fbpx
ಮನೋರಂಜನೆ

ಹುಲಿರಾಯ ಗಾಯಗೊಂಡಿದ್ದು ಯಾರಿಂದ..?

ಹುಲಿರಾಯ ಗಾಯಗೊಂಡಿದ್ದು ಯಾರಿಂದ..?

 

 

ಕನ್ನಡ ಚಿತ್ರರಂಗದಲ್ಲಿ ಏಕಾಏಕಿ ವಿತರಕರಾಗಿ ಉದ್ಭವಿಸಿ ಆರಂಭದಲ್ಲೇ ಲಾಭದ ರುಚಿ ಕಂಡವರು ಪುಷ್ಕರ್ ಮಲ್ಲಿಕಾರ್ಜುನಯ್ಯ. ಇವರು ವಿತರಕರಾದರೆ ಚಿತ್ರದ ನಸೀಬು ಖುಲಾಯಿಸಿ ಸೂಪರ್ ಹಿಟ್ಟಾಗುತ್ತೆ ಎಂಬಂಥಾ ಭ್ರಮೆ ಕೂಡಾ ಇವರದ್ದೇ ಬುಡದಿಂದ ಗಾಂಧಿನಗರದ ಉದ್ದಗಲಕ್ಕೂ ರಾಚಿಕೊಂಡಿತ್ತು. ಇಂಥಾ ಪುಷ್ಕರ್ ಇದೀಗ ಹುಲಿರಾಯ ಚಿತ್ರದಿಂದ ಭಾರೀ ನಷ್ಟವಾಗಿದೆ ಅಂತ ಅಕ್ಕಪಕ್ಕದ ಟಾಲಿವುಡ್, ಬಾಲಿವುಡ್‌ಗೂ ಕೇಳಿಸುವಂತೆ ಆರ್ತನಾದ ಹೊರಡಿಸಲಾರಂಭಿಸಿದ್ದಾರೆ!

 

 

ಹುಲಿರಾಯ ಚಿತ್ರದ ವಿರತಣಾ ಹಕ್ಕುಗಳನ್ನು ಖರೀದಿಸಿದ್ದರಿಂದ ಮೂವತ್ತೇಳು ಲಕ್ಷ ನಷ್ಟವಾಗಿದೆ ಎಂಬಂಥಾ ಲೆಕ್ಕವನ್ನು ಮಲ್ಲಿಖಾರ್ಜುನಯ್ಯ ಟಾಂ ಟಾಂ ಬಾರಿಸಿದ್ದಾರೆ. ಏನೋ ಹೊಸಾ ಪ್ರಯತ್ನವನ್ನು ಸಪೋರ್ಟ್ ಮಾಡಲು ಹೋಗಿ ಕೈ ಸುಟ್ಟುಕೊಂಡಿರೋದಾಗಿ ಬಡ ಬಡಿಸುತ್ತಲೇ, ಹೀಗಾದರೆ ಇಂಥಾ ಚಿತ್ರಗಳಿಗೆ ಸಪೋರ್ಟ್ ಮಾಡೋ ಸಾಹಸಕ್ಕೆ ಕೈ ಹಾಕಬೇಕಾ ಎಂಬಂಥಾ ಆತ್ಮಾವಲೋಕನದ ಧಾಟಿಯಲ್ಲೂ ಅವರು ಹೇಳಿಕೆ ಹೊರಡಿಸುತ್ತಿದ್ದಾರೆ.

 

 

