fbpx
ಬಿಗ್ ಬಾಸ್

ಗಾಸಿಪ್ ಪ್ರಿಯರ ಬಾಯಿಗೆ ’ಚಂದನ್ ಶೆಟ್ಟಿ’ ಫುಡ್ಡು..!

ಈ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ ಅಂದರೆ ಹಾಗೇನೆ. ಇದರ ಸದಸ್ಯರಾಗಿರುವವರು ಮನೆಯೊಳಗಿದ್ದರೂ ಸದ್ದು-ಸುದ್ದಿ, ಮನೆಯ ಹೊರಗೆ ಬಂದರೂ ಸೌಂಡು! ಒಟ್ಟಿನಲ್ಲಿ ಇವರೇ ಪ್ರಚಾರದಿಂದ ದೂರವುಳಿಯುವುದಿಲ್ಲವೋ ಅಥವಾ ವಿವಾದಗಳು ಇವರಿಂದ ದೂರ ಹೋಗುವುದಿಲ್ಲವೋ ದೇವರೇ ಬಲ್ಲ.

 

 

ಅದೇನೆ ಇರಲಿ, ಈಗಿನ ಸುದ್ದಿ ಎಂದರೆ ಕಳೆದ ವಾರವಷ್ಟೇ ಕನ್ನಡ ಬಿಗ್ ಬಾಸ್-೫ ಆವೃತ್ತಿಯಲ್ಲಿ ಕನ್ನಡದ ರ‍್ಯಾಪರ್ ಖ್ಯಾತಿಯ ಚಂದನ್ ಶೆಟ್ಟಿ ಗೆಲುವಿನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಬಿಗ್‌ಬಾಸ್ ಮನ ಗೆದ್ದು ಹೊರಬಂದ ಚಂದನ್ ಶೆಟ್ಟಿಗೆ ಅಭಿಮಾನಿಗಳಿಂದ, ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಟಿ.ವಿ ಚಾನಲ್‌ಗಳು, ಪತ್ರಿಕೆಗಳು, ಎಫ್.ಎಂ ವಾಹಿನಿಗಳು ಚಂದನ್ ಶೆಟ್ಟಿ ಅವರನ್ನು ಎದುರು ಕೂರಿಸಿಕೊಂಡು ಬಿಗ್‌ಬಾಸ್ ಮನೆಯ ಒಳಗಿನ ’ಬಿಗ್’ ಅನುಭವಗಳ ಬಗ್ಗೆ ಗಂಟೆಗಟ್ಟಲೆ ಕೇಳುತ್ತಿದ್ದರೆ, ಚಂದನ್ ಶೆಟ್ಟಿ ಕೂಡ ಕೂಲಾಗಿ ಕುಳಿತುಕೊಂಡು ತಮ್ಮ ಅನುಭವಗಳನ್ನು ’ಎಳೆ ಎಳೆಯಾಗಿ…’ ಬಿಡಿಸಿಡುತ್ತಿದ್ದರು.

 

 

 

