fbpx
ಪ್ರಯಾಣ

ಇಲ್ಲಿದೆ ನೋಡಿ ಬನ್ನಿ ನಮ್ಮ ಕರ್ನಾಟಕದ ಸ್ವರ್ಗ ಚಿಕ್ಕಮಗಳೂರು

ಇಲ್ಲಿದೆ ನೋಡಿ ಬನ್ನಿ ನಮ್ಮ ಕರ್ನಾಟಕದ ಸ್ವರ್ಗ ಚಿಕ್ಕಮಗಳೂರು

1*ಮುಳ್ಳಯ್ಯನಗಿರಿ

ಮುಳ್ಳಯ್ಯನಗಿರಿ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬಾಬಾ ಬುಡನ್‌ಗಿರಿ ಬೆಟ್ಟಸಾಲಿನಲ್ಲಿರುವ ಒಂದು ಶಿಖರ. ೧೯೩೦ ಮೀಟರ್ (೬೩೧೭ ಅಡಿ) ಎತ್ತರದಲ್ಲಿರುವ ಮುಳ್ಳಯ್ಯನ ಗಿರಿ ಕರ್ನಾಟಕದ ಅತ್ಯುನ್ನತ ಪರ್ವತಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವು ಸಹ ಹೌದು. ಈ ಬೆಟ್ಟದ ಮೇಲ್ಬಾಗದಲ್ಲಿ ಮುಳ್ಳಯ್ಯ ಸ್ವಾಮಿಗಳ ದೇವಾಲಯವಿದೆ (ಮಠ).
ಮುಳ್ಳಯ್ಯನಗಿರಿ ರಾಜ್ಯದ ಅತಿ ಎತ್ತರ ಶಿಖರ. ಬೆಟ್ಟಗುಡ್ಡಗಳ ಪಾಲಿನ ದೊಡ್ಡಣ್ಣ. ಬರೋಬ್ಬರಿ ಎತ್ತರ ಸಮುದ್ರ ಮಟ್ಟದಿಂದ ೧೯೨೬ ಮೀಟರ್. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಇರುವ ದೂರ ೧೮ ಕಿ.ಮೀ. ಪುರಾತನ ಇತಿಹಾಸ ಇರುವ ಮುಳ್ಳಯನ ಗದ್ದುಗೆ, ಈಶ್ವರ ದೇವರು ಇರುವ ಸ್ಥಳ. ಧಾರ್ಮಿಕ ಹಾಗು ಪ್ರಾಕೃತಿಕ ನೆಲೆವೀಡು. ಅಂಡು-ಡೊಂಕಿನ ಕಡಿದಾದ ಹಾದಿ. ಒಂದೆಡೆ ಕಾಫಿಯ ಕಣಿವೆ, ಇನ್ನೊಂದೆಡೆ ಒಂದಷ್ಟು ಗಿಡ-ಮರಗಳು. ಅಪರೂಪದ ಶೋಲಾ ಕಾಡು. ಮೈತುಂಬಾ ಹುಲ್ಲನ್ನು ಹಾಸಿ ನಿಂತ ಪರ್ವತ ಸಾಲು.
ಮುಳ್ಲಯ್ಯನ ಗಿರಿಯ ಪಶ್ಚಿಮ ದಿಕ್ಕಿಗೆ ಶೀತಾಳಯ್ಯನ ಗಿರಿ ಇದ್ದರೆ ಪೂರ್ವ ದಿಕ್ಕಿಗೆ ಬಾಬಾ ಬುಡನ್ ಹಾಗು ದತ್ತ ಪೀಠವಿದೆ. ಈ ದತ್ತ ಪೀಠದಿಂದ ದಕ್ಷಿಣ ದಿಕ್ಕಿಗೆ ಮಾಣಿಕ್ಯ ಧಾರ ಯಾತ್ರಾ ಸ್ಥಳವಿದೆ. ಹಾಗೆಯೇ ಬಾಬಾ ಬುಡನ್ ಹಾಗು ದತ್ತ ಪೀಠದಿಂದ ಉತ್ತರಕ್ಕೆ ಗಾಳಿಕೆರೆ ಇದೆ. ಬಾಬಾ ಬುಡನ್ ಹಾಗು ದತ್ತ ಪೀಠ,ಮಾಣಿಕ್ಯ ಧಾರ ಮತ್ತು ಗಾಳಿಕೆರೆ ಈ ಮೂರೂ ಒಂದೆರಡು ಕಿ.ಮೀ ಗಳ ಅಂತರದಲ್ಲಿವೆ.

