fbpx
ಮನೋರಂಜನೆ

ಕಾಲೇಜಿನಲ್ಲಿ ಬಕಾಸುರನಿಗೇನು ಕೆಲಸ?

ನವನೀತ್ ನಿರ್ದೇಶನದ ‘ಬಕಾಸುರ ಚಿತ್ರ ಇನ್ನೇನು ತೆರೆಕಾಣಲು ಕ್ಷಣಗಣನೆ ಶುರುವಾಗಿದೆ. ಇದೀಗ ಬಕಾಸುರ ಚಿತ್ರತಂಡ ಕರ್ನಾಟಕದ ಆಯ್ದ ಜಿಲ್ಲೆಗಳತ್ತ ಪ್ರಯಾಣ ಬೆಳೆಸಿದೆ. ಚಿತ್ರದ ಪ್ರಚಾರ ಕಾರ್ಯಕ್ಕೆಂದು ಯುವ ಮನಸುಗಳು ತುಂಬಿರೋ ಕಾಲೇಜುಗಳತ್ತ ಚಿತ್ರ ತಂಡಗಳ ಗಮನ ಹರಿಯೋದು ಮಾಮೂಲು. ಆದರೆ ಈ ನಿಟ್ಟಿನಲ್ಲಿ ಬಕಾಸುರ ಚಿತ್ರತಂಡ ಭಿನ್ನವಾದೊಂದು ಕಾರ್ಯಕ್ರಮ ಹಮ್ಮಿಕೊಂಡಿದೆ.

 

 

ಚಿತ್ರ ತಂಡ ಬಹುತೇಕ ಜಿಲ್ಲೆಗಳ ತಲಾ ಎರಡು ಕಾಲೇಜುಗಳನ್ನು ಭೇಟಿಗೆ ಗೊತ್ತುಪಡಿಸಿಕೊಳ್ಳುತ್ತದೆ. ಆ ನಂತರ ಚಿತ್ರತಂಡ ಅಲ್ಲಿನ ವಿದ್ಯಾರ್ಥಿಗಳ ಜೊತೆ ಚಿತ್ರದ ಬಗ್ಗೆ ಸಂವಾದ ನಡೆಸುತ್ತದೆ. ಈ ಭೇಟಿಗೂ ಮುನ್ನ ಚಿತ್ರ ತಂಡದ ಕೆಲ ಮಂದಿ ಆಯಾ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳಿಗೆ ಕೂಪನ್‌ಗಳನ್ನು ಹಂಚಿರುತ್ತಾರೆ. ನಂತರ ಅದರಲ್ಲಿ ಹತ್ತು ವಿದ್ಯಾರ್ಥಿಗಳನ್ನು ಲಕ್ಕಿ ಡಿಪ್ ಮಾದರಿಯಲ್ಲಿ ಆರಿಸಲಾಗುತ್ತದೆ.

 

 

 

ಆ ನಂತರ ಆ ಹತ್ತು ವಿದ್ಯಾರ್ಥಿಗಳನ್ನು ಎಸ್‌ಟಿಡಿ ಬೂತ್ ಮಾದರಿಯ ಬಾಕ್ಸ್‌ನೊಳಗೆ ಬಿಡಲಾಗುತ್ತದೆ. ಅಲ್ಲಿ ನಕಲಿ ನೋಟುಗಳನ್ನು ಹರಡಿ ಗಾಳಿ ಮೂಲಕ ಹಾರಾಡಿಸಲಾಗುತ್ತದೆ. ಹತ್ತು ಸೆಕೆಂಡಿನಲ್ಲಿ ಯಾರು ಹೆಚ್ಚು ನೋಟು ಆಯ್ದುಕೊಳ್ಳುತ್ತಾರೋ ಆ ವಿದ್ಯಾರ್ಥಿಗೆ ಸ್ಕಾಲರ್‌ಶಿಪ್ ರೂಪದಲ್ಲಿ ಇಪ್ಪತ್ತು ಸಾವಿರ ಅಥವಾ ಒಂದು ಸೆಮಿಸ್ಟರ್ ಫೀಸನ್ನು ಬಕಾಸುರ ಚಿತ್ರತಂಡವೇ ಪಾವತಿಸಲಿದೆ.

