fbpx
ದೇವರು

ದ್ರೌಪದಿಯು ಬಿಚ್ಚಿದ ಕೂದಲುಗಳೊಂದಿಗೆ ಕಣ್ಣೀರು ಸುರಿಸುತ್ತ ಅಣ್ಣಾ,ನನ್ನ ದುಃಖಕ್ಕೆ ಅಂತ್ಯವೆಂದು ? ತುಂಬಿದ ಸಭೆಯಲ್ಲಿ ಮಾಡಿದ ಪ್ರತಿಜ್ಞೆ ಮರೆಯುವುದೇ ? ಸಂಧಾನ ಮಾಡಿಸಲು ಬಂದ ಶ್ರೀ ಕೃಷ್ಣನನ್ನು ಕೇಳಿದ್ದು ಹೀಗೆ ..

ಪಾಂಡವರು ಯುದ್ಧ ಮಾಡುವುದಕ್ಕೆ ಪ್ರೇರೇಪಿತವಾಗಿದ್ದು ದ್ರೌಪದಿಗೆ ಆದ ಅವಮಾನ ಮತ್ತು ದ್ರೌಪದಿಯು ಮಾಡಿದ ಪ್ರತಿಜ್ಞೆಯಿಂದ.

 

 

 

ಧರ್ಮಾತ್ಮನಾದ ವಿದುರನು ದಾಯಾದಿಗಳಾದ ಕೌರವ ಪಾಂಡವರು ಪರಸ್ಪರ ಯುದ್ಧ ಮಾಡುವುದನ್ನು ತಿಳಿದು ದುಃಖಿತನಾದನು.ಅವನು ದುರ್ಯೋಧನನನ್ನು ಕಂಡು “ ನೀವಿಬ್ಬರೂ ಯುದ್ಧದ ಸಿದ್ಧತೆಯಲ್ಲಿದ್ದೀರಿ. ಇದರಿಂದ ಇಬ್ಬರಿಗೂ ತೊಂದರೆ ಆಗುವುದು.ಅದೇ ರೀತಿ ಈಗಾಗಲೇ ಎರಡು ಜಾಗದಲ್ಲಿದ್ದು ಒಟ್ಟಿಗೆ ಊಟ ಉಪಚಾರ ಮಾಡುವುದು.ಅದೇ ರೀತಿ ಈಗಾಗಲೇ ಎರಡು ಭಾಗವಾಗಿದ್ದ ರಾಜ್ಯವನ್ನು ಆಳಿಕೊಂಡಿರುವುದು ಕ್ಷೇಮವಲ್ಲವೇ ? ಪಾಂಡವರು ನೀವು ಸೇರಿ ಬದುಕಿದರೆ ನಿಮಗೆ ಒಳಿತಾಗುವುದು” ಎಂದು ಬುದ್ದಿ ಹೇಳಿದನು.

 

 

ಒಗ್ಗಟ್ಟಿನಲ್ಲಿ ಬಲವಿರುವುದು,ಅದಕ್ಕೆ ಉದಾಹರಣೆ ಎಂದರೆ ಈ ಪಕ್ಷಿಗಳ ಕಥೆ ಎಂದು ಒಂದು ಕಥೆಯನ್ನು ಹೇಳಿದನು.ಒಮ್ಮೆ ಅನೇಕ ಪಕ್ಷಿಗಳು ಬೇಡನ ಬಲೆಯಲ್ಲಿ ಸಿಕ್ಕಿ ಬಿದ್ದವು. ಅವೆಲ್ಲ ಸೇರಿ ಬಲೆ ಸಹಿತ ಆಕಾಶಕ್ಕೆ ನೆಗೆದವು ಅನಂತರದಲ್ಲಿ ಅವುಗಳಲ್ಲಿ ಯಾವ ದಿಕ್ಕಿಗೆ ಹೋಗಬೇಕೆಂಬ ವಿಷಯದಲ್ಲಿ ವಾಗ್ವಾದವು ಆರಂಭವಾಯಿತು.ಪರಸ್ಪರ ನಿಂದಿಸುತ್ತಾ ಜಗಳವನ್ನು ಆರಂಭಿಸಿದವು.ಬೇಡನು ಅವುಗಳ ಜಗಳ ಹೆಚ್ಚಾದರೆ ಬಲೆ ಸಹಿತ ಕೆಳಗೆ ಬೀಳುತ್ತವೆ ಎಂದು ಅವು ಹೋದ ಕಡೆಗೆ ಓಡತೊಡಗಿದನು.

