fbpx
ಮನೋರಂಜನೆ

ಶಿಲ್ಪಾ ಗಣೇಶ್ VS ಕನ್ನಡ ಟ್ರಾಲ್ ಪೇಜ್ ಗಳು

ಟ್ರಾಲ್ ಪೇಜುಗಳ ವಿರುದ್ಧ ಪೊಲೀಸ್ ಇಲಾಖೆ ಗರಂ ಆಗಿದೆ. ಯಾವುದೋ ವಿಚಾರಕ್ಕೆ ಹೊತ್ತಿಕೊಂಡ ಕಾಳಗವನ್ನು ಕೆಲ ಟ್ರಾಲ್ ಪೇಜುಗಳು ಪೊಲೀಸರ ವಿರುದ್ಧದ ಅವಹೇಳನಕಾರಿ ಟ್ರಾಲಿಂಗ್‍ಗೆ ಬಳಸಿಕೊಂಡಿದ್ದೇ ಇಂಥಾದ್ದೊಂದು ವೈಮನಸ್ಯ ಹೊತ್ತಿಕೊಳ್ಳಲು ಕಾರಣ. ಈ ಮೂಲಕ ಕೆಲ ದಿನಗಳ ಹಿಂದೆ ಈ ಹಿಂದೆ ಪ್ರಕಾಶ್ ರೈ ಎತ್ತಿದ್ದ ಟ್ರಾಲ್ ಗೂಂಡಾಗಿರಿ ಎಂಬ ಟಾಪಿಕ್ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

 

 

ಇದೀಗ ಎಲ್ಲವನ್ನೂ ಅತಿ ವೆಗವಾಗಿ ಆಕ್ರಮಿಸಿಕೊಂಡಿರೋ ಆನ್‍ಲೈನ್ ಜಗತ್ತಿನಲ್ಲಿ ಹುಟ್ಟಿಕೊಂಡಿದ್ದ ಅಚ್ಚರಿಯಂಥಾ ಟ್ರಾಲಿಂಗ್ ಇದೀಗ ವಿವಾದದ ಕೇಂದ್ರ ಬಿಂದು. ಆರಂಭದಲ್ಲಿ ಕೇವಲ ಹಾಸ್ಯಕ್ಕೆ ಸೀಮಿತವಾಗಿದ್ದ ಟ್ರಾಲಿಂಗ್ ಇತ್ತೀಚೆಗೆ ಸಿನಿಮಾ, ರಾಜಕೀಯ, ಪಂಥ, ಪಂಗಡಗಳನ್ನೂ ಆವರಿಸಿಕೊಂಡಿದೆ. ಇಂಥಾದ್ದೊಂದು ಪಲ್ಲಟವೇ ಸದರಿ ವಿವಾದದ ಉಗಮಕ್ಕೆ ಕಾರಣವಾಯಿತಾ ಎಂಬ ಪ್ರಶ್ನೆ ಎಲ್ಲರೊಳಗೂ ಹುಟ್ಟಿಕೊಂಡಿದೆ.

 

 

ನಿಜ, ಕೆಲ ಟ್ರಾಲ್ ಪೇಜುಗಳು ಆರೋಗ್ಯವಂತ ವಿಚಾರಗಳನ್ನು ಮಜವಾದ ಶೈಲಿಯಲ್ಲಿ ಜನರೆದುರು ಇಡುತ್ತಿವೆ. ಸಿನಿಮಾ ವಿಚಾರಕ್ಕೆ ಬಂದರೆ ಚಿತ್ರಗಳಿಗೆ ಸಹಾಯವಾಗುವಂಥಾ ಟ್ರಾಲಿಂಗ್ ನಡೆಯುತ್ತಿರೋದೂ ಸತ್ಯ. ಆದರೆ ಇದರಾಚೆಗೆ ಟ್ರಾಲಿಂಗ್ ಜಗತ್ತು ಮತ್ತೊಂದು ಮುಖವನ್ನೂ ತಂತಾನೇ ಧರಿಸಿಕೊಂಡಿದೆ.

