fbpx
ಮನೋರಂಜನೆ

‘ಡಿ’ ಬ್ರದರ್ಸ್ ಗ್ರೀನ್ ಸಿಗ್ನಲ್ ಸಿಕ್ಕಮೇಲಷ್ಟೇ ಆರಂಭ’

‘ಡಿ’ ಬ್ರದರ್ಸ್ ಗ್ರೀನ್ ಸಿಗ್ನಲ್ ಸಿಕ್ಕಮೇಲಷ್ಟೇ ಆರಂಭ’

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಟುಂಬದ ಮತ್ತೊಂದು ಪ್ರತಿಭೆ ಮನೋಜ್. ಇಷ್ಟರಲ್ಲೇ ಮನೋಜ್ ಹೀರೋ ಆಗಿ ಲಾಂಚ್ ಆಗಲಿರುವ ಸಿನಿಮಾವೊಂದು ಸೆಟ್ಟೇರಲಿದೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಮನೋಜ್ ಹೀರೋ ಆಗಿ ನಟಿಸಲಿರುವ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಲಿದ್ದಾರೆ ಅನ್ನೋ ಮಾತು ಕೂಡಾ ಕೇಳಿಬರುತ್ತಿದೆ. ಸಾಮಾನ್ಯವಾಗಿ ಸೂಪರ್ ಸ್ಟಾರ್‌ಗಳ ಕುಟುಂಬಕ್ಕೆ ಸಂಬಂಧಿಸಿದ ಸಣ್ಣದೊಂದು ವಿಚಾರ ಕೂಡಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಸದ್ಯ ದರ್ಶನ್ ಅವರ ಅಳಿಯ ಮನೋಜ್ ಸಿನಿಮಾಗೆ ಸಂಬಂಧಿಸಿದಂತೆ ಹಬ್ಬಿರುವ ವಿಚಾರದ ಕುರಿತಾಗಿ ಅಂತೆ ಕಂತೆಗಳನ್ನು ಬರೆಯೋದಕ್ಕಿಂತ ನೇರವಾಗಿ ಮನೋಜ್ ಅವರನ್ನೇ ಮಾತಾಡಿಸಿದರೆ ಒಳ್ಳೇದು ಎನ್ನುವ ಹಿನ್ನೆಲೆಯಲ್ಲಿ ಖುದ್ದು ಮನೋಜ್ ಅವರನ್ನು ಸಂಪರ್ಕಿಸಿ ಸಿನಿಬಜ಼್ ನಡೆಸಿದ ಸಂದರ್ಶನದ ವಿವರ ಇಲ್ಲಿದೆ…

 

 

ಹೀರೋ ಆಗಿ ಲಾಂಚ್ ಆಗುತ್ತಿದ್ದೀರಂತೆ ನಿಜಾನಾ?
ನಾನು ಈಗಾಗಲೇ ಕೆಲವಾರು ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದರಲ್ಲೂ ನಮ್ಮ ಮಾವ ದರ್ಶನ್ ಅವರ ಜೊತೆಗೆ ನಟಿಸಿದ ಅಂಬರೀಶದಲ್ಲಿ ನನಗೆ ಒಂದೊಳ್ಳೆ ಅವಕಾಶ ಸಿಕ್ಕಿತ್ತು. ನಂತರ ಚಕ್ರವರ್ತಿ ಸಿನಿಮಾದಲ್ಲಿ ಕೂಡಾ ಗುರುತಿಸಿಕೊಳ್ಳುವಂಥದ್ದೊಂದು ಪಾತ್ರ ನನ್ನದಾಗಿತ್ತು. ಯಾವುದೇ ಪಾತ್ರ ಸಿಕ್ಕರೂ ಅದನ್ನು ತನ್ಮಯತೆಯಿಂದ ಮಾಡಿಕೊಂಡುಬರಬೇಕು ಅನ್ನೋದು ನಮ್ಮ ಮಾವ ನನಗೆ ಹೇಳುತ್ತಲೇ ಬಂದಿರುವ ಕಿವಿಮಾತು. ಈ ಹಿನ್ನೆಲೆಯಲ್ಲಿ ನೋಡಿದರೆ, ಚಕ್ರವರ್ತಿ ಸಿನಿಮಾ ರಿಲೀಸಾದಮೇಲಂತೂ ಅನೇಕ ಆಫರುಗಳು ಬಂದವು. ಅವಕಾಶ ಸಿಕ್ಕಿತೆಂದು ಎಲ್ಲವನ್ನೂ ಒಪ್ಪಿಕೊಳ್ಳೋದು ಒಳ್ಳೇದಲ್ಲ ಅನ್ನೋದು ನನ್ನ ನಂಬಿಕೆ. ಜೊತೆಗೆ ನಾನು ಹೀರೋನೇ ಆಗಬೇಕು ಅಂತಾ ಯಾವತ್ತೂ ಆಸೆ ಪಟ್ಟವನಲ್ಲ. ಒಂದೊಳ್ಳೆ ಪಾತ್ರ ಇದ್ದರೆ ಸಾಕು ನಾನು ನಟಿಸಲು ರೆಡಿ. ಇನ್ನು, ನೀವು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸುವ ಮೊದಲು ಒಂದು ಮುಖ್ಯವಾದ ಅಂಶವಾದ ಅಂಶವನ್ನು ನಿಮ್ಮ ಮೂಲಕ ಸ್ಪಷ್ಟಪಡಿಸಲು ಬಯಸುತ್ತೇನೆ. ಅದೇನೆಂದರೆ, ನಾನು ಹೀರೋ ಆಗಿ ಲಾಂಚ್ ಆಗುತ್ತೇನೆ ಅನ್ನೋದಕ್ಕಿಂತಾ ಪೂರ್ಣಪ್ರಮಾಣದಲ್ಲಿ ಒಬ್ಬ ಕಲಾವಿದನಾಗಿ ಪರಿಚಯಗೊಳ್ಳಲು ಇಷ್ಟ ಪಡುತ್ತೇನೆ. ಎಲ್ಲದಕ್ಕಿಂತ ಮುಖ್ಯವಾಗಿ ನಾನು ಯಾವುದೇ ರೀತಿಯಲ್ಲಿ ಲಾಂಚ್ ಆಗೋದಿದ್ದರೂ ಅದಕ್ಕೆ ನಮ್ಮ ಮಾವನವರ ಒಪ್ಪಿಗೆ ಬಂದ ನಂತರವಷ್ಟೇ.

