fbpx
ಕರ್ನಾಟಕ

ಗಣಿಧೂಳಿನಿಂದ ಮುಚ್ಚಿದ್ದ ದಟ್ಟಕಾಡು ಕಣ್ಮನ ಸೆಳೆಯುತ್ತಿದೆ.! ಸಂಡೂರಿನ ಸೊಬಗು ನೋಡಿದ್ರೆ ಮೈ ಮನಸ್ಸು ಪುಳಕಿತವಾಗುತ್ತೆ.! ಎತ್ತ ಕಣ್ಣು ಹಾಯಿಸಿದ್ರು ಹಸಿರು.. ಹಸಿರು.. ಹಸಿರು…

ಗಣಿಧೂಳಿನಿಂದ ಮುಚ್ಚಿದ್ದ ದಟ್ಟಕಾಡು ಕಣ್ಮನ ಸೆಳೆಯುತ್ತಿದೆ.!

ಸಂಡೂರಿನ ಸೊಬಗು ನೋಡಿದ್ರೆ ಮೈ ಮನಸ್ಸು ಪುಳಕಿತವಾಗುತ್ತೆ.! ಎತ್ತ ಕಣ್ಣು ಹಾಯಿಸಿದ್ರು ಹಸಿರು.. ಹಸಿರು.. ಹಸಿರು

ಸಂಡೂರು ಗಣಿಗಾರಿಕೆಗಿಂತ ಮುಂಚೆಯೇ ಪ್ರಾಕೃತಿಕ ಹಿನ್ನೆಲೆಯಿಂದ ಹೆಸರುವಾಸಿ. ಉತ್ತರ ಕರ್ನಾಟಕದ ಕಾಶ್ಮೀರ ಎಂದೇ ಜನಜನಿತ.

ಕಣ್ಣು ಹಾದಷ್ಟೂ ಅಗಲಕ್ಕೆ ಹಚ್ಚ ಹಸಿರು, ಆಗಾಗ್ಗೆ ಬೆಟ್ಟಗುಡ್ಡಗಳನ್ನು ಸೋಕುವ ಮೋಡಗಳ ದಿಬ್ಬಣ, ಮುಂಜಾನೆ ಮಂಜಿನ ಮೇಲಾಟ, ಪಕ್ಷಿಗಳ ಕಲರವ, ಅಗಣಿತ ನಾಟ್ಯ ಮಯೂರಗಳ ದರ್ಶನ, ಕಾನನ ಕುಸುಮಗಳ ಮನಸೋಲುವ ಸೌಂದರ್ಯ, ಪರಿಮಳ.

ಕಳೆದ ಒಂದೆರಡು ಮಳೆಗಾಲದಿಂದ ಇಲ್ಲಿನ ಕಾಡಿಗೆ ಜೀವಕಳೆ ಬಂದಿದೆ. ಪ್ರತಿ ಮಳೆಗಾಲ ಆರಂಭದೊಂದಿಗೆ ಸಂಡೂರು ಸುತ್ತ ಮುತ್ತ ಪಶ್ಚಿಮ ಘಟ್ಟಗಳ ಹವಾಗುಣ ಪ್ರತ್ಯಕ್ಷವಾಗಿ ಹೊಸ ಮನ್ವಂತರ ಅಡಿ ಇಡುತ್ತದೆ. ತಂಗಾಳಿ, ತುಂತುರು ಮಳೆ, ಸೂರ್ಯನ ನೆರಳು-ಬೆಳಕಿನ ಆಟ ಮನಸ್ಸಿಗೆ ಹಿತ ಅನ್ನಿಸುತ್ತದೆ. ಕಾಣಿಯಾಗುತ್ತಿದ್ದ ಕಾದಿಟ್ಟ ಅರಣ್ಯ ಚೇತರಿಸಿಕೊಳ್ಳುತ್ತಿದೆ.

