fbpx
ಮನೋರಂಜನೆ

ಅಮೂಲ್ಯ ಮಾವ ಮತ್ತು ಶಿಲ್ಪಿ ಗಣೇಶ್ ನಡುವೆ ಟಿಕೆಟ್ ಕದನ: ಇಬ್ಬರ ಜಗಳ ಮುನಿರತ್ನಗೆ ಬಂಪರ್.

ಅಮೂಲ್ಯ ಮಾವ ಮತ್ತು ಶಿಲ್ಪಿ ಗಣೇಶ್ ನಡುವೆ ಟಿಕೆಟ್ ಕದನ: ಇಬ್ಬರ ಜಗಳ ಮುನಿರತ್ನಗೆ ಬಂಪರ್.

 

 

ವಿಧಾನಸಭಾ ಚುನಾವಣೆಯ ಬಿಸಿಗಾಳಿ ರಾಜ್ಯಾದಂತ ಜೋರಾಗಿಯೇ ಬೀಸಲಾರಂಭಿಸಿದೆ. ಆದರೆ ಇದರ ಎಫೆಕ್ಟೆಂಬುದು ಈ ಸಲ ರಾಜಕಾರಣಿಗಳ ವಲಯಕ್ಕಿಂತಲೂ ಸಿನಿಮಾ ರಂಗದಲ್ಲಿಯೇ ತೀವ್ರವಾಗಿರುವಂತಿದೆ. ಯಾಕೆಂದರೆ, ಆ ವಲಯದಲ್ಲಿ ನಡೆಯುತ್ತಿರೋ ಚುನಾವಣಾ ರೇಸಿನ ರಂಗಿನಾಟ, ಹತ್ತಿರವಿದ್ದುಕೊಂಡೇ ಮಾಡುತ್ತಿರೋ ಮಸಲತ್ತು, ಯಾರದ್ದೋ ಗಮನ ಸೆಳೆಯುವ ಕಸರತ್ತು, ಮತ್ಯಾರನ್ನೋ ಓವರ್‌ಟೇಕ್ ಮಾಡಿ ಟಿಕೆಟು ಪಡೆಯೋ ಚಾಲಾಕಿತನಗಳ ಸುದ್ದಿ ನಿಜಕ್ಕೂ ಇಂಟರೆಸ್ಟಿಂಗ್. ಇದೀಗ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಹೊರಬಂದಿರೋದು ಮಾತ್ರ ಪಕ್ಕಾ ಶಾಕಿಂಗ್ ಸ್ಟೋರಿ!

 

 

 

ಅಂದಹಾಗೆ ಈ ಸ್ಟೋರಿಯ ಕೇಂದ್ರಬಿಂದುವಾಗಿರೋದು ಗೋಲ್ಡನ್ ಸ್ಟಾರ್ ಗಣೇಶ್ ಮಡದಿ ಶಿಲ್ಪಾ ಗಣೇಶ್!
ಈಗ ಹೊರ ಬಂದಿರೋ ಸುದ್ದಿಯ ಪ್ರಕಾರವಾಗಿ ನೋಡ ಹೋದರೆ, ಈಗ್ಗೆ ಮೂರು ದಿನಗಳ ಹಿಂದೆ ಅಮೂಲ್ಯಾಳ ಮಾವ ರಾಮಚಂದ್ರ ಮತ್ತು ಶಿಲ್ಪಾ ಗಣೇಶ್ ನಡುವೆ ಶರಂಪರ ಕಿತ್ತಾಟ ನಡೆದಿದೆಯಂತೆ. ಜನ್ಮಾಂತರಗಳಿಂದಲೂ ಜಾಯಿಂಟ್ ಫ್ಯಾಮಿಲಿಯಾಗಿತ್ತೇನೋ ಎಂಬಂತೆ ಅಮೂಲ್ಯಾ ಮತ್ತು ಶಿಲ್ಪಾ ಕುಟುಂಬಗಳು ಒಂದಾಗಿದ್ದವಲ್ಲಾ? ಅಷ್ಟಕ್ಕೂ ಅಮೂಲ್ಯಾ ಮತ್ತು ರಾಜಕಾರಣಿ ರಾಮಚಂದ್ರ ಅವರ ಮಗ ಜಗದೀಶನನ್ನು ಒಂದು ಮಾಡಿದ್ದೇ ಶಿಲ್ಪಾ ಆಗಿರೋವಾಗ ಈ ಫ್ಯಾಮಿಲಿಗಳ ನಡುವೆ ಕಿತ್ತಾಟ ನಡೆಯೋದು ಹೇಗೆ ಸಾಧ್ಯ ಅಂತೊಂದು ಗುಮಾನಿ ಕಾಡೋದು ಸಹಜವೇ!

