fbpx
ಮನೋರಂಜನೆ

2017 ರ ಚಿತ್ರಕಥೆ : ಹರಿ ಸಂತೋಷ್ {ಕಾಲೇಜು ಕುಮಾರ }

ಚಿತ್ರಕಥೆ : ಹರಿ ಸಂತೋಷ್

 

 

ಇದನ್ನು ಪ್ರಶಸ್ತಿ ಅನ್ನಬೇಕಾ? ಗೌರವದ ಕಾಣಿಕೆ ಅನ್ನಬೇಕಾ ಎಂಬುದು ಓದುಗರಿಗೆ ಬಿಟ್ಟದ್ದು. ಆದರೆ ಒಂದು ವರ್ಷದ ಅಷ್ಟೂ ಚಿತ್ರಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ, ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದ
ಕ್ರಿಯೇಟಿವಿಟಿಯಿಂದ ಗಮನ ಸೆಳೆದವರನ್ನು ವರ್ಷದ ಕೊನೆಯಲ್ಲಿ ನೆನೆಸಿಕೊಂಡು ಗೌರವಿಸೋ ಮಹದಾಸೆಯಿಂದ ಸಿನಿಬಜ಼್ ಸ್ಟಾರ್ ಆಫ್ ದಿ ಇಯರ್ -2017 ರೂಪಿಸಲ್ಪಟ್ಟಿದೆ. ಒಂದು ಸಿನಿಮಾ ರೂಪುಗೊಳ್ಳಬೇಕೆಂದರೆ ಅದರ ವಿವಿಧ ವಿಭಾಗಗಳಲ್ಲಿ ಹಲವು ಮಂದಿ ಕೆಲಸ ಮಾಡಿರುತ್ತಾರೆ. ಅದನ್ನೇ ಉಸಿರಾಡಿರುತ್ತಾರೆ. ಅಂಥಾ ಎಲ್ಲಾ ವಿಭಾಗಗಳನ್ನೂ ಜಾಲಾಡಿ ಒಬ್ಬೊಬ್ಬರನ್ನು ಗೌರವಿಸೋ ಪ್ರಯತ್ನವನ್ನು ನಾವು ಮಾಡಿದ್ದೇವೆ. ಇದರಾಚೆಗೆ ಈ ಪುರಸ್ಕಾರಕ್ಕೆ ಪಾತ್ರರಾಗೋ ಅರ್ಹತೆ ಇರುವವರು ಖಂಡಿತಾ ಇದ್ದಾರೆ. ಆದರೆ ಒಂದು ಮಿತಿಯೊಳಗೆ ಗೌರವವನ್ನಿಲ್ಲಿ ಕೊಡಮಾಡಿದ್ದೇವೆ…
ನಮ್ಮ ಆಯ್ಕೆಯ ಒಬ್ಬೊರ ಹೆಸರೂ ಒಂದೊಂದು ಪೋಸ್ಟ್ ಮೂಲಕ ಇಲ್ಲಿ ಅನಾವರಣಗೊಳ್ಳಲಿದೆ…

 

 

 