ಸ್ವಲ್ಪ ಸಮಯದಲ್ಲಿ ಅವುಗಳ ಜಗಳ ಹೆಚ್ಚಾಗಿ ಅವು ಪರಸ್ಪರ ಕಾದಾಡ ತೊಡಗಿದವು.ಕೊಕ್ಕಿನಿಂದ ಚುಚ್ಚಿಕೊಳ್ಳುತ್ತಾ ಕಿತ್ತಾಡುತ್ತಾ ಬಲೆ ಸಹಿತವೇ ಕೆಳಗೆ ಬಿದ್ದವು.ಬೇಡನು ಅವುಗಳನ್ನು ಹಿಡಿದು ಸಾಯಿಸಿದನು.

ದುರ್ಯೋಧನ ಈ ಪಕ್ಷಿಗಳಂತೆ ತಮಗೆ ತಾವೇ ಅಪಾಯವನ್ನು ತಂದುಕೊಂಡು ಆಸ್ತಿಯನ್ನು ರಾಜ್ಯವನ್ನು ಇನ್ನೊಬ್ಬರ ವಶಕ್ಕೆ ಒಪ್ಪಿಸುವಂತಾಗುವುದು ಬೇಡ.ಕುರು ರಾಜ್ಯವು ನೂರೈದು ಜನರಿಂದಾಗಿ ಪ್ರಭಲವಾಗಿದೆ.ನಿಮಗೆ ಅನೇಕ ಶತ್ರುಗಳಿದ್ದಾರೆ ನಿಮ್ಮಿಬ್ಬರಲ್ಲಿ ಜಗಳವಾದರೆ ಅವರಿಗೆ ಲಾಭ ಉಂಟಾಗುವುದು.ಆದುದರಿಂದ ಪಾಂಡವರಿಗೆ ಅವರ ರಾಜ್ಯವನ್ನು ಕೊಟ್ಟು ನೀನೂ ಸಹ ನೆಮ್ಮದಿಯಿಂದ ಇರು ಎಂದು ವಿದುರನು ಹೇಳಿದ.

 

 

ದೃತರಾಷ್ಟ್ರನು ಸಹ ವಿದುರನು ಹೇಳಿದ್ದನ್ನು ಒಪ್ಪಿಕೊಂಡು ಮಗೂ ಈಗಲಾದರೂ ಹಿರಿಯರ ಮಾತು ಕೇಳು.ಅರ್ಜುನ, ಭೀಮ, ಸಾತ್ಯಕಿ,ದೃಷ್ಟದ್ಯುಮ್ನ, ಶ್ರೀ ಕೃಷ್ಣ ಇವರೊಂದಿಗೆ  ವೈರವು ಬೇಡ.ಪಾಂಡವರಿಗೆ ಅನ್ಯಾಯ ಮಾಡಲು ಹೋಗಿ ದ್ವೈತವನದಲ್ಲಿ ನಿನಗೆ ಗಂಧರ್ವರಿಂದ ತೊಂದರೆ ಆದಾಗ ಪಾಂಡವರು ಶಿಕ್ಷಿಸಿರಲಿಲ್ಲವೇ ಈ ವಿಷಯ ಮರೆಯಬೇಡ,ವಿರಾಟನಗರದಲ್ಲಿ ಕೇವಲ ಒಬ್ಬ ಅರ್ಜುನನೇ ಇಡೀ ಕೌರವ ಸೈನ್ಯವನ್ನು ಸಮ್ಮೋಹನಗೊಳಿಸಿ ಸೋಲಿಸಿದನು.ಇಷ್ಟಾದರೂ ನಿನಗೆ ತಿಳಿಯುವುದಿಲ್ಲವೇ ? ಎಂದು ಕೇಳಿದರು.

ದುರ್ಯೋಧನನು ನೀವು ಏನೇ ಹೇಳಿದರೂ ಪಾಂಡವರಿಗೆ ಅರ್ಧರಾಜ್ಯವನ್ನು ಕೊಡುವುದಿಲ್ಲ ಎಂದು ತನ್ನ ಛಲದಿಂದ ಪಾಂಡವರೊಂದಿಗೆ ಯುದ್ಧ ಮಾಡುವುದನ್ನು ಇಷ್ಟಪಟ್ಟನು. ಆಗ ಹಿರಿಯರು ಸಹಿತ ನಿರುಪಾಯರಾದರು.ಯುದ್ಧಮಾಡುವುದನ್ನು ಯುಧಿಷ್ಠಿರನು ಸಹ ಇಚ್ಛಿಸಿರಲಿಲ್ಲ.ಅವನಿಗೂ ಸಹ ನೆಮ್ಮದಿ ಇಲ್ಲವಾಗಿತ್ತು.