 

 

ನೀವು ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳುತ್ತಿರುವುದರ ಬಗ್ಗೆ ದರ್ಶನ್ ಅವರ ಅಭಿಪ್ರಾಯ ಏನು?
ನಾನು ಯಾವುದೇ ಹೆಜ್ಜೆ ಇಡುವ ಮುಂಚೆ ನಮ್ಮ ದರ್ಶನ್ ಮತ್ತು ದಿನಕರ್ ಇಬ್ಬರೂ ಮಾವಂದಿರ ಬಳಿ ಚರ್ಚಿಸಿ, ಅವರ ಮಾರ್ಗದರ್ಶನ ಪಡೆದನಂತರವಷ್ಟೇ ಮುಂದುವರೆಯೋದು. ಚಿತ್ರರಂಗ ಏನು ಅನ್ನೋದು ನಮ್ಮ ಮಾವಂದಿರಿಗೆ ಸ್ಪಷ್ಟವಾಗಿ ಗೊತ್ತಿರೋ ವಿಚಾರ. ಸದ್ಯ ನನಗೆ ಬಂದಿರುವ ಆಫರ್ ಗಳ ಕುರಿತಾಗಿ ಪ್ರತಿಯೊಂದು ವಿಚಾರವನ್ನೂ ಮಾವಂದಿರಿಗೆ ತಿಳಿಸಿದ್ದೇನೆ. ಇವತ್ತು ದರ್ಶನ್ ಅವರು ಇಷ್ಟು ದೊಡ್ಡ ಹೆಸರು ಮಾಡಿದ್ದಾರೆಂದರೆ ಅದಕ್ಕೆ ಕಾರಣ ಅವರ ಶ್ರಮ ಮಾತ್ರ. ನಾನು ಆಯ್ಕೆ ಮಾಡಿಕೊಳ್ಳುವ ಸಿನಿಮಾ ಮತ್ತು ದಾರಿ ಉತ್ತಮವಾಗಿದ್ದರೆ ಬಹುಶಃ ಅವರಷ್ಟು ಖುಷಿ ಪಡುವವರು ಬೇರೆ ಯಾರೂ ಇರಲಾರರು. ಅವರು ನನಗೆ ಪದೇ ಪದೇ ಹೇಳುವ ಕಿವಿಮಾತೆಂದರೆ `ಹುಷಾರಾಗಿ ಹೆಜ್ಜೆ ಇಡು…’ ಅನ್ನೋದು. ನಾನು ಯಾವತ್ತಿಗೂ ಅವರ ಮಾತನ್ನು ವೇದವಾಕ್ಯತಂತೆ ಪಾಲಿಸಲು ಇಚ್ಚಿಸುತ್ತೇನೆ. ಈ ಕಾರಣಕ್ಕೇ ಎಷ್ಟೇ ಆಫರ್ ಗಳು ಬಂದರೂ ನಮ್ಮ ಕುಟುಂಬದವರಿಗೆ ಒಪ್ಪಿಗೆ ಯಾಗುವಂಥ ಪ್ರಾಜೆಕ್ಟ್ ಸಿಕ್ಕಮೇಲಷ್ಟೇ ಮುಂದುವರೆಯಬೇಕು ಅಂತಾ ನಿರ್ಧರಿಸಿದ್ದೇನೆ.

