fbpx
ಸಮಾಚಾರ

ಸಾಹಸ ಮಾಡಿ ಸಾವಿನ ಮನೆ ಸೇರಿದ ಚೀನಿ ಸಾಹಸಿಯ – ದುರಂತಕ್ಕೆ ವಿಡಿಯೋ ಸಾಕ್ಷಿ

ಸಾಹಸ ಮಾಡಿ ಸಾವಿನ ಮನೆ ಸೇರಿದ ಚೀನಿ ಸಾಹಸಿಯ – ದುರಂತಕ್ಕೆ ವಿಡಿಯೋ ಸಾಕ್ಷಿ

 

ನಮ್ಮ ಜ್ಯೋತಿ ರಾಮ ಅಲಿಯಾಸ್ ಕೋತಿ ರಾಮನೂ ನಾಚಿಕೊಳ್ಳುವಂತೆ ವೂ ಯಾಂಗಿಂಗ್ ಸಾಹಸ ಮಾಡುತ್ತಾನೆ. ಗಗನ ಚುಂಬಿ ಕಟ್ಟಡಗಳ ಮೇಲೆ ಈತ ಚೇಷ್ಟೆ ಮಾಡುತ್ತಿದ್ದರೆ ನೋಡುಗರ ಬಾಯಿಗೆ ಕರಳು ಬಂದಂತಾಗಲಿದೆ. ‘ವೊ’ಗೆ ಮಾತ್ರ ಈ ಕುರಿತು ಭೀತಿಯಿರಲಿಲ್ಲ.

 

 

ಆದರೆ ಅದೃಷ್ಟ ಕೈ ಕೊಟ್ಟರೆ, ನಸೀಬು ಕೈ ಬಿಟ್ಟರೆ ಅನಾಹುತ ಗ್ಯಾರಂಟಿ. ಇದಕ್ಕೆ ವೊ ಯಾಂಗಿಂಗ್ ಕೂಡ ಹೊರತಲ್ಲ. ಹುವಾಯಾನ್ ಪ್ರಾಂತ್ಯದಲ್ಲಿ ನವೆಂಬರ್ 8ರಂದು 62 ಅಂತಸ್ತುಗಳ ಕಟ್ಟಡದ ಮೇಲೆ, ಅರವತ್ತು ಅಡಿಗಳ ಎತ್ತರದಲ್ಲಿ ಈತ ಸಾಹಸ ಮಾಡಿದ. ನೋಡುಗರ ಜೀವವೆಲ್ಲಾ ಈತನತ್ತಲೇ ನೆಟ್ಟಿತ್ತು. ಈ ಸಾಹಸವನ್ನು ಯಶಸ್ವಿಯಾಗಿ ಮಾಡಿದ್ದರೆ 80,000ಯನ್ (ರೂ. 7.7ಲಕ್ಷ) ಈತನ ಪಾಲಾಗಬೇಕಿತ್ತು. ಆದರೆ ಆಯತಪ್ಪಿ ಕೆಳಗೆ ಬಿದ್ದ. ಪಕ್ಕನೆ ಪ್ರಾಣ ಪಕ್ಷಿ ಹಾರಿಹೋಗಿತ್ತು.

 

 

300ಕ್ಕೂ ಹೆಚ್ಚು ತನ್ನ ಸಾಹಸದ ವಿಡಿಯೋ ಮಾಡಿರುವ ವೊ ವಿಶ್ವಾದ್ಯಂತ 10ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ವೊ ಹೊಂದಿದ್ದಾನೆ. ಈಚೆಗೆ ಯಾವುದೇ ವಿಡಿಯೋ ಬಾರದ ಕಾರಣ ಆತಂಕಗೊಂಡು ಅಭಿಮಾನಿಗಳು ತಲಾಶ್ ಮಾಡಲು ಹೊರಾಟಾಗ ಈತನ ಸಾವಿನ ಪ್ರಕರಣ ಡಿಸೆಂಬರ್ 8ರಂದು ಬಹಿರಂಗವಾಗಿದೆ. ಯಾರೋ ಮಾಡಿದ್ದ ವಿಡಿಯೋ ತುಣುಕುಗಳು ಸಾಕ್ಷಿಯಾಗಿವೆ. ಇಂತಹ ಸಾಹಸಗಳು ರೋಚಕವಾಗಿರುತ್ತವೆ. ಆದರೆ ಆಯತಪ್ಪಿದರೆ ಮರಳಿ ಬಾರದ ಲೋಕ ಗ್ಯಾರಂಟಿ. ಹೀಗೆ ಸಾಹಸ ಮಾಡುತ್ತಲೇ ಸಾವಿನ ಮನೆಯ ಕದ ತಟ್ಟಿದವರೂ ಸಾಕಷ್ಟು ಜನ ಇದ್ದಾರೆ. ಆದರೂ ಹೊಸ ಹೊಸ ಸಾಹಸಿಗರು ಇತ್ತ ಹೊರಳುತ್ತಲೇ ಇರುವುದು ಸೋಜಿಗದ ಸಂಗತಿ.

 

 

ಅಂದಹಾಗೆ ವೋನ ಪ್ರೇಯಸಿ ಕೂಡ ಇದೇ ರೀತಿಯ ಸಾಹಸಿಗಳು. ಇವರಿಬ್ಬರ ಕಂಕಣ ಕೂಡಿ ಬಂದಿತ್ತು. ಇನ್ನೇನು ವೈವಾಹಿಕ ಜೀವನ ನಡೆಸಬೇಕೆನ್ನುವಷ್ಟರಲ್ಲಿಯೇ ವೋ ವಿಧಿಯ ಬಾಯಿಗೆ ಆಹಾರವಾದ.

 

 

ಈತನ ಸಾಹಸಗಳನ್ನು ಬಿತ್ತರಿಸುವ ‘ವಾಲ್ಕ್ಯನಾ’ ಎಂಬ ಸಂಸ್ಥೆ ಸುಮಾರು 55,000 ಯನ್ ನೀಡಿದೆ. ಆದರೇನು ಎತ್ತರದಲ್ಲಿ ಸಾಹಸ ಮಾಡಿ ಪಾತಾಳಕ್ಕೆ ಬಿದ್ದು ಯಾರಿಗೂ ನಿಲುಕದ ಎತ್ತರಕ್ಕೆ ಹಾರಿ ಹೋದ ‘ವೊ’ ಮಾತ್ರ ಮರಳಿ ಬರುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top