fbpx
ಕಿರುತೆರೆ

ಮಂಜರಿ ಜೊತೆ ಎದ್ದು ಬಂದ ರೂಪಿಕಾ

ಮಂಜರಿ ಜೊತೆ ಎದ್ದು ಬಂದ ರೂಪಿಕಾ

 

 

ಬಾಂಬೆಯಿಂದ ಕರೆತಂದ ಹೀರೋಯಿನ್‌ಗಳು, ಕನ್ನಡದ ಗಂಧವೇ ಗೊತ್ತಿಲ್ಲದೆ ಬರೀ ತುಟಿ ಅಲ್ಲಾಡಿಸಿ, ಪಾತ್ರದ ಆಶಯಗಳನ್ನೇ ಕೊಲ್ಲುವ ಪರಭಾಷಾ ನಟಿಯರ ಮುಂದೆ ಯಾವ ಪಾತ್ರ ಕೊಟ್ಟರೂ ಜೀವ ತುಂಬಬಲ್ಲ ನಟಿಯರು ಕನ್ನಡದಲ್ಲೇ ಇದ್ದಾರೆ. ಅಂಥಾ ಹುಡುಗಿಯರಲ್ಲಿ ರೂಪಿಕಾ ಕೂಡಾ ಪ್ರಮುಖರು. ಚೆಲುವಿನ ಚಿಲಿಪಿಲಿ ಎನ್ನುವ ಸಿನಿಮಾದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ರೂಪಿಕಾ ಆನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಸದ್ಯ ಈಗಷ್ಟೇ ತೆರೆಗೆ ಬಂದು ನೋಡಿದವರ ಮೆಚ್ಚುಗೆಗೆ ಪಾತ್ರವಾಗಿರುವ ಮಂಜರಿ ಮತ್ತು ಕನಕ ಚಿತ್ರಗಳ ಮೂಲಕ ರೂಪಿಕಾ ಹೊಸ ರೂಪದಲ್ಲಿ ರೀ ಎಂಟ್ರಿ ಕೊಟ್ಟಿದ್ದಾರೆ.

ವಿಶೃತ್ ನಾಯಕ್ ನಿರ್ದೇಶಿಸಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ `ಮಂಜರಿ’ ಚಿತ್ರ ಈ ವಾರವಷ್ಟೇ ಬಿಡುಗಡೆಗೊಂಡಿದೆ. ಈ ಚಿತ್ರದಲ್ಲಿ ರೂಪಿಕಾ ನಟಿಸಿರುವ ಪರಿಯೇ ಅಮೋಘ. ಥೇಟು ನಾಗವಲ್ಲಿ ಸೌಂದರ್ಯಾರನ್ನು ನೆನಪಿಸುವಷ್ಟರ ಮಟ್ಟಿಗೆ ರೂಪಿಕಾ ನಟಿಸಿದ್ದಾರೆ. ವಿಶೃತ್ ನಾಯಕ್ ಕಲ್ಪಿಸಿಕೊಂಡ ಪಾತ್ರವೇ ತಾವಾಗಿ ರೂಪಿಕಾ ಅವತಾರವೆತ್ತಿದ್ದಾರೆ. ಎರಡೆರಡು ಶೇಡ್ ಹೊಂದಿರೋ ಪಾತ್ರದಲ್ಲಿ ನಟನೆಯೊಂದಿಗೆ ರೂಪಿಕಾರ ಧ್ವನಿಯ ಏರಿಳಿತ ಕೂಡಾ ವಿಶೇಷ ಫೀಲ್ ಹುಟ್ಟಿಸುವಂತಿದೆ.
ಮಂಜರಿ ಜೊತೆ ಎದ್ದು ಬಂದ ರೂಪಿಕಾ

 

 

ಮಂಜರಿ ಸಿನಿಮಾದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ರೂಪಿಕಾ ಸಾಗಿಬಂದ ಹಾದಿ ಇಲ್ಲಿದೆ.

