fbpx
ಮನೋರಂಜನೆ

ಬಿಗ್‌ಬಾಸ್ ಮನೆಯಿಂದ ದಬ್ಬಿಸಿಕೊಂಡ ದಯಾಳ್!

ಒಂದು ಮನುಷ್ಯ ಸಹಜ ಸೆಂಟಿಮೆಂಟನ್ನೂ ಅದುಮಿಟ್ಟುಕೊಂಡು ಬಿಗ್‌ಬಾಸ್ ಮನೆ ಸೇರಿಕೊಂಡಂತಿದ್ದ ದಯಾಳ್ ಪದ್ಮನಾಭನ್ ಇಷ್ಟೂ ಸೀಜನ್‌ಗಳಲ್ಲೇ ಖಡಕ್ ಸ್ಪರ್ಧಿ. ಅಯ್ಯೋ ಪಾಪ ಎಂಬ ಬುದ್ದಿ, ಸ್ನೇಹವನ್ನೆಲ್ಲ ಮೀರಿದ್ದು ಗೆಲುವೊಂದೇ ಎಂಬ ಮನಸ್ಥಿತಿಯಿಂದ ಎರಡು ವಾರಗಳನ್ನು ಸವೆಸಿದ ದಯಾಳ್ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ!

 

 

ಮನೆಯೊಳಗಿನ ಸದಸ್ಯರ ಜೊತೆಗಿನ ಒಡನಾಟ, ಟಾಸ್ಕ್‌ಗಳಲ್ಲಿನ ಪಾಲ್ಗೊಳ್ಳುವಿಕೆಯ ಜೊತೆಗೆ ಪ್ರೇಕ್ಷಕರ ಅಭಿಪ್ರಾಯವೂ ಗೆಲುವಿನ ಅವಿಭಾಜ್ಯ ಅಂಗ. ಕಳೆದ ಸೀಜನ್ನುಗಳಲ್ಲಿ ಗೆಲುವಿನ ವಿಚಾರದಲ್ಲಿ ಯಡವಟ್ಟಾದ್ದದ್ದರಿಂದ ಈ ಬಾರಿ ಪ್ರೇಕ್ಷಕರ ಅಭಿಪ್ರಾಯಕ್ಕೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ. ಆದ್ದರಿಂದಲೇ ಸ್ಪರ್ಧಿಗಳ ನಡವಳಿಕೆಯೂ ತೀರಾ ಮುಖ್ಯ ವಿಚಾರವಾಗಿ ಬದಲಾಗಿದೆ. ಆದರೆ, ಗೆಲ್ಲಬೇಕೆಂಬ ಗುಂಗೀಹುಳವನ್ನು ತಲೆಗೆ ಬಿಟ್ಟುಕೊಂಡು ಒಳನಡೆದಿದ್ದ ದಯಾಳ್‌ಗೆ ಸದರಿ ವಿಚಾರ ಅರ್ಥವಾಗಿರಲೇ ಇಲ್ಲ!

ಒಟ್ಟಾರೆಯಾಗಿ ಈ ಬಾರಿ ದಯಾಳ್ ಪದ್ಮನಾಭನ್‌ರ ಭೀಕರ ತಮಿಳ್ಗನ್ನಡದ ಜೊತೆಗೆ ಅವರ ವಿತಂಡವಾದಗಳನ್ನೂ ತಡೆದುಕೊಳ್ಳುವ ದೌರ್ಭಾಗ್ಯ ಬಿಗ್‌ಬಾಸ್ ಪ್ರೇಕ್ಷಕರಿಗೆ ಒಕ್ಕರಿಸಿಕೊಂಡಿತ್ತು. ಒಂದು ಕ್ಷಮೆ ಕೇಳಲೂ ದೌಲತ್ತು ತೋರಿಸುತ್ತಾ, ತನ್ನ ನಿರ್ಧಾರ ಅಲ್ಟಿಮೇಟ್ ಎಂಬಂತಾಡುತ್ತಾ, ಟಾಸ್ಕ್‌ನ ನಿಯಮಾವಳಿಗಳನ್ನೇ ತನಗೆ ಬೇಕಾದಂತೆ ಪಳಗಿಸಿಕೊಳ್ಳೋ ವರಸೆ ತೋರಿಸಿದ ದಯಾಳ್ ಇಂಥಾದ್ದರಿಂದಲೇ ಬಹು ಬೇಗನೆ ಹೊರಬಿದ್ದಿದ್ದಾರೆ.