 

 

ಹಾಗೆಂದು ಮಿಕ್ಕ ವಿದ್ಯಾರ್ಥಿಗಳ ಕೂಪನ್‌ಗಳೇನು ವ್ಯರ್ಥವಲ್ಲ. ಬಕಾಸುರ ಚಿತ್ರ ಬಿಡುಗಡೆಯಾದ ಮೊದಲ ಅಥವಾ ಎರಡನೇ ದಿನ ಆ ಕೂಪನ್‌ಗಳನ್ನು ಥೇಟರಿನಲ್ಲಿ ಕೊಟ್ಟು ಸಿನಿಮಾ ನೋಡ ಬಹುದಾಗಿದೆ! ಈಗಾಗಲೇ ಬೆಳಗಾವಿಯ ಕಾಲೇಜುಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಇನ್ನು ಕರ್ನಾಟಕದ ಆಯ್ದ ಎಲ್ಲ ಜಿಲ್ಲೆಗಳ ಎರಡೆರಡು ಕಾಲೇಜುಗಳಲ್ಲಿ ಬಕಾಸುರ ಚಿತ್ರತಂಡ ಈ ಹೊಸಾ ಮಾದರಿಯ ಕಾರ್ಯಕ್ರಮ ನಡೆಸಲಿದೆ.

 

 

ಈ ವರೆಗೂ ಥರ ಥರದಲ್ಲಿ ಸದ್ದು ಮಾಡುತ್ತಾ ಸಾಗಿ ಬಂದಿರೋ ಈ ಚಿತ್ರ ಈಗಾಗಲೇ ಹಾಡುಗಳ ಮೂಲಕವೂ ಸದ್ದು ಮಾಡಿದೆ. ನವನೀತ್ ಈ ಚಿತ್ರದ ಕಥೆಯನ್ನೂ ಕೂಡಾ ಈ ಹಿಂದಿನಂತೆಯೇ ವಿಶೇಷವಾಗಿ ರಚಿಸಿದ್ದಾರಂತೆ. ಕಥೆ ರೆಡಿ ಮಾಡಿಕೊಳ್ಳುವಾಗಲೇ ಮುಖ್ಯ ಪಾತ್ರವೊಂದನ್ನು ರೂಪಿಸಿದ್ದು ಕನಸುಗಾರ ರವಿಚಂದ್ರನ್ ಅವರನ್ನೇ ಮನಸಲ್ಲಿಟ್ಟುಕೊಂಡು. ಈ ಪಾತ್ರಕ್ಕೆ, ಒಂದಿಡೀ ಕಥೆಗೆ ಮನಸೋತ ರವಿಚಂದ್ರನ್ ಅವರು ಖುಷಿಪಟ್ಟುಕೊಂಡೇ ಆ ಪಾತ್ರಕ್ಕೆ ಜೀವ ತುಂಬಿದ್ದೂ ಆಗಿದೆ.

ಹಾಗಾದರೆ ಈ ಚಿತ್ರದಲ್ಲಿ ರವಿಚಂದ್ರನ್ ಅವರದ್ದೇನು ಪಾತ್ರ ಎಂಬ ಕುತೂಹಲ ಸಹಜವೇ. ಇಲ್ಲಿ ರವಿಚಂದ್ರನ್ ಬಹು ದೊಡ್ಡ ಬ್ಯುಸಿನೆಸ್ ಮನ್ ಆಗಿ ನಟಿಸಿದ್ದಾರೆ. ಆರ್‌ಜೆ ರೋಹಿತ್ ಲಾಯರ್ ಆಗಿ ನಟಿಸಿದ್ದಾರೆ. ಗಾಂಧಾರಿ ಎಂಬ ಧಾರಾವಾಹಿಯ ಮೂಲಕ ಈಗಾಗಲೇ ಮನೆ ಮಾತಾಗಿರುವ ಕಾವ್ಯಾ ಗೌಡ ನಾಯಕಿಯಾಗಿ ಬಕಾಸುರನ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಪ್ರತಿಯೊಂದರಲ್ಲಿಯೂ ಕುತೂಹಲ ಕೆರಳಿಸುತ್ತಾ ಸಾಗಿರೋ ಈ ಚಿತ್ರ ಬುದ್ಧಿವಂತ ಮತ್ತು ಒಳ್ಳೆ ಮನುಷ್ಯನೋರ್ವ ಹಣದ ಹಿಂದೆ ಬಿದ್ದರೆ ಹೇಗೆ ರಾಕ್ಷಸನಾಗಿ ಬದಲಾಗುತ್ತಾನೆಂಬುದರ ಸುತ್ತ ಹರಕೊಂಡಿದೆಯಂತೆ. ಈ ಚಿತ್ರವನ್ನು ಯುವ ಸಮೂಹದ ಗಮನ ಸೆಳೆಯುವಂತೆ ಮಾಡೋ ನಿಟ್ಟಿನಲ್ಲಿಯೇ ಒಂದಷ್ಟು ವಿದ್ಯಾರ್ಥಿಗಳಿಗೆ ಉಪಯೊಗವಾಗೋ ಕಾರ್ಯಕ್ರಮ ಹಮ್ಮಿಕೊಂಡಿರುವ ಚಿತ್ರತಂಡ ಈ ಮೂಲಕವೇ ರಾಜ್ಯಾಧ್ಯಂತ ಸುತ್ತಾಟ ಆರಂಭಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top