2*ದತ್ತಗಿರಿ / ಬಾಬಾ ಬುಡನ್‌ಗಿರಿ
ದತ್ತಗಿರಿ / ಬಾಬಾ ಬುಡನ್‌ಗಿರಿಯು (ಅಥವಾ ಬಾಬಾಬುಡನ್‌ಗಿರಿ ಅಥವಾ ಬಾಬಾ ಬುಡನ್ ಗಿರಿ) ಭಾರತದ ಪಶ್ಚಿಮ ಘಟ್ಟಗಳ ದತ್ತಗಿರಿ ಬೆಟ್ಟದ ಸಾಲು/ಬಾಬಾ ಬುಡನ್ ಗಿರಿ ಸಾಲಿನಲ್ಲಿರುವ ಒಂದು ಬೆಟ್ಟ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಥಿತವಾದ ದತ್ತಗಿರಿ/ಬಾಬಾ ಬುಡನ್‌ಗಿರಿಯು ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಯಾತ್ರಾಸ್ಥಳವಾಗಿರುವ ಅದರ ದೇವಸ್ಥಾನಕ್ಕಾಗಿ ಪರಿಚಿತವಾಗಿದೆ. ಮುಳ್ಳಯ್ಯನಗಿರಿ ಮತ್ತು ದತ್ತಗಿರಿ/ಬಾಬಾ ಬುಡನ್‌ ಗಿರಿ (ಎತ್ತರ ೧೮೯೫ ಮಿ.) ದತ್ತಗಿರಿ/ಬಾಬಾ ಬುಡನ್ ಗಿರಿ ಸಾಲಿನಲ್ಲಿರುವ ಪರ್ವತ ಶಿಖರಗಳು. ಒಟ್ಟಾರೆಯಾಗಿ ಈ ಶಿಖರಗಳು ಅವರು ಸ್ವಾಭಾವಿಕವಾಗಿ ಅರ್ಧ ಚಂದ್ರನ ಆಕಾರವನ್ನು ಹೋಲುವ ಕಾರಣಕ್ಕಾಗಿ, ಇವನ್ನು ‘ಚಂದ್ರದ್ರೋಣ ಪರ್ವತಶ್ರೇಣಿ’ ಎಂದು ಕರೆಯಲಾಗುತ್ತದೆ. ಮುಳ್ಳಯ್ಯನ ಗಿರಿಯು ಬಾಬಾಬುಡನ್ ಗಿರಿಶ್ರೇಣಿಯ ಅತ್ಯುನ್ನತ ಶಿಖರವಾಗಿದೆ. ೧೯೩೦ ಮೀಟರ್ (೬೩೧೭ ಅಡಿ) ಎತ್ತರ ಹೊಂದಿರುವ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಿನ ಅತ್ಯಂತ ಎತ್ತರದ ಶಿಖರವಾಗಿದೆ. ಮುಳ್ಳಯ್ಯನ ಗಿರಿ ಬಾಬಾಬುಡನ್ ಗಿರಿಯ ನಡುವಿನ ಹಾದಿಯು ಪ್ರಸಿದ್ಧ ಚಾರಣ ಪಥವಾಗಿದೆ.
ಇದು ಚಿಕ್ಕಮಗಳೂರು ಪಟ್ಟಣದಿಂದ ಉತ್ತರಕ್ಕೆ ೨೫ ಕಿ.ಮೀ. ದೂರದಲ್ಲಿಯೂ ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ.ಗೂ ಹೆಚ್ಚು ದೂರದಲ್ಲಿದೆ. ಮುಳ್ಳಯ್ಯನ ಗಿರಿಯು ಚಿಕ್ಕಮಗಳೂರಿನಿಂದ ಬಾಬಾಬುಡನ್ ಗಿರಿಗೆ ಹೋಗುವ ದಾರಿಯಲ್ಲಿ ಸುಮಾರು ೧೫ ಕಿ.ಮೀಗೆ ಸಿಕ್ಕುತ್ತದೆ.

