ನಾನು ಹಿಂದೂ ವಿರೋಧಿಯಲ್ಲ ಮೋದಿ, ಶಾ ವಿರೋಧಿ- ಪ್ರಕಾಶ್ ರೈ
ನಟನಾಗಿ ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದುಕೊಂಡಿರೋ ಪ್ರಕಾಶ್ ರಾಜ್ ಇದೀಗ ಸಾಮಾಜಿಕ ವಿಚಾರದ ಬಗ್ಗೆ ಅಭಿಪ್ರಾಯ ಮಂಡಿಸಿದ್ದೇ ಒಂದು ಬಣದ ವಿರೋಧಕ್ಕೆ ಕಾರಣವಾಗಿದೆ. ಅವರ ವಿರುದ್ಧ ಥರ ಥರದ ಟೀಕಾ ಪ್ರಹಾರ, ಗೊತ್ತುಗುರಿ ಇಲ್ಲದ ಆರೋಪಗಳೆಲ್ಲವೂ ಕರ್ನಾಟಕದ ತುಂಬಾ ಹರಿದಾಡುತ್ತಿದೆ. ಇದೇ ವಿಚಾರವಾಗಿ ಅವರ ಮೇಲೆ ಹಿಂದೂ ವಿರೋಧಿ ಎಂಬ ಅಸ್ತ್ರ ಪ್ರಯೋಗಿಸೋ ಪ್ರಯತ್ನವೂ ನಡೆಯುತ್ತಿದೆ! ಇದೀಗ ರಾಷ್ಟ್ರ ಮಟ್ಟದಲ್ಲಿ ತಮ್ಮ ವಿರುದ್ಧದ ಆರೋಪಗಳಿಗೆಲ್ಲ ಪ್ರಕಾಶ್ ರೈ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ!
ಸೆಕ್ಸಿ ದುರ್ಗಾ ಚಿತ್ರದ ವಿರುದ್ಧ ಹುಟ್ಟಿಕೊಂಡಿರುವ ವಿವಾದದ ಬಗ್ಗೆ ಇಂಡಿಯಾ ಟುಡೇ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಪ್ರಕಾಶ್ ರೈ ಅವರಿಗೆ ಕರ್ನಾಟಕದಲ್ಲಿ ನಡೆಯುತ್ತಿರೋ ವಿದ್ಯಮಾನಗಳ ಬಗೆಗಿನ ಪ್ರಶ್ನೆಯೂ ಎದುರಾಗಿದೆ. ಇದಕ್ಕೆ ಖಡಕ್ಕು ಉತ್ತರ ನೀಡಿರೋ ಪ್ರಕಾಶ್ ‘ಅವರೊಂದಷ್ಟು ಮಂದಿ ನನ್ನನ್ನು ಹಿಂದೂ ವಿರೋಧಿ ಅಂತ ಬ್ರ್ಯಾಂಡ್ ಮಾಡುತ್ತಿದ್ದಾರೆ. ಆದರೆ ನಾನು ಮೋದಿ, ಶಾ, ಮತ್ತು ಅನಂತ ಕುಮಾರ ಹೆಗ್ಡೆಯಂಥವರ ವಿರೋಧಿ, ಖಂಡಿತಾ ನಾನು ಹಿಂದೂ ವಿರೋಧಿಯಲ್ಲ’ ಅಂದಿದ್ದಾರೆ.
ಕರ್ನಾಟಕದಲ್ಲಿ ನನ್ನ ಸ್ನೇಹಿತೆ, ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯಾದಾಗ ಅವರನ್ನು ಕೊಂದವರ‍್ಯಾರು ಎಂಬ ಬಗ್ಗೆ ನಾನು ಮಾತಾಡಿಲ್ಲ. ಆದರೆ ಆ ಸಾವನ್ನು ಸಂಭ್ರಮಿಸಿದ್ದರಲ್ಲಾ ವಿಕೃತ ಮನಸ್ಥಿತಿಯ ಮಂದಿ? ಅಂಥವರನ್ನು ವಿರೋಧಿಸಿದೆ. ಮುಂದೆಯೂ ವಿರೋಧಿಸುತ್ತೇನೆ. ಆದರೆ ಅದನ್ನು ನಾನು ವಿರೋಧಿಸಿದ್ದೇ ಅಂಥಾ ಮನಸ್ಥಿತಿಗಳ ಹಿಂದಿರುವವರಿಗೆ ಕಣ್ಣುರಿ ಮಾಡಿದೆ. ಖಂಡಿತಾ ನಾನು ಅಂಥಾ ಕೆಟ್ಟ ಮನಸ್ಥಿತಿಗಳ ವಿರೋಧಿ’ ಎಂಬ ಸ್ಪಷ್ಟ ಮಾತುಗಳನ್ನು ಪ್ರಕಾಶ್ ರೈ ಆಡಿದ್ದಾರೆ. ಇದೀಗ ಕರ್ನಾಟಕದಲ್ಲಿ ಪ್ರಕಾಶ್ ರೈ ಸುತ್ತಲಿನ ವಿರೋಧಗಳು ದಿನಕ್ಕೊಂದು ರೂಪ ಪಡೆಯುತ್ತಿವೆ. ಆದರೆ ಪ್ರಕಾಶ್ ಇಂಥಾದ್ದರ ಬಗ್ಗೆ ರಾಷ್ಟ್ರ ಮಟ್ಟದ ಮಾಧ್ಯಮವೊಂದರಲ್ಲಿ ತಮ್ಮ ಗಟ್ಟಿ ನಿಲುವು ಪ್ರದರ್ಶಿಸಿದ್ದಾರೆ!
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