ತಾನು ನಾಯಕನಟಿಯಾಗಿ ನಟಿಸಿದ ಮೊದಲನೇ ಚಿತ್ರದಲ್ಲೇ ನಟನೆಯಲ್ಲಿ ಮಾಗಿದವಳಂತೆ ಕಂಡುಬಂದಿದ್ದ ರೂಪಿಕಾ ಆಗಿನ್ನೂ ೧೦ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದರು. ರೂಪಿಕಾ ಏಕಾಏಕಿ ನಾಯಕಿಯಾದವರಲ್ಲ. ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಈಕೆ ಹತ್ತನ್ನೆರಡು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದರು. ಕಿರುತೆರೆಯ ಹತ್ತಾರು ಧಾರಾವಾಹಿಗಳಲ್ಲೂ ರೂಪಿಕಾ ಮುಖ ತೋರಿದ್ದರು. ಈ ಎಲ್ಲ ಅನುಭವಗಳಿಂದಲೇ ಆಕೆ ಎದುರಿಗಿದ್ದ ಕ್ಯಾಮೆರಾ ಬಗ್ಗೆ ಲವಲೇಷದ ಭಯವೂ ಇಲ್ಲದೆ, ಎಸ್. ನಾರಾಯಣ್ ರಂಥ ನಿರ್ದೇಶಕರ ಸಿನಿಮಾದಲ್ಲಿ ಲೀಲಾಜಾಲವಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ರೂಪಿಕಾಳನ್ನು ಮೊದಲ ಚಿತ್ರಕ್ಕೆ ಆಯ್ಕೆ ಮಾಡುವ ಮುನ್ನ ಈಕೆಯನ್ನು ಕರೆಸಿದ ನಾರಾಯಣ್ `ನೀನೇ ಈ ಚಿತ್ರದ ಹೀರೋಯಿನ್’ ಎಂದುಬಿಟ್ಟರಂತೆ. ಒಂದು ಕ್ಷಣ ರೂಪಿಕಾಗೆ `ಕನಸೋ ಇದು ನನಸೋ ಇದು…..’ ಎನಿಸಿತ್ತಂತೆ. ಚೈಲ್ಡ್ ಆರ್ಟಿಸ್ಟ್ ಆಗಿ ಎಷ್ಟೋ ಚಿತ್ರಗಳಲ್ಲಿ ನಟಿಸಿದ್ದ ರೂಪಿಕಾಗೆ ನಾಯಕನಟಿಯಾಗಿ ನಟಿಸುವ ಸಂದರ್ಭದಲ್ಲಿ ಮೊದಲಿಗೆ ಒಂಥರಾ ಭಯ ಶುರುವಾಗಿತ್ತಂತೆ. ಆದರೆ ಎಸ್. ನಾರಾಯಣ್ ಅವರ ನಿರ್ದೇಶನ ರೂಪಿಕಾಳ ಎಲ್ಲ ಭಯಗಳನ್ನೂ ಮಾಯ ಮಾಡಿಸಿತಂತೆ. ಎಸ್. ನಾರಾಯಣ್ ಕನ್ನಡ ಚಿತ್ರರಂಗದ ವೃತ್ತಿಪರ ನಿರ್ದೇಶಕರಲ್ಲೊಬ್ಬರು. ಶಿಸ್ತು, ಸಮ್ಯಮಕ್ಕೇ ಹೆಸರಾದ ನಾರಾಯಣ್‌ರ ಸಿನಿಮಾದಲ್ಲಿ ನಟಿಸುವುದೆಂದರೆ ಅದು ಸುಮ್ಮನೆ ಮಾತಲ್ಲ. ಅದರಲ್ಲೂ ನಾರಾಯಣ್ ಚಿತ್ರದಲ್ಲಿ ನಾಯಕನಟಿಯಾಗಿ ನಟಿಸುವುದೆಂದರೆ, ಅದು ಹೆಚ್ಚುಗಾರಿಕೆಯೇ ಸರಿ. ನಟನೆಯಲ್ಲಿ ಕಿಂಚಿತ್ತೂ ಲೋಪವಿಲ್ಲದಂತೆ ನಟಿಸುವವರಿಗೆ ಮಾತ್ರ ಅಲ್ಲಿ ಆಧ್ಯತೆಯಿರುತ್ತದೆ.

 

 

ಹೇಳಿ ಕೇಳಿ ನಾರಾಯಣ್ ಸುಮಾರು ಐವತ್ತು ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕರಾಗಿರುವುದರಿಂದ ಅವರ ಚಿತ್ರಗಳಲ್ಲಿ ನಟಿಸಲು ಎಂತೆಂಥಾ ಖ್ಯಾತ ನಟಿಯರೂ ಒಮ್ಮೊಮ್ಮೆ ಹೆದರುವುದುಂಟು. ಆದರೆ ತನ್ನ ಸಾಮರ್ಥ್ಯ ಎಂಥದ್ದು ಎಂಬ ಅರಿವು ರೂಪಿಕಾಳಿಗೆ ಇದ್ದಿದ್ದರಿಂದಲೋ ಏನೋ ನಾರಾಯಣ್ ಕಂಪೋಸ್ ಮಾಡುತ್ತಿದ್ದ ಪ್ರತಿಯೊಂದು ಶಾಟ್‌ಗಳನ್ನೂ ರೂಪಿಕಾ ಒಂದೇ ಟೇಕ್‌ನಲ್ಲಿ `ಓಕೆ’ ಮಾಡುತ್ತಿದ್ದಳಂತೆ. ಈ ವಿಚಾರವನ್ನು ಸ್ವತಃ ನಾರಾಯಣ್ ಅವರೇ ಅತ್ಯಂತ ಸಂತಸದಿಂದ ಹಿಂದೊಮ್ಮೆ ಹೇಳಿಕೊಂಡಿದ್ದರು. ಮಾತ್ರವಲ್ಲ, `ಈಕೆ ಆರತಿ, ಭಾರತಿ, ಕಲ್ಪನಾರಂತಾಗುತ್ತಾಳೆ’ ಎಂದು ಭವಿಷ್ಯ ನುಡಿದಿದ್ದರು.

ಇದಾದ ನಂತರ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ರೂಪಿಗೆ ಮಧ್ಯೆ ಒಂಚೂರ್ ಡಲ್ ಅನಿಸಿದ್ದೂ ನಿಜ. ಬಹುಶಃ ನೋಡಲು ಕೊಂಚ ಗುಂಡುಗುಂಡಾಗಿ ಕಂಡಿದ್ದೇ ಅದಕ್ಕೆ ಕಾರಣವಾಗಿತ್ತೇನೋ. ಆದರೆ ರೂಪಿಕಾ ಈಗ ಸಾಕಷ್ಟು ಕಸರತ್ತು ಮಾಡಿ ಸ್ಲಿಮ್ ಆಗಿದ್ದಾರೆ. ಸದ್ಯ ರೂಪಿಕಾರನ್ನು ನೋಡಿದರೆ ಮತ್ತೊಂದು ಸುತ್ತು ನಾಯಕಿಯಾಗಿ ಮೆರೆಯುವುದು ಗ್ಯಾರೆಂಟಿ ಎನಿಸುತ್ತಿದೆ. ವಿಶೃತ್ ನಾಯಕ್ ನಿರ್ದೇಶನದ `ಮಂಜರಿ’ ಅದಕ್ಕೆ ಮುನ್ನುಡಿಯಾಗೋದಂತೂ ನಿಜ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top