ಬಿಗ್ ಬಾಸ್

ಬಿಗ್‌ಬಾಸ್ ಮೇಲೆ ಕೇಸು ಜಡೀತಾರಾ ತೆಂಗು ಬೆಳೆಗಾರರು?

ಬಿಗ್‌ಬಾಸ್ ಮೇಲೆ ಕೇಸು ಜಡೀತಾರಾ ತೆಂಗು ಬೆಳೆಗಾರರು?

 

 

ಈ ಟೀವಿ ವಾಹಿನಿಗಳ ಮಂದಿ ಟೀಆರ್‌ಪಿ ರೇಸಿನಲ್ಲಿ, ಜಾಹೀರಾತಿನ ಮುಲಾಜಿನಲ್ಲಿ ಕೆಲವೊಮ್ಮೆ ನಮ್ಮದೇ ನೆಲದ ಜನರನ್ನು ಎದುರು ಹಾಕಿಕೊಳ್ಳೋ ಸಂದರ್ಭ ಸೃಷ್ಟಿಸಿಕೊಳ್ಳುತ್ತಾರೆ. ಇದೀಗ ಕಿಚ್ಚಾ ಸುದೀಪ್ ಸಾರಥ್ಯದ ಬಿಗ್‌ಬಾಸ್ ರಿಯಾಲಿಟಿ ಶೋ ಕೂಡಾ ರೈತರನ್ನು ಎದುರು ಹಾಕಿಕೊಂಡು ಕೇಸು ಜಡಿಸಿಕೊಳ್ಳೋ ಸಂದರ್ಭ ಸೃಷ್ಟಿಸಿಕೊಂಡಿದೆ!

ಅದ್ಯಾರೋ ಸೀಮೆಗಿಲ್ಲದ ಸೆಲೆಬ್ರಿಟಿಗಳ ಖಾಸಗಿ ಬದುಕಿಗೆ ಕ್ಯಾಮೆರಾ ಇಡೋ ಈ ಕಾರ್ಯಕ್ರಮಕ್ಕೂ ರೈತರಿಗೂ ಯಾವ ಕನೆಕ್ಷನ್ನು? ರೈತರೇಕೆ ಬಿಗ್‌ಬಾಸ್ ಶೋ ವಿರುದ್ಧ ಕೇಸು ಜಡಿಯೋವಷ್ಟು ಆಕ್ರೋಶಗೊಂಡಿದ್ದಾರೆ ಅಂತ ನೋಡ ಹೋದರೆ, ವ್ಯಾಸಲಿನ್ ಕಂಪೆನಿಯ ವಿವಾದಾತ್ಮಕ ಸ್ಲೋಗನ್ ಒಂದು ವಿಲನ್ ಸ್ಥಾನದಲ್ಲಿ ನಿಲ್ಲುತ್ತೆ!

 

ಈ ಬಾರಿಯ ಬಿಗ್‌ಬಾಸ್ ಶೋವನ್ನು ಸ್ಪಾನ್ಸರ್ ಮಾಡಿರುವುದು ವ್ಯಾಸಲೀನ್ ಕಂಪೆನಿ. ಅದರ ಪ್ರಾಡಕ್ಟುಗಳನ್ನು ಪ್ರತೀ ಹಂತದಲ್ಲಿಯೂ ಪ್ರಚಾರಕ್ಕೆ ತರೋ ದರ್ದು ಈ ಕಾರ್ಯಕ್ರಮದ ಆಯೋಜಕರ ಮೇಲಿದೆ. ಬರೀ ಅದನ್ನು ಮಾಡಿದ್ದರೆ ತಮ್ಮ ಪಾಡಿಗೆ ತಾವು ಕೃಷಿ ಮಾಡಿಕೊಂಡಿರೋ ತೆಂಗು ಬೆಳೆಗಾರರು ರೊಚ್ಚಿಗೇಳೋ ಪ್ರಮೇಯವೇ ಬರುತ್ತಿರಲಿಲ್ಲ. ಮೊನ್ನೆ ದಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ `ವ್ಯಾಸಲೀನ್ ಇನ್ಸೆಂಟಿವ್ ಕೇರ್, ಇದು ತೆಂಗಿನೆಣ್ಣೆಗಿಂತ ಆರು ಪಟ್ಟು ಉತ್ತಮ’ ಅಂತೊಂದು ಸ್ಲೋಗನ್ನನ್ನು ಅಚ್ಚ ಕನ್ನಡದಲ್ಲಿ ಹೇಳಿಸಿರೋದು ತೆಂಗು ಬೆಳೆಗಾರರ ಬದುಕನ್ನು ಮತ್ತಷ್ಟು ತಲ್ಲಣಿಸಿದೆಯಂತೆ.