ತೀರಾ ಚಿಕ್ಕ ವಯಸ್ಸಿಗೇ ಸಿನಿಮಾ ಮೋಹಕ್ಕೆ ಬಿದ್ದ ಹುಡುಗ ಅಲೆಮಾರಿ ಸಂತು. ಸಂತು ‘ಅಲೆಮಾರಿ ಸಿನಿಮಾವನ್ನೂ ಮಾಡಿದಾಗಿನ್ನೂ ಇಪ್ಪತ್ತಾರೂ ದಾಟಿರಲಿಲ್ಲ. ನಿರ್ದೇಶಿಸಿದ ಮೊದಲ ಚಿತ್ರದಲ್ಲೇ ಸಂತು ಎಲ್ಲರ ಗಮನ ಸೆಳೆದಿದ್ದರು. ಸಂತು ಅವರ ಮೂಲ ಶೃಂಗೇರಿ ಮೂಲದ ಕೊಪ್ಪ. ಕಲಾ ನಿರ್ದೇಶಕ ಬಾಬು ಖಾನ್ ಬಳಿ ಸಹಾಯಕರಾಗಿ ಬಹಳಷ್ಟು ವರ್ಷಗಳಿಂದ ದುಡಿಯುತ್ತಿದ್ದ ಥರ್ಮಾಕೋಲ್ ನಾರಾಯಣ್‌ರ ಮಗ ಈ ಸಂತು. ಸಿನಿಮಾ ಸೆಟ್‌ಗಳನ್ನು ನಿರ್ಮಿಸುವಾಗ ಬಳಸುವ ಥರ್ಮಾಕೋಲ್‌ಅನ್ನು ವಿಧವಿಧವಾಗಿ ಕತ್ತರಿಸಿಕೊಡುವುದರಲ್ಲಿ ನಾರಾಯಣ್ ಎಕ್ಸ್‌ಪರ್ಟ್. ಸೆಟ್ ಅಸಿಸ್ಟೆಂಟ್ ಒಬ್ಬರ ಮಗ ಸಂತು ತೀರಾ ಸಣ್ಣ ವಯಸ್ಸಿನಲ್ಲೇ ತಂದೆಯೊಂದಿಗೆ ಸೆಟ್‌ಗಳಿಗೆ ಬಣ್ಣ ಬಳಿಯಲು ಹೋಗುತ್ತಿದ್ದವರು. ಮಾಡಿದ ಕೆಲಸಕ್ಕೆ ನಿರ್ಮಾಪಕರು ಹಣ ನೀಡದಿದ್ದಾಗ ನಿರ್ಮಾಪಕರ ಮನೆ ಬಾಗಿಲಲ್ಲಿ ನಿಂತು ಅಂಗಲಾಚುವುದು ಸಂತು ಚಿಕ್ಕವನಿದ್ದಾಗಿನಿಂದಲೂ ಅಭ್ಯಾಸವಾಗಿಹೋಗಿತ್ತು. ಆದರೂ ಅಪ್ಪನ ಸಿನಿಮಾ ವ್ಯಾಮೋಹ ಮಗನಿಗೂ ತಗುಲಿತ್ತು. ಹತ್ತನೇ ಕ್ಲಾಸು ಮುಗಿಸಿದ ಮೇಲೆ ಮನೆಯಲ್ಲಿದ್ದ ಬಡತನದಿಂದ ಮುಂದೆ ಓದು ಮುಂದುವರೆಸಲಾಗಿರಲಿಲ್ಲ. ನಂತರ ನಿರ್ದೇಶಕ ಪ್ರೇಮ್ ತಂಡ ಸೇರಿ, ಜೋಗಿ, ಪ್ರೀತಿ ಏಕೆ ಭೂಮಿಮೇಲಿದೆ, ರಾಜ್ ಮತ್ತು ಜೋಗಯ್ಯ ಚಿತ್ರಗಳಿಗೆ ಸಹಾಯಕನಾಗಿ ದುಡಿದಿದ್ದರು. ಪ್ರೇಮ್ ನಿರ್ದೇಶಿಸಿದ ಈ ಎಲ್ಲಾ ಚಿತ್ರಗಳ ಶೀರ್ಷಿಕೆ ವಿನ್ಯಾಸ ಮಾಡಿದ್ದು ಇದೇ ಸಂತು.

 

 

 