 

 

ಅಮೂಲ್ಯ ನಂಟು ಹಳಸಿತೇ?

ಶಿಲ್ಪಾ ಗಣೇಶ್ ಮತ್ತು ಅಮೂಲ್ಯಾ ಫ್ಯಾಮಿಲಿ ನಡುವೆ ಬರೀ ಭಾವನಾತ್ಮಕ ಸಂಬಂಧ ಮಾತ್ರವೇ ಇದ್ದಿದ್ದರೆ ಇಂಥಾದ್ದೊಂದು ಸುದ್ದಿ ಹೊರ ಬೀಳುತ್ತಿರಲಿಲ್ಲ. ಒಂದು ವೇಳೆ ಹೊರ ಬಿದ್ದಿದ್ದರೂ ಅದು ಮುಖ್ಯವಾಗುತ್ತಿರಲಿಲ್ಲ. ಆದರೆ ಇದರ ಹಿಂದೆ ಅಮೂಲ್ಯಾಳ ಮದುವೆ ಒಡಂಬಡಿಕೆಯ ವೇಳೆಯಲ್ಲಿಯೇ ರಾಜಕೀಯ ಲೆಕ್ಕಾಚಾರ ಹೊಗೆಯಾಡಿತ್ತು. ಇದೀಗ ಅದು ಪರಸ್ಪರ ಅಸಹನೆಯ ರೂಪದಲ್ಲಿ ಧಗ ಧಗಿಸೋ ಲಕ್ಷಣ ಕಾಣುತ್ತಿದೆ!

ರಾಜರಾಜೇಶ್ವರಿ ಕ್ಷೇತ್ರದಲ್ಲಿ ಲಾಗಾಯ್ತಿನಿಂದಲೂ ಬಿಜೆಪಿ ಪಕ್ಷದಲ್ಲಿರೋ ರಾಮಚಂದ್ರ ಈ ಬಾರಿ ಬಿಜೆಪಿ ಎಂಎಲ್‌ಎ ಕ್ಯಾಂಡಿಡೇಟೆಂಬ ವಿಚಾರ ಬಹು ಹಿಂದಿನಿಂದಲೇ ಹರಿದಾಡುತ್ತಿತ್ತು. ಅದೇ ಹೊತ್ತಿನಲ್ಲಿ ಶಿಲ್ಪಾ ಗಣೇಶ್ ಅಮೂಲ್ಯಾಳ ಮದುವೆ ಪ್ರಪೋಸಲ್ಲಿನ ಮೂಲಕ ರಾಮಚಂದ್ರ ಕುಟುಂಬಕ್ಕೆ ಹತ್ತಿರಾದರಲ್ಲಾ? ಆ ಸಂದರ್ಭದಲ್ಲಿಯೂ ಶಿಲ್ಪಾ ಬಿಜೆಪಿಯಲ್ಲೇ ಇದ್ದಿದ್ದರಿಂದಾಗಿ ಚುನಾವಣಾ ಸಂದರ್ಭದಲ್ಲಿ ರಾಮಚಂದ್ರ ಅವರಿಗೆ ಒತ್ತಾಸೆಯಾಗೋ ಮ್ಯೂಚುವಲ್ ಒಡಂಬಡಿಕೆಯೇ ನಡೆದಿತ್ತಂತೆ. ಹೇಗಿದ್ದರೂ ಗಣೇಶ್ ಅವರ ಒಂದಷ್ಟು ಪ್ರಭಾವ ಈ ಕ್ಷೇತ್ರದಲ್ಲಿದೆ. ಶಿಲ್ಪಾ ಸಪೋರ್ಟು ಸಿಕ್ಕರೆ ಗೆಲುವು ಸಲೀಸಾಗುತ್ತೆ ಎಂಬ ಲೆಕ್ಕಾಚಾರ ರಾಮಚಂದ್ರರದ್ದಾಗಿದ್ದರೂ ಅಚ್ಚರಿಯೇನಿಲ್ಲ. ಕಡೇ ಘಳಿಗೆಯವರೆಗೂ ಹೊರ ಜಗತ್ತಿಗೆ ಶಿಲ್ಪಾ ಮತ್ತು ರಾಮಚಂದ್ರ ಇವರಿಬ್ಬರೂ ಟಿಕೇಟಿಗೆ ಪ್ರಯತ್ನಿಸುವಂತೆ ಬಿಂಬಿಸಿಕೊಂಡು ನಂತರ ಶಿಲ್ಪಾ ರಾಮಚಂದ್ರ ಅವರಿಗೆ ಸಪೋರ್ಟು ಮಾಡೋ ಬಗ್ಗೆಯೂ ಪ್ಲಾನುಗಳು ನಡೆದಿದ್ದವಂತೆ.

