fbpx
ಆರೋಗ್ಯ

ಮಳೆಗಾಲದಲ್ಲಿ ಮಗುವಿನ ಸಂರಕ್ಷಣೆ ಹೇಗೆ…?

ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದೆ ಸುರಿವ ಮಳೆ, ಮೈಯ್ಯನ್ನು ತೀಡುವ ತಂಗಾಳಿಯನ್ನು ಅನುಭವಿಸಲು ಚೆಂದವೇನೋ ಹೌದು. ಆದರೆ ಈಗತಾನೆ ಹುಟ್ಟಿದ ಮಗುವಿಗೆ ಈ ಚೆಂದ ಕೂಡ ಸಂಕಟವಾಗಿ ಪರಿಣಮಿಸಬಹುದು. ಹೌದು, ಎನ್ನುತ್ತಾರೆ ವ್ಯದ್ಯರು. ಸಾಮಾನ್ಯವಾಗಿ ಮಳೆಗಾಲದಲ್ಲಿ ಶಿಶುಗಳು ಕಾಡುವ ಎರಡು ವಿಧದ ತೊಂದರೆಗಳು; ಇನ್ಫೆಕ್ಷನ್ ಹಾಗೂ ಚರ್ಮದ ತೊಂದರೆ. ನವಜಾತ ಶಿಶುಗಳನ್ನು ಮಳೆಗಾಲದಲ್ಲಿ ಜೋಪಾನ ಮಾಡುವಂತೆ ವೈದ್ಯರೇ ಸೂಚಿಸುವುದುಂಟು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳನ್ನು ಹರಡುವಂಥ, ಅತಿಸೂಕ್ಷ್ಮ ಜೀವಿಗಳ ಪ್ರಸಾರಕ್ಕೆ ಅನುಕೂಲವಾದಂಥ ವಾತಾವರಣವಿರುವುದೇ ಇದಕ್ಕೆ ಕಾರಣ.

ಸಾಮಾನ್ಯವಾಗಿ ಇವುಗಳ ಬಗ್ಗೆ ಎಚ್ಚರ ವಹಿಸಬೇಕು :

ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು :

ಇವು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಕುತ್ತಿಗೆಯ ಭಾಗದಲ್ಲಿ, ಕೈ-ಕಾಲುಗಳ ಸಂದುಗಳಲ್ಲಿ. ಹೀಗಾದಾಗ ಮಗುವು ಅಸಹನೀಯವಾಗಿ ಅಳತೊಡಗುತ್ತದೆ.ಸಾಮಾನ್ಯವಾಗಿ ಮಕ್ಕಳನ್ನು ತುಂಬಾ ಬೆಚ್ಚಗಿಟ್ಟು ಜೋಪಾನ ಮಾಡುವುದರಿಂದ ಅವುಗಳು ಸಣ್ಣಗೆ ಬೆವರುತ್ತವೆ. ಕೆಲವೊಮ್ಮೆ ಬೆವರನ್ನು ಹೊರಸೂಸುತ್ತವೆ. ಇಲ್ಲವಾದರೆ ಇಂಥ ಕೆಂಬಣ್ಣದಿಂದ ಕೂಡಿದ ಸಣ್ಣ ಸಣ್ಣ ಗುಳ್ಳೆಗಳು ಹುಟ್ಟಿಕೊಳ್ಳುತ್ತವೆ.ಮಗುವಿನ ಚರ್ಮದ ಮೇಲೆ ಮಳೆಗಾಲದಲ್ಲಿ ಸಣ್ಣಪುಟ್ಟ ಕೆಂಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಪರಿಹಾರ,