3*ಮಾಣಿಕ್ಯ ಧಾರಾ
ಮುಳ್ಲಯ್ಯನ ಗಿರಿಯ ಪೂರ್ವ ದಿಕ್ಕಿಗೆ ಅತ್ಯಂತ ಪ್ರಸಿದ್ಧವಾದ ಅಕ್ಕಯ್ಯಮ್ಮನ ಬೆಟ್ಟವಿದೆ. ದೀಪಅವಳಿ ಹಬ್ಬದ ನರಕ ಚತುರ್ದಶಿಯಂದು ರಾತ್ರಿ ಸಾವಿರಾರು ಭಕ್ತರು ದೇವಿಯ ದರ್ಶನಾರ್ಥವಾಗಿ ಇಡೀ ರಾತ್ರಿ ಕತ್ತಲು-ಬೆಳಕೆನ್ನದೆ ಜೀವದ ಹಂಗು ತೊರೆದು ಈ ಅಕ್ಕಯ್ಯಮ್ಮನ ಬೆಟ್ಟವನ್ನು ಹತ್ತುತ್ತಾರೆ.ಈ ಅಕ್ಕಯ್ಯಮ್ಮನ ಬೆಟ್ಟವನ್ನು ಎರಡು ಕಡೆಯಿಂದ ಹತ್ತಬಹುದು.೧)ತರೀಕೆರೆ ಕಡೆಯಿಂದ ಚಿಕ್ಕಮಗಲೂರು ಸೇರಲು ಲಿಂಗದಳ್ಲಿ ಮಾರ್ಗವಾಗಿ ಚಲಿಸುವಾಗ ಮಾರ್ಗ ಮಧ್ಯದಲ್ಲಿ ಬಲಗಡೆಯಿಂದ ಕಾಲು ದಾರಿಯಲ್ಲಿ ಆರೋಹಣ ಮಾಡಬಹುದು. ಈ ದಾರಿ ದುರ್ಗಮವಾದರೂ ಹತ್ತಿರದ್ದಾಗಿದೆ. ೨)ಚಿಕ್ಕಮಗಳೂರಿನಿಂದ ಹೊರಟು ಬಾಬಾ ಬುಡನ್ ಹಾಗು ದತ್ತ ಪೀಠಕ್ಕೆ ತಲುಪಿ ಅಲ್ಲಿಂದ,ಮಾಣಿಕ್ಯ ಧಾರಾಗೆ ಹತ್ತಿ-ಅಲ್ಲಿಮದ ಪೂರ್ವ ದಿಕ್ಕಿಗೆ ಇಳಿದು ನಡೆದರೆ ಸ್ವಲ್ಪ ದೂರದಲ್ಲಿಯೇ ಅಕ್ಕಯ್ಯಮ್ಮನ ಬೆಟ್ಟವಿದೆ.

4*ಕೆಮ್ಮಣ್ಣುಗುಂಡಿ
ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಒಂದು ಗಿರಿಧಾಮ. ಸಮುದ್ರ ಮಟ್ಟದಿಂದ ೧೪೩೪ ಮೀ ಎತ್ತರದಲ್ಲಿರುವ ಈ ಊರು, ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ ದೂರದಲ್ಲಿ ಹಾಗು ಚಿಕ್ಕಮಗಳೂರಿನಿಂದ ೫೫ ಕಿಲೋ ಮೀಟರ್ ದೂರದಲ್ಲಿದೆ.. ಇದು ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ಬೇಸಿಗೆ ತಾಣವಾಗಿದ್ದರಿಂದ ಇದನ್ನು “ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ” ಎಂದೂ ಕರೆಯುತ್ತಾರೆ. ಇಲ್ಲಿನ ಸುಂದರ ಉದ್ಯಾನಗಳು, ಹಸಿರು ಪ್ರಕೃತಿ, ನೀರಿನ ಅಬ್ಬಿಗಳು ಮತ್ತು ಪಶ್ಚಿಮ ಘಟ್ಟಗಳ ಮನೋಹರವಾದ ಪರ್ವತಗಳು ಈ ಸ್ಥಳವನ್ನು ಆಕರ್ಷಣೀಯವಾಗಿ ಮಾಡಿವೆ. ಪರ್ವತಾರೋಹಣ ಮೊದಲಾದ ಚಟುವಟಿಕೆಗಳಿಗೆ ಕೆಮ್ಮಣ್ಣುಗುಂಡಿಯ ಸುತ್ತಮುತ್ತಲಿನ ಗಿರಿಬೆಟ್ಟಗಳಲ್ಲಿ ಅವಕಾಶವಿದೆ.
ಕನ್ನಡದ ಹಲವಾರು ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಕೆಲವು ಪ್ರಮುಖ ಚಿತ್ರಗಳೆಂದರೆ – ಪ್ರೇಮದ ಕಾಣಿಕೆ, ಆನಂದ್, ಪ್ರೀತಿ ಮಾಡು ತಮಾಷೆ ನೋಡು.
ಕೆಮ್ಮಣ್ಣುಗುಂಡಿಯಲ್ಲಿ ಯಥೇಚ್ಚವಾಗಿ ಕಬ್ಬಿಣದ ಅದಿರು ದೊರಕುತ್ತದೆ. ಭದ್ರಾವತಿಯ ಸರ್.ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಕೆಮ್ಮಣ್ಣುಗುಂಡಿಯಿಂದ ಅದಿರು ಸರಬರಾಜಾಗುತಿತ್ತು.