 

 

 

ಆದರೆ ಚುನಾವಣೆ ಹತ್ತಿರ ಬರೋ ಹೊತ್ತಿನಲ್ಲಿ ಶಿಲ್ಪಾ ಮೇಡಮ್ಮು ಪಟ್ಟಂಪೂರಾ ಉಲ್ಟಾ ಹೊಡೆದಿದ್ದಾರೆ ಮತ್ತು ಆ ಕಾರಣದಿಂದಲೇ ರಾಮಚಂದ್ರ ಜೊತೆ ಮುನಿಸು ಸಂಭವಿಸಿದೆ ಎಂಬುದು ಈಗ ಹೊರ ಬಿದ್ದಿರೋ ಸುದ್ದಿಯ ಸಾರಾಂಶ. ಆ ನಿಟ್ಟಿನಲ್ಲಿ ನೋಡ ಹೋದರೆ ಶಿಲ್ಪಾ ಇದೀಗ ತಾವೇ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಟಿಕೇಟು ಗಿಟ್ಟಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರಂತೆ. ಈ ವಿದ್ಯಮಾನದಿಂದ ರಾಮಚಂದ್ರ ಕಂಗಾಲಾಗಿ ಈ ಬಗ್ಗೆ ಶಿಲ್ಪಾ ಮತ್ತು ಅಮೂಲ್ಯಾ ಫ್ಯಾಮಿಲಿ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿದೆ. ಇದೀಗ ಮಾತುಕತೆಗಳೂ ಬಂದ್ ಆಗಿವೆ ಎಂಬ ಸುದ್ದಿಯೂ ಇದೆ!

 

