ಸೈನಿಕರು ಮತ್ತು ರೈತರು ನನ್ನ ಎರಡು ಕಣ್ಣುಗಳಿದ್ದಂತೆ ಇವರಿಬ್ಬರೂ ನಮ್ಮ ದೇಶದ ಬೆನ್ನೆಲುಬು. ದೇಶ ಗಟ್ಟಿಯಾಗಿರಬೇಕಾದರೆ ಇವರಿಬ್ಬರೂ ಗಟ್ಟಿಯಾಗಿರಬೇಕೆಂದು ತಿಳಿಸಿ ಜೈ ಜವಾನ್, ಜೈ ಕಿಸಾನ್ ಎಂಬ ಹೇಳಿಕೆ ಕೊಟ್ಟವರು ಭಾರತದ ದ್ವಿತೀಯ ಪ್ರಧಾನಿ, ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ದೇಶ ಕಂಡ ಅತ್ಯದ್ಭುತ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿಜೀ.ಶಾಸ್ತ್ರಿಜೀಯವರು 1904ರ ಅಕ್ಟೋಬರ್ 2ರಂದು ಉತ್ತರ ಪ್ರದೇಶದ ಮೊಗಲ್ ಸರಾಯ್ ಎಂಬಲ್ಲಿ ಜನಿಸಿದರು. ತಂದೆ ಶಾರದಾ ಪ್ರಸಾದ ಶ್ರೀವಾಸ್ತವ, ತಾಯಿ ರಾಮದುಲಾರಿ. ಶಾಸ್ತ್ರಿಜೀ ಬಾಲಕರಿದ್ದಾಗಲೇ ಅವರ ತಂದೆ ತೀರಿಕೊಂಡಿದ್ದರು, ಆಗ ಅವರ ತಾಯಿ ಶಾಸ್ತ್ರಿಯವರೊಡನೆ ಮಿರ್ಜಾಪುರಕ್ಕೆ ಬಂದು ನೆಲೆಸಿದರು.
ಶಾಸ್ತ್ರಿಯವರ ಪ್ರಾಥಮಿಕ ವಿದ್ಯಾಭ್ಯಾಸ ಅಲ್ಲಿಯೇ ನಡೆಯಿತು. ಮುಂದಿನ ವ್ಯಾಸಂಗಕ್ಕೆ ಅವರು ವಾರಣಾಸಿ ಸೇರಿದರು. ತಾಯಿಯ ಆಶೀರ್ವಾದದೊಂದಿಗೆ ಬೆಳೆದು ದೊಡ್ಡವರಾದರು. ಗಾಂಧೀಜಿ ವಾರಣಾಸಿಗೆ ಭೇಟಿ ಕೊಟ್ಟಾಗ ಅಸಹಕಾರ ಚಳುವಳಿ ಕುರಿತಂತೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಗಾಂಧೀಜಿ ಬ್ರಿಟಿಷ್‍ರ ಶಿಕ್ಷಣ ಕ್ರಮವನ್ನು ಬೋಧಿಸುವ ಶಾಲೆಗಳನ್ನು ಬಹಿಷ್ಕರಿಸುವಂತೆ ಕರೆಕೊಟ್ಟಾಗ ಶಾಸ್ತ್ರಿಜೀ ಆ ಸಮಯದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದರೂ ಅದಕ್ಕೆ ಹಾಜರಾಗದೇ ದೂರ ಉಳಿದರು.