ಮಳೆಗಾಲದಲ್ಲಿ ಹೊರಗಡೆ ತಂಪಾದ ವಾತಾವರಣವಿದೆಯೆಂದು ಅತಿಯಾದ ಬಿಸಿನೀರನ್ನು ಸ್ನಾನಕ್ಕೆ ಬಳಸಬಾರದು.ಮಗುವನ್ನು ಮಳೆಗಾಲದಲ್ಲಿ ಅತಿಯಾಗಿ ಬೆಚ್ಚಗೆ ಇಟ್ಟುಕೊಳ್ಳದೆ, ಹತ್ತಿ ಬಟ್ಟೆಯಿಂದ ಸುತ್ತಿ ಮಲಗಿಸಬೇಕು. ಕೊಬ್ಬರಿ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿಕೊಂಡು, ಮೈಗೆ ಹಚ್ಚಿ ಮಸಾಜ್ ಮಾಡಿ, ತಕ್ಷಣವೇ ಸ್ನಾನ ಮಾಡಿಸಬೇಕು. ಪ್ರತಿನಿತ್ಯ ಸ್ನಾನ ಮಾಡಿಸಬೇಕು. ಕೊಬ್ಬರಿ ಎಣ್ಣೆಯನ್ನು ಮೈಗೆ ಸವರುವುದರಿಂದಲೂ ಮಗುವಿಗೆ ಉಂಟಾಗುವಂಥ ಕಿರಿಕಿರಿಯನ್ನು ತಪ್ಪಿಸಬಹುದು.

ಬಟ್ಟೆಗಳ ಬಗ್ಗೆ ಕಾಳಜಿ :

ಶಿಶುವು ಮೂತ್ರ ವಿಸರ್ಜನೆ ಮಾಡಿದ ತಕ್ಷಣ ಬಟ್ಟೆಯನ್ನು ಬದಲಾಯಿಸಬೇಕು. ಆ ಜಾಗವನ್ನು ಒದ್ದೆ ಬಟ್ಟೆಯಿಂದ ಒರೆಸಿ, ಸ್ವಚ್ಛ ಮಾಡಬೇಕು.ನವಜಾತ ಶಿಶುಗಳಿಗೆ ಜನಿಸಿದ ಒಂದು ವಾರದವರೆಗೆ ಹೊಸ ಬಟ್ಟೆಯನ್ನು ಹಾಕಬಾರದು. ಮೃದುವಾದ ಹತ್ತಿಯ ಬಟ್ಟೆಯಿಂದ ಶಿಶುವನ್ನು ತಾಯಿಯ ಮಡಿಲಲ್ಲಿ ಬೆಚ್ಚಗೆ ಮಲಗಿಸುವುದರಿಂದ, ಗರ್ಭದಲ್ಲಿ ಸಿಕ್ಕಂಥ ವಾತಾವರಣದ ಅನುಭವವಾಗುತ್ತದೆ. ಬೆಚ್ಚಗಿರುವ, ಬಿಗಿಯಲ್ಲದ ಬಟ್ಟೆಗಳನ್ನು ಶಿಶುಗಳಿಗೆ ತೊಡಿಸಬೇಕು.

ಉಗುರು ಸೋಂಕು :

ಉಗುರಿನ ಸುತ್ತಲಿನ ಚರ್ಮವು ಕೆಂಬಣ್ಣಕ್ಕೆ ತಿರುಗಿ ಅಲ್ಲಲ್ಲಿ ತುರಿಕೆ ಕಾಣಿಸಿಕೊಂಡರೂ ಚರ್ಮದ ಸೋಂಕಿಗೆ ಮಗು ಒಳಗಾಗಿದೆಯೆಂದು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಸಾಮಾನ್ಯವಾಗಿ ಎಳೆಯ ಮಕ್ಕಳು ಬಹುಬೇಗ ಇನ್ಫೆಕ್ಷನ್ ಅಥವಾ ಸೋಂಕಿಗೆ ತುತ್ತಾಗುತ್ತಾರೆ. ಮಗು ಬೆವರಿದಾಗ, ಅದನ್ನು ಉಗುರಿನಿಂದ ಸ್ಪರ್ಶಿಸಿದಾಗ ಸೋಂಕು ದಾಟುತ್ತದೆ. ಉಗುರು ಡ್ರೈಯಾಗಿದ್ದರೆ, ರಫ್ ಆಗಿದ್ದರೆ ಉಗುರಿನ ಸೋಂಕು ತಗುಲಿದೆಯೆಂದು ತಿಳಿಯಬೇಕು.ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