ಈ ಭಾಗದ ಬಿಜೆಪಿ ಮಂದಿಯೇ ಹೇಳೋ ಪ್ರಕಾರ ಶಿಲ್ಪಾ ಟಿಕೆಟ್ ಗಿಟ್ಟಿಸಿಕೊಳ್ಳಲು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಈ ಬಾರಿ ಟಿಕೆಟ್ ಗಿಟ್ಟಿಸಿಕೊಳ್ಳಲು ಕೆಲವೊಂದು ಷರತ್ತುಗಳನ್ನು ಹಾಕಿದ್ದಾರೆ. ಅದರಲ್ಲಿ ಟಿಕೆಟ್ ಆಕಾಂಕ್ಷಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಲಕ್ಷ ಫಾಲೋವರ್ಸ್ ಇರಬೇಕು ಮತ್ತು ಅವರು ಸಾಮಾಜಿಕ ಅಂಕುಡೊಂಕುಗಳ ವಿರುದ್ಧ ಧ್ವನಿ ಎತ್ತಬೇಕು ಅಂತೆಲ್ಲಾ ನಿಬಂಧನೆಗಳನ್ನು ಹಾಕಿದ್ದಾರೆ. ಶಿಲ್ಪಾ ಮೇಡಮ್ ರಮ್ಯಾ ಸೇರಿದಂತೆ ಇತರೇ ಪಕ್ಷದ ನಾಯಕ ನಾಯಕಿಯರ ವಿರುದ್ಧ ಭಹಿರಂಗವಾಗಿ ಮಾತಾಡೋ ರಿಸ್ಕು ತೆಗೆದುಕೊಳ್ಳುತ್ತಿರೋದೇ ಅಮಿತ್ ಷಾ ಗಮನ ಸೆಳೆಯೋದಕ್ಕೆ ಎಂಬ ಮಾತೂ ಇದ್ದಾವೆ. ಇನ್ನು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಬಿಜೆಪಿಯನ್ನು ಹೊರತಾಗಿಸಿ ವೈಯಕ್ತಿಕ ಇಮೇಜ್ ವೃದ್ಧಿಸಿಕೊಳ್ಳಲೂ ಶಿಲ್ಪಾ ಪ್ರಯತ್ನಿಸುತ್ತಿದ್ದಾರಂತೆ. ಹರ್ಷಿಕಾ ಪೂಣಚ್ಚ, ಕಾಂಜಿಪೀಂಜಿ ಕಾರುಣ್ಯಾರಂಥವರನ್ನು ಜೊತೇಲಿಟ್ಟುಕೊಂಡು ಕೆಲ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರೋ ಶಿಲ್ಪಾ ತಮ್ಮ ಪರ್ಸನಲ್ ಇಮೇಜ್ ಬಲ ಪಡಿಸಿಕೊಳ್ಳಲು ಸರ್ಕಸ್ಸು ನಡೆಸುತ್ತಿದ್ದಾರೆಂಬ ಮಾತುಗಳೂ ಇವೆ.

 


 

ಪ್ರಥಮ್ ಪ್ರವೇಶ

ಇನ್ನು ಇದೇ ಕ್ಷೇತ್ರದ ಅದೇ ಬಿಜೆಪಿ ಪಕ್ಷದಿಂದ ಟಿಕೇಟಿಗೆ ಕಣ್ಣಿಟ್ಟಿರೋ ಬಿಗ್ ಬಾಸ್ ಪ್ರಥಮ್‌ದೂ ಇದೇ ಕಥೆ. ಇವರ ಇತ್ತೀಚಿನ ನಡವಳಿಕೆಗಳು, ಹೇಳಿಕೆಗಳಲ್ಲಿಯೂ ಕೂಡಾ ಅಮಿತ್ ಶಾ ಗಮನ ಸೆಳೆಯೋ ಹಕೀಕತ್ತುಗಳೇ ಎದ್ದು ಕಾಣಿಸುತ್ತಿವೆ. ಪ್ರಥಮ್ ಬಿಗ್‌ಬಾಸ್ ಗೆಲುವಿಗೆ ಸಿಕ್ಕ ಕಾಸನ್ನು ಜನರಿಗೆ ಹಂಚೋದಾಗಿ ಹೇಳಿಕೊಂಡಿದ್ದೂ ಬೊಗಳೆ ಎಂಬ ಗುಮಾನಿ ಇತ್ತು. ಆದರೆ ಅದರಲ್ಲಿ ಈತ ಮಾತು ತಪ್ಪಿಲ್ಲವಾದರೂ ಸಿನಿಮಾವನ್ನೂ ಕೂಡಾ ಟಿಕೇಟು ಪಡೆಯೋ ಅಸ್ತ್ರವಾಗಿ ಬಳಸಿಕೊಳ್ಳುತತಿದ್ದಾರಾ ಎಂಬ ಪ್ರಶ್ನೆ ಕಾಡಿಯೇ ಕಾಡುತ್ತೆ. ಇದೇ ಕಾರಣದಿಂದಲೇ ಇಷ್ಟು ಹೊತ್ತಿಗೆಲ್ಲಾ ಕಾರ್ಯಾರಂಭ ಮಾಡಬೇಕಿದ್ದ ಬಿಲ್ಡಪ್ ಚಿತ್ರವೂ ಅಲ್ಲೇ ನಿಂತಿದೆ. ಬಿಲ್ಡಪ್ ಚಿತ್ರವನ್ನೂ ಕೂಡಾ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಲ್ಡಪ್ ತೋರಿಸಿ ಅಮಿತ್ ಶಾ ಗಮನ ಸೆಳೆಯೋ ಉದ್ದೇಶ ಪ್ರಥಮ್‌ಗೆ ಇದ್ದಂತಿದೆ.

