fbpx
ಮನೋರಂಜನೆ

ದರ್ಶನ್ ಹುಟ್ಟುಹಬ್ಬಕ್ಕೆ ಹೋಗುವ ಪ್ಲಾನ್ ಇದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು!

ಅಭಿಮಾನಿಗಳಲ್ಲಿ ದರ್ಶನ್ ಮಾಡಿಕೊಂಡ ವಿನಂತಿ ಏನು ಗೊತ್ತಾ?

 

 

ಫೆಬ್ರವರಿ 16 ಬರುತ್ತಿದ್ದಂತೇ ಕರ್ನಾಟಕದ ಮೂಲೆ ಮೂಲೆಗಳಲ್ಲಿರುವ ದರ್ಶನ್ ಅಭಿಮಾನಿಗಳೆಲ್ಲಾ ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ದೌಡಾಯಿಸುತ್ತಾರೆ. ಹೇಳಿ ಕೇಳಿ ಆರ್‌ಆರ್ ನಗರ ರೆಸಿಡೆನ್ಷಿಯಲ್ ಬಡಾವಣೆ. ಮೊದಲೆಲ್ಲಾ ಈ ಬಡಾವಬಣೆಯಲ್ಲಿ ಹೇರಳವಾದ ಖಾಲಿ ಜಾಗಗಳಿರುತ್ತಿದ್ದವು. ಈಗ ಈ ಪ್ರದೇಶವನ್ನು ಬೆಂಗಳೂರಿನ ಕುಬೇರಮೂಲೆ ಅಂತ ಜ್ಯೋತಿಷಿಗಳು, ವಾಸ್ತು ಶಾಸ್ತ್ರಜ್ಞರೆಲ್ಲಾ ಘೋಷಿಸಿರೋದರಿಂದ ನಾಲ್ಕಿಂಚೂ ಜಾಗ ಉಳಿಸದಂತೆ ಜನ ಮನೆಗಳ ಮೇಲೆ ಮನೆ ಕಟ್ಟಿಕೊಂಡಿದ್ದಾರೆ. ಇಂಥದ್ದರಲ್ಲಿ ಏಕಾಏಕಿ ಲಕ್ಷಾಂತರ ಜನ ಬಂದು ಸಾಲುಗಟ್ಟಿನಿಂತರೆ ಹೇಗೆ ತಾನೆ ಜಾಗ ಸಾಲಲು ಸಾಧ್ಯ? ಇನ್ನು ಬಂದ ಅಭಿಮಾನಿಗಳಿಗೆ ದರ್ಶನ್ ಅವರ ದರ್ಶನ ಪಡೆದೇ ತೀರಬೇಕೆನ್ನುವ ಹಂಬಲ. ಹೀಗಾಗಿ ಆರಾಧ್ಯದೈವ ದಚ್ಚು ಅವರನ್ನು ನೋಡಲು ಅಭಿಮಾನಿಗಳು ಮರ, ಕಂಬ, ಕಾಂಪೌಂಡು, ಮನೆಗಳು.. ಹೀಗೆ ಸಿಕ್ಕ ಜಾಗದಲ್ಲೆಲ್ಲಾ ಏರಿ ಕೂರುತ್ತಾರೆ.

 

 

