fbpx
ಮನೋರಂಜನೆ

ಪಬ್ಲಿಕ್ ಟಿವಿ ತಂಡದ ಮತ್ತೊಂದು ಕನಸು ಪಬ್ಲಿಕ್ ಮೂವೀಸ್!

ದೃಶ್ಯ ಮಾಧ್ಯಮದಲ್ಲಿ ತನ್ನದೇ ಸ್ಥಾನಮಾನ ಗಳಿಸಿಕೊಂಡಿರುವ ಪಬ್ಲಿಕ್ ಟಿವಿಗೀಗ ಆರು ವರ್ಷಗಳ ಸಂಭ್ರಮ. ಇದೇ ಫೆಬ್ರವರಿ ೧೨ರಂದು ಈ ವಾಹಿನಿ ಭರ್ತಿ ಆರು ವರ್ಷ ದಾಟಿಕೊಳ್ಳಲಿದೆ. ಈಗಾಗಲೇ ಅನೇಕ ಹೊಸಾ ಪ್ರಯೋಗಗಳ ಮೂಲಕ ಕನ್ನಡಿಗರನ್ನು ತಲುಪಿಕೊಂಡಿರುವ ಪಬ್ಲಿಕ್ ಟಿವಿ ಆರು ವರ್ಷ ಪೂರೈಸಿದ ಸಂಭ್ರಮವನ್ನು ಪ್ರೇಕ್ಷಕರಿಗೆ ಮತ್ತೊಂದು ಕೊಡುಗೆ ಕೊಡುವ ಮೂಲಕವೇ ಆಚರಿಸಿಕೊಳ್ಳುತ್ತಿರೋದು ವಿಶೇಷ.

 

 

ರೈಟ್‌ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮೂಲಕ ಈಗ್ಗೆ ಆರು ವರ್ಷಗಳ ಹಿಂದೆ ಫೆಬ್ರವರಿ ಹನ್ನೆರಡರಂದು ಶುರುವಾದದ್ದು ಪಬ್ಲಿಕ್ ಟಿವಿ. ೨೦೧೨ರಲ್ಲಿ ಕಾರ್ಯಾರಂಭ ಮಾಡಿದ್ದ ಪಬ್ಲಿಕ್ ಟಿವಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಯಶಸ್ವಿಯಾಗಿ ೨೦೧೪ರ ಸೆಪ್ಟೆಂಬರ್ ೨೮ರಂದು ಪಬ್ಲಿಕ್ ಮ್ಯೂಸಿಕ್ ವಾಹಿನಿಯನ್ನೂ ಆರಂಭಿಸಲಾಗಿತ್ತು. ಅದೂ ಕೂಡಾ ಈಗ ಕನ್ನಡದ ಪ್ರಮುಖವಾದ ಮನರಂಜನಾ ವಾಹಿನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಪಬ್ಲಿಕ್ ಟಿವಿಯ ಆರನೇ ವರ್ಷದ ಸಂಭ್ರಮದ ಘಳಿಗೆಯಲ್ಲಿ ರೈಟ್‌ಮನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತೊಂದು ಹೊಸಾ ಯಾನ ಆರಂಭಿಸಲು ತಯಾರಾಗಿದೆ.

 

 

ಪಬ್ಲಿಕ್ ಮೂವೀಸ್ ವಾಹಿನಿಯನ್ನು ಆರಂಭಿಸುವ ಮೂಲಕ ಪಬ್ಲಿಕ್ ಟಿವಿ ಸಿನಿಮಾ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಲಿದೆ. ಪಬ್ಲಿಕ್ ಮೂವೀಸ್ ಇದೇ ಫೆಬ್ರವರಿ ೧೨ರಂದು ಕಾರ್ಯಾರಂಭ ಮಾಡಲಿದೆ. ಈ ವಾಹಿನಿ ದಿನದ ೨೪ ಘಂಟೆಯೂ ಕನ್ನಡ ಸಿನಿಮಾಗಳನ್ನು ನಿರಂತರವಾಗಿ ವೀಕ್ಷಿಸುವ ಸದಾವಕಾಶವನ್ನು ಕನ್ನಡದ ಪ್ರೇಕ್ಷಕರಿಗೆ ಕೊಡಮಾಡಲಿದೆ. ಈಗಾಗಲೇ ಪಬ್ಲಿಕ್ ಟಿವಿಯನ್ನು ಕನ್ನಡಿಗರ ಮನೆ ಮನಗಳಿಗೆ ತಲುಪಿಸಿರುವ ರಂಗನಾಥ್ ಅವರ ನೇತೃತ್ವದಲ್ಲಿ, ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಪಬ್ಲಿಕ್ ಮೂವೀಸ್ ಲೀಕಾರ್ಪಣೆಗೊಳ್ಳಲಿದೆ.

 

 

ಇದೇ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಬಳಗ ತಮ್ಮೆಲ್ಲ ಹೊಸಾ ಪ್ರಯತ್ನವನ್ನು ಗೆಲ್ಲಿಸಿರುವ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದೆ. ಈ ವರೆಗೆ ಪಬ್ಲಿಕ್ ಟಿವಿ, ಪಬ್ಲಿಕ್ ಮ್ಯೂಸಿಕ್ ವಾಹಿನಿಗಳನ್ನು ಗೆಲ್ಲಿಸಿದಂತೆಯೇ ಪಬ್ಲಿಕ್ ಮೂವೀಸ್ ವಾಹಿನಿ ಕೈ ಹಿಡಿಯುವಂತೆ ರೈಟ್‌ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮನವಿ ಮಾಡಿಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top