fbpx
ಕನ್ನಡ

ನಮ್ಮ ರಾಜ್ಯಕ್ಕೆ ಯಾರೇ ವಲಸಿಗರು ಬಂದರೂ ಕನ್ನಡ ಕಲಿಕೆ ಕಡ್ಡಾಯ: ಸಿಎಂ ಸಿದ್ದರಾಮಯ್ಯ

ನಮ್ಮ ರಾಜ್ಯಕ್ಕೆ ಯಾರೇ ವಲಸಿಗರು ಬಂದರೂ ಕನ್ನಡ ಕಲಿಕೆ ಕಡ್ಡಾಯ: ಸಿಎಂ ಸಿದ್ದರಾಮಯ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಭವನದ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ನಾನು ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದೆ. ನಾನು ಸಾಹಿತಿಯಲ್ಲ. ಆದರೆ ನಾಡು, ನುಡಿಯ ಬಗ್ಗೆ ಅಭಿಮಾನವಿದೆ. ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಗೆ ಯಾರೇ ಅಡ್ಡ ಬದರೂ ಸಹಿಸಲ್ಲ, ಅದನ್ನು ನಿವಾರಿಸುವ ಶಕ್ತಿ ನಮ್ಮಲ್ಲಿದೆ. ಭಾಷೆಯ ಬಗ್ಗೆ ಅಭಿಮಾನ ಇಲ್ಲದೇ ಇದ್ದರೆ ನಾವು ಕನ್ನಡಿಗರೇ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

Image result for ರಾಜ್ಯಕ್ಕೆ ಬರುವ ವಲಸಿಗರಿಗೆ ಕನ್ನಡ ಕಲಿಕೆ ಕಡ್ಡಾಯ

ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷ ಪೂರೈಸಿದ ಸವಿನೆನಪಿಗೆ ನಿರ್ಮಿಸಲಾದ ಶತಮಾನೋತ್ಸವ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ತಮಿಳುನಾಡು, ಕೇರಳ, ಆಂಧ್ರದಲ್ಲಿರುವಂತೆ ಯಾರೇ ಇಲ್ಲಿಗೆ ಬಂದರೂ ಕನ್ನಡ ಕಲಿಯಬೇಕು. ಕನ್ನಡ ಕಲಿಯದೇ ಬದುಕುವುದು ನೋವಿನ ವಿಚಾರ, ಸಾಹಿತ್ಯ ಪರಿಷತ್ತು ಕೂಡಾ ಈ ನಿಟ್ಟಿನಲ್ಲಿ ಕೆಲಸ ಮಾಡಲಿ, ನಾವೆಲ್ಲರೂ ಕನ್ನಡದ ವಾತಾವರಣ ನಿರ್ಮಾಣ ಮಾಡೋಣ ಎಂದರು.

ಕನ್ನಡ ನಾಡಿನಲ್ಲಿ ಪ್ರತಿಯೊಬ್ಬರೂ ಕನ್ನಡ ಕಲಿಯಬೇಕು. ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಲ್ಲರೂ ಶ್ರಮಿಸಬೇಕು, ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷ ಪೂರೈಸಿರುವ ಸಂದರ್ಭದಲ್ಲಿ ಅದರ ಸ್ಮರಣಾರ್ಥ ಭವನ ನಿರ್ಮಾಣ ಮಾಡಲು ಮನವಿ ಮಾಡಿದ್ದರು.

ಅದಕ್ಕೆ ಐದು ಕೋಟಿ ರೂ. ಮಂಜೂರು ಮಾಡಿ ಶಂಕುಸ್ಥಾಪನೆಯನ್ನೂ ಮಾಡಿದ್ದೆ. ಇಂದು ಅದರ ಉದ್ಘಾಟನೆ ಮಾಡುತ್ತಿದ್ದೇನೆ. ಇದು ನನಗೆ ಇಮ್ಮಡಿ ಸಂತೋಷ ತಂದಿದೆ. ಇಂತಹ ಅವಕಾಶ ಸಿಗುವುದು ಅಪರೂಪ. ಅತ್ಯಂತ ಸಂತೋಷದಿಂದ ಹೊಸ ಶತಮಾನೋತ್ಸವ ಭವನವನ್ನು ಲೋಕಾರ್ಪಣೆ ಮಾಡುತ್ತಿದ್ದೇನೆ ಎಂದರು.

ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಇನ್ನೂ ಹೆಚ್ಚು ಕ್ರಿಯಾಶೀಲವಾಗಲಿ ಎಂದು ಹಾರೈಸುತ್ತೇನೆ. ಇದು ಆರೂವರೆ ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಕನ್ನಡ ಜನರನ್ನು ಪ್ರತಿನಿಧಿಸುವ ಸಂಸ್ಥೆ. ನಮ್ಮ ಭಾಷೆ, ಸಂಸ್ಕೃತಿಯನ್ನು ಬೆಳೆಸುವ ಸಂಸ್ಥೆ. ಅದಕ್ಕೆ ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡುತ್ತದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ಈಗ ನಿರ್ಮಿಸಲಾಗಿರುವ ಶತಮಾನೋತ್ಸವ ಭವನವು ಪರಿಷತ್ತಿನ ಹಿಂದಿನ ಅಧ್ಯಕ್ಷ ದಿವಂಗತ ಪುಂಡಲೀಕ ಹಾಲಂಬಿ ಅವರ ಕನಸಿನ ಕೂಸು. ಅಂದು ಅವರು ಬಿತ್ತಿದ ಬೀಜ ಈಗ ಭವನದ ರೂಪದಲ್ಲಿ ಬೆಳೆದುನಿಂತಿದೆ. ಇದರ ಶ್ರೇಯಸ್ಸು ಹಾಲಂಬಿ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಕಸಾಪ ಸಿಬ್ಬಂದಿ ಇನ್ನು ಸರ್ಕಾರಿ ನೌಕರರು: ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಯೂ ಇನ್ಮುಂದೆ ಸರ್ಕಾರದಸಿಬ್ಬಂದಿ ಮತ್ತು ನೇಮಕಾತಿ ನಿಯಮಾವಳಿಗೆ ಒಳಪಡಲಿದ್ದಾರೆ. ಇದರಿಂದ ಸರ್ಕಾರಿ ನೌಕರರಿಗೆ ಸಿಗುವ ಸವಲತ್ತುಗಳು ಇವರಿಗೂ ದೊರೆಯಲಿವೆ ಎಂದು ಸ್ವತಃ ಸಿದ್ದರಾಮಯ್ಯ ಘೋಷಿಸಿದರು.

ಪರಿಷತ್ತಿನ ಸಿಬ್ಬಂದಿಯನ್ನು ಸಿಆಂಡ್ ಆರ್ ನಿಯಮಗಳ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದು ಹೇಳಿದರು. ಪ್ರಸ್ತುತ ಧಾರವಾಡದ ವಿದ್ಯಾವರ್ಧಕ ಸಂಘ, ರಾಮನಗರದ ಜಾನಪದ ಪರಿಷತ್ತಿನ ಸಿಬ್ಬಂದಿಗೆ ಮಾತ್ರ ಈ ನಿಯಮಗಳು ಅನ್ವಯಿಸುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗೂ ಇದನ್ನು ಅನ್ವಯಿಸಲಾಗುವುದು ಎಂದರು. ಇದರಿಂದ ಪರಿಷತ್ತಿನಲ್ಲಿ 50 ಜನ ಸಿಬ್ಬಂದಿ ಇದ್ದು, ಅವರೆಲ್ಲರಿಗೂ ಈ ನಿಯಮ ಅನ್ವಯ ಆಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top