ. ಅವನಷ್ಟು ಕಷ್ಟಪಟ್ಟವರು ಯಾರೂ ಇಲ್ಲ ಎಂದು ನಿಷದ ದೇಶದ ನಳರಾಜನ ಚರಿತ್ರೆಯನ್ನು ವಿವರಿಸಿದರು.ಬೃಹದಶ್ವರ ಹೇಳುತ್ತಿರುವಾಗ ಧರ್ಮರಾಜನು ಆಸಕ್ತಿಯಿಂದ ಆಲಿಸಿದರು.

ಮೊದಲು ನಳದಮಯಂತಿಯರ ವಿವಾಹದ ಬಗ್ಗೆ ಹೇಳಿದರು.

ಹಿಂದೆ ನಿಷೇಧ ದೇಶದಲ್ಲಿ ನಳ ಎಂಬ ರಾಜನು ಇದ್ದನು.ಅವನು ವೀರಸೇನನ ಮಗ.ಗುಣವಂತ ಸಂಪನ್ನ ಮತ್ತು ಉದಾರಿ ಆಗಿರುವ ನಳರಾಜನು ಸುಂದರನು ಪರಾಕ್ರಮಿಯೂ ಆಗಿದ್ದನು.ಹೀಗೆ ಎಲ್ಲ ಗುಣಗಳಿದ್ದರೂ ಮದುವೆಯಾಗದ ಅವನಿಗೆ ಬ್ರಾಹ್ಮಣರು ವಿದರ್ಭ ದೇಶದ ರಾಜಕುಮಾರಿ ದಮಯಂತಿ ಎಂಬುವಳ ಬಗ್ಗೆ ತಿಳಿಸಿದರು.ಭೀಮನೆಂಬ ರಾಜನಿಗೆ ಮಕ್ಕಳಿಲ್ಲದೇ ದಮ ಎಂಬ ಋಷಿಗಳ ಕರುಣೆಯಿಂದ ದಮದಾಂತ ದಮನ ಮತ್ತು ದಮಯಂತಿ ಎಂಬ ನಾಲ್ಕು ಮಕ್ಕಳಾದರು. ಸುಂದರಿ ಆಗಿದ್ದು ಗುಣವತಿಯಾದ ದಮಯಂತಿಯ ಬಗ್ಗೆ ಎಲ್ಲ ಕಡೆಗಳಲ್ಲಿ ಸಹ ಪ್ರಶಂಸೆ ಕೇಳಿ ಬರುತ್ತಿತ್ತು.

ಒಂದು ದಿನ ಕೊಳದ ಬಾವಿಯಲ್ಲಿ ತಿರುಗಾಡುತ್ತಿದ್ದಾಗ ನಳರಾಜನು ಒಂದು ರಾಜ ಹಂಸವನ್ನು ಹಿಡಿದನು.ಆಗ ಅದು ನಳ ಮಹಾರಾಜನನ್ನು ಬಿಟ್ಟು ಬಿಡು ನಾನು ದಮಯಂತಿಯ ಬಳಿಗೆ ಹೋಗಿ ನಿನ್ನ ಗುಣ ರೂಪಗಳ ಬಗೆಗೆ ತಿಳಿಸುತ್ತೇನೆ ಎಂದಾಗ ರಾಜ ಹಂಸವನ್ನು ಬಿಟ್ಟನು.ಆ ಹಂಸವು ಹಾರಿ ದಮಯಂತಿಯ ಬಳಿ ಹೋಗಿ ನಳರಾಜನ ಗುಣಗಳನ್ನು ವಿವರಿಸಿತು. ಹೀಗೆ ನಳದಮಯಂತಿಯರಲ್ಲಿ ಪರಸ್ಪರ ಹಂಸದೂತನಿಂದಾಗಿ ಅನುರಾಗ ಉಂಟಾಗಿತ್ತು.

ಭೀಮರಾಜನು ಮಗಳು ದಮಯಂತಿಯ ಸ್ವಯಂವರವನ್ನು ಘೋಷಿಸಿದನು.ರಾಜ ಮಹಾರಾಜರುಗಳು ಅಲ್ಲಿಗೆ ಆಗಮಿಸಿದರು.ನಳ ಮಹಾರಾಜನೂ ಸಹ ದಮಯಂತಿಯನ್ನು ಮದುವೆಯಾಗುವ ಆಸೆಯಿಂದ ಹೊರಟನು.ದಮಯಂತಿಯ ರೂಪ ಲಾವಣ್ಯಗಳ ಬಗ್ಗೆ ತಿಳಿದ ಇಂದ್ರನು ಸಹ ಅಗ್ನಿ ,ಯಮ,ವರುಣರೊಂದಿಗೆ ಬಂದು ಸ್ವಯಂವರದಲ್ಲಿ ಭಾಗವಹಿಸಲ್ಲಿದ್ದನು.ದಾರಿಯಲ್ಲಿ ಅವರು ನಳನನ್ನು ಕಂಡಾಗ ನೀನೊಂದು ಕೆಲಸವನ್ನು ಮಾಡೆಂದು ಹೇಳಿದರು.

ನಾಳೆ ಸ್ವಯಂವರ ನಡೆಯಲಿದೆ.ನೀನು ದಮಯಂತಿಯನ್ನು ಕಂಡು ದೇವತೆಗಳಲ್ಲಿ ಒಬ್ಬರನ್ನು ಮದುವೆಯಾಗಲು ತಿಳಿಸಬೇಕು ದಮಯಂತಿಯನ್ನು ಏಕಾಂತದಲ್ಲಿ ಕಂಡು ಬರಲು ನಿನಗೆ ಅದೃಶ್ಯವಾಗಿ ಹೋಗುವ ಶಕ್ತಿಯನ್ನು ಕೊಡುತ್ತೇವೆಂದು ಕಳಿಸಿದರು.

