fbpx
ಹೆಚ್ಚಿನ

ನೌಕರಿ ಹುಡುಕುತ್ತ ಅಚ್ಛೇದಿನ್‍ಗಳ ಭ್ರಮೆಯಲ್ಲಿ … ನೇಮಕಾತಿ ಆದೇಶ ಸಿಕ್ಕರೂ ನೌಕರಿ ಇಲ್ಲ!

ನೌಕರಿ ಹುಡುಕುತ್ತ ಅಚ್ಛೇದಿನ್‍ಗಳ ಭ್ರಮೆಯಲ್ಲಿ …
ನೇಮಕಾತಿ ಆದೇಶ ಸಿಕ್ಕರೂ ನೌಕರಿ ಇಲ್ಲ!

 

10,661 ಅರ್ಹ ಯುವಜನತೆಯ ಕತೆ-ವ್ಯಥೆ ಇದು. ಇವರು ಮೂರು ಕಠಿಣ ಹಂತಗಳ ರಾಷ್ಟ್ರೀಯ ಪರೀಕ್ಷೆಯಲ್ಲಿ ಗೆದ್ದು, ನೌಕರಿಗಾಗಿ ಪರಿತಪಿಸುತ್ತಿದ್ದಾರೆ.

 

 

ಇದು ಯಾವುದೋ ಖಾಸಗಿ ಕಂಪನಿಯ ನೇಮಕಾತಿಯ ಕತೆಯಲ್ಲ; ಬದಲಿಗೆ ಅಚ್ಛೇ ದಿನ್ ಬರಲಿವೆ ಎಂದು ಹೇಳುತ್ತಲೇ ಇರುವ ಕೇಂದ್ರ ಸರ್ಕಾರದ ನೇಮಕಾತಿಯ ರಗಳೆ ಇದು. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿರುವ ಖಾಲಿ ಇರುವ ವಿವಿಧ ಹಂತದ ಹುದ್ದೆಗಳನ್ನು ಭರ್ತಿ ಮಾಡಲೆಂದೇ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‍ಎಸ್‍ಸಿ) ಎಂಬ ಸಂಸ್ಥೆಯಿದೆ. ಈ ಸಂಸ್ಥೆಯ ಎಡವಟ್ಟು, ಅಸಡ್ಡೆಗಳ ಕಾರಣದಿಂದ ಆಯ್ಕೆಗೊಂಡ 10 ಸಾವಿರಕ್ಕೂ ಹೆಚ್ಚು ಅರ್ಹರು ಇವತ್ತು ಪರಿತಪಿಸಬೇಕಾಗಿದೆ.

2016ರಲ್ಲಿ ಎಸ್‍ಎಸ್‍ಸಿ ಇಂತಹ ಒಂದು ರಾಷ್ಟ್ರಮಟ್ಟದ ಪರೀಕ್ಷೆ ನಡೆಸಿತು. 2017ರ ಆಗಸ್ಟ್‍ನಲ್ಲಿ ಅಂತಿಮ ಆಯ್ಕೆ ಪಟ್ಟಿಯೂ ಹೊರಬಿದ್ದಿತು. ಕೆಲವು ಅಭ್ಯರ್ಥಿಗಳು ತಕರಾರು ತೆಗೆದರು, ಕೆಲವರು ಕೇಂದ್ರ ಆಡಳಿತಕ್ಕೆ ದೂರು ಸಲ್ಲಿಸಿದರು. ಇವೆಲ್ಲದರ ವಿಚಾರಣೆ ಮುಗಿದು, ಸಮಸ್ಯೆಗಳು ನಿವಾರಣೆಯಾಗಿ ಎಸ್‍ಎಸ್‍ಸಿಗೆ ಅರ್ಹರನ್ನು ವಿವಿಧ ಹುದ್ದೆಗಳಿಗೆ ನಿಯುಕ್ತಿ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕರೂ ಅದು ಯಾಕೋ ನಿರ್ಧಾರವನ್ನೇ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಇಂದು 10,661 ಪ್ರತಿಭಾನ್ವಿತ ಯುವಜನರ ಬದುಕು ಅಡಕತ್ತರಿಯಲ್ಲಿ ಸಿಕ್ಕಿದೆ. ಅವರಲ್ಲಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರೆ, ಬಹುತೇಕರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಳಲನ್ನು ಕೇಂದ್ರಸರ್ಕಾರ ಮತ್ತು ಖುದ್ದು ಪ್ರಧಾನಿಯವರಿಗೇ ತಲುಪಿಸಿದ್ದಾರೆ. ಆದರೂ ಅವರಿಗೆ ನ್ಯಾಯ ಸಿಗುವ ಭರವಸೆ ಸಿಗುತ್ತಿಲ್ಲ, ಅಚ್ಛೇದಿನ್‍ಗಳ ಕನಸು ಈಡೇರುತ್ತಿಲ್ಲ.

 

 

ನಮ್ಮ ರಾಜ್ಯದ ಕೆಪಿಎಸ್‍ಸಿ ಸೇರಿದಂತೆ ಹಲವು ರಾಜ್ಯಗಳ ನೇಮಕಾತಿ ಪ್ರಾಧಿಕಾರಗಳು ಕೂಡ ಇದೇ ರೀತಿ ಅರ್ಹ ಅಭ್ಯರ್ಥಿಗಳನ್ನು ಗೋಳು ಹೊಯ್ದುಕೊಳ್ಳುತ್ತ ಬಂದಿವೆ. ಅದೇ ಹಾದಿಯಲ್ಲಿ ಕೇಂದ್ರದ ಎಸ್‍ಎಸ್‍ಸಿ ಕೂಡ ಸಾಗುತ್ತಿದೆ.

ವರ್ಷಕ್ಕೆ ಕೋಟಿ ಉದ್ಯೋಗಗಳ ಸೃಷ್ಟಿಯ ಭರವಸೆ ನೀಡಿ ಈಗ ಅದನ್ನು ಮರೆತಿರುವ ಮೋದಿ ಸರ್ಕಾರ, ಕನಿಷ್ಠ ಸರ್ಕಾರದ ಅಧೀನದಲ್ಲೇ ಇರುವ ಖಾಲಿ ಹುದ್ದೆಗಳನ್ನಾದರೂ ಮೊದಲು ಭರ್ತಿ ಮಾಡಲಿ.

ಈ ದೇಶದ ಯುವಜನರು ನೌಕರಿ ಹುಡುಕುತ್ತ ಅಚ್ಛೇದಿನ್‍ಗಳ ಭ್ರಮೆಯಲ್ಲಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬಾರದಲ್ಲವೆ?

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top