 

 

ಹಾಗಾದರೆ ದರ್ಶನ್ ಅವರ ಕಡೆಯಿಂದ ಇನ್ನೂ ಒಪ್ಪಿಗೆ ಬಂದಿಲ್ಲವಾ?
ಇಲ್ಲೀವರೆಗೆ ನನಗೆ ಬಂದಿರುವ ಪ್ರತಿಯೊಂದು ಅವಕಾಶವನ್ನೂ ಮಾವಂದಿರ ಗಮನಕ್ಕೆ ತಂತಿದ್ದೇನೆ. ಸದ್ಯ ನನಗೆ ಇಷ್ಟವಾಗಿರುವ ಒಂದೆರಡು ಪ್ರಾಜೆಕ್ಟ್‌ಗಳ ನಿರ್ದೇಶಕರು ಮತ್ತು ನಿರ್ಮಾಪಕರನ್ನು ದರ್ಶನ್ ಸರ್ ಗೆ ಪರಿಚಯಿಸಬೇಕು. ಅಧಿಕೃತವಾಗಿ ಅವರು `ಓಕೆ ಶುರು ಮಾಡಿ’ ಎಂದಮೇಲಷ್ಟೇ ಆರಂಭ.

 

 

ನೀವು ಕೂಡಾ ನಿಮ್ಮ ಮಾವ ದರ್ಶನ್ ಅವರನ್ನು ಹೋಲುತ್ತೀರಿ ಅನ್ನೋದು ಅನೇಕರ ಅಭಿಪ್ರಾಯ. ನೀವೇನಂತೀರಿ..
ಅದು ನೋಡುವವರ ಕಣ್ಣು, ಮನಸ್ಸಿಗೆ ಬಿಟ್ಟಿದ್ದು. ಆದರೆ ನನ್ನದೊಂದು ರಿಕ್ವೆಸ್ಟ್ ; ಅವರಂತೆ ಎತ್ತರ, ಹೋಲಿಕೆ ಇದ್ದಮಾತ್ರಕ್ಕೆ ನನ್ನನ್ನು ಅವರೊಟ್ಟಿಗೆ ಹೋಲಿಕೆ ಮಾಡೋದು ನನಗೆ ತೀರಾ ಮುಜುಗರ ಮತ್ತು ಅಂಜಿಕೆಯ ವಿಚಾರ. ಅವರು ಎತ್ತರದಲ್ಲಿ ಮಾತ್ರವಲ್ಲ, ಪ್ರತಿಭೆ, ಗುಣ, ವ್ಯಕ್ತಿತ್ವ ಎಲ್ಲದರಲ್ಲೂ ದೊಡ್ಡ ಸ್ಥಾನ ಪಡೆದಿರುವವರು. ಇದೇ ಕಾರಣಕ್ಕೆ ಅಲ್ಲವೇ ಲೆಕ್ಕವಿಲ್ಲದಷ್ಟು ಅಭಿಮಾನಿಗಳ ಮನಸ್ಸಿನಲ್ಲಿ ಅವರು `ಬಾಸ್’ ಆಗಿ ಜಾಗ ಪಡೆದಿರೋದು. ನನ್ನ ಪಾಲಿಗೂ ಅವರೇ ಬಾಸ್. ಅಂಥಾ ಬೃಹತ್ ಮರದ ನೆರಳಿನಲ್ಲಿ ಚಿಗುರಬೇಕಿರುವ ಸಣ್ಣ ಸಸಿಯಾಗಲು ಇಷ್ಟ ಪಡುತ್ತೇನೆ.

 

 

ನಿಮ್ಮ ಸಿನಿಮಾವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಲಿದ್ದಾರಂತೆ… ಹೌದಾ?
ಅರವಿಂದ್ ಕೌಶಿಕ್ ಹೊಸ ರೀತಿಯ ಸಿನಿಮಾಗಳನ್ನು ನೀಡುತ್ತಾ ಬಂದವರು. ಈಗಾಗಲೇ ಒಂದು ಸುಂದರವಾದ ಕಥೆಯೊಂದನ್ನು ಅರವಿಂದ್ ಸರ್ ಹೇಳಿದ್ದಾರೆ. ನಮ್ಮ ಮಾವಂದಿರು ಆ ಕಥೆಯನ್ನು ಕೇಳಿ `ಎಸ್’ ಎಂದಕೂಡಲೇ ಆರಂಭಿಸುವ ಪ್ಲಾನ್ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top