ಪರಿಹಾರ,

ಎಳೆ ಮಗುವಿನ ಉಗುರುಗಳನ್ನು ಆಗಾಗ್ಗೆ ಕತ್ತರಿಸುತ್ತಿರಬೇಕು. ಎದೆಹಾಲುಣಿಸುವಾಗ ಶಿಶುಗಳು ಸಾಮಾನ್ಯವಾಗಿ ಮೈಮರೆಯುತ್ತವೆ. ಇಲ್ಲವಾದರೆ ಕಾಟನ್ ಬಟ್ಟೆಯ ಕೈ ಕವಚವನ್ನು ಹಾಕಬಹುದು.

ಉದರಕ್ಕೆ ಸಂಬಂಧಪಟ್ಟ ಕಾಯಿಲೆ :

ಉದರಕ್ಕೆ ಸಂಬಂಧಪಟ್ಟಂಥ ಗ್ಯಾಸ್ಟ್ರೋಎನ್ಟಿಟೀಸ್ ಕಾಯಿಲೆ ಶಿಶುಗಳಲ್ಲಿ ಸರ್ವೇಸಾಮಾನ್ಯ. ಈ ಸಾಧ್ಯತೆ ಮಳೆಗಾಲದಲ್ಲಿ ಇನ್ನೂ ಹೆಚ್ಚು.ಡಯೇರಿಯಾ, ಉದರಶೂಲೆ, ಹೊಟ್ಟೆ ಉಬ್ಬರ, ವಾಂತಿ, ಜ್ವರ ಮುಂತಾದುವುಗಳೂ ಬರುವ ಸಾಧ್ಯತೆ ಇರುತ್ತೆ.ಮಗು ತಾಯಿಯ ಎದೆ ಹಾಲನ್ನು ಸೇವಿಸುವಾಗ ಈ ವೈರಸ್ ಬಹಳ ಬೇಗ ಹರಡುತ್ತದೆ.ಆದ್ದರಿಂದ ಎದೆ ಹಾಲುಣಿಸುವ ತಾಯಿಯು ಸ್ವಚ್ಛತೆ ಕಡೆಗೆ ಹೆಚ್ಚು ಜಾಗ್ರತೆ ವಹಿಸಬೇಕು. ಹಾಲುಣಿಸುವ ಮೊದಲು ಎದೆಯ ಭಾಗವನ್ನು ಶುದ್ಧವಾದ ಕಾಟನ್ ಬಟ್ಟೆಯನ್ನು ನೀರಿನಲ್ಲಿ ಅದ್ದಿ, ಅದರಿಂದ ಶುದ್ಧಗೊಳಿಸಿ ಅನಂತರವೇ ಮಗುವಿಗೆ ಹಾಲುಣಿಸುವುದೊಳಿತು. ಅಲ್ಲದೆ, ನವಜಾತ ಶಿಶುವಿಗೆ ಎದೆಹಾಲನ್ನು ಬಿಟ್ಟು ಬೇರೆ ರೀತಿಯ ಯಾವುದೇ ಆಹಾರವನ್ನೂ ೩ ತಿಂಗಳಿನವರೆಗೆ ನೀಡಲೇಬಾರದು. ತಾಯಿಯ ಎದೆಹಾಲೇ ಮಗುವಿಗೆ ಶ್ರೇಷ್ಠ ಆಹಾರ. ಡಯೇರಿಯಾದಿಂದ ಬಳಲುವ ಶಿಶುಗಳು ನಿರ್ಜಲೀಕರಣಗೊಳ್ಳದಂತೆ ಹೆಚ್ಚಿನ ಕಾಳಜಿ ವಹಿಸಬೇಕು. ಉದರಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಮಗುವಿಗಿದ್ದರೂ ಡಿ ಹೈಡ್ರೇಟ್ ಆಗದಂತೆ ನೋಡಿಕೊಳ್ಳಬೇಕು.