 

 

 

ಇದೆಲ್ಲದರಿಂದಾಗಿ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ವಲಯದಲ್ಲಿ ಡೋಲಾಯಮಾನ ಸ್ಥಿತಿ ಇದೆ. ಇತ್ತ ಅಮೂಲ್ಯಾ ಮಾವ ರಾಮಚಂದ್ರಗೆ ಟಿಕೇಟು ಕೊಟ್ಟರೆ ಈ ಕ್ಷೇತ್ರದಲ್ಲಿರೋ ಗಣೇಶ್ ಅಭಿಮಾನಿಗಳು ಓಟು ಹಾಕೋದಿಲ್ಲ. ಶಿಲ್ಪಾ ಗಣೇಶ್‌ಗೆ ಟಿಕೇಟು ಕೊಟ್ಟರೆ ಇಲ್ಲಿ ಭಾರೀ ಪ್ರಭಾವ ಹೊಂದಿರೋ ರಾಮಚಂದ್ರ ಸಪೋರ್ಟು ಮಾಡೋದಿಲ್ಲ. ಆದ ಕಾರಣ ಇವರಿಬ್ಬರನ್ನೂ ಮೂಲೆಗೆ ಸರಿಸಿ ಎಸ್ ಎಂ ಕೃಷ್ಣಾ ಪುತ್ರಿ ಶಾಂಭವಿಯನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸೋ ಆಲೋಚನೆ ಬಿಜೆಪಿ ವರಿಷ್ಟರದ್ದು. ಈ ಮೂಲಕ ಕೃಷ್ಣಾ ಅವರನ್ನು ಮೂಲೆಗುಂಪು ಮಾಡುತ್ತಿದ್ದಾರೆಂಬ ಆರೋಪದಿಂದಲೂ ಪಾರಾಗೋ ಲೆಕ್ಕಾಚಾರವೂ ಈ ನಡವಳಿಕೆಯಲ್ಲಿದೆ. ಇದಲ್ಲದೆ “ಬಿಜೆಪಿಯಿಂದ ರಾಮಚಂದ್ರಂಗೂ ಟಿಕೇಟು ಕೊಡಲ್ಲ, ಶಿಲ್ಪಾಗೆ ಟಿಕೇಟು ಗಿಟ್ಟೋ ಮಾತೇ ಇಲ್ಲ; ಅಲ್ಲೇನಿದ್ದರೂ ತುಳಸೀ ಮುನಿರಾಜುಗೆ ಟಿಕೇಟು ಗ್ಯಾರೆಂಟಿ” ಅನ್ನೋದು ಆರ್ ಆರ್ ನಗರದಲ್ಲಿ ಮೊದಲಿನಿಂದಲೂ ಮಾರ್ದನಿಸುತ್ತಿರೋ ಹಳೇ ಮಾತು.


 

ಮುನಿರಂತ್ನರಿಗೆ ವರ!

