fbpx
ಮನೋರಂಜನೆ

ಸಮಾಜ ಸುಧಾರಕ ಉಪ್ಪಿಯ ಐಟಿ ದೋಖಾ ಕಥೆ!

ಉಪ್ಪಿ ಸಾಹೇಬರು ಕರ್ನಾಟಕ ಆದಾಯ ತೆರಿಗೆ ಇಲಾಖೆಗೆ ನೀಟಾಗಿ ಗುನ್ನ ಮಡಗಿದ್ದು ಈ ಚಿತ್ರದ ಸಂಭಾವನೆಯ ವಿಚಾರದಲ್ಲಿಯೇ. ಈ ವಿಚಾರ ಆಂಧ್ರ ಪ್ರದೇಶದ ಇನ್‌ಕಂ ಟ್ಯಾಕ್ಸ್ ಅಧಿಕಾರಿಗಳು ರಾ ಚಿತ್ರದ ನಿರ್ಮಾಪಕರ ಮನೆಗೆ ರೇಡು ಬಿದ್ದಾಗ ಉಪ್ಪಿಯ ಐಟಿ ದೋಖಾ ಪುರಾಣ ಜಾಹೀರಾಗಿತ್ತು.

ರಿಯಲ್ ಸ್ಟಾರ್ ಉಪೇಂದ್ರ ಅವರ ರಾಜಕೀಯ ಪ್ರವೇಶ ಅವರ ಕಡೆಯಿಂದಲೇ ಪಕ್ಕಾ ಆಗಿದೆ. ನೆನ್ನೆಯಷ್ಟೇ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಅನ್ನೋ ಪಕ್ಷದ ಹೆಸರನ್ನೂ ಅಧಿಕೃತಗೊಳಿಸಿದ್ದಾರೆ. ಥೇಟು ಒಂದು ಸಿನಿಮಾ ಸ್ಕ್ರಿಪ್ಟಿನಂಥಾ ರಂಗು ರಂಗಾದ ಐಡಿಯಾಗಳ ಮೂಲಕ ಉಪ್ಪಿ ಹೊಸತೇನನ್ನೋ ಸೃಷ್ಟಿಸುವ ಭ್ರಮೆಯನ್ನು ಬಿತ್ತಿದ್ದಾರೆ. ಅದನ್ನು ನಂಬಿದವರದ್ದು ಅವರ ಕರ್ಮ. ಆದರೆ, ಹೀಗೆ ಹೊಸಾ ಅಲೆಯ ಕನಸು ಬಿತ್ತಿರೋ ಉಪ್ಪಿ ಹಳೇ ತೆರಿಗೆ ಕಳ್ಳರ ಪಟ್ಟುಗಳನ್ನೇ ಅನುಸರಿಸಿ ಐಟಿ ಇಲಾಖೆಗೇ ಗುನ್ನ ಕೊಟ್ಟು ಕೇಸು ಜಡಿಸಿಕೊಂಡಿದ್ದ, ತನ್ನ ನಾಜೂಕುತನದಿಂದಲೇ ಅದರಿಂದ ಪಾರಾಗಿದ್ದ ಪ್ರವರವೊಂದು ಇದೀಗ ಸಿನಿಬಜ್ ಕೈ ಸೇರಿದೆ!

 

 

ಆರಂಭದಿಂದಲೂ ಉಪ್ಪಿ ಗಿಮಿಕ್ಕುಗಳಲ್ಲಿ ಎತ್ತಿದ ಕೈ. ಆದರೆ ಭಿನ್ನ ಆಲೋಚನೆಯ ದೆಸೆಯಿಂದ ೨೦೦೦ನೇ ಇಸವಿಯ ಹೊತ್ತಿಗೆಲ್ಲ ನಟನಾಗಿಯೂ ಅವರು ಹವಾ ಸೃಷ್ಟಿಸಿದ್ದರು. ಉಪೇಂದ್ರ, ಎ ಮುಂತಾದ ಚಿತ್ರಗಳು ಸೂಪರ್ ಹಿಟ್ ಆಗಿ ಉಪ್ಪಿ ಬಹು ಬೇಡಿಕೆಯ ನಟನಾಗಿ ಹೊರ ಹೊಮ್ಮಿದ್ದರು. ಇವರ ಮಾರ್ಕೆಟ್ ವ್ಯಾಲ್ಯೂ ಕೂಡಾ ಒಮ್ಮಿಂದೊಮ್ಮೆಗೇ ಏರಿಕೆ ಕಂಡಿತ್ತು. ಹೀಗೆ ಯಶಸ್ಸಿನದ ಉತ್ತುಂಗದಲ್ಲಿರೋವಾಗಲೇ ಉಪೇಂದ್ರ ತೆಲುಗಿನಲ್ಲಿ ‘ರಾ’ ಅಂತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಕೆ.ಎಸ್ ನಾಗೇಶ್ವರ ರಾವ್. ನಲ್ಲಪಲುಪು ಬುಜ್ಜಿ ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ದಾಮನಿ, ಸಾಧು ಕೋಕಿಲಾ ಮುಂತಾದ ಕನ್ನಡದವರೇ ಹೆಚ್ಚಾಗಿ ನಟಿಸಿದ್ದರು. ಈ ಚಿತ್ರ ಆ ಕಾಲಕ್ಕೆ ಆಂಧ್ರ ಪ್ರದೇಶದಲ್ಲಿ ಸೂಪರ್ ಹಿಟ್ ಆಗಿ ದಾಖಲಾಗಿತ್ತು.