 

 

ಧರ್ಮರಾಜನು ಎಲ್ಲರನ್ನು ಸೇರಿಸಿ ಮುಂದೇನು ಮಾಡಬೇಕೆಂದು ವಿಚಾರ ವಿಮರ್ಶೆ ನೆಡೆಸಿದನು.ಸಭೆಯಲ್ಲಿ ಅನೇಕ ರಾಜರು ಭಾಗವಹಿಸಿದ್ದರು.ಮುಖ್ಯವಾಗಿರುವ ಶ್ರೀ ಕೃಷ್ಣನನ್ನು ಕುರಿತು ಧರ್ಮರಾಜನು ಈ ರೀತಿ ಹೇಳಿದನು.ಶ್ರೀ ಕೃಷ್ಣ,ನನಗೆ ಯುದ್ಧ ಮಾಡುವಾಸೆಯಿಲ್ಲ.ಹಿಂದೆ ಇದ್ದಂತೆ ನಮ್ಮ ನಮ್ಮ ರಾಜ್ಯವನ್ನು ಪಡೆದು ನೆಮ್ಮದಿಯಿಂದ ಇರುವ ಬಗ್ಗೆ ನಾನು ಅಲೋಚಿಸುತ್ತಿದ್ದೇನೆ.

ಯುದ್ಧವಾದರೆ ಲಕ್ಷಾಂತರ ಜೀವ ಹಾನಿಯಾಗುವುದು.ಕೌರವರೊಂದಿಗೆ ಮತ್ತು ದ್ವೇಷವಿರುವುದು.ಆದರೆ ಯಾರಿಗೂ ಅನ್ಯಾಯ ಮಾಡದ ನಿರಪರಾಧಿಗಳು ಪ್ರಾಣ ಬಿಡುವಂತಾಗುವುದು ಯುದ್ಧದಲ್ಲಿ.ಬಂಧು ಬಳಗದವರನ್ನು ಕೊಂದು ರಾಜ್ಯವನ್ನು ಪಡೆದುಕೊಂಡರು ನೆಮ್ಮದಿ ಇರಲು ಸಾಧ್ಯವೇ ? ನೀನು ಹಸ್ತಿನಾವತಿಗೆ ಹೋಗಿ ದೃತರಾಷ್ಟ್ರನಿಗೆ ಯುದ್ಧದಿಂದಾಗುವ ಅನರ್ಥವನ್ನು ತಿಳಿಸಿ ಸಂಧಾನವನ್ನು ಏರ್ಪಡಿಸಿ ಎಂದು ಕೇಳಿಕೊಂಡನು.

 

 

ಶ್ರೀ ಕೃಷ್ಣ ಕೌರವರು ನಮಗೆ ಅರ್ಧರಾಜ್ಯವನ್ನು ಕೊಡದಿದ್ದರು ಚಿಂತೆಯಿಲ್ಲ.ಐವರಿಗೆ ಐದು ಗ್ರಾಮಗಳನ್ನು ಕೊಟ್ಟರೂ ಸಾಕು ಜೀವನ ನಡೆಸಿಕೊಂಡು ಹೋಗುತ್ತೇವೆ ಎಂದನು.ಧರ್ಮರಾಜನ ಮಾತುಗಳನ್ನು ಕೇಳಿದ ದ್ರೌಪದಿಯು ಕಣ್ಣೀರು ಸುರಿಸುತ್ತಾ ಕೃಷ್ಣನ ಬಳಿಗೆ ಬಂದು ದುಃಖದಿಂದ ನಿಂತಿದ್ದಳು.

ಈ ಮಧ್ಯದಲ್ಲಿ ಭೀಮಸೇನನು ಸಹ ಧರ್ಮರಾಜನ ಮಾತಿಗೆ ಸಮರ್ಥನೆ ನೀಡಿ ವನವಾಸ ಅಜ್ಞಾತವಾಸಗಳಲ್ಲಿ ಕಷ್ಟ ಅನುಭವಿಸಿದ್ದು ಆಯಿತು.ಯುದ್ದದ ಪರಿಣಾಮವನ್ನು ಆಲೋಚಿಸಿದರೇ ಭಯವಾಗುವುದು.ಕೌರವರೇ ರಾಜ್ಯವನ್ನಾಳಿಕೊಂಡಿರಲಿ ನಮಗೆ ರಾಜ್ಯ ಕೋಶವೇನೂ  ಬೇಡ ಎಂದನು.ಅರ್ಜುನನು ನಕುಲ ಸಹದೇವರು ಸಹ ಧರ್ಮರಾಜನ ಮಾತನ್ನು ಒಪ್ಪಿಕೊಂಡಾಗ ದ್ರೌಪದಿಯ ಕಣ್ಣೀರು ಅಧಿಕವಾಯಿತು.ಅವಳು ಕೃಷ್ಣನನ್ನು ಕುರಿತು ಈ ರೀತಿ ಬೇಡಿಕೊಂಡಳು.