5*ಜೆಡ್ ಪಾಯಿಂಟ್
ಜೆಡ್ ಪಾಯಿಂಟ್ ದಾರಿಯಲ್ಲಿರುವ ಶಾಂತಿ ಜಲಪಾತ
ಕೆಮ್ಮಣ್ಣುಗುಂಡಿಯಿಂದ ಬೆಟ್ಟದ ದಾರಿಯಲ್ಲಿ ಸುಮಾರು ೩೦ ನಿಮಿಷಗಳ ನಡಿಗೆಯ ದೂರದಲ್ಲಿರುವ ಸ್ಥಳ. ಇದೂ ಸಹ ಇಲ್ಲಿಂದ ಕಾಣುವ ಸೂರ್ಯಾಸ್ತದ ದೃಶ್ಯಕ್ಕೆ ಪ್ರಸಿದ್ಧ.

6*ಹೆಬ್ಬೆ ಜಲಪಾತ
ರಾಜ ಭವನದಿಂದ ಸುಮಾರು ೮ ಕಿಮೀ ದೂರದಲ್ಲಿರುವ ಜಲಪಾತ. ಇಲ್ಲಿ ನೀರು ೧೬೮ ಮೀ ಎತ್ತರದಿಂದ ಎರಡು ಹಂತಗಳಲ್ಲಿ (ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ) ಬೀಳುತ್ತದೆ.


7*ಶಾಂತಿ ಜಲಪಾತ
ಇಲ್ಲಿರುವ ಮತ್ತೊಂದು ಜಲಪಾತವೆಂದರೆ ಶಾಂತಿ ಫಾಲ್ಸ್. ರುದ್ರರಮಣೀಯ ಪ್ರಪಾತಗಳನ್ನು ನೋಡುತ್ತ ಇಲ್ಲಿನ ಶಾಂತಿ ಫಾಲ್ಸ್ ಗೆ ಭೇಟಿ ನೀಡುವ ಪ್ರವಾಸಿಗರು ಮನಸೋಲುವಂತಾಗುತ್ತದೆ. ಎತ್ತರದ ಬೆಟ್ಟದಿಂದ ರಭಸದಿಂದ ಬೀಳುವ ನೀರನನ್ನು ನೋಡುವ ಪ್ರವಾಸಿಗರಿಗೆ ಇಲ್ಲಿಂದ ಕಾಣುವ ಅನೇಕ ಕಣಿವೆಗಳು ಪ್ರಕೃತಿಯ ವಿಸ್ಮಯವನ್ನು ಮನದಟ್ಟಾಗಿಸುತ್ತವೆ. ಪಶ್ಚಿಮ ಘಟ್ಟದ ಬೆಟ್ಟಗಳ ಸಾಲುಗಳನ್ನು ಇಲ್ಲಿ ನೋಡುತ್ತ ಪ್ರವಾಸಿಗರು ಕೆಮ್ಮಣ್ಣುಗುಂಡಿಯ ಪ್ರವಾಸನ್ನು ಮರೆಯಲಾಗದ ಅನುಭವವಾಗಿಸಿಕೊಳ್ಳಬಹುದು