ಆ ಸಮಯದಲ್ಲಿ ಪದವಿಯನ್ನು ಗಳಿಸಿಕೊಳ್ಳಲು ಅವರು ಕೇವಲ ಒಂದು ವರ್ಷ ಮಾತ್ರ ಓದಬೇಕಾಗಿತ್ತು.ಮುಂದೆ 1921ರಲ್ಲಿ ಅವರು ಶಾಲೆಯನ್ನು ಕಡೆಗಣಿಸಿ ಬೀದಿಗಿಳಿದಿದ್ದರು, ಬಹಿಷ್ಕøತ ಮೆರವಣಿಗೆಯಲ್ಲಿ ಭಾಗವಹಿಸಿದ ಆರೋಪದ ಮೇಲೆ ಬಂಧಿಸಲಾಯಿತು. ನಂತರ 1926ರಲ್ಲಿ ಕಾಶಿ ವಿದ್ಯಾಪೀಠದಲ್ಲಿ ತತ್ವಶಾಸ್ತ್ರದ ಅಧ್ಯಯನವನ್ನು ಮುಂದುವರೆಸಿ ಶಾಸ್ತ್ರಿ ಪದವಿಯನ್ನು ಪಡೆದರು. 1927ರಲ್ಲಿ ಮಿರ್ಜಾಪುರದ ಲಲಿತಾದೇವಿ ಅವರನ್ನು ವಿವಾಹವಾದರು. ನಂತರ 1930ರ ಹೊತ್ತಿಗೆ ದೇಶದಲ್ಲಿ ಉಪ್ಪಿನ ಸತ್ಯಾಗ್ರಹದ ಕಾವು ತೀವ್ರವಾಗಿತ್ತು.
ಈ ಸತ್ಯಾಗ್ರಹದ ಮುಖ್ಯ ಪಾತ್ರ ವಹಿಸಿದ್ದ ಶಾಸ್ತ್ರೀಜಿ, ರೈತರಿಗೆ ಭೂಕಂದಾಯವನ್ನು ಕೊಡದಿರುವಂತೆ ಮತ್ತು ಬ್ರಿಟಿಷ್ ಸರ್ಕಾರಕ್ಕೆ ತೆರಿಗೆಯನ್ನು ಕೊಡದಿರುವಂತೆ ಜನರಿಗೆ ಕರೆ ಕೊಡುತ್ತಿದ್ದರು. ಇದರಿಂದ ಹತಾಶರಾದ ಸರ್ಕಾರ ಅವರನ್ನು ಎರಡೂವರೆ ವರ್ಷಗಳ ಕಾಲ ಸೆರೆಮನೆಯಲ್ಲಿರಿಸಿತ್ತು. ಒಟ್ಟಾರೆಯಾಗಿ ಅವರನ್ನು ಏಳು ಬಾರಿ ಮತ್ತು ಒಂಭತ್ತು ವರ್ಷಗಳವರೆಗೆ ಬೇರೆ ಬೇರೆ ಸೆರೆಮನೆಗೆ ದೂಡಗಾಗಿತ್ತು. ಸೆರೆಮನೆಯಲ್ಲಿಯೂ ಕೂಡ ಕಾಲವನ್ನು ವ್ಯರ್ಥ ಮಾಡದೇ ಅನೇಕ ಪಾಶ್ಚಿಮಾತ್ಯ ತತ್ವಜ್ಞಾನಿಗಳು, ಕ್ರಾಂತಿಕಾರಿಗಳು ಮತ್ತು ಸಮಾಜ ಸುಧಾರಕರ ವಿಚಾರಗಳನ್ನು ಅಧ್ಯಯನ ಮಾಡಿದ್ದರು. ರೇಡಿಯಮ್ ಕಂಡುಹಿಡಿದ ಫ್ರೆಂಚ್ ವಿಜ್ಞಾನಿ ಮೇಡಂ ಕ್ಯೂರಿ ಅವರ ಆತ್ಮ ಚರಿತ್ರೆಯನ್ನು ಹಿಂದಿಗೆ ಅನುವಾದಿಸಿದ್ದಾರೆ.