ಇದು ಮಲೆನಾಡಿನ ವರ್ಣನೆ ಅಂದುಕೊಂಡಿರಾ ಇದು ಬಯಲು ಸೀಮೆಯ ಮಲೆನಾಡು. ಬಳ್ಳಾರಿ ಜಿಲ್ಲೆಯ ಸಂಡೂರು ಈ ದಿನಗಳಲ್ಲಿ ಅಕ್ಷರಶಃ ಮಲೆನಾಡು! ದಶಕಗಳ ಅವ್ಯಾಹತ ಗಣಿಗಾರಿಕೆಯಿಂದ ಗಬ್ಬೆದ್ದು ಹೋಗಿದ್ದ ಸಂಡೂರು ಈಗ ನಾಲ್ಕು ಮಳೆ ಬಿದ್ದು ರಮ್ಯ ತಾಣ! ಕೆಂಧೂಳುಮಯವಾಗಿದ್ದ ಪರಿಸರವೀಗ ಕಣ್ಣು ಕೋರೈಸುವ ಹಸಿರಿನ ಆಹ್ಲಾದಕ ಕೂಲ್ ಕೂಲ್ ತಾಣ! ಸಂಡೂರು ಸಹವಾಸವೇ ಸಾಕೆನ್ನುತ್ತಿದ್ದವರೀಗ ಈ ಹಸಿರ ಸೊಬಗಿನ ಸಿರಿ ಸವಿಯಲು ಭೇಟಿ ನೀಡಬಹುದು.

ಗಾಂಧೀಜಿ 1936ರಲ್ಲಿ ಭೇಟಿ

ಸಂಡೂರಿನ ರಾಮಘಡ ಪ್ರದೇಶ ಬ್ರಿಟಿಷರ ಮನಸೊರೆಗೊಂಡ ತಾಣ. ಇಂತಿಪ್ಪ ಶ್ರೀಗಂಧದ ನಾಡು ಸಂಡೂರಿಗೆ ರಾಷ್ಟಪೀತ ಗಾಂಧೀಜಿ 1936ರಲ್ಲಿ ಭೇಟಿ ನೀಡಿದಾಗ ಇಲ್ಲಿನ ಪರಿಸರದಿಂದ  ಪುಳಕಗೊಂಡು ‘See Sandur in September’ ಮತ್ತು ‘Oasis in Desert’ ಎಂದು ಹೊಗಳಿದ್ದರು. ಆ ರೀತಿಯಲ್ಲಿ ಅಲ್ಲಿನ ಹಸಿರು ವನಸಿರಿ ಗಾಂಧೀಜಿಯ ಕಣ್ಮನ ಸೆಳೆದಿತ್ತು. ಅದು ಹಳೇ ನೆನಪು.

ಸಂಡೂರಿನ ಪ್ರಮುಖ ಆಕರ್ಷಣೀಯ ಕೇಂದ್ರ :

ಘೋರ್ಪಡೆ ಅರಮನೆ ಸಂಡೂರಿನ ಪ್ರಮುಖ ಆಕರ್ಷಣೀಯ ಕೇಂದ್ರ. ಶಿವಪುರ ಪ್ಯಾಲೇಸ್‌ನಲ್ಲಿ ಘೋರ್ಪಡೆ ಸೆರೆಹಿಡಿದ ನವ್ಯ ಜೀವಿಗಳ ಅದ್ಭುತ ಫೋಟೋಗಳಿವೆ. ಟಿ. ಕಾಳೆಯವರ ಕುಂಚದಲ್ಲಿ ಅರಳಿದ ಪೇಂಟಿಗಳಿವೆ. ಲೋಹಾದ್ರಿ ಗಿರಿ ವನಸಿರಿಯಲ್ಲಿ ಕುಮಾರಸ್ವಾಮಿ ದೇಗುಲ, ವಿಭೂತಿ ಗುಡ್ಡ, ಹರಿಶಂಕರ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ,

ಮಾನಸ ಸರೋವರ’ ಚಿತ್ರೀಕರಣ ನಡೆದ ಸ್ಥಳ:

ಭುಜಂಗನಗರ ಕ್ರಾಸ್ ಬಳಿಯ ಭೀಮತೀರ್ಥ, ಪುಟ್ಟಣ್ಣ ಕಣಗಾಲ್‌ಗೆ ಸ್ಪೂರ್ತಿಯಾಗಿ ‘ಮಾನಸ ಸರೋವರ’ ಚಿತ್ರೀಕರಣ ನಡೆದ ನಾರಿಹಳ್ಳ ಜಲಾಶಯ, ತಾರಾನಗರದ ಭೈರವತೀರ್ಥ, ರಾಮಘಡ ಏರಿಯಾ, ಜಿಂದಾಲ್ ಉಕ್ಕು ಕಾರ್ಖಾನೆ, ಎನ್‌ಎಂಡಿಸಿ, ಧನ್ವಂತರಿ ವನ ಪ್ರಮುಖ ಪ್ರೇಕ್ಷಣಿಯ ಸ್ಥಳಗಳು. ಧರ್ಮಾಪುರ ಹತ್ತಿರದ ಗಂಡಿ ಲಕ್ಷ್ಮೀನರಸಿಂಹ ದೇವಸ್ಥಾನ ಹಾಗೂ ಅಲ್ಲಿಯೇ ಎರಡು ಬೆಟ್ಟಗಳ ನಡುವೆ ನಾರಿಹಳ್ಳ ಸೀಳಿಕೊಂಡು ಹೋಗುತ್ತಿರುವ ದೃಶ್ಯ ನಯನಮನೋಹರ.

ಇತರೆ ಸ್ಥಳಗಳು:

ಗುಂಡಾ ಅರಣ್ಯ, ತಾಯಮ್ಮನಹೊಳ್ಳ ಮೀಸಲು ಅರಣ್ಯ, ತಾರಾನಗರ ಹಿನ್ನೀರು ಅರಣ್ಯ, ಕುಮಾರಸ್ವಾಮಿ ಗುಡಿ, ಗಂಡಿ ಮಾರೆಮ್ಮ ದೇವಸ್ಥಾನದಿಂದ ರಾಮಘಡ, ಯಶವಂತನಗರ ಗೆಸ್ಟ್ಹೌಸ್, ದೋಣಿಮಲೈ ಸುತ್ತಮುತ್ತ ಬೆತ್ತಲಾಗುತ್ತಿದ್ದ ಅರಣ್ಯ ಪ್ರದೇಶ ಈಗ ಪುನರ್ಜನ್ಮ ಪಡೆದುಕೊಳ್ಳುತ್ತಿವೆ. ಈ ಭಾಗದ ಜೀವಾಳವಾದ ನಾರಿಹಳ್ಳ ಮೈತುಂಬಿಕೊಳ್ಳುತ್ತಿದೆ. ಗಣಿಗಾರಿಕೆಯ ಬ್ಸಾಸ್ಟಿಂಗ್ ಸದ್ದು, ಲಾರಿಗಳ ಆರ್ಭಟಕ್ಕೆ ಜಾಲ ಖಾಲಿ ಮಾಡಿದ್ದ ವನ್ಯ ಜೀವಿಗಳು ಮರಳುತ್ತಿವೆ. ಹೊಲಗಳಲ್ಲಿ ಮೈನಿಂಗ್ ಮಿಷನ್ಗಳು ಮಾಯವಾಗಿ ಕೃಷಿ ಪರಿಕರಣಗಳು ಕಾಣತೊಡಗಿವೆ. ಗಣಿಗಾರಿಕೆಗೆ ತುತ್ತಾದ ಊರುಗಳಲ್ಲಿ ಈಗ ಹಬ್ಬದ ವಾತಾವರಣ, ಕೆಂಧೂಳಿಗೆ ಹೆದರಿ, ಇಷ್ಟಪಟ್ಟ ಬಣ್ಣ ಬಳಿಯಲು ಒಪ್ಪುವಂಥ ಬಣ್ಣ ಬಳಿದು ಸಂಭ್ರಮಿಸುತ್ತಾರೆ!

‘ಸೀ ಸಂಡೂರ್‌ ಇನ್‌ ಸೆಪ್ಟೆಂಬರ್’ ಎಂಬುದನ್ನು ಆ ತಿಂಗಳಲ್ಲಿ ಮಾತ್ರ ಸ್ಮರಿಸುವ ವಿಪರ್ಯಾಸವೂ ಇಲ್ಲಿ ಉಂಟು. ಹೀಗೆ, ಎಂದಿಗೂ ಕಾಡುವ ವಿಷಾದ, ಭರಿಸಲಾಗದಷ್ಟು ನಷ್ಟದ ನಡುವೆ ಸಂಡೂರು ತನ್ನ ಹಸಿರು ತಾಜಾತನವನ್ನು ಉಳಿಸಿಕೊಂಡಿದೆ ಎಂಬುದೇ ಅದ್ಭುತ ಸಂಗತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top