fbpx
ದೇವರು

ಬೆಂಗಳೂರಿನ ಪ್ರಸಿದ್ಧವಾದ ರಾಗಿಗುಡ್ಡ ಆಂಜನೇಯ ದೇವಸ್ಥಾನದ ಐತಿಹಾಸಿಕ ಹಿನ್ನೆಲೆ

ರಾಗಿ ಗುಡ್ಡ ಆಂಜನೇಯ ಸ್ವಾಮಿ ದೇವಸ್ಥಾನದ ಹಿನ್ನಲೆ :

ಪಾಳೇಗಾರರು ಆಳುತ್ತಿದ್ದರು. ಹಿಂದಿನ ದಿನಗಳಲ್ಲಿ ರೈತರು ರಾಗಿಯನ್ನು ಗುಡ್ಡ ಮಾಡಿ ಪೂಜಿಸಿ ಒಂದು ಭಾಗ ದೇವರಿಗೆ ಒಂದು ಭಾಗ ದಾಸಯ್ಯನಿಗೆ ಹೀಗೆ ಹಂಚುತ್ತಿದ್ದರು. ಪಾಳೇಗಾರರು ದೊಡ್ಡ ರಾಗಿಗುಡ್ಡೆಯನ್ನು ಮಾಡಿ ಪೂಜೆಗೆ ಸಿದ್ಧರಾದರು. ತಕ್ಷಣ 3 ಜನ ದಾಸಯ್ಯನವರು ಅಲ್ಲಿಗೆ ಬಂದರು. ಪಾಳೇಗಾರನ ಸೊಸೆಗೆ ಆ ಮೂವರು ಬ್ರಹ್ಮ, ವಿಷ್ಣು, ಮಹೇಶ್ವರರಾಗಿ ಕಾಣಿಸಿಕೊಂಡರು. ತಕ್ಷಣ ರಾಗಿಗುಡ್ಡೆಯಿಂದ ರಾಗಿಯನ್ನು ತೆಗೆದುಕೊಂಡು ದಾನ ನೀಡಲು ಹೊರಟಳು, ಪಾಳೇಗಾರನ ಹೆಂಡತಿ ತನ್ನ ಸೊಸೆಯನ್ನು ತಡೆದಳು. ಸೊಸೆ ಆ ಮೂವರು ದೇವರು ಎಂದು ಹೇಳಿದರೂ ಅತ್ತೆಗೆ ಕೇವಲ ದಾಸಯ್ಯರಾಗಿ ಕಾಣಿಸಿಕೊಂಡರು.

ಸೊಸೆ ಮತ್ತೆ ರಾಗಿ ಕೊಡಲು ಮುಂದಾದಾಗ ಅತ್ತೆ ಮತ್ತೆ ತಡೆದಳು. ತಕ್ಷಣ ಸಿಟ್ಟಾದ ಸೊಸೆ ದೇವರಿಗಿಲ್ಲದ ರಾಗಿ ಕಲ್ಲಾಗಲಿ ಎಂದು ಶಪಿಸಿದಳು. ಆಗ ಇಡೀ ರಾಗಿ ಗುಡ್ಡೆ ಕಲ್ಲಾಯಿತು. ಅವತ್ತಿನಿಂದ ಇದು ರಾಗಿ ರಾಶಿಗುಡ್ಡ (ರಾಗಿ ಗುಡ್ಡ)ವಾಯಿತು. ದೂರದಿಂದ ನೀವು ನೋಡಿದರೆ ಇದು ರಾಗಿಯ ರೀತಿ ಕಾಣುತ್ತದೆ. ಹಾಗೆ ನೀವು ಕಲ್ಲನ್ನು ಜೋರಾಗಿ ಉಜ್ಜಿದರೆ ರಾಗಿಯ ವಾಸನೆ ಬರುತ್ತದೆ. ಆ ಗುಡ್ಡ ಹಾಗೂ ಸುತ್ತಲ ಶಿಲಾ ಪ್ರದೇಶಕ್ಕೆ ರಾಗಿಗುಡ್ಡ ಎಂಬ ಹೆಸರು ಬಂತು ಎನ್ನುವ ನಂಬಿಕೆಯಿದೆ.


