fbpx
ಮನೋರಂಜನೆ

ಸೊರಗಿರುವ ಸಿಂಹ

ಸೊರಗಿರುವ ಸಿಂಹ

ಅನಿರುದ್ಧ್ ಅಂತೊಬ್ಬ ನಟ ಇದ್ದರು ಅನ್ನೋದು ಬಹುಶಃ ಜನರಿಗೆ ಮರೆತೇ ಹೋಗಿತ್ತು. ಸಾಹಸ ಸಿಂಹ ವಿಷ್ಣುವರ್ಧನ್ ಅವರ ತಿಥಿ, ಹುಟ್ಟುಹಬ್ಬದ ಸಂದರ್ಭದಲ್ಲಿ ಅಥವಾ ಸಮಾಧಿಯ ವಿಚಾರದಲ್ಲಿ ಮಾತ್ರ ಅನಿರುದ್ಧ್ ಹೆಸರು ಕೇಳಿಬರುತ್ತಿತ್ತು. ಅನಿರುದ್ಧ್ ತಾನಿನ್ನೂ ನಟನಾಗಿ ಉಳಿದಿದ್ದೇನೆ ಅನ್ನೋದನ್ನು ಸಾಬೀತು ಮಾಡೋದರ ಜೊತೆಗೆ ಸಾಕಷ್ಟು ಮಾರ್ಪಾಟು ಹೊಂದಿ ಅವತರಿಸಿರೋ ಚಿತ್ರ ರಾಜಾ ಸಿಂಹ.

 

 

ಸರ್ಕಾರೇತರ ಸಂಸ್ಥೆ ನಡೆಸಿಕೊಂಡಿದ್ದ ರಾಜ (ಅನಿರುದ್ಧ್)ಗೆ ಎದುರಾಗುವ ನಿಖಿತಾ ಮೇಲೆ ಸ್ಪಾಟಲ್ಲೇ ಲವ್ವಾಗುತ್ತದೆ. ಹೋದಲ್ಲಿ ಬಂದಲ್ಲಿ ಇಬ್ಬರೂ ಎದುರುಗೊಳ್ಳುತ್ತಲೇ ಇರುತ್ತಾರೆ. ದಿಢೀರಂತಾ ನಿಖಿತಾ ‘ಸಿಂಹಾದ್ರಿ’ ಎನ್ನುವ ಮೂಲಸ್ಥಾನಕ್ಕೆ ತೆರಳುತ್ತಾಳೆ. ಆಕೆಯ ಹಿಂದೆಯೇ ಅನಿರುದ್ಧ ಕೂಡಾ ತನ್ನ ಸ್ನೇಹಿತರೊಂದಿಗೆ ಸಿಂಹಾದ್ರಿ ಸೇರುತ್ತಾರೆ. ಇವರೆಲ್ಲರ ಜೊತೆ ಕಥೆ ಕೂಡಾ ಸಿಂಹಾದ್ರಿಯಲ್ಲಿ ಬೀಡುಬಿಡುತ್ತದೆ. ಅಲ್ಲಿಗೆ ಹೋದ ನಂತರ ಗೊತ್ತಾಗುತ್ತದೆ ಸಿಂಹಾದ್ರಿ ಅನ್ನೋ ಊರು ರಾಜನ ಬೇರು ಅನ್ನೋದು. ಅಲ್ಲೊಂದು ಫ್ಲಾಷ್ ಬ್ಯಾಕು ಓಪನ್ ಆಗುತ್ತದೆ. ಹುಡುಗಿಗಾಗಿ ಹೋದವನ ಕಥೆ ಕೌಟುಂಬಿಕ ಸೇಡಿನ ಕಡೆಗೆ ಹೊರಳಿಕೊಳ್ಳುತ್ತದೆ. ಆ ಊರನ್ನು ತನ್ನದೇ ಕುಟುಂಬದವರ ಕಪಿಮುಷ್ಠಿಯಿಂದ ಬಿಡಿಸಿ, ಅದರ ಉದ್ಧಾರಕ್ಕೆ ನಿಲ್ಲುತ್ತಾನೆ. ಈ ಸಂದರ್ಭದಲ್ಲಿ ಏನೆಲ್ಲಾ ಅಡ್ಡಿ ಆತಂಕಗಳು ಎದುರಾಗುತ್ತವೆ, ಅದೆಲ್ಲದರಿಂದ ಮರಿ ಸಿಂಹ ಹೇಗೆ ಬಚಾವಾಗುತ್ತದೆ ಅನ್ನೋದು ಸಿನಿಮಾದ ಅಂತಿಮ ಗುಟ್ಟು.