ಒಟ್ಟಾರೆಯಾಗಿ ಶಿಲ್ಪಾ ಮತ್ತು ರಾಮಚಂದ್ರ ನಡುವೆ ಬಿರುಕಾದಲ್ಲಿ ಅದರ ನೇರ ಲಾಭವಾಗೋದು ಈ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಮುನಿರತ್ನ ಅವರಿಗೆ. ಈ ಬಾರಿ ಈ ಕ್ಷೇತ್ರದಲ್ಲಿ ಮುನಿಯವರನ್ನು ಸೋಲಿಸೋದೇ ಬಿಜೆಪಿಯ ಪ್ರಧಾನ ಅಜೆಂಡಾವಾಗಿತ್ತು. ಆದರೆ ಶಿಲ್ಪಾ ಮತ್ತು ರಾಮಚಂದ್ರರ ವೈಮನಸ್ಸಿನಿಂದ ಅದು ಕೈಗೂಡೋ ಲಕ್ಷಣಗಳಿಲ್ಲ. ಈಗಾಗಲೇ ಮುನಿರತ್ನ ಈ ಬಾರಿಯೂ ಗೆಲ್ಲಲು ಕಣವನ್ನು ಪಳಗಿಸಿಕೊಂಡಿದ್ದಾರೆ. ತಮ್ಮ ಕುರುಕ್ಷೇತ್ರ ಚಿತ್ರದಲ್ಲಿ ಕುಮಾರಸ್ವಾಮಿ ಮಗ ನಿಖಿಲ್‌ಗೆ ಪ್ರಧಾನ ಪಾತ್ರ ಕೊಡೋ ಮೂಲಕ ಈ ಬಾರಿ ಸದರಿ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ವೀಕ್ ಕ್ಯಾಂಡಿಡೇಟ್ ಅನ್ನು ಕಣಕ್ಕಿಳಿಸುವಂತೆಯೂ ಮಾಡಿಕೊಂಡಿದ್ದಾರೆಂಬ ಮಾತುಗಳಿವೆ. ಇನ್ನು ಚುನಾವಣೆಯ ಕಾರಣಕ್ಕೇ ಕುರುಕ್ಷೇತ್ರ ಚಿತ್ರವನ್ನು ಆರಂಭಿಸಿದ್ದು ಮತ್ತು ನೀತಿಸಂಹಿತೆ ಜಾರಿಗೆ ಬರೋ ಮುನ್ನ ಹೇಗಾದರೂ ಮಾಡಿ ಸಿನಿಮಾ ಬಿಡುಗಡೆ ಮಾಡಿಕೊಳ್ಳಬೇಕು ಅನ್ನೋದು ಮುನಿ ಮಾಸ್ಟರ್ ಪ್ಲಾನ್ ಅನ್ನೋದೂ ಎಲ್ಲರಿಗೂ ಗೊತ್ತು. ಒಂದು ವೇಳೆ ಮುನಿರತ್ನರ ಪ್ಲಾನಿನಂತೆಯೇ ಎಲ್ಲವೂ ನಡೆದು, ಕುರುಕ್ಷೇತ್ರದ ನೆಪದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನು ಕ್ಷೇತ್ರಾದ್ಯಂತ ಒಂದು ರೌಂಡು ಹಾಕಿಸಿದರೆ ಡಿ ಬಾಸ್ ಅಭಿಮಾನಿಗಳು ಮುನಿರತ್ನರಿಗೆ ಜೈ ಅನ್ನೋದು ಗ್ಯಾರೆಂಟಿ!
ಒಟ್ಟಾರೆ ಶಿಲ್ಪಾ, ರಾಮಚಂದ್ರ, ತುಳಸೀ ಮುನಿರಾಜು, ಶಾಂಭವಿ, ಪ್ರಥಮ್… ಹೀಗೆ ರಾಜರಾಜೇಶ್ವರಿ ನಗರದ ಮೇಲೆ ಕಣ್ಣಿಟ್ಟಿರುವ ಬಿಜೆಪಿಗಳ ಕಾರಣವೇ ಮುನಿರತ್ನ ಅವರಿಗೆ ಭರಪೂರವಾದೊಂದು ಗೆಲುವು ತಂದು ಕೊಡುವ ಎಲ್ಲ ಲಕ್ಷಣಗಳೂ ಇವೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top