 

 

ಹೇಳಿ ಕೇಳಿ ಬಿಗ್ ಬಾಸ್ ಶೋಗೆ ಅತ್ಯಂತ ಹೆಚ್ಚು ವೀಕ್ಷಕರಿದ್ದಾರೆ. ಅಂಥಾ ಶೋನಲ್ಲಿ ತಮ್ಮ ಬೆಳೆಯ ಪ್ರಮುಖ ಉತ್ಪನ್ನವಾದ ತೆಂಗಿನೆಣ್ಣೆಗೇ ಮಾರಕವಾದ ಜಾಹೀರಾತು ಪ್ರಸಾರ ಮಾಡುತ್ತಿರೋದರ ವಿರುದ್ಧ ತೆಂಗು ಬೆಳೆಗಾರರು ಕುದ್ದು ಹೋಗಿದ್ದಾರೆ. ಈ ಸಂಬಂಧವಾಗಿ ತೆಂಗು ಬೆಳೆಗಾರರ ಪರವಾಗಿ ಈ ಕಾರ್ಯಕ್ರಮದ ವಿರುದ್ಧ ಪ್ರಕರಣ ದಾಖಲಿಸಲು ಕಿಶೋರ್ ಎಂಬ ಯುವ ವಕೀಲರೊಬ್ಬರು ಅಣಿಯಾಗಿದ್ದಾರೆ!

ಈ ತೆಂಗು ಬೆಳೆ ಕರ್ನಾಟಕದಲ್ಲಿ ವಿಪರೀತವಾದ ಅವಕಾಶಗಳಿದ್ದರೂ ಸೊರಗಿದೆ. ಆದರೆ ಈ ಬೆಳೆಯನ್ನೇ ನಂಬಿಕೊಂಡಿರೋ ರೈತರು ನಾನಾ ಸಂಕಷ್ಟಗಳಿಂದ ನಲುಗಿದ್ದಾರೆ. ಇದ್ದುದರಲ್ಲಿಯೇ ಈ ಬೆಳೆಗಾರರು ಒಂದಷ್ಟು ನೆಮ್ಮದಿ ಕಾಣುವಂತಾಗಿರೋದು ತೆಂಗಿನೆಣ್ಣೆಯ ಕಾರಣದಿಂದ. ತೆಂಗಿನೆಣ್ಣೆ ಇಲ್ಲಿನ ಜನರ ಪಾರಂಪರಿಕ ಔಷಧವಾಗಿಯೂ ಬಳಕೆಯಲ್ಲಿದೆ. ಚಳಿಗೆ ಮೈಯೊಡೆಯೋದರಿಂದ ಮೊದಲ್ಗೊಂಡು ನಾನಾ ಸಮಸ್ಯೆಗಳಿಗೆ ಬಳಕೆಯಲ್ಲಿರೋದು ಇದೇ ತೆಂಗಿನೆಣ್ಣೆ. ಆದರೆ ವ್ಯಾಸಲೀನ್‌ನಂಥಾ ಕಂಪೆನಿಗಳು ತೆಂಗಿನೆಣ್ಣೆಯ ಗುಣಗಳನ್ನು ಹೊಂದಿರೋ ಪ್ರಾಡಕ್ಟುಗಳನ್ನು ಆಕರ್ಷಕವಾಗಿ ಮಾರಾಟ ಮಾಡುತ್ತಿದೆ.

 

Coconut milk and coconut oil on wooden table

 

ಇದೀಗ ಆ ಕಂಪೆನಿ ತನ್ನ ಪ್ರಾಡಕ್ಟು ತೆಂಗಿನೆಣ್ಣೆಗಿಂತ ಆರು ಪಟ್ಟು ಉತ್ತಮ ಅನ್ನೋದರ ಮೂಲಕ ತೆಂಗಿನೆಣ್ಣೆ ವಿರುದ್ಧ ನೇರ ಪ್ರಹಾರ ಮಾಡಿದೆ. ಈ ಕ್ರಮದ ವಿರುದ್ಧ ತೆಂಗು ಬೆಳೆಗಾರರೆಲ್ಲ ಸೆಟೆದು ನಿಂತಿರೋ ಹೊತ್ತಿನಲ್ಲೇ ಈ ವಿಚಾರವಾಗಿ ಬಿಗ್‌ಬಾಸ್ ಶೋ ಮೇಲೊಂದು ಕೇಸು ಜಡಿದುಕೊಳ್ಳೋ ಲಕ್ಷಣಗಳು ಢಾಳಾಗಿವೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top