 

 

ಕೈ ಕಡಗವನ್ನು ಪದೇ ಪದೇ ತಿರುಗಿಸುವುದು, ಒಂದು ಭುಜವನ್ನು ವಾರೆ ಮಾಡಿ ಮತ್ತೊಂದನ್ನು ಮೇಲಕ್ಕೆತ್ತಿ ನಡೆಯುವುದು, ಕೆಂಬಣ್ಣದ ಗಡ್ಡ, ಝಗಮಗ ಕುರ್ತಾ, ರಂಗುರಂಗು ಪೇಟ… ಹೀಗೆ ವಿಷ್ಣು ಅವರ ಕೊನೇ ಘಳಿಗೆಯ ಸಿನಿಮಾಗಳಲ್ಲಿ ಯಾವೆಲ್ಲಾ ಅಂಶಗಳು ಮೇಳೈಸುತ್ತಿದ್ದವೋ ಅವನ್ನೇ ಯಥಾವತ್ತು ಫಾಲೋ ಮಾಡಿರೋದನ್ನು ಅನಿರುದ್ಧ್ ಹೆಚ್ಚುಗಾರಿಕೆ ಅನ್ನಿಸಿಕೊಂಡಂತೆ ಕಾಣುತ್ತದೆ. ಸಿಂಹದ ಮರಿ, ಮೈಯಲ್ಲಿ ಸಿಂಹದ ರಕ್ತ ಹರೀತಿದೆ, ಸಿಂಹ ಹಾಗೆ, ಸಿಂಹ ಹೀಗೆ ಅಂತೆಲ್ಲಾ ಸಿಂಹವನ್ನು ಸಿಕ್ಕಾಪಟ್ಟೆ ಬಳಸಿ ಆಯಾಸಗೊಳಿಸಿದ್ದಾರೆ. ಸಾಲದ್ದೆಂಬಂತೆ ಸಿಂಹಾದ್ರಿಯ ಸಿಂಹ ಚಿತ್ರದ ದೃಶ್ಯಗಳನ್ನು ಬಳಸಿಕೊಂಡು ಮತ್ತು ಯಾರದ್ದೋ ದೇಹಕ್ಕೆ ವಿಷ್ಣು ಅವರ ತಲೆ ಅಂಟಿಸಿ ತೀರಾ ಕೃತಕವಾದ ಮತ್ತು ಕಳಪೆ ದೃಶ್ಯಗಳನ್ನು ಕಟ್ಟಿದ್ದಾರೆ. ಈ ಚಿತ್ರವನ್ನು ನೋಡಿದವರಿಗೆ ಯಾವ ಕಾರಣಕ್ಕೂ ಇದು ಅನಿರುದ್ಧರನ್ನು ನಂಬಿ ಮಾಡಿಲ್ಲ, ಬದಲಿಗೆ ವಿಷ್ಣು ಅನ್ನೋ ಮಹಾನ್ ಶಕ್ತಿಯ ಹೆಸರನ್ನಷ್ಟೇ ನಂಬಿ ತಯಾರಿಸಿರುವ ಸಿನಿಮಾ ಅನ್ನೋದು ಖಾತ್ರಿಯಾಗುತ್ತದೆ.