ಆರೋಗ್ಯಕರ ಲಕ್ಷಣಗಳು :

ಮಗು ಮಲಗಿರುವ ಕೊಠಡಿಯಲ್ಲಿ ಗಾಳಿ- ಬೆಳಕು ಹರಿದಾಡುತ್ತಿರಬೇಕು. ಆದರೆ, ತೀಕ್ಷ್ಣವಾದ ಬೆಳಕು ಬೇಡ. ಇದರಿಂದ ಮಗುವಿನ ಅಕ್ಷಿಪಠಲಕ್ಕೆ ತೊಂದರೆಯಾಗಬಹುದು. ಮಗುವು ಮಲಗಿರುವ ಸ್ಥಳಕ್ಕೆ ನೇರವಾಗಿ ಹೊರಗಿನ ಗಾಳಿಯಾಡದಂತೆ ಎಚ್ಚರ ವಹಿಸುವುದು ಅಗತ್ಯ.

ನವಜಾತ ಶಿಶುವು ಹುಟ್ಟಿದಾಗ ಇರುವಂಥ ತೂಕಕ್ಕಿಂತ ೨೦೦ರಿಂದ ೩೦೦ಗ್ರಾಂ ನಷ್ಟು ಮೊದಲ ವಾರದಲ್ಲಿ ಕಡಿಮೆಯಿರುತ್ತದೆ. ಇದಕ್ಕಾಗಿ ಗಾಬರಿ ಪಡುವ ಅಗತ್ಯವಿಲ್ಲ. ಪ್ರತಿ ೧೫ ದಿನಕ್ಕೊಮ್ಮೆ ೩ ತಿಂಗಳಿನವರೆಗೆ ಶಿಶುವಿನ ತೂಕವನ್ನು ಗಮನಿಸುತ್ತಿರಬೇಕು.

ಮಗುವು ದಿನಕ್ಕೆ ೮- ೧೦ ಬಾರಿ ಮೂತ್ರ ವಿಸರ್ಜನೆ ಹಾಗೂ ಕನಿಷ್ಠ ೨ ದಿವಸಕ್ಕೊಮ್ಮೆಯಾದರೂ ಮಲ ವಿಸರ್ಜನೆ ಮಾಡುವುದು ಆರೋಗ್ಯಕರ ಲಕ್ಷಣ.

ಮಳೆಗಾಲದಲ್ಲಿ ನವಜಾತ ಶಿಶುಗಳು ಸಾಮಾನ್ಯವಾಗಿ ಶ್ವಾಸಕೋಶದ ತೊಂದರೆ, ಬ್ಯಾಕ್ಟೀರಿಯಲ್ ಇನ್ಫೆಕ್ಷನ್ಗೆ ಒಳಗಾಗುತ್ತವೆ. ಈ ಬಗ್ಗೆ ಎಚ್ಚರ ಅಗತ್ಯ.

ಶಿಶುವಿಗೆ ಎದೆ ಹಾಲು ಕುಡಿಸಿದ ತಕ್ಷಣ ಮೃದುವಾದ ಒಣಗಿದ ಬಟ್ಟೆಯಿಂದ ಬಾಯಿಯನ್ನು ಒರೆಸಬೇಕು.
ವಯಸ್ಕರರ ಉಸಿರಿನಿಂದಲೂ ಅಂಟು ರೋಗಗಳು ಹರಡುವುದರಿಂದ ಈ ಬಗ್ಗೆ ಗಮನ ಹರಿಸುವುದೊಳಿತು.
ಮಳೆಗಾಲದ ಮಳೆಯಲ್ಲಿ ನವಜಾತ ಶಿಶುಗಳನ್ನು ಹೆಚ್ಚಾಗಿ ಹೊರಗೆ ಕರೆದುಕೊಂಡು ಹೋಗದಿರುವುದೇ ಸೇಫ್.