ನಳಮಹಾರಾಜನು ದಮಯಂತಿಯನ್ನು ಕಂಡು ನಾಳೆಯ ಸ್ವಯಂವರದಲ್ಲಿ ದೇವತೆಗಳು ಬರುತ್ತಾರೆ ಅವರಲ್ಲಿ ಒಬ್ಬನನ್ನು ವರಿಸಬೇಕೆಂದು ತಿಳಿಸಿದನು.ದೇವತೆಗಳ ಕೈ ಹಿಡಿದು ನೀನೂ ಸಹ ದೇವತೆಯಾಗುವೆ ಎಂದನು.ಆದರೆ ದಮಯಂತಿಯು ತಾನು ನಳಮಹಾರಾಜನನ್ನೇ ಪ್ರೀತಿಸುವುದಾಗಿ  ಹೇಳಿದಳು.ಮಾನವಳಾಗಿ  ದೇವತೆಗಳನ್ನು ವರಿಸುವುದು ಹೇಗೆ ?  ನಾಳೆ ಎಲ್ಲರ ಸಮ್ಮುಖದಲ್ಲಿಯೇ ನಳಮಹಾರಾಜನನ್ನು ವರಿಸುತ್ತೇನೆ ಎಂದು ಹೇಳಿದಳು.

ಸುಂದರವಾಗಿ ಅಲಂಕರಿಸಿದ ವಿಸ್ತಾರವಾದ ಸ್ವಯಂವರ ಮಂಟಪದಲ್ಲಿ ನಾಲ್ವರು ದೇವತೆಗಳು ನಳಮಹಾರಾಜನ ರೂಪವನ್ನೇ ಧರಿಸಿ ಬಂದು ಕುಳಿತಿದ್ದರು.ದಮಯಂತಿಯು ಮಾಲೆಯನ್ನು ಹಿಡಿದು ಬಂದಾಗ ಐದು ಜನ ನಳರನ್ನು ನೋಡಿ ಆಶ್ಚರ್ಯವಾದರೂ ಇದೆಲ್ಲಾ ದೇವತೆಗಳ ಆಟವೆಂದು ಅರಿತಳು. ಅವಳು ತನಗೆ  ಸತ್ವ ಪರೀಕ್ಷೆ ಉಂಟಾಯಿತೆಂದು ತಿಳಿದು ಕೈ ಮುಗಿದು ದೇವತೆಗಳೇ “ದಯಮಾಡಿ ನನ್ನ ಮನದಲ್ಲಿರುವ ನಳಮಹಾರಾಜನನ್ನೇ ತೋರಿಸಿರಿ” ಎಂದು ಪ್ರಾರ್ಥನೆ ಮಾಡಿದಳು.

ದೇವತೆಗಳು ಅವಳ ಪರಿಶುದ್ದವಾದ ಪ್ರೀತಿಯನ್ನು ಕಂಡು ಸಂತಸದಿಂದ ಪ್ರತ್ಯಕ್ಷರಾದರು ನೆಲಕ್ಕೆ ಕಾಲನ್ನು ಹಚ್ಚದ , ಬೆವರದ, ಕಣ್ಣು ಮುಚ್ಚದ, ಬಾಡದಿರುವ, ಹೂಗಳನ್ನು ಹಾಕಿಕೊಂಡ ನಳರಾಜನನ್ನು ಗುರುತಿಸಿ. ಮಾವನಾದ ನಳನಿಗೆ  ಮಾಲೆಯನ್ನು ಅರ್ಪಿಸಿದಳು.

ಇಂದ್ರಾದಿ ದೇವತೆಗಳು  ಅವರಿಬ್ಬರನ್ನು ಆಶೀರ್ವದಿಸಿದರು.ನಳನು ಮಾಡುವ ಯಜ್ಞ ಯಾಗಾದಿಗಳಲ್ಲಿ ತಾನು ಬಂದು ಹವಿಸ್ಸು ಸ್ವೀಕರಿಸುತ್ತೇನೆಂದು ಹೇಳಿದನು.ಉತ್ತಮ ಲೋಕವನ್ನು ನೀಡುವುದಾಗಿ ಇಂದ್ರನು ತಿಳಿಸಿದನು.

ಅಗ್ನಿಯು  ನೆನೆದಾಗ ಪ್ರತ್ಯಕ್ಷನಾಗುವೆನೆಂದನು.

ಯಮನು ನಳನಿಗೆ ಪಾಕವಿದ್ಯೆಯನ್ನು ಮತ್ತು ಧರ್ಮದಲ್ಲಿ ನಂಬಿಕೆ ಇರುವಂತೆ ಅನುಗ್ರಹಿಸಿದನು.

ವರುಣನು ಅವನು ಮುಟ್ಟಿದ ಹೂಗಳು ಬಾಡದಿರುವಂತೆ ಅನುಗ್ರಹ ಮಾಡಿದನು.ಈ ರೀತಿಯಲ್ಲಿ ನಳದಮಯಂತಿಯರ ವಿವಾಹ ನೆಡೆದು ಸುಖದಿಂದ ತಮ್ಮ ರಾಜ್ಯದಲ್ಲಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top