ಅನಿರುದ್ಧ್ ವಿಷ್ಣು ಅಳಿಯ ಅನ್ನೋದು ಜಗತ್ತಿಗೇ ಗೊತ್ತು. ಇವರು ಕೂಡಾ ವಿಷ್ಣು ಹೆಸರನ್ನೇ ಬಂಡವಾಳ ಮಾಡಿಕೊಂಡು ಬದುಕುತ್ತಿದ್ದಾರೆ ಎಂಬುದು ತಿಳಿದಿರೋ ವಿಚಾರ. ಹಾಗಂತ ಒಂದು ಸಿನಿಮಾದಲ್ಲಿ ಕೂಡಾ ಯದ್ವಾ ತದ್ವಾ ಅವರನ್ನು ಬಳಸಿಕೊಳ್ಳೋ ಚೀಪ್ ಗಿಮಿಕ್ ಬೇಕಿತ್ತಾ ಅನ್ನೋದು ಸ್ವತಃ ವಿಷ್ಣು ಅವರ ಅಭಿಮಾನಿಗಳನ್ನೂ ಕಾಡುವಂಥಾ ಪ್ರಶ್ನೆ. ಒಬ್ಬ ಮಹಾನ್ ಸಾಧಕ, ಅದ್ಭುತ ನಟ, ಯಾವತ್ತಿಗೂ ಮರೆಯಾಗದಂಥ ನೆನಪುಗಳನ್ನು ಪ್ರೇಕ್ಷರು ಮತ್ತು ಅವರ ಅಭಿಮಾನಿಗಳ ಹೃದಯದಲ್ಲಿ ಬಿಟ್ಟುಹೋಗಿದ್ದಾರೆ. ಹೀಗಿರುವಾಗ ಮೇರು ಕಲಾವಿದನನ್ನು ಹೀಗೆಲ್ಲಾ ಬಳಸಿಕೊಳ್ಳೋದು ಸರಿಯಾ ಅನ್ನೋದನ್ನು ಅವರದ್ದೇ ಮನೆಯವರಾದ ಮತ್ತು ಈ ಚಿತ್ರದ ಪಾತ್ರಧಾರಿಗಳೂ ಆದ ಭಾರತಿ ಮೇಡಂ ಮತ್ತು ಅಳಿಯ ಅನಿರುದ್ಧ ಗಂಭೀರವಾಗಿ ಯೋಚಿಸಬೇಕು.

 


ಇನ್ನು ಈ ಚಿತ್ರದಲ್ಲಿ ಸಂಜನಾ ಗುಲ್ರಾಣಿ ಪಾತ್ರವನ್ನು ಯಾತಕ್ಕಾದರೂ ತುರುಕಿದ್ದಾರೋ ನಿರ್ದೇಶಕರಿಗೇ ತಿಳಿದಿರಬೇಕು. ನಾಯಕಿ ನಿಖಿತಾ ಮತ್ತು ಹಾಸ್ಯಪಾತ್ರದಲ್ಲಿ ನಟಿಸಿರುವ ಬುಲೆಟ್ ಪ್ರಕಾಶ್, ವಿಲನ್ ಅರುಣ್ ಸಾಗರ್ ಈ ಚಿತ್ರದ ಜೀವಾಳ. ಶರತ್ ಲೋಹಿತಾಶ್ವ ಅವರನ್ನು ನಿಭಾಯಿಸುವ ಛಾತಿ ನಿರ್ದೇಶಕ ರವಿರಾಮ್‌ಗೆ ಗೊತ್ತಾಗಿಲ್ಲ. ಕಾರಣವೇ ಇಲ್ಲದೆ ಬರೋ ಹಾಡುಗಳು, ಲಂಗುಲಗಾಮಿಲ್ಲದೆ ಸಾಗೋ ಚಿತ್ರಕತೆ, ಬಿ.ಎ. ಮಧು ಅವರ ಕ್ಲೀಷೆಯೆನಿಸುವ ಸಂಭಾಷಣೆಗಳ ನಡುವೆ ಖುಷಿ ಕೊಡೋದು ಡಿಫರೆಂಟ್ ಡ್ಯಾನಿ ಸಾಹಸ! ಇಷ್ಟೆಲ್ಲಾ ಸಮಸ್ಯೆಗಳಿಂದ ಸೊರಗಿರುವ ರಾಜಾ ಸಿಂಹನನ್ನು ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳಲ್ಲದಿದ್ದರೂ ಅನಿರುದ್ಧರ ಅಭಿಮಾನಿಗಳ್ಯಾರಾದರೂ ಇದ್ದರೆ ಖಂಡಿತಾ ಒಮ್ಮೆ ನೋಡಬಹುದು!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top