fbpx
ಮನೋರಂಜನೆ

ನಾಗೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ಮರುಜೀವ ಪಡೆದ ನಿರ್ದೇಶಕರ ಸಂಘ!

ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಇದೀಗ ಹೊಸ ಹುರುಪಿನೊಂದಿಗೆ ಕಾರ್ಯಾರಂಭ ಮಾಡಿದೆ. ಸಾಹಿತಿ ಡಾ. ವಿ ನಾಗೇಂದ್ರಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಈ ಸಂಘ ಇದೀಗ ನವೀನ ಕಾರ್ಯಕ್ರಮಗಳೊಂದಿಗೆ ಮುಂದುವರೆಯಲು ತಯಾರಾಗಿ ನಿಂತಿದೆ.
ಕನ್ನಡ ಚಿತ್ರರಂಗದ ಮಹತ್ವದ ಮೈಲಿಗಲ್ಲಿನಂತಿರೋ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಪುಟ್ಟಣ್ಣ ಕಣಗಾಲ್ ಮತ್ತು ಸಿದ್ದಲಿಂಗಯ್ಯನವರ ದೂರದೃಷ್ಟಿಯ ಫಲವಾಗಿ ಅಸ್ತಿತ್ವಕ್ಕೆ ಬಂದಿತ್ತು. ೧೯೮೪ರಲ್ಲಿ ರೂಪುಗೊಂಡಿದ್ದ ಈ ಸಂಘಕ್ಕೀಗ ಮೂವತೈದರ ಹರೆಯ.

 

 

ಈ ಸಂಘ ಇದುವರೆಗೂ ಚಿತ್ರರಂಗದ ಬಗ್ಗೆ ಕನಸು ಹೊಂದಿರೋ ಯುವ ಸಮೂಹವನ್ನು ನಿರ್ದೇಶನ ಸೇರಿದಂತೆ ನಾನಾ ವಿಭಾಗಗಳಲ್ಲಿ ಹೆಸರು ಮಾಡುವಂತೆ ರೂಪಿಸಿದೆ. ಇದುವರೆಗೂ ಇಪ್ಪತೈದು ವಿದ್ಯಾರ್ಥಿಗಳ ಮೂವತೈದು ಬ್ಯಾಚ್‌ನಲ್ಲಿ ಇಂಥಾ ತರಬೇತಿಯನ್ನು ಕೊಡಲಾಗಿದೆ. ಫಸ್ಟ್ ರ‍್ಯಾಂಕ್ ರಾಜು, ರಥಾವರ ಚಿತ್ರಗಳ ನಿರ್ದೇಶಕರೂ ಸಹ ಇದೇ ಸಂಘದ ತರಬೇತಿ ಪಡೆದ ಪ್ರತಿಭೆಗಳೆಂಬುದು ವಿಶೇಷ.

ಆದರೆ ಕಾರಣಾಂತರಗಳಿಂದ ಎರಡು ವರ್ಷಗಳಿಂದ ನಿಂತು ಹೋಗಿದ್ದ ಈ ಕಾರ್ಯಗಳಿಗೀಗ ವಿ. ನಾಗೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಮರು ಜೀವ ಸಿಕ್ಕಿದೆ. ಅವರು ಸಂಘದ ಇತರೇ ಸದಸ್ಯರೊಂದಿಗೆ ಚರ್ಚಿಸಿ ನಿಂತು ಹೋಗಿದ್ದ ಕಾನ್ಫಿಡಾ ಪ್ರಶಸ್ತಿಯನ್ನು ಈ ವರ್ಷದಿಂದಲೇ ಆರಂಭಿಸೋ ಚಿಂತನೆ ನಡೆಸಿದ್ದಾರೆ. ಇದರೊಂದಿಗೆ ಮತ್ತೊಂದಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇದರನ್ವಯ ಬೇರೆ ಭಾಷೆಗಳ ಪ್ರತಿಭಾವಂತ ನಿರ್ದೇಶಕರನ್ನು ಕರೆಸಿಕೊಂಡು ಸನ್ಮಾನ ನಡೆಸಲಾಗುತ್ತದೆ. ತಿಂಗಳಿಗೊಂದು ಸಿನಿಮಾ ಆಯ್ಕೆ ಮಾಡಿಕೊಂಡು ಅದರ ನಿರ್ದೇಶಕರು, ನಿರ್ಮಾಪಕರು ಮತ್ತು ತಂತ್ರಜ್ಞರೊಂದಿಗೆ ಸಂವಾದ ನಡೆಸಿ ವಿಚಾರ ವಿನಿಮಯ ಮಾಡಿಕೊಳ್ಳೋ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳೋ ಇರಾದೆಯೂ ಇದೆಯಂತೆ.

 

 

ಇತ್ತೀಚೆಗೆ ಕ್ರಿಯಾಶೀಲ ಕಿರುಚಿತ್ರಗಳು ಹೆಚ್ಚಾಗಿ ಬರುತ್ತಿರೋದರಿಂದ ಅದರ ಸ್ಪರ್ಧೆ ಏರ್ಪಡಿಸಿ ಉತ್ತೇಜನ ನೀಡೋ ಕಾರ್ಯಕ್ರಮವನ್ನೂ ನಡೆಸೋದಾಗಿ ನಾಗೇಂದ್ರ ಪ್ರಸಾದ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಹಾಜರಿದ್ದ ನಿರ್ದೇಶಕ ಯೋಗರಾಜ ಭಟ್ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅಂದಹಾಗೆ ಈ ಸಂಘದ ಕಡೆಯಿಂದ ನಡೆಯುತ್ತಿದ್ದ ತರಬೇತಿಗೂ ವಿದ್ಯುಕ್ತ ಚಾಲನೆ ಸಿಗಲಿದೆ. ಮೂವತ್ತಾರನೇ ಬ್ಯಾಚ್ ಬರುವ ಜನವರಿ ತಿಂಗಳಿಂದ ಆರಂಭವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top