ಇನ್ನು ಬಿಗ್‌ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರ ಜನಪ್ರಿಯತೆಯನ್ನು ಕಂಡ ಸಿನಿಮಾ ಮಂದಿ ಚಂದನ್ ಶೆಟ್ಟಿ ಅವರ ಹೆಸರನ್ನು ಬಳಸಿಕೊಂಡು ಹೇಗೆ ಚಿತ್ರೋದ್ಯಮದಲ್ಲಿ ವ್ಯವಹಾರ ಕುದುರಿಸಬಹುದೆಂಬ ಲೆಕ್ಕಾಚಾರದಲ್ಲಿದ್ದರೆ, ಮತ್ತೊಂದೆಡೆ ಚಂದನ್ ಶೆಟ್ಟಿ ಅವರ ಈ ಜನಪ್ರಿಯತೆಯನ್ನು ಎಷ್ಟರ ಮಟ್ಟಿಗೆ ಗಾಸಿಪ್‌ಗೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಚಂದನ್ ಶೆಟ್ಟಿ ಕಿರುತೆರೆ ನಟಿ, ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಅವರನ್ನು ಮೀಟ್ ಮಾಡಿದ್ದರಂತೆ…, ಸ್ವತಃ ವೈಷ್ಣವಿ ಅವರೇ ಇದನ್ನು ಹೇಳಿಕೊಂಡಿದ್ದಾರಂತೆ…, ಅವರ ನಡುವೆ ಏನೋ ಇದೆಯಂತೆ…, ಅವರಿಬ್ಬರೂ ಮದುವೆಯಾಗುತ್ತಾರಂತೆ…, ಮೂರು ಸಿನಿಮಾಗಳಿಗೆ ಚಂದನ್ ಶೆಟ್ಟಿ ಹೀರೋ ಆಗಿದ್ದಾರಂತೆ…, ಈಗಲೇ ಮದುವೆ ಬಗ್ಗೆ ಹೇಳಿದರೆ ಸಿನಿಮಾ ಕೆರಿಯರ್‌ಗೆ ಪ್ರಾಬ್ಲಂ ಆಗಬಹುದೆಂಬ ಕಾರಣಕ್ಕೆ ಚಂದನ್ ಶೆಟ್ಟಿ, ವೈಷ್ಣವಿ ಗೌಡ ಈ ಬಗ್ಗೆ ಏನೂ ಮಾತನಾಡುತ್ತಿಲ್ಲವಂತೆ…, ಹೀಗೆ ಒಂದರ ಹಿಂದೊಂದು ಹತ್ತಾರು ಅಂತೆ-ಕಂತೆಗಳ ಸುದ್ದಿಗಳು ಹರಿದಾಡುತ್ತಿವೆ.

 

 

ಆದರೆ ಈ ಬಗ್ಗೆ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ನಟಿ ವೈಷ್ಣವಿ ಗೌಡ, ನನ್ನ ಹೆಸರಿನಲ್ಲಿರುವ ಫೇಸ್‌ಬುಕ್ ಅಕೌಂಟ್ ನಿಜವಾಗಿಯೂ ನನ್ನದಲ್ಲ. ನನ್ನ ಹೆಸರಿನಲ್ಲಿ ಯಾರೋ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ನನಗೂ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ. ಇದು ಜಸ್ಟ್ ಗಾಸಿಪ್ ಅಷ್ಟೇ ಎಂದಿದ್ದಾರೆ. ಇನ್ನು ಇದರ ಬಗ್ಗೆ ಮಾತನಾಡಿರುವ ಚಂದನ್ ಶೆಟ್ಟಿ ಕೂಡ, ವೈಷ್ಣವಿ ಗೌಡ ಅವರನ್ನು ಸೀರಿಯಲ್‌ನಲ್ಲಿ ನೋಡಿದ್ದೇನೆಯೇ ಹೊರತು ವೈಯಕ್ತಿಕವಾಗಿ ಅವರ ಪರಿಚಯವಿಲ್ಲ. ನಾನು ಅವರನ್ನು ಮೀಟ್ ಕೂಡ ಮಾಡಿಲ್ಲ ಇದೊಂದು ಗಾಸಿಪ್ ಎಂದಿದ್ದಾರೆ. ಒಟ್ಟಾರೆ ಬಿಗ್‌ಬಾಸ್ ಮನೆಯಿಂದ ಹೊರಬಂದ ವಾರದೊಳಗೆ ಇಷ್ಟೆಲ್ಲಾ ಗಾಸಿಪ್ ಹಿಂದಿರುವ ಚಂದನ್ ಶೆಟಿ ಹೆಸರು ಮುಂದೆ ಇನ್ನು ಎಲ್ಲೆಲ್ಲಿ ಸದ್ದು ಮಾಡುತ್ತಿದೆಯೋ… ’ಬಿಗ್‌ಬಾಸ್’ ಗೆ ಗೊತ್ತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top