8*’ಕುದುರೆ ಮುಖ’
‘ಕುದುರೆಯ ಮುಖ’ದ ಹಾಗೆ ಕಾಣಿಸುವ ಪರ್ವತ ಶ್ರೇಣಿಯೇ ‘ಕುದುರೆ ಮುಖ’. ಈ ಸುಂದರ ಗಿರಿಧಾಮ, ಚಿಕ್ಕಮಗಳೂರುಗೆ ದಕ್ಷಿಣ ಪಶ್ಚಿಮದಿಕ್ಕಿನಲ್ಲಿ ೯೫ ಕಿ.ಮೀ ದೂರದಲ್ಲಿದೆ. ‘ಅರಬ್ಬೀ ಸಮುದ್ರ’ದೂರದಲ್ಲಿ ಕಾಣಿಸುತ್ತದೆ. ಈ ವಿಶಾಲ ಹಾಗೂ ಅಗಲವಾಗಿ ಹಬ್ಬಿದ ಸುಂದರವಾದ ಪರ್ವತ ಶ್ರೇಣಿಗಳು, ಗುಹೆಗಳು, ಕಂದಕ, ಹಳ್ಳಕೊಳ್ಳ ಮತ್ತು ಚಿಕ್ಕದೊಡ್ಡ ಬೆಟ್ಟಗಳಿಂದ ಕೂಡಿವೆ. ಕಿರಿದಾದ ಬೆಟ್ಟಗಳ ಕಾಡಿನ ಕವಲು ದಾರಿಯಲ್ಲಿ ನಡೆದೇ ಸಾಗಿದರೆ, ಪಕ್ಕದಲ್ಲಿ ಜುಳುಜುಳು ಹರಿಯುವ ಶುದ್ಧ ತಿಳಿನೀರಿನ ಝರಿಗಳು, ಎಲ್ಲೆಡೆ ಕಾಣುವ ಹಸಿರು ಹುಲ್ಲು ಗಿಡಮರಗಳು, ಚಿಲಿಪಿಲಿ ಕೂಗುವ ಪಕ್ಷಿ ಸಂಕುಲ. ಇನ್ನೂ ಕೆಲವು ಜಾಗಗಳು ‘ಪರ್ಯಟಕರ ಪುಸ್ತಕ’ಗಳಲ್ಲಿ ದಾಖಲಾಗದೆ ಇರುವ ಪರಿಸರಗಳೂ ಇವೆ. ಹೆಸರು ಗೊತ್ತಿಲ್ಲದ್ದ ಅದೆಷ್ಟೋ ಗಿಡಮರ ಬಳ್ಳಿಗಳು,ಹೂ-ಕಾಯಿಗಳು. ಬಣ್ಣ ಬಣ್ಣದ ನೆಲದ ಮಣ್ಣುಗಳು ಇಲ್ಲಿನ ವಿಶೇಷಗಳಲ್ಲೊಂದು.


