fbpx
ಸಮಾಚಾರ

ಮಾತೆ ಮಹಾದೇವಿಯವರಿಗೆ ಸಾಕಷ್ಟು ಅಧ್ಯಯನ ಮತ್ತು ಸದ್ಭಾವನೆ ಕೊರತೆ ಇದೆ ಇವರ ವಿರುದ್ಧ ಹೋರಾಟ ಮಾಡ್ತೇವೆ – ವಿರೂಪಾಕ್ಷ ಸ್ವಾಮಿಜಿಯಿಂದ ಎಚ್ಚರಿಕೆ..!

ಸಾಕಷ್ಟು ಅಧ್ಯಯನ ಮತ್ತು ಸದ್ಭಾವನೆ ಕೊರತೆ ಇರುವ ವಿವಾದಿತ ಸ್ವಯಂಘೋಷಿತ ಜಗದ್ಗುರು ಮಾತೆ ಮಹಾದೇವಿಯು ತನ್ನ ಅಲ್ಪ ಬುದ್ಧಿಗೆ ತಿಳಿದಷ್ಟು ಹೇಳಿಕೆ ಕೊಟ್ಟು ಲಿಂ.ಹಾನಗಲ್ ಕುಮಾರ ಶಿವಯೋಗಿಗಳವರ ವ್ಯಕ್ತಿತ್ವಕ್ಕೆ ಕುಂದು ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯ ಶ್ರೀ ಮೂರು ಸಾವಿರ ವಿರಕ್ತಮಠದ ಪೂಜ್ಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆಯ ಮೂಲಕ ಮಾತೆ ಮಹಾದೇವಿಯವರಿಗೆ ತಿರುಗೇಟು ನೀಡಿರುವ ಅವರು, ಲಿಂ.ಹಾನಗಲ್ ಶ್ರೀಗಳು ವೀರಶೈವರೇ ಇಲ್ಲದ ಸಮಾಜದಲ್ಲಿ ವೀರಶೈವ ಮಹಾಸಭೆ ಸ್ಥಾಪನೆ ಮಾಡಿದರು, ಲಿಂಗಾಯತರಿಗೆ ನಾವು ವೀರಶೈವರೆಂಬ ಭ್ರಾಂತಿ ಹುಟ್ಟಿಸಿದರು ಮತ್ತು ಶಿವಯೋಗ ಮಂದಿರದಲ್ಲಿ ಕೇವಲ ಜಂಗಮ ವಟುಗಳನ್ನು ಹೊರತುಪಡಿಸಿ ಬೇರೆಯವರಿಗೆ ಅಧ್ಯಯನ ಮಾಡಿಸಲಿಲ್ಲ ಎಂಬ ವಿವಾದಾತ್ಮಕ, ಅರ್ಥಹೀನ ಹೇಳಿಕೆಗಳನ್ನು ನೋಡಿದರೆ ಇವರ ವಯಸ್ಸು ಬಹಳಾಗಿದ್ದರೂ ಬುದ್ಧಿ ಮತ್ತು ಮನಸ್ಸು ಇನ್ನೂ ಬಹಳ ಬಾಲೀಶವಾಗಿದೆ ಎಂದೆನಿಸುವದು.

 