ನಂತರ ಪ್ರೇಮ್ ‘ಅಡ್ಡ’ದಿಂದ ಹೊರಬಂದ ಸಂತು ಸ್ವತಂತ್ರವಾಗಿ ನಿರ್ದೇಶನ ಮಾಡುವ ಸಾಹಸ ಮಾಡಿದ್ದರು. ಕಥೆ ಚಿತ್ರಕಥೆ ಬರೆದು, ಮಂಜು ಮಾಂಡವ್ಯ ಎಂಬ ಮತ್ತೊಬ್ಬ ಪ್ರತಿಭಾವಂತ ಯುವಕನಿಂದ ಸಂಭಾಷಣೆ ಬರೆಸಿಕೊಂಡು ಓಡಾಡುತ್ತಿದ್ದಾಗ ನಿರ್ಮಾಪಕರೂ ಸಿಕ್ಕಿದ್ದರು. ಇನ್ನೇನು ಸಿನಿಮಾ ಆರಂಭವಾಗ ಬೇಕು ಎನ್ನುವಷ್ಟರಲ್ಲಿ ‘ಈ ಚಿಕ್ಕ ಹುಡುಗನನ್ನು ನಂಬಿ ಹೇಗೆ ಕೋಟಿಗಟ್ಟಲೆ ಹಣ ಹೂಡುವುದು?’ ಎಂದು ಮೆಲ್ಲಗೆ ಹಿಂಜರಿದುಬಿಟ್ಟರು. ಇದು ಸಂತು ಅವರನ್ನು ಮತ್ತಷ್ಟು ಮನೋ ವ್ಯಾಕುಲಕ್ಕೆ ದೂಡಿತ್ತು. ಮನೆಯಲ್ಲಿ ಕೆಟ್ಟ ಬಡತನ, ತಂದೆಗೆ ಬರುವ ಆದಾಯ ಯಾತಕ್ಕೂ ಸಾಕಾಗುತ್ತಿರಲಿಲ್ಲ. ತಾಯಿ ಗಾರ್ಮೆಂಟ್ಸ್‌ನಲ್ಲಿ ಹೆಲ್ಪರ್ ಕೆಲಸ ಮಾಡಿ ತರುತ್ತಿದ್ದ ಹಣ ಬದುಕು ಸಾಗಿಸಲು ಎಟಕುತ್ತಿರಲಿಲ್ಲ. ಈ ನಡುವೆ ಪತ್ರಕರ್ತ ರವಿ ಹಂಪಾಪುರ ಎಂಬುವರು ಸಂತುಗೆ ಆರ್ಥಿಕ ಸಹಾಯ ಮಾಡಿ ಸಹಕರಿಸಿದ್ದರಂತೆ. ಪ್ರೇಮ್ ತಂಡದಲ್ಲಿ ಸಖತ್ ಚುರುಕಾಗಿ ಓಡಾಡಿಕೊಂಡಿದ್ದ ಹುಡುಗ ಸಂತುನ ಪ್ರತಿಭೆಯನ್ನು ನಿಜಕ್ಕೂ ಗುರುತಿಸಿದವರು ಅಶ್ವಿನಿ ಸಂಸ್ಥೆಯ ಕೃಷ್ಣ ಪ್ರಸಾದ್. ಮೊದಲೇ ಪ್ರೀತಿ ಏಕೆ ಭೂಮಿಮೇಲಿದೆ ಮತ್ತು ಜೊತೆಗಾರ ಚಿತ್ರದ ಕೆಟ್ಟ ಸೋಲಿನಿಂದ ಕಂಗಾಲಾಗಿದ್ದರೂ ಸಂತು ಮೇಲಿನ ನಂಬಿಕೆಯಿಂದ ‘ಅಲೆಮಾರಿ’ ಚಿತ್ರಕ್ಕೆ ಹಣ ಹೂಡಲು ಕೃಷ್ಣಪ್ರಸಾದ್ ಮತ್ತು ರಾಮ್‌ಪ್ರಸಾದ್ ಮುಂದಾದರು. ಇದಕ್ಕೆ ‘ಮಂದಾಕಿನಿ’ ಶ್ರೀನಿವಾಸ್ ಕೂಡಾ ಸಾತ್ ನೀಡಿದ್ದರು. ಸಂತು ಕೂಡಾ ವಿಶ್ವಾಸವನ್ನು ಹಾಳುಮಾಡಿಕೊಳ್ಳದೆ ನಿರ್ಮಾಪಕರು ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದರು. ಇದೇ ಕಾರಣಕ್ಕೆ ಮತ್ತದೇ ನಿರ್ಮಾಪಕರಾದ ಮಂದಾಕಿನಿ ಶ್ರೀನಿವಾಸ್ ಮತ್ತೊಂದು ಛಾನ್ಸೂ ಕೊಟ್ಟು ‘ಡವ್ ಅನ್ನೋ ಸಿನಿಮಾವನ್ನು ಮಾಡಿಸಿದರು. ನಿರ್ದೇಶನದ ಜೊತೆಗೆ ಗೀತಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಸಂತು ಕೆಳಮಧ್ಯಮವರ್ಗದ ಆತ್ಮಕತೆಯಂತಾ ವಸ್ತುವನ್ನು ‘ಕಾಲೇಜ್ ಕುಮಾರ ಸಿನಿಮಾದ ಮೂಲಕ ತೆರೆದಿಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top