fbpx
ಮನೋರಂಜನೆ

ಯಾರಿವನು ಬುಲ್ ಬುಲ್ ?

ಸ್ಟಾರ್ ನಟರ ಜೊತೆ ನಟಿಸುತ್ತಲೇ ನಂಬರ್ ಒನ್ ರೇಸಿನಲ್ಲಿರೋ ನಟಿ ರಚಿತಾ ರಾಮ್. ಈವರೆಗೂ ಸಿನಿಮಾಗಳ ಹೊರತಾಗಿ ಬೇರ‍್ಯಾವ ಗಾಸಿಪ್‌ಗಳಿಗೆ ಆಹಾರವಾಗದ ರಚಿತಾ ಇದೀಗ ಅಫೇರೊಂದರ ಸಂಶಯಕ್ಕೀಡಾಗಿ ಸುದ್ದಿಯಲ್ಲಿದ್ದಾರೆ!

 

ಅದಕ್ಕೆ ಕಾರಣವಾಗಿರೋದು ಒಬ್ಬ ಹುಡುಗ!

ರಚಿತಾ ಹೋದಲ್ಲಿ ಬಂದಲ್ಲಿ ಈ ಹುಡುಗ ಜೊತೆಗಿರುತ್ತಾನೆ ಅನ್ನೋ ದಟ್ಟವಾದ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ರಚಿತಾ ರಾಮ್ ಡಿಂಗ್ರಿ ನಾಗರಾಜ್ ಪುತ್ರ ರಾಜ್‌ವರ್ಧನ್ ಜೊತೆಗಿರೋ ಫೋಟೋವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಮೆಲ್ಲಗೆ ಓಡಾಟ ಆರಂಭಿಸಿದೆ. ಇದೇ ಫೋಟೋದಲ್ಲಿ ರಚಿತಾರ ಮತ್ತೊಂದು ಮಗ್ಗುಲಲ್ಲಿರೋ ಹುಡುಗ ಅವರ ಬಾಯ್‌ಫ್ರೆಂಡ್ ಎಂಬ ಗಾಸಿಪ್ ಶರವೇಗದಲ್ಲಿ ಹಬ್ಬಿದೆ.

 

ಇದು ನಿಜವಾ ಎಂಬ ಬಗ್ಗೆ ತಲಾಶಿಗಿಳಿದಾಗ ಒಂದಷ್ಟು ವಿವರಗಳು ಹೊರ ಬಿದ್ದಿವೆ. ರಾಜ್‌ವರ್ಧನ್ ಮತ್ತು ರಚಿತಾ ಬಹು ಕಾಲದ ಗೆಳೆಯರು. ಕೊಂಚ ಫ್ರೀ ಇದ್ದಾಗ ಇವರು ಒಟ್ಟಿಗೆ ಅಡ್ಡಾಡಿಕೊಂಡಿರುತ್ತಾರಂತೆ. ಆದರೆ ಈ ಟೀಮಿಗೆ ಒಂದಷ್ಟು ಕಾಲದ ಹಿಂದೆ ಎಂಟ್ರಿ ಕೊಟ್ಟವನು ಹರಣ್ ರಾಜ್. ಸದರಿ ಫೋಟೋದಲ್ಲಿರುವ ಆಕೃತಿ ಆತನದ್ದೇ.

ರಾಜಕಾರಣಿಯೊಬ್ಬರ ಕುಟುಂಬಕ್ಕೆ ಸೇರಿದ ಈ ಹರಣ್ ರಾಜ್ ಬೆಂಗಳೂರಿನ ವಿಜಯನಗರದವನು. ಇನ್ನೂ ಕಾಲೇಜು ವಿದ್ಯಾರ್ಥಿಯಾದ ಈತನದ್ದು ಚಿಕ್ಕ ವಯಸ್ಸು. ರಚಿತಾ ರಾಮ್‌ಗಿಂದ ಏನಿಲ್ಲವೆಂದರೂ ಮೂರ್ನಾಲಕ್ಕು ವರ್ಷ ಚಿಕ್ಕವನು. ಆದ್ದರಿಂದ ರಚಿತಾ ಮತ್ತು ಹರಣ್ ನಡುವೆ ಅಂಥಾದ್ದೇನೂ ಇಲ್ಲ ಅಂತ ಹತ್ತಿರದವರೇ ಹೇಳುತ್ತಾರೆ.

 

ಆದರೆ, ಬೆಂಗಳೂರು ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಕಾಲೇಜಿನಲ್ಲಿ ಓದಿಕೊಂಡಿರೋ ಹರಣ್ ಸ್ಟಾರ್ ನಟಿ ರಚಿತಾಗೆ ಈ ಪರಿ ಹತ್ತಿರಾದದ್ದು ಹೇಗೆ ಎಂಬೊಂದು ಕುತೂಹಲ ಸಹಜವಾಗಿಯೇ ಕಾಡುತ್ತದೆ. ಸ್ಥಿತಿವಂತ ಕುಟುಂಬದ ಹರಣ್ ರಾಜ್ ಇಂಥಾ ಅನೇಕ ನಟೀಮಣಿಯರ ಆಪ್ತ ವಲಯದಲ್ಲಿದ್ದಾನಂತೆ. ಆದರೂ ಇಂಥಾ ಹುಡುಗ ರಚಿತಾರ ಖಾಸಗೀ ಕ್ಷಣಗಳಲ್ಲೂ ಜೊತೆಯಾಗೋವಷ್ಟು ಅನ್ಯೋನ್ಯವಾಗಿರೋದು ಹೇಗೆಂಬ ಪ್ರಶ್ನೆಯೊಂದು ಹಾಗೇ ಉಳಿದುಕೊಳ್ಳುತ್ತದೆ.

 

ನಮ್ಮ ಕನ್ನಡದ ನ್ಯೂಸ್ ಚಾನೆಲ್ಲಿನವರಿಗೆ ಇಷ್ಟು ಸಿಕ್ಕರೂ ಸಾಕು, ಅದನ್ನೇ ಎಳೆದೆಳೆದೂ ತೋರಿಸಿ ತಲೆಗೊಬ್ಬರು ತನಿಖೆ ಆರಂಭಿಸಿ, ಸಿನಿಮಾರಂಗದಲ್ಲಿ ಮಾಮೂಲಿಯಾದ ಇಂಥಾ ಗಾಸಿಪ್ಪನ್ನು ‘ಬ್ರೇಕಿಂಗ್ ನ್ಯೂಸ್’ ಮಾಡಿಬಿಡುತ್ತಾರೆ. ಈ ವಿಚಾರ ವಿನಾಕಾರಣ ರಾಡಿಯೆಬ್ಬಿಸೋ ಮುನ್ನ ರಚಿತಾ ಈ ಬಗ್ಗೆ ಮಾತಾಡಿದರೊಳಿತು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top