fbpx
ಮನೋರಂಜನೆ

ಇದು ಮರಳಿಬಂದ ಮುರಳಿಯ ಸಂಪಾದನೆ!

ಇದು ಮರಳಿಬಂದ ಮುರಳಿಯ ಸಂಪಾದನೆ..!

 

 

ಫೇಸ್ ಬುಕ್ ಪೇಜಲ್ಲಿ ಬರೋಬ್ಬರಿ ಒಂದು ಮಿಲಿಯನ್’ಗೂ ಹೆಚ್ಚು ಲೈಕ್ಸ್ ಪಡೆದು ಶ್ರೀ ಮುರಳಿ ದಾಖಲೆ ನಿರ್ಮಿಸಿದ್ದಾರೆ. ಏಕಾ ಏಕಿ ಒಬ್ಬ ನಟ ಈ ಮಟ್ಟಕ್ಕೆ ‘LIKES’ ಸಂಪಾದಿಸಲು ಸಾಧ್ಯವಿಲ್ಲ. ಅದರ ಹಿಂದೆ ಸಾಕಷ್ಟು ಶ್ರಮವಿರುತ್ತದೆ. ಡಾ.ರಾಜ್ ಕುಟುಂಬದ ಹುಡುಗನಾಗಿದ್ದು, ಪ್ರತಿಭಾವಂತ ಎನಿಸಿಕೊಂಡರೂ ಶ್ರೀಮುರಳಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಸಂದರ್ಭದಲ್ಲಿ ಮುರಳಿ ನಡೆದು ಬಂದ ಕಲ್ಲು-ಮುಳ್ಳು ಹಾದಿಯ ಕುರಿತ ಸಣ್ಣದೊಂದು ಇಣುಕುನೋಟ ಇಲ್ಲಿದೆ…

 

 

ಅಖಂಡ ಇಪ್ಪತ್ತು ವರ್ಷಗಳು. ಹದಿನೆಂಟು ಸಿನಿಮಾಗಳ ದಯನೀಯ ಸೋಲು. ಕಳೆಗುಂದಿದ ಸ್ಟಾರ್‌ಗಿರಿ… ಅಬ್ಬಬ್ಬ… ಎಂಥಾ ನಟನನ್ನಾದರೂ ಮಾನಸಿಕವಾಗಿ ಜರ್ಝರಿತಗೊಳಿಸುವ ವಿಚಾರವದು. ಎಸ್ ನಾರಾಯಣ್ ನಿರ್ದೇಶನದ ಚಂದ್ರಚಕೋರಿ ಸಿನೆಮಾದ ಮೂಲಕ ನಾಯಕನಟರಾದವರು ಮುರಳಿ. ಆ ಸಿನಿಮಾ ಬರೋಬ್ಬರಿ ಒಂದು ವರ್ಷ ಓಡಿ ದಾಖಲೆ ನಿರ್ಮಿಸಿತ್ತು. ಆ ಚಿತ್ರವನ್ನು ನಿರ್ಮಿಸಿದ್ದ ಹೆಚ್.ಡಿ. ಕುಮಾರ ಸ್ವಾಮಿಯವರಿಗೆ ದೊಡ್ಡ ಮಟ್ಟದ ಇಡುಗಂಟನ್ನೂ ತಂದುಕೊಟ್ಟಿತ್ತು. ಮೊದಲ ಸಿನೆಮಾದಲ್ಲೇ ಇಂಥ ಯಶಸ್ಸು ಕಂಡ ಮುರಳಿಯ ಬಗ್ಗೆ ಚಿತ್ರರಂಗ ಮತ್ತು ಪ್ರೇಕ್ಷಕ ವಲಯದಲ್ಲಿ ಸಾಕಷ್ಟು ನಿರೀಕ್ಷೆಗಳು ಜನ್ಮತಳೆದಿದ್ವು. ಮುರಳಿಯ ಎರಡನೇ ಚಿತ್ರ ‘ಕಂಠಿ’ ಕೂಡಾ ಹೊಸದೊಂದು ಕಥಾವಸ್ತುವನ್ನು ಒಳಗೊಂಡು ತಯಾರಾಗಿತ್ತು. ಆದರೆ ಕಮರ್ಷಿಯಲ್ಲಾಗಿ ತೀರಾ ಹೇಳಿಕೊಳ್ಳುವಂಥಾ ಸದ್ದು ಮಾಡಲಿಲ್ಲ. ಆಮೇಲೆ ಶುರುವಾಯಿತು ನೋಡಿ ಮುರಳಿ ಪಾಲಿನ ಸಾಡೇಸಾತ್!

