ಶ್ರೀಕ್ಷೇತ್ರ ಸೌಂದರ್ಯೋಪಾಸನೆ ನಿಸರ್ಗದ ಮಡಿಲಲ್ಲಿ ನೆಲೆಗೊಂಡಿರುವ ಮಲೆ ಮಹದೇಶ್ವರ ಬೆಟ್ಟ ಪುಣ್ಯಕ್ಷೇತ್ರದ ಸುತ್ತ ಒಂದು ಸುತ್ತು
ದಕ್ಷಿಣ ಕರ್ನಾಟಕದಲ್ಲಿ ಪೂರ್ವ ಘಟ್ಟಗಳ ಉತ್ತುಂಗ ಶಿಖರಗಳಲ್ಲೊಂದಾದ ಮಲೆ ಮಹದೇಶ್ವರ ಬೆಟ್ಟ, ನಿಸರ್ಗದ ಮಡಿಲಲ್ಲಿ ನೆಲೆಗೊಂಡಿರುವ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಕರ್ನಾಟಕದಲ್ಲಿ ಮಲೆಮಹದೇಶ್ವರ ಬೆಟ್ಟ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಸುತ್ತಮುತ್ತ ದಟ್ಟ ಅರಣ್ಯದ ಮಧ್ಯೆ ಸುಮಾರು 3ಸಾವಿರ ಅಡಿ ಎತ್ತರದ ನಡುಮಲೆಯಲ್ಲಿ ಪ್ರಶಾಂತ ಪರಿಸರದಲ್ಲಿ ಶ್ರೀಕ್ಷೇತ್ರ ಸೌಂದರ್ಯೋಪಾಸನೆ ದೃಷ್ಟಿಯಿಂದಲೂ ಪ್ರಮುಖ ಸ್ಥಳವಾಗಿದೆ.
ಕೊಳ್ಳೇಗಾಲದಿಂದ ಮಧುವನಹಳ್ಳಿ, ಸಿಂಗಾನಲ್ಲೂರು, ಹನೂರು ಮಾರ್ಗವಾಗಿ ಕೌದಳ್ಳಿ ತಲುಪಿದರೆ, ಅಲ್ಲಿಂದ ಬೆಟ್ಟಕ್ಕೆ 16ಕಿ.ಮೀ.ಕಾಡುದಾರಿ. ಮುಂದೆ ತಾಳಬೆಟ್ಟ ಎಂಬ ಬೆಟ್ಟದ ತಪ್ಪಲು ಸಿಗುತ್ತದೆ. ಮಹದೇಶ್ವರನ ಭಕ್ತರಾಗಿದ್ದ ಶ್ರೀ ಜಯಚಾಮರಾಜ ಒಡೆಯರು ಮತ್ತು ಶ್ರೀಕೃಷ್ಣರಾಜ ಒಡೆಯರು ತಾಳಬೆಟ್ಟದಿಂದ ಕಾಲ್ನಡಿಗೆಯಲ್ಲೇ ಬೆಟ್ಟವೇರಿ ಮಾದಯ್ಯನ ದರ್ಶನ ಮಾಡುತ್ತಿದ್ದರಂತೆ.
ಶ್ರೀಮಲೆಮಹದೇಶ್ವರ ಉತ್ಸವ ಮಹಾಶಿವರಾತ್ರಿ, ದಸರಾ, ದೀಪಾವಳಿ, ಯುಗಾದಿ, ಕಾರ್ತಿಕ ಸೋಮವಾರ ಮತ್ತು ಪ್ರತಿ ತಿಂಗಳು ಕೃಷ್ಣ ಪಂಚಮಿ ಚತುದರ್ಶಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಹುಲಿವಾಹನ, ವೃಷಭ ವಾಹನ ಮತ್ತು ರುದ್ರಾಕ್ಷಿ ಮಂಟಪ ಉತ್ಸವಗಳು ಮನ ಸೆಳೆಯುತ್ತವೆ.