 

 

ಸಾಮಾಜಿಕ ವಿಚಾರಗಳ ಬಗ್ಗೆ, ಹೀರೋಗಳ ಮನ ಬಂದಂತೆ ಟ್ರಾಲ್ ಮಾಡೋ ಪ್ರಕ್ರಿಯೆಯ ವಿರುದ್ಧ ಜನರಲ್ಲಿಯೂ ಒಂದು ಅಸಹನೆ ಇರೋದು ನಿಜ. ಅದಕ್ಕೆ ಇಂಬು ಕೊಡುವಂತೆ ಇದೀಗ ಟ್ರಾಲ್‍ಗಿರಿ ವಿರುದ್ಧ ಪೊಲೀಸರು ಸೆಟೆದು ನಿಂತಿದ್ದಾರೆ. ಸಾಮಾನ್ಯವಾಗಿ ಎಲ್ಲ ಹೀರೋಗಳೂ ಟ್ರಾಲಿಂಗ್‍ಗೆ ಆಹಾರವಾಗುತ್ತಾರೆ. ಅದಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಹೊರತಾಗಿಲ್ಲ. ಆದರೆ ಗಣೇಶ್ ಬಗ್ಗೆ ಟ್ರಾಲ್ ಮಾಡಿದ್ದರ ವಿರುದ್ಧ ಕೆರಳಿದ ಶಿಲ್ಪಾ ಗಣೇಶ್ ಪೊಲೀಸರ ಮೂಲಕ ಟ್ರಾಲ್‍ಪೇಜುಗಳಿಗೆ ಕಡಿವಾಣ ಹಾಕ ಹೊರಟಿದ್ದಾರೆಂಬುದು ಕೆಲ ಟ್ರಾಲಿಗರ ಆರೋಪ. ಆದರೆ ಶಿಲ್ಪಾ ಗಣೇಶ್ ಈ ಆರೋಪವನ್ನು ನಿರಾಕರಿಸಿದ್ದಾರೆ.

 

 

ಆದರೆ ಟ್ರಾಲ್ ಮಂದಿಯ ಆರೋಪ ನಿಜವೇ ಆಗಿದ್ದರೂ ಅದರನ್ನು ವಿರೋಧಿಸಲು ಖಂಡಿತಾ ಸಭ್ಯ ಮಾರ್ಗಗಳಿವೆ. ಆದರೆ ಕೆಲ ಟ್ರಾಲ್ ಪೇಜುಗಳು ಅತಿರೇಕಕ್ಕೆ ಹೋಗಿ ಹೀನಾಯವಾಗಿ ನಿಂದಿಸೋ ರೂಟು ಹಿಡಿದಿದ್ದರ ವಿರುದ್ಧ ಪೊಲೀಸರು ಸೆಟೆದು ನಿಂತಿದ್ದಾರೆ. ಅಷ್ಟಕ್ಕೂ ಜನರನ್ನು ಸುರಕ್ಷಿತವಾಗಿಡೋ ಸಲುವಾಗಿ ಸತತವಾಗಿ ಶ್ರಮಿಸೋ ಪೊಲೀಸ್ ಇಲಾಖೆಯ ಮೇಲೆ ಖಂಡಿತಾ ಪ್ರತಿಯೊಬ್ಬರೂ ಗೌರವ ಹೊಂದಿರಬೇಕು. ಆದರೆ ಯಾವುದೋ ಒಂದು ವಿಚಾರವನ್ನಿಟ್ಟುಕೊಂಡು ಪೊಲೀಸ್ ಇಲಾಖೆಯನ್ನೇ ಅವಮಾನ ಮಾಡೊವಂಥಾ ಕೆಲಸ ನಡೆದಿದ್ದರೆ ಅದು ಶಿಕ್ಷಾರ್ಹ.