ಭಾರತದಲ್ಲಿ ಗೌವರ್ನಮೆಂಟ್ ಆಕ್ಟ ಪ್ರಕಾರ ಪ್ರಾಂತೀಯ ವಿಧಾನಸಭಾ ಚುನಾವಣೆಗಳು ನಡೆದಾಗ 1937ರಲ್ಲಿ ಶಾಸ್ತ್ರಿಜೀ ಉತ್ತರ ಪ್ರದೇಶದ ವಿಧಾನಸಭೆಗೆ ಆಯ್ಕೆಯಾದರು. ನಂತರ 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಅವರನ್ನು ಮುಂದೆ ನಾಲ್ಕು ವರ್ಷಗಳವರೆಗೆ ಸೆರೆಮನೆಗೆ ಹಾಕಲಾಯಿತು. ಭಾರತ 1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಶಾಸ್ತ್ರಿಜೀ ಉತ್ತರ ಪ್ರದೇಶದ ಸಾರಿಗೆ ಮತ್ತು ಗೃಹ ಸಚಿವರಾದರು. ಮುಂದೆ 1952ರಲ್ಲಿ ಪ್ರಥಮ ಚುನಾವಣೆಗಳು ನಡೆದಾಗ ಶಾಸ್ತ್ರಿಜೀಯವರು ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ಕೇಂದ್ರ ರೈಲ್ವೆ ಸಚಿವರಾದರು, ಬಡವರಿಗೆ ಕೈಗೆಟುಕುವ ದರದಲ್ಲಿ ರೈಲು ಪ್ರಯಾಣ ದೊರಕುವಂತೆ ಮಾಡಿದ್ದಲ್ಲದೇ, ದಕ್ಷಿಣ ಭಾರತದಲ್ಲಿ ರೈಲು ಅಪಘಾತ ನಡೆದಾಗ ಅದರ ನೈತಿಕ ಹೊಣೆ ಹೊತ್ತುರಾಜೀನಾಮೆ ನೀಡಿ ಇಲಾಖೆಯ ಜವಾಬ್ದಾರಿ ಮತ್ತು ಪ್ರಾಮಾಣಿಕತೆಯನ್ನು ಹೆಚ್ಚಿಸಿದರು. 1964 ಮೇ. 27ರಂದು ನೆಹರೂರವರು ತೀರಿಕೊಂಡಾಗ ಭಾರತದ ಪ್ರಧಾನಿಯಾಗಿ ಶಾಸ್ತ್ರಿಜೀಯವರು ಆಯ್ಕೆಗೊಂಡರು. ಆಗ ದೇಶದಲ್ಲಿ ತೀವ್ರವಾದ ಆಹಾರದ ಅಭಾವವಿತ್ತು.
ತಿನ್ನಲು ಆಹಾರವಿಲ್ಲದೇ ಜನರು ಕಷ್ಟ ಪಡುತ್ತಿದ್ದರು. ಹೀಗಾಗಿ ಬೇರೆ ದೇಶಗಳಿಂದ ಆಹಾರವನ್ನು ಆಮದು ಮಾಡಿಕೊಳ್ಳಲಾಯಿತು. ಪರಿಣಾಮವಾಗಿ ದೇಶದ ಸಾಲಭಾರ ಹೆಚ್ಚಾಯಿತು, ಇದಕ್ಕಾಗಿ ಶಾಸ್ತ್ರಿಜೀಯವರು ಒಂದು ಯೋಜನೆ ಮಾಡಿದರು-ವಾರದಲ್ಲಿ ಒಂದು ದಿನ ಊಟ ಬಿಟ್ಟರೆ ಒಂದಷ್ಟು ಆಹಾರ ಸಂಗ್ರಹವಾಗುತ್ತದೆ ಎಂದು ಲೆಕ್ಕಾ ಹಾಕಿ ಸೋಮವಾರ ರಾತ್ರಿ ಊಟ ಬಿಡಲು ಪ್ರಾರಂಭಿಸಿದರು. ಮನೆಯ ಸದಸ್ಯರಿಗೂ ಒಂದು ಹೊತ್ತು ಊಟ ಬಿಡಲು ಉತ್ತೇಜಿಸಿದರು. ಜೊತೆಗೆ ಸಾರ್ವಜನಿಕರು ಒಂದು ಹೊತ್ತು ಊಟ ಬಿಡುವಂತೆ ವಿನಂತಿಸಿಕೊಂಡರು.
