ಸೀರಿಯಲ್ ಸ್ಟಾರ್ ವಿಜಯ್ ಎರಡನೇ ಇನ್ನಿಂಗ್ಸ್ ಪುನಾರಂಭ!
ದಶಕಗಳ ಹಿಂದೆ ಸೀರಿಯಲ್ ಜಗತ್ತಿನಲ್ಲಿ ಸ್ಟಾರ್ ನಟರಾಗಿ ಮಿಂಚಿದ್ದವರು ವಿಜಯ್ ಕುಮಾರ್. ಸಾವಿರವಲ್ಲ ಎರಡೆರಡು ಸಾವಿರ ಎಪಿಸೋಡುಗಳಷ್ಟು ಪ್ರಸಾರವಾಗಿದ್ದ ಹಿಟ್ ಧಾರಾವಾಹಿಗಳ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಅವರೀಗ ಒಂದು ಸುದೀರ್ಘವಾದ ಗ್ಯಾಪ್‌ನ ನಂತರ ಪುನಾರಂಭ ಎಂಬ ಚಿತ್ರದ ಹೀರೋ ಗೆಟಪ್ಪಿನಲ್ಲಿ ಮತ್ತೆ ಮರಳಿದ್ದಾರೆ. ಬರುವ ಜನವರಿ ತಿಂಗಳಲ್ಲಿ ತೆರೆ ಕಾಣಲು ಸಜ್ಜಾಗಿರೋ ಈ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳೋ ಖುಷಿ ವಿಜಯ್ ಕುಮಾರ್ ಅವರದ್ದು.
ಇಷ್ಟು ವರ್ಷದ ಗ್ಯಾಪ್‌ನ ನಂತರವೂ ಕಿರುತೆರೆ ಪ್ರೇಕ್ಷಕರ ಸ್ಮೃತಿಪಟಲದಲ್ಲಿ ಉಳಿದುಕೊಂಡಿರುವ ವಿಜಯ ಕುಮಾರ್ ಚಿಕ್ಕಮಗಳೂರಿನ ತರೀಕೆರೆಯವರು. ತಂದೆಯ ಊರು ಅದಾದರೂ ವಿಜಯ್ ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರಿನಲ್ಲಿಯೇ. ಆರಂಭದಿಂದಲೂ ಚಲನಚಿತ್ರಗಳತ್ತ ಭಾರೀ ವ್ಯಾಮೋಹ ಹೊಂದಿದ್ದ ಅವರು ನಟನೆಯ ಪಟ್ಟುಗಳನ್ನು ಕಲಿತುಕೊಂಡಿದ್ದು ಅಭಿನಯ ತಂರಂಗದಲ್ಲಿ. ಈ ತರಬೇತಿ ಸಂಸ್ಥೆಯ ಸಾಂಗತ್ಯದ ದೆಸೆಯಿಂದಲೇ ರಂಗಭೂಮಿಯ ಸಾಹಚರ್ಯ ಸಿಕ್ಕಿ ಅಲ್ಲಿಯೇ ಪಳಗಿಕೊಂಡ ವಿಜಯ್ ಅವರು ಆ ನಂತರ ಪಾದಾರ್ಪಣೆ ಮಾಡಿದ್ದು ಕಿರುತೆರೆಗೆ.
`ಶಕ್ತಿ’ಯಂಥಾ ಮೆಗಾ ಸೀರಿಯಲ್‌ಗಳಲ್ಲಿ ವಿಜಯ್ ನಿರ್ವಹಿಸಿದ್ದ ಪಾತ್ರವನ್ನು ಕಿರುತೆರೆ ಪ್ರೇಕ್ಷಕರು ಈವತ್ತಿಗೂ ನೆನಪಿಟ್ಟುಕೊಂಡಿದ್ದಾರೆ. ಪ್ರತಿಬಿಂಬ, ಉಯ್ಯಾಲೆ, ಕವಲುದಾರಿ ಮುಂತಾದ ಧಾರಾವಾಹಿಗಳಲ್ಲಿಯೂ ಅವರ ಪಾತ್ರ ನೆನಪಲ್ಲುಳಿಯುವಂತಿತ್ತು. ಆ ಬಳಿಕ ನಾಗಾಭರಣ ಅವರ ಗೆಳತಿ ಹಾಗೂ ಫಣಿರಾಮಚಂದ್ರರ ಧಾರಾವಾಹಿಗಳಲ್ಲಿಯೂ ಮಿಂಚಿದ್ದ ವಿಜಯ್ ಕುಮಾರ್ ಈ ನಡುವೆಯೇ ಚಿತ್ರಗಳಲ್ಲಿಯೂ ನಟಿಸಲಾರಂಭಿಸಿದ್ದರು. ಅಲ್ಲಿಯೂ ಅವಕಾಶಗಳು ಬರುತ್ತಿದ್ದರೂ ಕೂಡಾ ಅದೇಕೋ ಅವರು ಒಂದೆರಡು ವರ್ಷಗಳ ಮಟ್ಟಿಗೆ ಬ್ರೇಕ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಹಾಗೆ ಅಬ್ರಾಡ್‌ಗೆ ಸೇರಿಕೊಂಡ ವಿಜಯ ಕುಮಾರ್ ಅವರು ನಿರೀಕ್ಷೆಗೂ ಮೀರಿದಷ್ಟು ಕಾಲ ಅಲ್ಲೇ ಕಳೆಯಬೇಕಾಗಿ ಬಂದಿತ್ತು.
ಇದೀಗ ಮತ್ತೆ ಮರಳಿರೋ ವಿಜಯ್ ಕುಮಾರ್ ಸ್ನೇಹಿತರ ಒತ್ತಾಸೆಯ ಮೇರೆಗೆ ಪುನಾರಂಭ ಚಿತ್ರದಲ್ಲಿ ನಟಿಸಿದ್ದಾರೆ. ಶೋಭರಾಜ್ ಮುಂತಾದವರ ಅದ್ದೂರಿ ತಾರಾಗಣ ಇರುವ ಈ ಚಿತ್ರದ ಚೆಂದದ ಕಥೆಗೆ ಮನ ಸೋತು ವಿಜಯಕುಮಾರ್ ನಟಿಸಿದ್ದಾರೆ. ಅದು ಕಿರುತೆರೆಯಾಗಿದ್ದರೂ ಕಿರುತೆರೆಯಾಗಿದ್ದರೂ ಪ್ರೇಕ್ಷಕರಿಗೆ ವಿಜಯ ಕುಮಾರ್ ಪರಿಚಿತರು. ಇದೀಗ ಅವರು ಬಹು ಕಾಲದಿಂದ ಮರಳಿದ್ದಾರೆ, ಪ್ರೇಕ್ಷಕರು ಗೆಲ್ಲಿಸುತ್ತಾರೆಂಬ ನಂಬಿಕೆ ಅವರದ್ದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