ಇದು ಟ್ರಾಲಿಂಗ್ ಕಥೆಯಾದರೆ ಕೆಲ ಹೀರೋಗಳಾಗಲಿ, ಸಿನಿಮಾ ಮಂದಿಯಾಗಲಿ ವಿಮರ್ಶೆಗಳನ್ನೇ ಸ್ವೀಕರಿಸೋ ಮನಸ್ಥಿತಿ ಹೊಂದಿರೋದಿಲ್ಲ. ಇದೂ ಕೂಡಾ ದರ್ಪದ ನಡವಳಿಕೆಯೇ. ಯಾಕೆಂದರೆ ಇಲ್ಲಿ ಯಾರೂ ಪ್ರಶ್ನಾತೀತರಲ್ಲ. ಇನ್ನು ಹೀರೋಗಳ ಬಗ್ಗೆ ವಿಮರ್ಶಾತ್ಮಕವಾಗಿ ಬರೆದಾಗ ವೀರಾಧಿ ವೀರರಂತೆ ಬಂದು ಕೆಟ್ಟ ಕೊಳಕ ಕಮೆಂಟ್ ಮಾಡೋರನ್ನೂ ಬುಡಕ್ಕೊದ್ದು ವರ್ಕೆತ್ತುವ ಕಠಿಣ ಕಾನೂನಿನ ಅವಶ್ಯಕತೆ ಖಂಡಿತಾ ಇದೆ.

 

 

ಟ್ರಾಲಿಂಗ್ ವಿಚಾರಕ್ಕೆ ಬರೋದಾದರೆ ಟ್ರಾಲ್ ಪೇಜುಗಳನ್ನ ಮ್ಯಾನೇಜ್ ಮಾಡೋರ್ಯಾರೂ ಪತ್ರಕರ್ತರಲ್ಲ. ಅವೆರಲ್ಲಿ ಹೆಚ್ಚಿನವರು ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವವರು. ಇನ್ನೂ ಕೆಲವರು ವಿದ್ಯಾರ್ಥಿಗಳು. ಇಂಥವರಲ್ಲಿ ಉತ್ತಮ ವಿಚಾರಗಳ ಬಗ್ಗೆ ಚೆಂದದ ಟ್ರಾಲ್ ಮಾಡುವವರು ಸಾಕಷ್ಟಿದ್ದಾರೆ. ಚಿತ್ರರಂಗದ ವಿಚಾರವಾಗಿಯೂ ಇವರಿಂದ ಒಂದಷ್ಟು ಉಪಯೋಗಗಳಾಗುತ್ತಿವೆ. ಆದರೆ ಇನ್ನೂ ಕೆಲ ಮಂದಿಗೆ ತಾವೇನು ಮಾಡಿದರೂ ನಡೆಯುತ್ತೆ ಎಂಬಂಥಾ ಪಿತ್ತ ನೆತ್ತಿಗೇರಿಕೊಂಡಿದೆ. ಆದರೆ ಅಂಥಾ ಪಿತ್ತವೆಲ್ಲ ಪೊಲೀಸ್ ಕಸ್ಟಡಿಯಲ್ಲಿ ಇಳಿದು ಹೋಗುತ್ತದೆ ಎಂಬ ಸಂದೇಶವನ್ನು ಖಾಕಿ ಪಡೆ ರವಾನಿಸಿದೆ.

ಟ್ರಾಲ್ ಪೇಜುಗಳು ಸಂಯಮ, ವಿಧೇಯತೆಯಿಂದ ಕೆಲಸ ಮಾಡಿ, ಚಿತ್ರರಂಗದ ಮಂದಿ ವಿಮರ್ಶೆಗಳನ್ನು ಸಮಚಿತ್ತದಿಂದ ಸ್ವೀಕರಿಸೋ ಮನಸ್ಥಿತಿ ಬೆಳೆಸಿಕೊಂಡರೆ ವಿನಾ ಕಾರಣ ತಿಕ್ಕಾಟ ತಪ್ಪಿದಂತಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top