ಇದಕ್ಕೆ ಇಡೀ ದೇಶದ ಜನತೆ ಅಭೂತ ಪೂರ್ವವಾಗಿ ಸ್ಪಂದಿಸಿದರು. ಅಷ್ಟೇ ಅಲ್ಲ ಸೋಮವಾರ ಸಂಜೆಯಾಗುತ್ತಿದ್ದಂತೆ ಕೆಲ ಹೋಟೆಲ್‍ಗಳು ಮುಚ್ಚುತ್ತಿದ್ದವಂತೆ. ಇವರು ಪ್ರಧಾನಿಯಾಗಿದ್ದಾಗ ಕೃಷಿ ಕ್ಷೇತ್ರವನ್ನು ಬಲಪಡಿಸಲು ಪ್ರಯತ್ನಿಸಿದರು. ಅನೇಕ ನೀರಾವರಿ ಯೋಜನೆಗಳು, ಜಲ ವಿದ್ಯುತ್ ಯೋಜನೆಗಳು, ರೈತರಿಗೆ ಸೂಕ್ತ ಬೆಂಬಲ ಬೆಲೆ ಒದಗಿಸಿದರು. 1965ರ ಮಾರ್ಚನಲ್ಲಿ ಪಾಕಿಸ್ತಾನ ಕಾಶ್ಮೀರದ ಗಡಿ ಭಾಗ ಪೂಂಚ್ ಎಂಬಲ್ಲಿ ತನ್ನ ಸೈನ್ಯವನ್ನು ನುಗ್ಗಿಸಿದಾಗ ಶಾಸ್ತ್ರಿಜೀ ಯಾವುದಕ್ಕೂ ಅಂಜದೇ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿ ಗೆಲುವನ್ನು ಸಾಧಿಸಿದರು.
ಆದರೆ ನಂತರದ ಬೆಳವಣಿಗೆಯಲ್ಲಿ ರಷ್ಯಾದ ಅಧ್ಯಕ್ಷ ಕೊಸಗಿನ್ ಎರಡೂ ರಾಷ್ಟ್ರಗಳನ್ನು 1966ರ ಜನೇವರಿ 3ರಂದು ರಷ್ಯಾದ ತಾಷ್ಕೆಂಟ್ನಲ್ಲಿ ಮಾತುಕತೆಗೆ ಆಹ್ವಾನಿಸಿದರು, ಯುದ್ಧ ನಿಲ್ಲಿಸಲು ಎರಡೂ ದೇಶಗಳು ಒಪ್ಪಿ ಪರಸ್ಪರ ಸಹಿ ಹಾಕಲಾಯಿತು ನಂತರ ದುರದೃಷ್ಟವಶಾತ್ 1966ರ ಜನವರಿ 11ರಂದು ಶಾಸ್ತ್ರಿಜೀಯವರು ಹೃದಯಾಘಾತದಿಂದ ತಾಷ್ಕೆಂಟ್ನಲ್ಲಿಯೇ ನಿಧನರಾದರು. ಇಂತಹ ಒಬ್ಬ ಮಹಾನ್ ಚೇತನವನ್ನು ನಮ್ಮ ದೇಶ ಕಳೆದುಕೊಂಡು ಬಡವಾಯಿತು ಎಂದರೆ ತಪ್ಪಾಗಲಾರದು. ಭಾರತ ಸರ್ಕಾರವು 1966ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಆದರೆ ಸ್ವಾತಂತ್ರ್ಯದ ನಂತರವೂ ಕೂಡ ರೈತರ ಪರಿಸ್ಥಿತಿ ಮಾತ್ರ ಬದಲಾಗಲಿಲ್ಲ, ಇಂದಿಗೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ತೀವ್ರ ಶೋಚನೀಯವಾಗಿದೆ.