ಫೆಬ್ರವರಿ ಹದಿನಾರು ಕಳೆದು ಎಲ್ಲೆಲ್ಲಿಂದಲೋ ಬಂದ ಜನ ಖಾಲಿಯಾಗುತ್ತಿದ್ದಂತೇ ದರ್ಶನ್ ಮನೆ ಸುತ್ತಮುತ್ತಲಿನವರೇ ಬಂದು ಕ್ಯೂನಿಂತಿರುತ್ತಾರೆ. ಅದೂ ಕೈಲಿ ಪಟ್ಟಿ ಹಿಡಿದುಕೊಂಡು “ನಮ್ಮನೆ ಗೇಟು ಮುರಿದೋಗಿದೆ, ನಮ್ಮನೆ ಕಾಂಪೌಂಡು ಉಳ್ಳೋಗೈತೆ. ನಮ್ಮನೆ ಹಂಚು ಬಿದ್ದೋಗೈತೆ, ಗೋಡೆ ಗಲೀಜಾಗಿದೆ” ಅಷ್ಟೇ ಅಲ್ಲ, “ತುಂಬಾ ಕ್ರೌಡ್ ಇತ್ತಲ್ಲಾ? ಅದನ್ನ ನೋಡಿ ಬೊಗಳೀ ಬೊಗಳೀ ನಮ್ಮನೆ ನಾಯ್ ಮರಿಗೆ ಗಂಟಲು ಕಟ್ಕೊಂಡ್ಬಿಟ್ಟಿದೆ” – ಹೀಗೆ ಜನ ಉದ್ದುದ್ದ ಕಂಪ್ಲೇಂಟು ಹಿಡಿದು ನಿಂತಿರುತ್ತಾರೆ. ಆಸುಪಾಸಿನವರ ದೂರನ್ನೆಲ್ಲಾ ಸಮಾಧಾನದಿಂದಲೇ ಆಲಿಸುವ ದರ್ಶನ್ ಅವರೆಲ್ಲರ ಸಮಸ್ಯೆ ಬಗೆಹರಿಸಲು ತಮ್ಮ ಸಹಾಯಕರಿಗೆ ಆದೇಶಿಸುತ್ತಾರೆ. ಪ್ರತಿವರ್ಷ ಹುಟ್ಟುಹಬ್ಬ ಮುಗಿದ ನಂತರ ಏರಿಯಾ ಕ್ಲೀನ್ ಮಾಡಿಸಲು ದರ್ಶನ್ ಅವರಿಗೆ ಮೂವತ್ತಕ್ಕೂ ಅಧಿಕ ಲಕ್ಷ ಖರ್ಚು ಬರುತ್ತದೆಂದರೆ ನಂಬಲೇ ಬೇಕು. ಕರ್ನಾಟಕದ ಜನ ತೋರಿರುವ ಲೆಕ್ಕವಿಲ್ಲದಷ್ಟು ಪ್ರೀತಿಗೆ ದರ್ಶನ್ ಇಷ್ಟು ಟ್ಯಾಕ್ಸು ಕಟ್ಟಲು ದರ್ಶನ್ ಯಾವತ್ತೂ ಲೆಕ್ಕ ಹಾಕುವವರಲ್ಲ. ಆದರೆ, ತೀರಾ ಮತ್ತೊಬ್ಬರ ಶಾಂತಿಗೆ ಭಂಗ ತರುವುದು, ಆಸ್ತಿಪಾಸ್ತಿಗೆ ಹಾನಿಯುಂಟು ಮಾಡೋದನ್ನು ತಪ್ಪಿಸಬೇಕಾಗಿ ಖುದ್ದು ದರ್ಶನ್ ವಿನಿಂತಿಸಿದ್ದಾರೆ.

 

 

ದರ್ಶನ್ ಅವರು ಅಭಿಮಾನಿಗಳಲ್ಲಿ ಕೋರಿರುವ ಪ್ರೀತಿಯ ವಿನಂತಿ ಹೀಗಿದೆ :

“ನಲ್ಮೆಯ ಅಭಿಮಾನಿಗಳಲ್ಲಿ,

ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ. ನನ್ನ ಹುಟ್ಟುಹಬ್ಬದ ದಿನ ನೀವೆಲ್ಲ ದೂರದ ಊರುಗಳಿಂದ ಬಂದು ನನಗೆ ಶುಭಾಶಯ ಕೋರಿ ನಿಮ್ಮದೇ ಹುಟ್ಟುಹಬ್ಬ ಎನ್ನುವಂತೆ ಸಂಭ್ರಮಿಸುವುದು ನನ್ನ ಯಾವುದೋ ಜನ್ಮದ ಪುಣ್ಯವೆಂದೇ ಭಾವಿಸುತ್ತೇನೆ. ಈ ನಿಮ್ಮ ಪ್ರೀತಿಗೆ ನಾನು ಚಿರಋಣಿ. ನಿಮಗೆಲ್ಲ ತುಂಬುಹೃದಯದ ಧನ್ಯವಾದ. ಆದರೆ ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ದಯವಿಟ್ಟು ನೀವೆಲ್ಲರೂ ಅಕ್ಕಪಕ್ಕದ ಮನೆಯ ನಿವಾಸಿಗಳಿಗೆ ತೊಂದರೆ ಆಗದಂತೆ ಶಾಂತಿ ಹಾಗೂ ಶಿಸ್ತಿನಿಂದ ವರ್ತಿಸಬೇಕಾಗಿ ನಿಮ್ಮೆಲ್ಲರಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಯಾರೂ ನನ್ನ ಅಕ್ಕಪಕ್ಕದ ಮನೆಯ ಕಾಂಪೌಂಡ್ ಹತ್ತುವುದು, ಒಳಪ್ರವೇಶಿಸುವುದು, ಹೂಕುಂಡಗಳನ್ನು ಬೀಳಿಸುವುದು, ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ತೋರಬಾರದು. ನನ್ನ ಬಗ್ಗೆ ಇಷ್ಟೆಲ್ಲಾ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ನನ್ನ ಈ ಕೋರಿಕೆಯನ್ನು ನಡೆಸಿಕೊಡುವಿರಾಗಿ ಮತ್ತು ಪೋಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕಾಗಿ ವಿನಂತಿ.
ಇಂದಿ ನಿಮ್ಮ ಪ್ರೀತಿಯ ದಾಸ ದರ್ಶನ್”

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top