ದ್ರೌಪದಿಯು ಬಿಚ್ಚಿದ ಕೂದಲುಗಳೊಂದಿಗೆ ಕಣ್ಣೀರು ಸುರಿಸುತ್ತಲೇ ಅಣ್ಣಾ, ನನ್ನ ದುಃಖಕ್ಕೆ ಅಂತ್ಯವೆಂದಾಗುವುದು.ಪಾಂಡವರ ಸಂಧಾನದ ಮಾತುಗಳನ್ನು ಕೇಳಿ ಅತ್ಯಂತ ದುಃಖವಾಗುತ್ತಿದೆ.ತುಂಬಿದ ಸಭೆಯಲ್ಲಿ ಆದ ಅವಮಾನಕ್ಕೆ ಪ್ರತಿಜ್ಞೆ ಮಾಡಿದ್ದು ಅವರಿಗೆ ಮರೆತು ಹೋಗಿದೆ.ಆದರೆ ಬಿಚ್ಚಿದ ಮುಡಿಯು ಆ ಪ್ರತಿಜ್ಞೆ ಅವಮಾನಗಳನ್ನು ಪದೇ ಪದೇ ಮನಸ್ಸು  ನೆನಪಿಸುತ್ತಿದೆ.ಚಕ್ರವರ್ತಿಯಾದ ಯುಧಿಷ್ಠಿರನನ್ನು ಮೋಸದಿಂದ ಕೌರವರು ಜೂಜಾಟದಲ್ಲಿ ಸೋಲಿಸಿರಲಿಲ್ಲವೇ ?

 

 

ಪಾಂಡವರನ್ನು ಅವರ ರಾಜ್ಯದಿಂದ ದೂರ ಮಾಡಿದ್ದಾರೆ,ಅನೇಕ ರೀತಿಯಿಂದ ಕಷ್ಟಕ್ಕೊಳಪಡಿಸಿದ್ದಾರೆ.ಈ ದುಷ್ಟತನವನ್ನು ತೋರಿಸಿದವರಿಗೆ ಯೋಗ್ಯ ಶಿಕ್ಷೆಯಾಗಲೇಬೇಕು.ಅದಕ್ಕಾಗಿ ಸಂಧಾನದ ಪ್ರಶ್ನೆಯೇ ಇಲ್ಲ.ಯುದ್ದವನ್ನೇ ನಿಶ್ಚಯಿಸಿ ಬರಬೇಕು ಎಂದು ಬೇಡಿಕೊಂಡಳು.ದ್ರೌಪದಿಯ ಮಾತುಗಳನ್ನು ಕೇಳಿದಾಗ ಭೀಮಾರ್ಜುನರು ಕೆರಳಿದರು.

ಪಾಂಡವರ ಪೌರುಷವು ದ್ರೌಪದಿಯ ಮಾತುಗಳಿಂದ ಪ್ರಕಟವಾಯಿತು.ಸಂಧಾನವನ್ನು ಮಾಡಬಯಸಿದ ಶ್ರೀ ಕೃಷ್ಣನನ್ನು ತಡೆದು ಯುದ್ದವನ್ನೇ ನಿಶ್ಚಯಿಸಿ ಬರಬೇಕೆಂದು ಕೇಳಿಕೊಂಡರು.ಕೊನೆಗೆ ಶ್ರೀ ಕೃಷ್ಣನು ಧರ್ಮರಾಜನನ್ನು ಸಂಧಾನವೋ ಅಥವಾ ಸಂಗ್ರಾಮವೋ ಏನನ್ನು ಮಾಡಬೇಕೆಂದು ಕೇಳಿದನು.

ಕೊನೆಗೆ ಎಲ್ಲರ ಮಾತುಗಳನ್ನು ಆಲಿಸಿದ ನಂತರದಲ್ಲಿಯೂ ಸಹ ಧರ್ಮರಾಜನು ಕೃಷ್ಣನಿಗೆ ಮೊದಲು ಪ್ರಯತ್ನವೂ ಸಂಧಾನಕಾಗಿಯೇ ಆಗಲಿ.ಅದು ಸಾಧ್ಯವಾಗದೇ ಹೋದರೆ ಯುದ್ದವನ್ನೇ ನಿಶ್ಚಯಿಸಿ ಬಾ ಎಂದು ಶ್ರೀ ಕೃಷ್ಣನಿಗೆ ಹೇಳಿದನು.

ಹೀಗೆ ಪಾಂಡವರು  ದ್ರೌಪದಿಯ ಮಾತುಗಳಿಂದಲೂ ಸಹ ಯುದ್ದ ಮಾಡುವುದಕ್ಕೆ ಪ್ರೇರೇಪಿತರಾಗಿ   ಯುದ್ಧಕ್ಕೆ ಒಪ್ಪಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top