ನಮ್ಮ ತಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಕೂದಲುಗಳಿದ್ದು, ಪ್ರತಿದಿನ 50 ರಿಂದ 100 ಕೂದಲು ಉದುರುತ್ತಿರುತ್ತವೆ. ಆದರೆ ಇದಕ್ಕಿಂತ ಅಧಿಕ ಪ್ರಮಾಣದಲ್ಲಿ ಕೂದಲು ಉದುರುತ್ತಿದ್ದರೆ ತಲೆ ಬೊಕ್ಕವಾಗುವ ಸಂಭವವಿರುತ್ತದೆ ಜೋಪಾನ. ಒತ್ತಡದ ಬದುಕು, ಥೈರಾಯಿಡ್, ಹಳೆ ಕಾಯಿಲೆ, ಅನಿಮೀಯಾ, ವಯಸ್ಸಾಗುವಿಕೆ, ಹಾರ್ಮೋನ್ ಅಸಮತೋಲನ ಇತ್ಯಾದಿಗಳು ಕೂದಲು ಉದುರಲು ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಕೊಂಚ ಕಾಳಜಿ ಮತ್ತು ಆರೈಕೆ ಮನೆಯಲ್ಲೇ ಮಾಡಿಕೊಳ್ಳುವುದರಿಂದ ಉದುರುವ ಕೂದಲಿನ ಸಮಸ್ಯೆಗೆ ಬೈಬೈ ಹೇಳಬಹುದು.
ಎಣ್ಣೆ ಮಸಾಜ್: ತಲೆಗೂದಲಿಗೆ ಹಾನಿಯಾಗಬಾರದು ಎಂದು ಬಯಸುವವರು ತಪ್ಪದೇ ವಾರಕ್ಕೊಮ್ಮೆಯಾದರೂ ತಲೆಗೆ ಎಣ್ಣೆ ಹಚ್ಚಿ ಮಾಲೀಶ್ ಮಾಡಿಕೊಳ್ಳಬೇಕು. ಮಾಲೀಶ್ ಮಾಡುವುದರಿಂದ ಕೂದಲಿನ ಬುಡಕ್ಕೆ ರಕ್ತಸಂಚಾರ ಹೆಚ್ಚಾಗುತ್ತದೆ. ಕೂದಲ ಬುಡವೂ ಗಟ್ಟಿಯಾಗಿ ಕೂದಲು ಬೆಳೆಯಲಾರಂಭಿಸುತ್ತದೆ. ಅದಲ್ಲದೇ ಮಸಾಜ್ ಮಾಡುವುದರಿಂದ ಒತ್ತಡ ಕಡಿಮೆಯಾಗಿ ಆರಾಮವೆನಿಸುತ್ತದೆ.
ಮೆಂತ್ಯ: ಕೂದಲುದುರುವ ಸಮಸ್ಯೆಗೆ ಮೆಂತ್ಯ ಚಿಕಿತ್ಸೆ ರಾಮಬಾಣವೆನ್ನಬಹುದು. ಇದರಲ್ಲಿರುವ ಪ್ರೋಟಿನ್ ಮತ್ತು ನಿಕೋಟಿನಿಕ್ ಅಂಶಗಳು ಕೂದಲ ಬೆಳವಣಿಗೆಗೆ ಸಹಕಾರಿ. ಮೆಂತ್ಯ ಬೀಜ ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ರುಬ್ಬಿ ತಲೆಗೆ ಪ್ಯಾಕ್ ತರಹ ಹಚ್ಚಿ ಒಣಗಿದ ನಂತರ ತಲೆಗೂದಲು ತೊಳೆಯುವುದರಿಂದ ಕೂದಲುದುರುವ ಸಮಸ್ಯೆ ಕಡಿಮೆಯಾಗುತ್ತದೆ. ಅಲ್ಲದೇ ತಲೆಗೂದಲು ಕಡುಕಪ್ಪು ಬಣ್ಣ ಹೊಂದುವುದರ ಜೊತೆಗೆ ಸೊಂಪಾಗಿ ಬೆಳೆಯುತ್ತದೆ.
ಬೆಟ್ಟದ ನೆಲ್ಲಿ: ವಿಟಮಿನ್ ಸಿ ಸಮೃದ್ಧವಾಗಿರುವ ಬೆಟ್ಟದ ನೆಲ್ಲಿ ಕೂದಲುದುರುವ ಸಮಸ್ಯೆಗೆ ಪ್ರಭಾವೀ ಚಿಕಿತ್ಸೆಯಾಗಿದೆ. ನೆಲ್ಲಿ ಹೋಳು ಕುದಿಸಿದ ನೀರಿನಿಂದ ತಲೆತೊಳೆದುಕೊಳ್ಳುವುದು ಅಥವಾ ನೆಲ್ಲಿಹೋಳು ರುಬ್ಬಿ ತಲೆಗೆ ಹಚ್ಚಿಕೊಂಡು ಒಣಗಿದ ನಂತರ ತೊಳೆಯುತ್ತ ಬಂದಲ್ಲಿ ಕೂದಲುದುರುವ ಸಮಸ್ಯೆ ಕಡಿಮೆ ಯಾಗುತ್ತದೆ.ಈರುಳ್ಳಿ: ಅಚ್ಚರಿಯಾದರೂ ಇದು ನಿಜ. ಈರುಳ್ಳಿಯಲ್ಲಿರುವ ಸಲ್ಫರ್ ಅಂಶ ಕೂದಲು ಉದುರುವುದನ್ನು ತಡೆಯುವುದರ ಜೊತೆಗೆ ಕೂದಲ ಪುನರ್ನಿರ್ಮಾಣಕ್ಕೂ ನೆರವಾಗುತ್ತದೆ. ತಲೆಹೊಟ್ಟು, ಸೋಂಕು ಎಲ್ಲ ದೂರಮಾಡುವ ಗುಣ ಈರುಳ್ಳಿಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