ರಾಗಿಗುಡ್ಡ ಆಂಜನೇಯ ದೇವಸ್ಥಾನ ಬೆಳವಣಿಗೆ:
ಕೇವಲ ಮೂಲ ಆಂಜನೇಯ ಹಾಗೂ ಪ್ರವೇಶದ್ವಾರದ ಗಣೇಶ ವಿಗ್ರಹಗಳಷ್ಟೇ ಇದ್ದ ರಾಗಿಗುಡ್ಡದ ಆಂಜನೇಯ ದೇವಸ್ಥಾನ, ಕಾಲಾಂತರದಲ್ಲಿ ಸೀತೆ, ಲಕ್ಷ್ಮಣರೊಡಗೂಡಿದ ಶ್ರೀರಾಮ, ಈಶ್ವರ ಲಿಂಗ, ಶ್ರೀ ರಾಜರಾಜೇಶ್ವರಿ, ಮಹಾವಲ್ಲಭ ಗಣಪತಿ, ನವಗ್ರಹಗಳ ದೇವಾಲಯ ಸಮುಚ್ಛಯವಾಯಿತು. ದೊಡ್ಡದಾದ ಆಂಜನೇಯನ ವಿಗ್ರಹವೂ ಬಂತು. ಗುಡ್ಡ ಹತ್ತಲು ಮೆಟ್ಟಿಲುಗಳಾದವು. ಇದೀಗ ಕೈಲಾಗದವರಿಗೆಂದು ವಿದ್ಯುಚ್ಛಾಲಿತ ಲಿಫ್ಟ್ ಕೂಡಾ ಬಂದಿದೆ. ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ನ ನೆರವಿನಿಂದ ಸುತ್ತಮುತ್ತಲ ಜಾಗವೂ ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತ ಮಂಡಲಿಯ ವಶವಾಯಿತು. ಅದ್ಧೂರಿಯಿಂದ ಡಿಸೆಂಬರ್ ತಿಂಗಳಲ್ಲಿ ಹನುಮಜ್ಜಯಂತಿ ಉತ್ಸವಗಳು ಪ್ರಾರಂಭವಾದವು. ಬಡ ಮಕ್ಕಳಿಗೆ ಪ್ರೌಢಶಾಲೆಯ ತನಕ ಶಾಲೆಗಳನ್ನು ತೆರೆಯಲಾಯಿತು. ಸಂಜೆಯಲ್ಲಿ ಪ್ರವಚನ, ಉಪನ್ಯಾಸ ಕಾರ್ಯಕ್ರಮಗಳು ಆರಂಭವಾದವು. ಎಸ್ಸೆಸ್ಸೆಲ್ಸಿ, ಪಿಯುಸಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ ಸಂಜೆ ತರಗತಿಗಳು ಏರ್ಪಾಡಾದವು. ಮುಂಜಾನೆ ಹಾಗೂ ಮಧ್ಯಾಹ್ನ ಯೋಗ ತರಗತಿಗಳು, ಸಂಜೆ ಉಚಿತ ಚಿಕಿತ್ಸಾಲಯಗಳು ತೆರೆದವು. ಭಕ್ತಾದಿಗಳ ನೆರವಿನಿಂದ ಕಲ್ಯಾಣ ಮಂಟಪ, ಪ್ರವಚನ ಮಂದಿರಗಳು ನಿರ್ಮಾಣವಾದವು. ನಿತ್ಯ ಅನ್ನ ದಾಸೋಹ ಕಾರ್ಯಕ್ರಮವೂ ಚಾಲ್ತಿಗೆ ಬಂತು. ಈ ಭಾಗದ ಹಿಂದೂ ಆಸ್ತಿಕ ಜನರ ಒಂದು ಮುಖ್ಯ ತಾಣವಾಗಿ ರಾಗಿಗುಡ್ಡ ಪರಿವರ್ತನೆಯಾಯಿತು.


*1973ರಲ್ಲಿ ಶ್ರೀ ರಾಗಿಗುಡ್ಡ ಆಂಜನೇಯ ವಿದ್ಯಾಕೇಂದ್ರ ಸ್ಥಾಪನೆಯಾಯಿತು. ಮೊದಲು 30 ಮಕ್ಕಳಿಂದ ಎಲ್‌ಕೆಜಿ ಶುರುವಾಯಿತು. ಈಗ 1200 ಮಕ್ಕಳು 10 ನೇ ತರಗತಿವರೆಗೂ ಓದುತ್ತಿದ್ದಾರೆ. ಅವರಿಗೆ ಒಳ್ಳೆಯ ಶಿಕ್ಷಣವನ್ನು ಕೊಡಲಾಗುತ್ತದೆ.
*ಶ್ರೀ ರಾಗಿಗುಡ್ಡ ಆಂಜನೇಯ ಸ್ವಾಮಿ ಸುಪ್ರಸನನ್ನಾಗಿ ನಮ್ಮನ್ನು ಆಶೀರ್ವದಿಸಿದ್ದರಿಂದ ಸಂಜೀವಿನಿ ಉಚಿತ ಆಸ್ಪತ್ರೆಗೆ ಅಡಿಪಾಯವಾಯಿತು. 1993-94ರಲ್ಲಿ ಬಡವರಿಗಾಗಿ ಉಚಿತ ಆಸ್ಪತ್ರೆ ಅಸ್ತಿತ್ವಕ್ಕೆ ಬಂತು. ಅಲ್ಲಿ ಇಂಗ್ಲೀಷ್ ಮೀಡಿಯಂ, ಆಯುರ್ವೇದಿಕ್ ಎಲ್ಲಾ ರೀತಿಯ ಉಚಿತ ಸೇವೆ ಲಭ್ಯವಿದೆ. ಹಾಗೆ ಉಚಿತವಾಗಿ ಔಷಧಿಗಳನ್ನು ಕೂಡ ಕೊಡಲಾಗುತ್ತದೆ. ಕಳೆದ 20 ವರ್ಷಗಳಿಂದ ಈ ಸೇವೆ ಮುಂದುವರೆದಿದೆ.
ಬೆಂಗಳೂರು ರಾಗಿಗುಡ್ಡ ದೇವಸ್ಥಾನ ವಿಳಾಸ : ಜಯನಗರದ ಒಂಭತ್ತನೆಯ ಬಡಾವಣೆ ( ಜಯನಗರ ಟಿ ಬ್ಲಾಕ್ )

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top