ಬೆಳೆ ಇದ್ದರೆ ಬೆಲೆ ಇಲ್ಲ. ಬೆಲೆ ಇದ್ದರೆ ಬೆಳೆ ಇಲ್ಲ. ಹಾಗಾಗಿ ಸಾಲದ ಗುಳಿಯಲ್ಲಿ ಸಿಲುಕಿ ಸಾಲಗಾರರ ಕಿರುಕುಳದಿಂದ ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುವುದು ತೀವ್ರ ಖೇದಕರ ಸಂಗತಿಯಾಗಿದೆ. ಆದ್ದರಿಂದ ಸರಕಾರಗಳು ರೈತರ ಆತ್ಮಹತ್ಯೆ ತಡೆಗೆ ರೈತನ ಬೆಳೆಗೆ ವೈಜ್ಞಾನಿಕ ಬೆಲೆ ಘೋಷಣೆ ಮಾಡಬೇಕು. ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಸಬ್ಸಿಡಿ ನೀಡುವುದು. ಅಂತರ್ಜಲ ಮಟ್ಟ ಸುಧಾರಣೆ ಮತ್ತು ದೇಶಾದ್ಯಂತ ಸಮರೋಪಾದಿಯಲ್ಲಿ ಒತ್ತುವರಿ ಮಾಡಿರುವ ಕೆರೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವ ಮೂಲಕ ಕೆರೆಗಳನ್ನು ಸಂರಕ್ಷಿಸುವುದು. ನೀರಿನ ಮಿತವ್ಯಯಕ್ಕಾಗಿ ಹನಿ ನೀರಾವರಿ ಮತ್ತು ಸಾವಯವ ಕೃಷಿ ಪದ್ಧತಿ ಅಳವಡಿಸಲು ಕ್ರಮ ಕೈಗೊಳ್ಳುವುದು. ಕೃಷಿ ಪದವೀಧರರು ಉದ್ಯೋಗ ಹುಡುಕಿ ಹೋಗುವುದನ್ನು ಬಿಟ್ಟು ಹೊಲ ಗದ್ದೆಗಳಲ್ಲಿ ಕೃಷಿ ಚಟುವಟಿ-ಕೆಯಲ್ಲಿ ತೊಡಗುವುದರಿಂದ ಮಾತ್ರ ಕೃಷಿಯಲ್ಲಿ ಕ್ರಾಂತಿ ಮಾಡಬಹುದಾಗಿದೆ. ಕೃಷಿ ಕುರಿತು ತಿಳುವಳಿಕೆಯ ಕೊರತೆಯೇ ಯುವ ಜನಾಂಗ ಉದ್ಯೋಗ ಹುಡುಕಿ ನಗರಗಳತ್ತ ವಲಸೆ ಬರುತ್ತಿದ್ದು, ಯುವಜನಾಂಗದಲ್ಲಿ ಕೃಷಿ ಬಗ್ಗೆ ಆಸಕ್ತಿಯೇ ಇಲ್ಲ. ಅತೀ ವೃಷ್ಟಿ ಮತ್ತು ಅನಾವೃಷ್ಟಿಯಿಂದಲೂ ಕೃಷಿ ಕ್ಷೇತ್ರ ನಲುಗಿ ಹೋಗಿದ್ದು, ರಾಷ್ಟ್ರೀಯ ನದಿ ಜೋಡಣಾ ಯೋಜನೆಯನ್ನು ತಕ್ಷಣ ಜಾರಿಗೊಳಿಸಲು ಕ್ರಮ ಕೈಗೊಳ್ಳುವುದು. ಈ ಎಲ್ಲ ಅಂಶಗಳನ್ನು ಕೃಷಿಯಲ್ಲಿ ಅಳವಡಿಸಿದಾಗ ಮಾತ್ರ ರೈತ ಸಂತೋಷದಿಂದ ಬದುಕು ನಡೆಸಬಲ್ಲ, ಆಗ ಮಾತ್ರ ಲಾಲ್ ಬಹದ್ದೂರ್ ಶಾಸ್ತ್ರಿಜೀಯವರ ಜೈ ಕಿಸಾನ್ ಪದಕ್ಕೆ ಅರ್ಥ ಬಂದಂತಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