 

 

ಮೊಟ್ಟೆ ಟಾಸ್ಕಿನಲ್ಲಿ ತಾನು ಭಾರೀ ಎಥಿಕ್ಸ್ ಹೊಂದಿರೋ ಆಸಾಮಿ ಎಂಬಂತೆ ತೋರಿಸಿಕೊಂಡು ತಮ್ಮದೇ ಟೀಮಿನ ರಿಯಾಜ್‌ರನ್ನು ಬೈದಿದ್ದ ದಯಾಳ್ ಈ ವಾರ ಹಾಲಿನ ವಿಚಾರದಲ್ಲಿ ಬೆತ್ತಲಾಗಿದ್ದರು. ಒಂದಷ್ಟು ಪ್ಯಾಕು ಹಾಲನ್ನು ಅವುಸಿಟ್ಟು, ಸಮೀರ್ ಆಚಾರ್ಯ ಒಂದು ಗ್ಲಾಸ್ ಹಾಲು ಕೇಳಿ ಗಲಾಟೆ ಸಂಭವಿಸಿದಾಗಲೂ ಸಂಭಾವಿತರಂತೆ ಮಧ್ಯಸ್ಥಿಕೆ ವಗಿಸಿದ್ದವರು ದಯಾಳ್. ಈ ವಿಚಾರವಾಗಿ ಸುದೀಪ್ ಅವರಿಂದಲೇ ಬೆಂಡೆತ್ತಿಸಿಕೊಂಡ ದಯಾಳ್ ಕಡೆಗೂ ಹೊರ ಬಿದ್ದಿದ್ದಾರೆ.

ಆದರೆ, ಹೊರ ಜಗತ್ತು ಮಾತ್ರ ದಯಾಳ್ ಪಾಲಿಗೆ ಬಿಗ್‌ಬಾಸ್ ಮನೆಗಿಂತಲೂ ಕಠೋರವಾಗಿದೆ. ಇಲ್ಲಿ ರಿಯಲ್ ಟಾಸ್ಕುಗಳು ಅವರಿಗಾಗಿ ಕಾದು ಕೂತಿವೆ. ಸತ್ಯಹರಿಶ್ಚಂದ್ರ ಸಿನಿಮಾ ನಿರ್ದೇಶನ ಮಾಡಿ ಅದು ಬಿಡುಗಡೆಯಾಗೋ ಒಂದು ವಾರ ಮುಂಚೆಯೇ ಪೇರಿ ಕಿತ್ತಿದ್ದವರು ದಯಾಳ್. ಕಾಸು ಸುರಿದ ನಿರ್ಮಾಪಕ ಕೊಬ್ರಿ ಮಂಜು ದೈನ್ಯದಿಂದ ಬೇಡಿಕೊಂಡರೂ ಬಿಗ್‌ಬಾಸ್ ಮನೆ ಸೇರಿದ್ದ ದಯಾಳ್‌ಗೆ ಹೊರ ಬಿದ್ದೇಟಿಗೆ ಸೋಲಿನ ಆಘಾತದ ಸುದ್ದಿ ಕಾದು ಕೂತಿದೆ. ತಾವೇ ನಿರ್ದೇಶನ ಮಾಡಿದ್ದ ಚಿತ್ರ ಬಿಡುಗಡೆಯಾಗಿತ್ತೆಂಬ ಸಾಕ್ಷಿಗಾದರೂ ಅದು ಚಿತ್ರಮಂದಿರಗಳಲ್ಲಿಲ್ಲ. ಇನ್ನೊಂದು ಕಡೆ ಲುಕ್ಸಾನು ಮಾಡಿಕೊಂಡು ರೊಚ್ಚಿಗೆದ್ದಿರೋ ಕೊಬ್ರಿ ಮಂಜಣ್ಣ ಕೂದಲು ಕೆದರಿಕೊಂಡು ಕಾದು ಕುಂತಿದ್ದಾರೆ!

 

 

ಹೀಗೆ ಹೊರ ಜಗತ್ತಿನಲ್ಲಿ ನಾನಾ ಸಮಸ್ಯೆಗಳ ವ್ಯಾಘ್ರ ಘರ್ಜಿಸುತ್ತಾ ಕಾದಿರೋವಾಗ ಮಿಕದಂಥಾ ದಯಾಳ್‌ರನ್ನು ಬೋನಿಂದ ಹೊರಗೆಸೆದ ಬಿಗ್‌ಬಾಸ್‌ಗೆ ನಿಜಕ್ಕೂ ಕರುಣೆಯಿಲ್ಲ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top