 

 

ಉಪ್ಪಿ ಸಾಹೇಬರು ಕರ್ನಾಟಕ ಆದಾಯ ತೆರಿಗೆ ಇಲಾಖೆಗೆ ನೀಟಾಗಿ ಗುನ್ನ ಮಡಗಿದ್ದು ಈ ಚಿತ್ರದ ಸಂಭಾವನೆಯ ವಿಚಾರದಲ್ಲಿಯೇ. ಈ ವಿಚಾರ ಆಂಧ್ರ ಪ್ರದೇಶದ ಇನ್‌ಕಂ ಟ್ಯಾಕ್ಸ್ ಅಧಿಕಾರಿಗಳು ರಾ ಚಿತ್ರದ ನಿರ್ಮಾಪಕರ ಮನೆಗೆ ರೇಡು ಬಿದ್ದಾಗ ಉಪ್ಪಿಯ ಐಟಿ ದೋಖಾ ಪುರಾಣ ಜಾಹೀರಾಗಿತ್ತು. ಆ ನಿರ್ಮಾಪಕರ ಕಚೇರಿ ಜಾಲಾಡಿದಾಗ ಒಂದು ಲೆಟರಿನಲ್ಲಿ ರಾ ಚಿತ್ರದ ನಾಯಕ ಉಪೇಂದ್ರ ಅವರಿಗೆ ಇಪ್ಪತೈದು ಲಕ್ಷ ಕೊಟ್ಟಿರೋದಾಗಿ ಬರೆದುಕೊಂಡಿದ್ದರು. ಈ ವಿಚಾರವನ್ನು ಆಂಧ್ರ ಐಟಿ ಅಧಿಕಾರಿಗಳು ಕರ್ನಾಟಕ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆ ನಂತರ ಕರ್ನಾಟಕ ಐಟಿ ಅಧಿಕಾರಿಗಳು ಈ ಬಗ್ಗೆ ತಲಾಶು ನಡೆಸಿದಾಗ ಈ ಬಗ್ಗೆ ಉಪೇಂದ್ರ ಅಲಿಯಾಸ್ ಬಿ ಎಂ ಉಪೇಂದ್ರ ಕುಮಾರ್ ಆ ವರ್ಷದ ತೆರಿಗೆ ಸಲ್ಲಿಸೋವಾಗ ರಾ ಚಿತ್ರದ ೨೫ ಲಕ್ಷ ಸಂಭಾವನೆಯನ್ನು ಉಲ್ಲೇಖಿಸದಿರೋದು ಪಕ್ಕಾ ಆಗಿತ್ತು. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿದ ಕರ್ನಾಟಕ ಐಟಿ ಅಧಿಕಾರಿಗಳು ಉಪ್ಪಿ ವಿರುದ್ಧ ವಂಚನೆ ಕೇಸು ದಾಖಲಿಸಿದ್ದರು.ಹಾಗೆ ಯಾವಾಗ ತನಗೆ ಐಟಿ ಗುನ್ನ ಕೊಟ್ಟಿತೋ ಆವಾಗಿನಿಂದಲೇ ಬುದ್ಧಿವಂತ ಉಪ್ಪಿಯ ಅಸಲೀ ವರಸೆ ಶುರುವಾಗಿ ಹೋಗಿತ್ತು. ಕೋರ್ಟಿನಲ್ಲಿ ಅವರು ಆಡಿದ್ದು ಸಾಲು ಸಾಲು ಸುಳ್ಳುಗಳನ್ನೇ.

 

 

 

 