9*ಕಲಶೇಶ್ವರಸ್ವಾಮಿ ದೇವಸ್ಥಾನ
ಸ್ಥಳ ಪರಿಚಯ
ಕರ್ನಾಟಕ ರಾಜ್ಯ, ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಕಳಸ ಗ್ರಾಮದಲ್ಲಿ ಶ್ರೀ ಕಲಶೇಶ್ವರಸ್ವಾಮಿ ದೇವಸ್ಥಾನವಿದೆ. ಸಹ್ಯಾದ್ರಿ ಪಶ್ಚಿಮಘಟ್ಟದಲ್ಲಿ ಕಳಸ ಗ್ರಾಮವು ಸುತ್ತಮುತ್ತಲೂ ಬೆಟ್ಟಗಳಿಂದ , ಹಸಿರು ತುಂಬಿದ ಅರಣ್ಯದಿಂದ ಹಾಗೂ ಚಿಕ್ಕಚಿಕ್ಕಜಲಪಾತಗಳಿಂದ ಹಾಗೂ ಭದ್ರನದಿಯ ಸುಂದರ ಪರಿಸರದಲ್ಲಿ ಶ್ರೀ ಕಲಶೇಶ್ವರಸ್ವಾಮಿ ದೇವಸ್ಥಾನ ಸ್ಥಾಪಿಸಲ್ಪಟ್ಟಿದೆ.
ಐತಿಹಾಸಿಕ ಹಿನ್ನಲೆ
ಶ್ರೀ ಕಲಶೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹಲವಾರು ಶಿಲಾಶಾಸನಗಳು ಹಾಗೂ ತಾಮ್ರ ಶಾಸನಗಳು ಲಭ್ಯವಿದೆ. ಅದರಂತೆ ಶ್ರೀ ಕಲಶೇಶ್ವರ ದೇವಸ್ಥಾನದ ಗರ್ಭಗುಡಿಯನ್ನು ವಿಧರ್ಭ ದೇಶದ ಶೃತಬಿಂದು ಮಹರಾಜನಿಂದ ನಿರ್ಮಿಸಲ್ಪಟ್ಟಿರುವುದಾಗಿ ತಿಳಿದು ಬಂದಿರುತ್ತದೆ. ಆನಂತರ ಈ ರಾಜ್ಯವು ಹುಂಚ ಮತ್ತು ಕಾರ್ಕಳ ದೊರೆಗಳ ವಶವಾಯಿತು.ಆನಂತರ ಐಗೂರು ರಾಜರುಗಳ ವಶಕ್ಕೆ ಬಂದಿತು. ಆನಂತರ ಈ ರಾಜ್ಯವು ಕೆಳದಿ ಸಂಸ್ಥಾನದ ವಶಕ್ಕೆ ಬಂದಿತು. ಶ್ರೀ ಕಲಶೇಶ್ವರನಿಗೆ ಚಿನ್ನದ ಮುಖವಾಡವನ್ನು ಶ್ರೀ ಸೋಮಶೇಖರ ನಾಯಕನೇ ನೀಡಿರುವುದು ತಿಳಿದು ಬಂದಿರುತ್ತದೆ. ಈ ದೇವಸ್ಥಾನದಲ್ಲಿ ದೊರೆತ್ತಿರುವ ವಿವಿಧ ಶಾಸನಗಳಿಂದ ಕ್ರಿ.ಶ.1154 ರಿಂದ 1547 ಇಸವಿಯವರೆಗೆ ಇಲ್ಲಿನ ರಾಜರುಗಳು ಶ್ರೀ ಕಲಶೇಶ್ವರನ ಪೂಜೆಗಾಗಿ ಅನೇಕ ಗ್ರಾಮ ಮತ್ತು ಭೂಮಿಗಳನ್ನು ಕೊಟ್ಟಿರುವ ಅಂಶಗಳಿವೆ. ಈ ದೇವಸ್ಥಾನಕ್ಕೆ ಮೈಸೂರು ಮಹರಾಜರು ಕೂಡ ಸೇವೆಯನ್ನು ಸಲ್ಲಿರುತ್ತಾರೆ. ಈ ದೇವಸ್ಥಾನದ ರಜತದ ಬಾಗಿಲುಗಳು ವಿಶೇಷ ಕೆತ್ತನೆಯಿಂದ ಕೂಡಿದ್ದು ಮೈಸೂರು ಮಹಾರಾಜರಿಂದ ಕೊಡುಗೆಯಾಗಿ ನೀಡಿರುತ್ತಾರೆ.


10*ಬೆಳವಾಡಿ
ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಎಂಬ ಹಳ್ಳಿಯಲ್ಲಿ ವೀರನಾರಾಯಣ ದೇವಸ್ಥಾನವಿದೆ. ಇದು ಹೊಯ್ಸಳರ ಕಾಲದಲ್ಲಿ ಕಟ್ಟಿಸಲ್ಪಟ್ಟಿದ್ದು. ಹೊಯ್ಸಳರ ರಾಜ ಎರಡನೆ ವೀರ ಬಲ್ಲಾಳನಿಂದ ಕಟ್ಟಿಸಲ್ಪಟ್ಟಿದ್ದು.
ಮಹಾಭಾರತದಲ್ಲಿ ಉಲ್ಲೇಖಿಸಿರುವ ಏಕಚಕ್ರನಗರ ಎಂದರೇ ಇದೇ ಊರು ಎಂದು ಸ್ಥಳಪುರಾಣ ಹೇಳುತ್ತದೆ. ಭೀಮನು ಬಕಾಸುರನ್ನು ಏಕಚಕ್ರನಗರದಲ್ಲಿ ಕೊಂದಿದ್ದಾಗಿ ಮಹಾಭಾರತದಲ್ಲಿ ಉಲ್ಲೇಖಿಸಲ್ಪಟ್ಟಿದೆ.