ವೀರಶೈವ ಎಂಬ ಧರ್ಮವಾಚಕ ಪದವು ಲಿಂ.ಹಾನಗಲ್ ಶ್ರೀಗಳವರಿಂದ ಪ್ರಚಲಿತವಾಗಿಲ್ಲ ಅದು ಬಸವ ಯುಗದ ಪೂರ್ವದಿಂದಲೇ ಇತ್ತು ಎಂಬುದಕ್ಕೆ ಅನೇಕ ಸಾಕ್ಷಾಧಾರಗಳಿವೆ. ವೀರಶೈವ ಲಿಂಗಾಯತ ಪದಗಳೆರಡೂ ಸಮಾನಾರ್ಥಕ ಪದಗಳೆಂಬುದಕ್ಕೆ ಅನೇಕ ಶಿವ ಶರಣರ ವಚನಗಳೇ ನಿದರ್ಶನವಾಗಿವೆ. ಸುಮಾರು 30 ಜನ ಶರಣರು ವೀರಶೈವ ಎಂಬ ಪದವನ್ನು ತಮ್ಮ 140 ವಚನಗಳಲ್ಲಿ 221 ಕಡೆ ಬಳಸಿದ್ದನ್ನು ಕಾಣಬಹುದಾಗಿದೆ. 8 ಜನ ಶರಣರು ಲಿಂಗಾಯತ ಎಂಬ ಪದವನ್ನು 10 ವಚನಗಳಲ್ಲಿ 12 ಸಲ ಬಳಸಿದ್ದಾರೆ. ಬಸವ ನಂತರದಲ್ಲಿ ಬಂದ ಭೀಮ ಕವಿ, ಚಾಮರಸ, ಮೊಗ್ಗೆಯ ಮಾಯಿದೇವ, ಎಡೆಯೂರು ಸಿದ್ಧಲಿಂಗೇಶ್ವರರಂಥ ಅನೇಕ ಮಹಾನುಭಾವರು ವೀರಶೈವ ಎಂಬ ಪದ ಅನೇಕ ರೀತಿಯಲ್ಲಿ ಬಳಸಿದ್ದನ್ನು ಕಾಣಬಹುದು.

ಹೀಗಾಗಿ ಇದು ಲಿಂ.ಹಾನಗಲ್ ಶ್ರೀಗಳಿಂದಲೇ ಬಂತು ಅವರೇ ಲಿಂಗಾಯತರಿಗೆ ನಾವು ವೀರಶೈವರೆಂಬ ಭ್ರಾಂತಿ ಹಿಡಿಸಿದರು ಎಂಬ ಅವಿವೇಕತನದ ಮಾತುಗಳಾಡಿದರೇ ಓಳಿತಲ್ಲ. ವೀರಶೈವರೇ ಬೇರೆ ಲಿಂಗಾಯತರೇ ಬೇರೆ ಎಂದು ಜನರಿಗೆ ತಪ್ಪು ತಿಳುವಳಿಕೆ ಕೊಟ್ಟು ಧರ್ಮ ಒಡೆದಾಳುವ ಇಂಥವರಿಗೆ ಸಮಾಜ ಕ್ಷಮಿಸಬಾರದು.

 


ಶಿವಯೋಗ ಮಂದಿರದಲ್ಲಿ ಕೇವಲ ಜಂಗಮ ವಟುಗಳಿಗೆ ಮಾತ್ರ ಅಧ್ಯಯನಕ್ಕೆ ಪ್ರವೇಶವಿದೆ ಎಂಬ ತಪ್ಪು ಕಲ್ಪನೆಗೆ ಅವರೊಮ್ಮೆ ಶಿವಯೋಗ ಮಂದಿರಕ್ಕೆ ಭೇಟಿಕೊಟ್ಟು ಸರಿಯಾದ ತಿಳುವಳಿಕೆ ಪಡೆದುಕೊಳ್ಳಬೇಕು. ಲಿಂ.ಹಾನಗಲ್ ಶ್ರೀ ಕುಮಾರ ಮಹಾ ಶಿವಯೋಗಿಗಳು ಯಾವ ಜಂಗಮ ಮನೆತನಕ್ಕೆ ಹೋಗಿ ವಟುಗಳ ಕರೆತಂದು ಅಧ್ಯಯನ ಮಾಡಿಸಿದವರಲ್ಲ. ಶಿವಯೋಗ ವಿದ್ಯೆಯನ್ನು ಬಯಸಿ ಜಂಗಮ, ಜಂಗಮೇತರ ವಟುಗಳು ಬಂದಾಗ ಅವರೆಲ್ಲರಿಗೂ ತ್ರಿವಿಧ ದಾಸೋಹ ಮಾಡಿಸಿದವರು.