ಉಪ್ಪಿ ರಾ ಚಿತ್ರದಿಂದ ತಾನು ಪಡೆದದ್ದು ಇಪ್ಪತೈದು ಲಕ್ಷವಲ್ಲ, ಐದು ಲಕ್ಷ ಮಾತ್ರ ಎಂಬ ವರಸೆ ಆರಂಭಿಸಿದ್ದರು. ಆದರೆ ಇದೇ ರಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಗುರುಕಿರಣ್ ಅವರಿಗೆ ನಾಲಕ್ಕೂವರೆ ಲಕ್ಷ ಕೊಟ್ಟಿರೋದಾಗಿ ನಿರ್ಮಾಪಕರ ಬಳಿ ದಾಖಲೆ ಸಿಕ್ಕಿದ್ದವು. ಈ ಹಂತದಲ್ಲಿ ತಗುಲಿಕೊಂಡ ಉಪೇಂದ್ರ ಅಲ್ಲಿಯೂ ನಾಜೂಕಾಗಿಯೇ ಬಚಾವಾಗಿದ್ದರು. ಈ ಚಿತ್ರಕ್ಕಾಗಿ ತಾನು ಪಡೆದದ್ದು ಐದು ಲಕ್ಷ ಮಾತ್ರ. ಒಂದು ವೇಳೆ ಗೆದ್ದರೆ ಇಪ್ಪತೈದು ಲಕ್ಷ ಕೊಡೋದಾಗಿ ನಿರ್ಮಾಪಕರು ಮತ್ತು ತಮ್ಮ ನಡುವೆ ಒಪ್ಪಂದವಾಗಿತ್ತು. ಆದರೆ ಆ ಚಿತ್ರ ಸೋತಿದ್ದರಿಂದ ಕೇವಲ ಐದು ಲಕ್ಷ ಮಾತ್ರ ತನಗೆ ಸಿಕ್ಕಿರೋದಾಗಿ ಉಪೇಂದ್ರ ಹೇಳಿದ್ದರು. ರಾ ಚಿತ್ರದ ಟೈಮಲ್ಲಿ ಉಪ್ಪಿ ಸಂಭಾವನೆ ಕೋಟಿ ದಾಟಿತ್ತು. ಆ ಟೈಮಲ್ಲಿ ೫ ಲಕ್ಷಕ್ಕೆ ತೆಲುಗು ಚಿತ್ರದಲ್ಲಿ ನಟಿಸಿ, ಕಥೆ ಬರೆದು ಕೊಡೋಕೆ ಉಪ್ಪಿಗೇನು ತಲೆ ಕೆಟ್ಟಿತ್ತಾ.. ಕೋರ್ಟು ಅದೇಕೋ ಈ ಮಾತುಗಳನ್ನೇ ನಂಬಿ ಉಪ್ಪಿ ಪರವಾಗಿ ತೀರ್ಪು ನೀಡಿತ್ತು.

 

 

ಆದರೆ ಅಸಲೀಯತ್ತು ಬೇರೆಯದ್ದೆ ಇದೆ ಎಂಬುದು ಎಂಥವರಿಗಾದರೂ ಅರ್ಥವಾಗುತ್ತದೆ. ಯಾಕೆಂದರೆ ರಾ ಚಿತ್ರ ನೂರು ದಿನ ಯಶಸ್ವಿಯಾಗಿ ಓಡಿ ಲಾಭ ಮಾಡಿಕೊಂಡಿತ್ತೆಂದು ದಾಖಲೆಗಳೇ ಹೇಳುತ್ತವೆ. ಇದಲ್ಲದೇ ಈ ಚಿತ್ರ ತೆರೆ ಕಾಣುವ ಹೊತ್ತಿಗೆಲ್ಲಾ ಉಪೇಂದ್ರ ಅವರ ಸಂಭಾವನೆ ಕೋಟಿಯ ಗಡಿ ದಾಟಿತ್ತು. ಅಂಥಾ ಸಂದರ್ಭದಲ್ಲಿ ತೆಲುಗು ಚಿತ್ರಕ್ಕೆ ಉಪ್ಪಿ ಕೇವಲ ಇಪ್ಪತೈದು ಲಕ್ಷ ಪಡೆದುಕೊಂಡಿದ್ದಾರೆಂದರೇ ನಂಬಲು ಸಾಧ್ಯವಿಲ್ಲ. ಅಂಥಾದ್ದರಲ್ಲಿ ಐದು ಲಕ್ಷದ ಕಥೆ ಹೇಳುತ್ತಾರೆಂದರೆ ಉಪೇಂದ್ರ ಎಂಥಾ ಬುದ್ಧಿವಂತ ಎಂಬುದು ಎಂಥವರಿಗಾದರೂ ಅರ್ಥವಾಗುತ್ತದೆ. ಇಂಥಾ ದೋಖಾಗಳ ಜೊತೆ ಇತ್ತೀಚೆಗೆ ರಿಯಲ್ ಎಸ್ಟೇಟ್ ಮಾಫಿಯಾದಲ್ಲಿಯೂ ಉಪ್ಪಿ ಹೆಸರು ಕೇಳಿ ಬಂದಿದೆ. ಆದರೆ ಉಪ್ಪಿ ತಾನು ಸಮಾಜ ಸುಧಾರಣೆಗೆ ಇಳಿಯುವ ಸೂಚನೆ ಸಿಕ್ಕಾಕ್ಷಣ ಯಾರೋ ಇಂಥಾ ಆರೋಪ ಮಾಡುತ್ತಿದ್ದಾರೆ ಅಂತ ಅಲ್ಲಿಯೂ ನುಣುಚಿಕೊಳ್ಳಲು ನೋಡುತ್ತಿದ್ದಾರೆ. ಇಂಥಾ ನಾಜೂಕು ಆಸಾಮಿಗಳಿಂದ ಇನ್ನೆಂಥಾ ಸಮಾಜ ಸುಧಾರಣೆಯಾಗಲು ಸಾಧ್ಯ ಅಂತ ಪ್ರಜ್ಞಾವಂತರು ಕಟಕಿಯಾಡಲಾರಂಭಿಸಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top