ಮಹದೇಶ್ವರರ ಭಕ್ತನಾದ ಶೇಷಣ್ಣ ಒಡೆಯರ ಉತ್ಸವ 12ವರ್ಷಗಳಿಗೊಮ್ಮೆ ಬಹಳ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ತಮಿಳುನಾಡಿನಿಂದ ಪ್ರತಿವರ್ಷ ಲಕ್ಷಾಂತರ ಭಕ್ತರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ದೇವಸ್ಥಾನದ ಅರ್ಚಕರನ್ನು ತಮ್ಮಡಿಗಳು ಎಂದು ಕರೆಯುತ್ತಾರೆ. ಇವರು ಲಿಂಗಗಳನ್ನು ಧರಿಸಿರುತ್ತಾರೆ.
ಇವರು ಈ ಸ್ಥಳದ ಮೂಲ ನಿವಾಸಿಗಳಾಗಿದ್ದು, ಸೋಲಿಗ, ಜೇನುಕುರುಬ, ಕಾಡುಕುರುಬ ಮುಂತಾದ ಪಂಗಡಗಳಿಗೆ ಸೇರಿದವರಾಗಿದ್ದಾರೆ. ಮಹದೇಶ್ವರರ ಪ್ರಭಾವದಿಂದ ಲಿಂಗಧಾರಣೆ ಮಾಡಿ ತಮ್ಮಡಿಗಳಾಗಿದ್ದಾರೆ. ಆನುಮಲೆ, ಜೇನುಮಲೆ, ಕುನುಮಲೆ, ಪಚ್ಚೆಮಲೆ, ಪವಳಮಲೆ, ಪೊನ್ನಾಚಿಮಲೆ ಮತ್ತು ಕೊಂಗುಮಲೆ ಮುಂತಾದ ಏಳು ಮಲೆಗಳಿಂದ ಕೂಡಿದ ಈ ದಟ್ಟಾರಣ್ಯವೇ ಇವರ ವಾಸಸ್ಥಳ.
ಪರಿಚಯ
ಮೈಸೂರಿನಿಂದ ೧೫೦ ಕಿ ಮೀ ಹಾಗು ರಾಜಧಾನಿ ಬೆಂಗಳೂರಿನಿಂದ ೨೧೦ ಕಿ ಮೀ ದೂರವಿದೆ ಈ ಮಹದೇಶ್ವರ ಬೆಟ್ಟ. ಮಹದೇಶ್ವರ ಬೆಟ್ಟದ ಈಗಿನ ದೇವಸ್ಥಾನವನ್ನು ಜುಂಜೇ ಗೌಡ ಹಾಗು ಶ್ರೀಮಂತ ಕುರುಬ ಗೌಡರು ಕಟ್ಟಿಸಿದ್ದಾರೆ, ಮೂಲಗಳ ಪ್ರಕಾರ ಆ ಜಾಗದ ಒಡೆಯರು ಅವರೇ ಆಗಿದ್ದು ದೇವಸ್ಥಾನಕ್ಕಾಗಿ ಸ್ಥಳವನ್ನು ನೀಡಿದ್ದಾರೆ. ಮಹದೇಶ್ವರರು ಸುಮಾರು ಹದಿನೈದನೇ ಶತಮಾನದಲ್ಲಿ ಬಾಳಿದ್ದ ಸಂತ ಶರಣರಾಗಿದ್ದು ಅವರನ್ನು ಶಿವ ಸ್ವರೂಪಿ ಹಾಗು ಶಿವನ ಅವತಾರವೆಂದೇ ನಂಬಲಾಗಿದೆ.