11*ಲಕ್ಕವಳ್ಳಿ
ಲಕ್ಕವಳ್ಳಿ ಒಂದು ಹೋಬಳಿಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿದೆ. ಈ ಪ್ರದೆಶದಲ್ಲಿ ಭಧ್ರಾ ನದಿಗೆ ಕಟ್ಟಲಾಗಿರುವ ಅಣೆಕಟ್ಟು “ಲಕ್ಕವಳ್ಳಿ ಡ್ಯಾಮ್” ಎಂದೆ ಪ್ರಸಿದ್ಧಿ ಪಡೆದಿದೆ. ಈ ವಿವಿಧೋದ್ದೇಶದ ಅಣೆಕಟ್ಟು ಮುಖ್ಯವಾಗಿ ಕೃಷಿ ಮತ್ತ್ತು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿದೆ. ಪ್ರಖ್ಯಾತ ಕುವೆಂಪು ವಿಶ್ವವಿದ್ಯಾಲಯವು ಇಲ್ಲಿಂದ ನಾಲ್ಕು ಮೈಲಿ ದೂರದಲ್ಲಿದ್ದು, ರಾಜ್ಯದ ಪ್ರತಿಷ್ಠಿತ ಕಲಿಕಾ ಮತ್ತು ಸಂಶೊಧನಾ ಕೇಂದ್ರವಾಗಿದೆ.
ಅಣೆಕಟ್ಟು
ಅಣೆಕಟ್ಟಿನ ಕಟ್ಟಡವು ೧೮೬ ಅಡಿ ಇದ್ದು, ಒಟ್ಟು ಎತ್ತರ ೧೯೪ ಅಡಿ ಇದೆ. ಇದನ್ನು ಸರ್ ಎಮ್ ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಕಟ್ಟಲಾಗಿದ್ದು ಕರ್ನಾಟಕದ ಸುಂದರ ಮತ್ತು ಹಳೆಯ ಅಣೆಕಟ್ಟಿನಲ್ಲೊಂದಾಗಿದೆ. ಪಶ್ಚಿಮ ಘಟ್ಟದ ಮಡಿಲಲ್ಲಿರುವ ಅಣೆಕಟ್ಟೆಯು ಸಣ್ಣ ಸಣ್ಣ ದ್ವೀಪವನ್ನು ಸೃಷ್ಟಿ ಸಿದೆ. ಬಹೋಪಯೋಗಿ ಅಣೆಕಟ್ಟಾಗಿದ್ದು ಇಲ್ಲಿಂದ ವಿದ್ಯುತ್ ಉತ್ಪಾದನೆ, ಕೃಷಿ ಮತ್ತು ಇತರೆ ಕೈಗಾರಿಕಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ತರೀಕೆರೆ, ಕಡೂರು, ಬೀರೂರು,ದಾವಣಗೆರೆ ಮತ್ತು ಚಿತ್ರದುರ್ಗಗಳಿಗೆ ವಿವಿಧೋದ್ದೇಶಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತದೆ.