ಡಾಕ್ಟರ್ ಕೋಟ್ :

ಶಿಶುವು ಜನಿಸಿದ ತಕ್ಷಣ ಮಗುವಿನ ಕ್ಷೇಮದಷ್ಟೇ ತಾಯಿಯ ಆರೋಗ್ಯದ ಕಡೆಗೂ ಕಾಳಜಿ ಅತ್ಯಗತ್ಯ. ಹಾಲುಣಿಸುವ ತಾಯಿಯು ಸಮಾಧಾನ, ಸಂತೋಷದಿಂದ ಇದ್ದರೆ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ. ಮಳೆಗಾಲದಲ್ಲಿ ಮಗುವಿನ ಸ್ನಾನಕ್ಕೆ ಅತಿಯಾದ ಬಿಸಿನೀರು ಬಳಕೆ ಬೇಡ. ಮಗುವಿನ ಬಣ್ಣ, ಲಿಂಗದ ಬಗ್ಗೆ ಆತಂಕಗೊಳ್ಳದೆ ನಿರಾತಂಕವಾಗಿ ಮಗುವನ್ನು ಆರೈಕೆ ಮಾಡಿದರೆ ಮಳೆಗಾಲದಲ್ಲಿಯೂ ಆರೋಗ್ಯವಂತ ಮಗುವನ್ನು ಹೊಂದಲು ಸಾಧ್ಯ.

ತಾಯಿಯ ಆರೈಕೆ :

ಮಳೆಗಾಲದಲ್ಲಿ ತಾಯಿ ಆದವರು ಹೆಚ್ಚು ಹೆಚ್ಚು ನೀರು ಕುಡಿಯಬೇಕು. ಸ್ವಚ್ಛತೆ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅತಿಯಾದ ಶಬ್ಧ, ಗಾಳಿ, ಶೀತಕ್ಕೆ ಮೈಯ್ಯೊಡ್ಡಬಾರದು. ಮಗುವಿಗೆ ಹಾಲುಣಿಸುವಾಗ ಎದೆಯ ಭಾಗವನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿಕೊಳ್ಳಬೇಕು. ಮೊದಲು ಎಡಭಾಗದಲ್ಲಿ ಹಾಲುಣಿಸಿದರೆ ನಂತರ ಬಲಭಾಗದಲ್ಲಿ ಹಾಲುಣಿಸಿ, ನಂತರ ಎಡಭಾಗದಲ್ಲಿ ಪುನಃ ಹಾಲುಣಿಸಬೇಕು. ಮಗುವಿಗೆ ಹಾಲುಣಿಸುವಾಗ ತಾಯಿಗೆ ಸಮಾಧಾನಕರ ಮನಃಸ್ಥಿತಿ ಅತ್ಯಗತ್ಯ. ತಾಯಿಯು ಮಳೆಗಾಲದಲ್ಲಿ ಆದಷ್ಟು ಬೆಚ್ಚಗಿದ್ದು, ಕಾಟನ್ ಬಟ್ಟೆಯ ಮೇಲೆ ಉಣ್ಣೆಯ ಸ್ವೆಟರ್, ಮಫ್ಲರ್ಗಳನ್ನು ಧರಿಸುವುದರಿಂದ ಸೋಂಕು ಬೇಗ ತಾಕುವುದಿಲ್ಲ. ಮಳೆಗಾಲದ ಚಳಿಗೆ ಅತಿಯಾದ ಕಾಫಿ, ಟೀ ಸೇವನೆ, ಕರಿದ ಆಹಾರ ಪದಾರ್ಥಗಳ ಸೇವನೆ ಬೇಡ.

– ಡಾ. ಸೀತಾ ಶಿವಕುಮಾರ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top