ಸುಮಾರು ಆರುನೂರು ವರ್ಷಗಳ ಹಿಂದೆ ಮಹದೇಶ್ವರರು ಈ ಸ್ಥಳಕ್ಕೆ ತಪಸ್ಸು ಮಾಡಲು ಬಂದರು ಹಾಗು ಈಗಲೂ ದೇವಸ್ಥಾನದ ಗರ್ಭಗುಡಿಯಲ್ಲಿ ಲಿಂಗರೂಪಿಯಾಗಿದ್ದುಕೊಂಡೇ ತಮ್ಮ ತಪಸ್ಸನ್ನು ಮುಂದುವರೆಸಿದ್ದಾರೆ ಎನ್ನುವುದು ಭಕ್ತರ ನಂಬಿಕೆ. ದೇವಸ್ಥಾನದ ಗರ್ಭಗುಡಿಯೊಳಗಿನ ಲಿಂಗ ಯಾರಿಂದಲೂ ರಚನೆಯಾಗಿದ್ದಲ್ಲ, ಬದಲಾಗಿ ಸ್ವಯಂಭು ಅಥವಾ ತಾನಾಗೇ ಉಧ್ಭವವಾಗಿರುವಂತಹುದು.
ಮಲೆ ಮಹದೇಶ್ವರರು ಹುಲಿಯನ್ನೇ ತಮ್ಮ ವಾಹನವನ್ನಾಗಿ ಮಾಡಿಕೊಂಡು ಅದರ ಮೇಲೆ ಕುಳಿತು ಬೆಟ್ಟಗಳನ್ನು ಸುತ್ತುತ್ತ ಆರ್ತ ಭಕ್ತರಿಗೆ ದಾರಿಯಾಗಿ ಸಂತರು ಶರಣರುಗಳನ್ನು ರಕ್ಷಿಸುತ್ತಿದ್ದ ವಿಚಾರಗಳು ಇತಿಹಾಸ ಹಾಗು ಜಾನಪದ ಗಾಯನಗಳಿಂದ ತಿಳಿದುಬರುತ್ತದೆ. ಆದರಿಂದ ಮಹದೇಶ್ವರರನ್ನು ಹುಲಿವಾಹನ ಮಹದೇಶ್ವರ ಎಂದೂ ಭಕ್ತವರ್ಗ ಸಂಭೋದಿಸುವುದುಂಟು. ಮಹದೇಶ್ವರ ಬೆಟ್ಟದಲ್ಲಿ ಈಗಲೂ ಹುಲಿವಾಹನ ಮಹದೇಶ್ವರ ಮೆರವಣಿಗೆ ಮೂರ್ತಿಯಿದೆ.
ವಿಶೇಷ ಸಂಧರ್ಭಗಳಲ್ಲಿ ಹುಲಿವಾಹನ ಅಲಂಕಾರವಿರುತ್ತದೆ. ಕನ್ನಡದ ಜಾನಪದ ಲೋಕದಲ್ಲಿ ಮಹದೇಶ್ವರ ಭಕ್ತಿಗೀತೆಗಳಿಗೆ ವಿಶಿಷ್ಟ ಸ್ಥಾನವಿದೆ, ಜಾನಪದ ಕಲಾವಿದರು ಅವುಗಳನ್ನು ಮಹದೇಶ್ವರ ಗೀತೆಗಳೆಂತಲೇ ಕರೆಯುತ್ತಾರೆ. ಹಾಗಾಗಿ ಮಹದೇಶ್ವರ ಭಕ್ತರಿಂದ ಕನ್ನಡ ಜಾನಪದ ಲೋಕಕ್ಕೆ ವಿಶಿಷ್ಟ ಕೊಡುಗೆಯೊಂದು ದೊರಕಿದಂತಾಗಿದೆ. ಎಲ್ಲ ಜಾನಪದ ಗೀತೆಯ ಪೈಕಿ “ಚೆಲ್ಲಿದರು ಮಲ್ಲಿಗೆಯಾ…” ಬಹಳ ಪ್ರಸಿದ್ಧಿ ಪಡೆದುಕೊಂಡಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