12*ಶಾರದಾ ದೇವಸ್ಥಾನ, ಶೃಂಗೇರಿ
ಶೃಂಗೇರಿ ಪ್ರವಾಸಿಗರು ‘ನೋಡಲೇಬೇಕಾದ’ ಸ್ಥಳ ಶಾರದಾಂಬ ದೇವಸ್ಥಾನವೆಂದೇ ಖ್ಯಾತವಾಗಿರುವ ಶಾರದಾ ದೇವಸ್ಥಾನ. ಕಲಿಕೆ ಮತ್ತು ಪಾಂಡಿತ್ಯಕ್ಕೆ ಅಧಿದೇವತೆಯಾದ ಶಾರದಾಂಬ ಮಾತೆಗೆ ಅರ್ಪಿತವಾಗಿರುವ ‘ದಕ್ಷಿಣಂನಾಯ ಪೀಠ’ ವನ್ನು ಆಚಾರ್ಯ ಶ್ರೀ ಶಂಕರ ಭಗವತ್ಪಾದರು ಸುಮಾರು ೭ನೇ ಶತಮಾನದಲ್ಲಿ ಪ್ರತಿಷ್ಠಾಪಿಸಿದರು. ಪುರಾಣಗಳ ಪ್ರಕಾರ ೧೪ ನೇ ಶತಮಾನದಲ್ಲಿ ಮೂಲತಃ ಶ್ರೀಗಂಧದಿಂದ ಮಾಡಲ್ಪಟ್ಟಿದ್ದ ಈ ಪುರಾತನ ವಿಗ್ರಹವನ್ನು ಚಿನ್ನ ಮತ್ತು ಕಲ್ಲಿನ ವಿಗ್ರಹಕ್ಕೆ ಬದಲಾಯಿಸಲಾಯಿತು. ಅಲ್ಲಿ ಮತ್ತೊಂದು ಲಿಂಗವಿದೆ ಅದು ಆ ಶಿವ ಪರಮಾತ್ಮನೇ ನೇರವಾಗಿ ಶಂಕರಾಚಾರ್ಯರಿಗೆ ಕೊಡುಗೆಯಾಗಿ ಕೊಟ್ಟದ್ದೆಂದು ನಂಬಲಾಗಿದೆ.
ಈ ದೇವಾಲಯವು ಒಂದು ಕಾಲದ ಬೆಂಕಿ ಅನಾಹುತದಿಂದ ಹಾಳಾದ ಸ್ಥಿತಿ ತಲುಪಿತ್ತು ಆದರೆ ನಂತರ ಇದನ್ನು ದಕ್ಷಿಣ ಭಾರತದ ವಾಸ್ತುಶಿಲ್ಪದ ಶೈಲಿಯಲ್ಲಿ ಪುನರ್ ನಿರ್ಮಿಸಲಾಯಿತು. ಹಾಗೆಯೆ ದೇವಾಲಯದ ಒಳಗಿರುವ ಮಹಾ ಮಂಟಪದಲ್ಲಿ ಕೆತ್ತನೆ ಮಾಡಿದ ದ್ವಾರಪಾಲಕರು, ದುರ್ಗಾ ಮಾತೆ, ಮತ್ತು ರಾಜ ರಾಜೇಶ್ವರಿ ಮಾತೆಯ ವಿಗ್ರಹಗಳಿವೆ. ಪ್ರವಾಸಿಗರು ಅಷ್ಟ ಲಕ್ಷ್ಮಿ ಚಿತ್ರದ ಜೊತೆಗೆ ೮ ಚಿನ್ನ ಲೇಪಿತ ಪಲಕಗಳನ್ನು ಬಾಗಿಲ ದಾರಿಯಲ್ಲಿ ನೋಡಬಹುದು. ದೇವಾಲಯದ ಶಿಲ್ಪ ಕಲಾಕೃತಿಗಳನ್ನು ತಮಿಳು ನಾಡಿನಲ್ಲಿ ಪ್ರಚಲಿತವಿದ್ದ ಶಿಲ್ಪ ಶಾಸ್ತ್ರದಿಂದ ಪ್ರಭಾವಿತಗೊಂಡು ಕೆತ್ತಿರುವುದನ್ನು ಕಾಣಬಹುದು.
ಈ ದೇವಸ್ಥಾನದಲ್ಲಿ ನವರಾತ್ರಿ ಮತ್ತು ವಿಶೇಷ ಚೈತ್ರ ಶುಕ್ಲ ಪೂರ್ಣಿಮಾ ಪೂಜೆ ಮುಂತಾದ ಹಬ್ಬಗಳನ್ನು ಆಚರಿಸಲಾಗುತ್ತದೆ. ಸ್ಥಳೀಯರು ದೀಪೋತ್ಸವವನ್ನು ಕಾರ್ತಿಕ ಪೂರ್ಣಿಮೆಯೆಂದು ಹಾಗು , ಲಲಿತ ಪಂಚಮಿ ಯನ್ನು ಮಾಘ ಶುಕ್ಲ ಪಂಚಮಿ ಯಂದು ಮತ್ತು ಶ್ರೀ ಶಾರದಾಂಬ ರಥೋತ್ಸವವನ್ನು ಮಾಘ ತೃತೀಯ ದಂದು ಈ ಪುಣ್ಯಕ್ಷೇತ್ರದಲ್ಲಿ ಆಚರಿಸುತ್ತಾರೆ. ಪ್ರವಾಸಿಗರು ಇಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಸ್ಥಾನವನ್ನು ಕೂಡ ನೋಡಬಹುದು. ಇದು ದೇವಾಲಯದ ದಕ್ಷಿಣ ದಿಕ್ಕಿನಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top