ಮಂದಿರದ ಮೂಲ ಸಪ್ತ ಸಾಧಕರಲ್ಲಿ ಭಾಲ್ಕಿಯ ಲಿಂ.ಬಸವಲಿಂಗ ಪಟ್ಟದ ದೇವರೂ ಭಕ್ತ ವರ್ಗದವರೆ. ನವಲಗುಂದ ಗವಿಮಠದ ಲಿಂ.ಬಸವಲಿಂಗ ಮಹಾಸ್ವಾಮಿಗಳು, ಚಿಂಚನಿ ವಿರಕ್ತಮಠದ ಲಿಂ.ಪೂಜ್ಯರು, ಪಂಚಮಸಾಲಿ ಪೀಠದ ಮನಗೂಳಿಯ ಲಿಂ.ಜಗದ್ಗುರುಗಳು, ಇಂದಿನ ಪಂಚಮಸಾಲಿ ಪೀಠದ ಶ್ರೀ ಸಿದ್ಧಲಿಂಗ ಜಗದ್ಗುರುಗಳು, ರಾವೂರು ಪೂಜ್ಯರು, ಬೆಂಡವಾಡ ಪೂಜ್ಯರು, ಬೈಲಹೊಂಗಲ ಮಡಿವಾಳೇಶ್ವರ ಮಠದ ಪೂಜ್ಯರು ಹಾಗೂ ಬಬಲೇಶ್ವರ ಶ್ರೀ ಮಠದ ಇಂದಿನ ಉತ್ತರಾಧಿಕಾರಿಗಳು ಸೇರಿದಂತೆ ಇನ್ನೂ ಅನೇಕ ಪೂಜ್ಯರು ಭಕ್ತ ವರ್ಗದಿಂದ ಬಂದು ಶಿವಯೋಗ ಮಂದಿರದಲ್ಲಿ ಅಧ್ಯಯನ ಮಾಡಿದ ಪೂಜ್ಯರಾಗಿದ್ದಾರೆ. ಹೀಗಾಗಿ ಅರ್ಥವಿಲ್ಲದ ಅಸಂಬದ್ಧ ಹೇಳಿಕೆ ಕೊಡುವ ಮೊದಲು ಶಿವಯೋಗ ಮಂದಿರದ ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡಬೇಕು.

ಮಹಾಸಭೆಗೆ ಮತ್ತು ಶಿವಯೋಗ ಮಂದಿರಕ್ಕೆ ವೀರಶೈವ ಎಂಬ ಧರ್ಮವಾಚಕ ಪದ ಪ್ರಯೋಗ ಮಾಡಿರುವದು ಯಾವ ದುರುದ್ದೇಶದಿಂದಲ್ಲ ಬದಲಾಗಿ ಸಮಗ್ರ ವೀರಶೈವ ಲಿಂಗಾಯತರನ್ನು ಒಂದು ಮಾಡಲು ಎಂಬುವದನ್ನು ತಿಳಿಯಬೇಕು. ಅಂದಿನ ಸಮಾಜದ ಪ್ರಮುಖ ಮಠಾಧೀಶರ ಮತ್ತು ಸಮಾಜದ ಗಣ್ಯರೊಂದಿಗೆ ಅರ್ಥಪೂರ್ಣ ಚರ್ಚೆ ಮಾಡಿಯೇ ಈ ಉಭಯ ಸಂಸ್ಥೆಗಳಿಗೆ ವೀರಶೈವ ಎಂದು ನಾಮಕರಣ ಮಾಡಿದ್ದಾರೆಂದು ತಿಳಿಯಬೇಕು. ಅವಿರತವಾಗಿ ಸಮಾಜ ಸೇವೆ ಮಾಡಿದ ಈ ಮಹಾಪುರುಷರ ಬಗ್ಗೆ ಈ ರೀತಿ ಅವಹೇಳನಕಾರಿಯಾಗಿ ಮತ್ತೆ ಮತ್ತೆ ಮಾತನಾಡಿದರೆ ನಾಡಿನ ಎಲ್ಲ ವೀರಶೈವ ಲಿಂಗಾಯತ ಮಠಾಧೀಶರು ತಮ್ಮ ತಮ್ಮ ಭಕ್ತರೊಂದಿಗೆ ಕೂಡಲ ಸಂಗಮದಲ್ಲಿಯೇ ಉಗ್ರ ಹೋರಾಟ ಮಾಡಬೇಕಾದೀತು ಎಚ್ಚರ ಎಂದು ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top