ಆದರೆ ಅಸಲೀ ವಿಚಾರವೇ ಬೇರೆಯದ್ದಿದೆ. ಅಷ್ಟಕ್ಕೂ ಹುಲಿರಾಯನಿಂದ ಪುಷ್ಕರ್ ಮಲ್ಲಿಕಾರ್ಜುನಯ್ಯ ಪರಚಿಸಿಕೊಂಡಿಲ್ಲ. ಸಾಕ್ಷಾತ್ತು ಹುಲಿರಾಯನೇ ಪುಷ್ಕರ್‌ರಿಂದ ಗಾಯಗೊಂಡಿದ್ದಾನೆ. ಹುಲಿರಾಯ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ. ಒಂದು ವೇಳೆ ನಿರ್ಮಾಪಕರೇ ಪ್ರಚಾರ ಮತ್ತು ಬಿಡುಗಡೆಯ ಜವಾಬ್ದಾರಿ ವಹಿಸಿಕೊಂಡಿದ್ದರೂ ಈ ಚಿತ್ರ ಖಂಡಿತಾ ಗೆಲ್ಲುತ್ತಿತ್ತು. ಆದರೆ, ಭಾರೀ ಹೈಫ್ ಕ್ರಿಯೇಟ್ ಮಾಡಿ ವಿತರಣಾ ಹಕ್ಕು ಖರೀದಿಸಿದ ಪುಷ್ಕರ್ ಕುಂತಲ್ಲೇ ಪುಷ್ಕಳ ಭೋಜನ ಸವಿಯೋ ಐಡಿಯಾಕ್ಕೆ ಕಟ್ಟು ಬಿದ್ದರು.ಅಷ್ಟಕ್ಕೂ ಪುಷ್ಕರ್‌ಗೆ ಹುಲಿರಾಯನ ಗೆಲುವೇ ಮುಖ್ಯವಾಗಿದ್ದರೆ ಬಿಡುಗಡೆ ವಿಚಾರದಲ್ಲಿ ಈ ಪರಿ ಆಟವಾಡುತ್ತಿರಲಿಲ್ಲ. ಅವರು ಆರಂಭದಲ್ಲಿ ಚಿತ್ರವನ್ನು ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡೋದಾಗಿ ಹೇಳಿಕೊಂಡಿದ್ದರು. ಆದರೆ ಕಡೇ ಕ್ಷಣದಲ್ಲಿ ಬಿಡುಗಡೆ ಮಾಡಿದ್ದು ಬೀಗ ಜಡಿಸಿಕೊಳ್ಳಲು ಕ್ಷಣಗಣನೆ ಆರಂಭಿಸಿದ್ದ ಕಪಾಲಿ ಚಿತ್ರ ಮಂದಿರದಲ್ಲಿ. ಇದರಲ್ಲಿ ಬಿಡುಗಡೆ ಮಾಡಿದರೆ ಹಿನ್ನಡೆಯಾಗುತ್ತದೆ ಅಂತ ಗೊತ್ತಿದ್ದರೂ ಪುಷ್ಕರ್ ಯಾಕೆ ಈ ನಿರ್ಧಾರ ತೆಗೆದುಕೊಂಡರು. ಇಷ್ಟಕ್ಕೂ ಕಪಾಲಿ ಚಿತ್ರಮಂದಿರದ ಮೇಲೆ ನೋಟೀಸ್ ಇದ್ದ ವಿಚಾರ ಇವರಿಗೆ ಗೊತ್ತಿರಲಿಲ್ಲವೇ? ಅದಕ್ಕೆ ನಿರ್ಮಾಪಕರು ಹೇಗೆ ಹೊಣೆಯಾಗುತ್ತಾರೆ?

 

 

ಇನ್ನು ಪ್ರಚಾರಕ್ಕೇ ನಲವತ್ತೂ ಚಿಲ್ಲರೆ ಲಕ್ಷ ಖರ್ಚಾಗಿದೆ ಅಂತ ಲೆಕ್ಕ ಕೊಡೋ ಪುಷ್ಕರ್ ಯಾವ ಥರದ ಪ್ರಚಾರ ಮಾಡಿದ್ದಾರೆ? ಏನೇನಕ್ಕೆ ಖರ್ಚು ಮಾಡಿದ್ದಾರೆಂಬ ಲೆಕ್ಕ ಕೊಡುತ್ತಾರಾ? ತಮ್ಮ ಕಡೆಯಿಂದಲೇ ತಪ್ಪುಗಳಿದ್ದರೂ ಅದರ ಭಾರವನ್ನು ಚಿತ್ರದ ಮೇಲೆ, ನಿರ್ಮಾಪಕರ ಮೇಲೆ ಹೊರಿಸೋದು ಎಷ್ಟು ಸರಿ?ಪುಷ್ಕರ್ ಮಲ್ಲಿಖಾರ್ಜನಯ್ಯ ತಾವು ವಿತರಿಸಿದ ಚಿತ್ರಗಳು ಗೆಲುವು ದಾಖಲಿಸುತ್ತಲೇ ತಾರಾಮಾರ ಮೆರೆದಾಡಲಾರಂಭಿಸಿದ್ದರು. ತೀರಾ ಮಾಧ್ಯಮದವರನ್ನೇ ಗುಂಪು ಮಾಡಿ ಒಡೆಯೋ ಪ್ರಯತ್ನಕ್ಕೂ ಕೈ ಹಾಕಿದ್ದರು. ಇದಕ್ಕೊಂದು ಗತಿ ಕಾಣಿಸಲು ಒಂದಷ್ಟು ಮಂದಿ ತಯಾರಾಗಿ ನಿಂತಿದ್ದರಲ್ಲಾ? ಅವರೆಲ್ಲ ಹುಲಿರಾಯ ಚಿತ್ರವನ್ನೇ ಗುರಿ ಮಾಡಿಕೊಂಡು ಗುರಾಣಿ ಬೀಸಿದರು. ಕೆಲ ತಟ್ಟೆ ಕಾಸಿನ ಗಿರಾಕಿಗಳೂ ವಾಮಿಟ್ ಮಾಡಿಕೊಂಡ ಕಾರಣ ಒಳ್ಳೆ ಚಿತ್ರವೆಂದು ಹೊಗಳಿಸಿಕೊಂಡಿದ್ದ ಹುಲಿರಾಯ ಚಿತ್ರಕ್ಕೆ ಹಿನ್ನಡೆಯಾಗಿತ್ತು. ಈಗ ಹೇಳಿ ಹುಲಿರಾಯ ಗಾಯಗೊಂಡಿದ್ದು ಯಾರಿಂದ? ಇಷ್ಟೆಲ್ಲ ವಾಸ್ತವಗಳಿರೋವಾಗ ಲುಕ್ಸಾನಿನ ಲೆಕ್ಕ ಒದರಿಕೊಂಡು ಅಡ್ಡಾಡೋದರಲ್ಲಿ ಏನರ್ಥ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top