 

 

ಯಶವಂತ್, ಸಿದ್ಧು, ಶಂಭು, ಗೋಪಿ, ಪ್ರೀತಿಗಾಗಿ, ಮಿಂಚಿನ ಓಟ, ಶಿವಮಣಿ, ಯಜ್ಞ, ಸಿಹಿಗಾಳಿ, ಶ್ರೀಹರಿಕಥೆ, ಹರೇರಾಮ ಹರೇಕೃಷ್ಣ, ಶ್ರೀಕ್ಷೇತ್ರ ಆದಿಚುಂಚನಗಿರಿ, ಲೂಜ಼್’ಗಳು, ಮುರಾರಿ… ಇಷ್ಟೂ ಸಿನಿಮಾಗಳಲ್ಲಿ ಒಂದಷ್ಟು ಸಿನಿಮಾಗಳು ನೋಡುವಂತಿದ್ದರೂ ಅದ್ಯಾಕೋ ಗುರುತಿಸುವಂಥ ಗೆಲುವು ಸಾಧಿಸಲಿಲ್ಲ. ಕಡೆಗೆ ರೋಸಿಹೋದ ಮುರಳಿ ತನ್ನ ಹೆಸರಿನೊಂದಿಗೆ ಶ್ರೀ ಅನ್ನೋ ಹೆಸರನ್ನು ಸೇರಿಸಿಕೊಂಡರು. ಆದರೂ ಅದೃಷ್ಟವೆಂಬುದು ಕೈಹಿಡಿಯಲಿಲ್ಲ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮರಳಿ ಯತ್ನ ಮಾಡುತ್ತಲೇ ಬಂದರು ಮುರಳಿ. ಇಷ್ಟೊಂದು ಸುದೀರ್ಘ ಸೋಲು, ಬೇಸರಗಳಿಂದ ಬಸವಳಿದಿದ್ದ ಹೀರೋ ಒಬ್ಬನಿಗೆ ದೀಢೀರ್ ಅಂತಾ ಮತ್ತೊಮ್ಮೆ ಯಶಸ್ಸು ಕೈಗೆಟುಕಿಬಿಟ್ಟರೆ!

 

 

ಹೌದು. ಶ್ರೀ ಮುರಳಿಯ ವಿಚಾರದಲ್ಲಿ ಆಗಿದ್ದೂ ಅದೇ. ಎರಡು ವರ್ಷದ ಹಿಂದೆ ತೆರೆಗೆ ಬಂದ ಉಗ್ರಂ ಅನ್ನೋ ಸಿನಿಮಾ ಇಡೀ ದಕ್ಷಿಣ ಭಾರತದಲ್ಲೇ ದೊಡ್ಡ ಸೌಂಡ್ ಮಾಡಿತ್ತು. ಒಂದೆಡೆ ಹದಿನೆಂಟು ಸಿನಿಮಾಗಳ ಭೀಕರ ಸೋಲು, ‘ಇನ್ನು ಇವನ ಕಥೆ ಮುಗೀತು.’ ‘ಯಾಕಾದ್ರೂ ಇವನನ್ನ ಹೀರೋ ಆಗಿ ಹಾಕ್ಕಂತಾರೋ’.. ಎಂಬಿತ್ಯಾದಿ ಲೇವಡಿ ಮಾತುಗಳು, ಕಾಲೆಳೆಯುವವರ ಕಾಟದಿಂದ ಮುಕ್ತವಾದ ಖುಷಿ… ಇನ್ನೊಂದೆಡೆ ‘ಅಂತೂ ಒಂದು ಗೆಲುವು ಪ್ರಾಪ್ತವಾಯ್ತು? ಮುಂದೇನಪ್ಪಾ?’ ಅನ್ನೋ ಚಡಪಡಿಕೆ… ಇಂಥ ಅನೇಕ ಗೊಂದಲ, ತಳಮಳಗಳ ನಡುವೆಯೇ ಆರಂಭವಾಗಿದ್ದು ರಥಾವರ ಅನ್ನೋ ವಿಭಿನ್ನ ಟೈಟಲ್ಲಿನ ಸಿನೆಮಾ! ಶ್ರೀಮುರಳಿ ಅಭಿಯನದ ರಥಾವರ ಚಿತ್ರದ ಟ್ರೈಲರ್ ಸೃಷ್ಟಿಸಿದ್ದ ಹವಾ ಮೊದಲ ದಿನವೇ ಥಿಯೇಟರ್ ಕಿಕ್ಕಿರಿಯೋವಂತೆ ಮಾಡಿತ್ತು. ಸಿನಿಮಾ ಗೆಲುವಿನ ಪಟ್ಟಿಯಲ್ಲಿ ದಾಖಲಾಯಿತು. ಜನಕ್ಕಿಷ್ಟವಾಗುವಂಥ, ಕ್ವಾಲಿಟಿ ಸಿನಿಮಾಗಳನ್ನು ಕೊಟ್ಟರೆ ಪ್ರೇಕ್ಷಕರು ಯಾವತ್ತಿಗೂ ಕೈಹಿಡಿಯುತ್ತಾರೆ ಅನ್ನೋದು ಶ್ರೀಮುರಳಿ ವಿಚಾರದಲ್ಲಿ ನಿಜವಾಯಿತು.

 

 

 

ಒಬ್ಬ ಹೀರೋ ಸಿನಿಮಾವನ್ನು ಯಾವ ರೀತಿ ಆಯ್ಕೆ ಮಾಡಿಕೊಳ್ಳಬಾರದು ಮತ್ತು ಎಷ್ಟು ಎಚ್ಚರಿಕೆಯಿಂದ ಸೆಲೆಕ್ಟ್ ಮಾಡಿಕೊಳ್ಳಬೇಕು – ಈ ಎರಡೂ ವಿಚಾರಗಳಿಗೆ ಶ್ರೀ ಮುರಳಿ ಮಾತ್ರ ನಿದರ್ಶನವಾಗಿ ನಿಲ್ಲಬಲ್ಲರೇನೋ… ದೊಡ್ಡ ಗ್ಯಾಪ್ ನಂತರ ಒಂದು ಗೆಲುವು ಸಿಕ್ಕೇಟಿಗೆ ಆ ಖುಷಿಯಲ್ಲಿ ಕಳೆದುಹೋಗಿ ಯಾವ್ಯಾವುದೋ ಸಿನಿಮಾವನ್ನು ಒಪ್ಪಿಕೊಳ್ಳದೇ ಅಭಿಮಾನಿಗಳ ದೃಷ್ಟಿಯಲ್ಲಿ ಎಂಥಾ ಸಿನಿಮಾ ಕೊಡಬೇಕು ಅನ್ನೋದನ್ನ ಶ್ರೀ ಮುರಳಿ ಅರಿತಿದ್ದಾರೆ. ಈ ಕಾರಣಕ್ಕೇ ಸ್ವಲ್ಪ ತಡವಾದರೂ ಗಟ್ಟಿ ಕಥೆಯುಳ್ಳ, ಸದೃಢ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಮುರಳಿ ಅವರ ಮಫ್ತಿ ಈಗ ಚಿತ್ರೀಕರಣದ ಹಂತದಲ್ಲಿದೆ. ಸದ್ಯ ಶ್ರೀಮುರಳಿಗೆ ಫೇಸ್ ಬುಕ್ಕಲ್ಲಿ ಬರೋಬ್ಬರಿ ಒಂದು ಮಿಲಿಯನ್ನಿಗೂ ಅಧಿಕ ಲೈಕ್ಸ್ ದೊರಕುವ ಮೂಲಕ, ಅತಿ ಹೆಚ್ಚಯ ಲೈಕ್ಸ್ ಪಡೆದ ಮೊದಲ ಕನ್ನಡದ ಹೀರೋ ಅನಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳ ಪಟ್ಟಿಯಲ್ಲಿ ಇನ್ನು ಹಲವು ಮಿಲಿಯನ್ ಮಂದಿ ದಾಖಲಾಗಲಿ ಎಂದು ಹಾರೈಸೋಣ….

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top