fbpx
ಸಮಾಚಾರ

ಚಿರತೆ ದೂರದಲ್ಲಿ ಕಣ್ಣಿಗೆ ಬಿದ್ದರೂ ಪತರುಗುಟ್ಟಿ ಹೋಗುತ್ತಾರೆ ಅಂಥದ್ದರಲ್ಲಿ ನಾಯಿ ಎಂದು ಚಿರತೆ ಮೈಸವರಿದ ಭೂಪ..!

ಚಿರತೆ ದೂರದಲ್ಲಿ ಕಣ್ಣಿಗೆ ಬಿದ್ದರೂ ಪತರುಗುಟ್ಟಿ ಹೋಗುತ್ತಾರೆ ಅಂಥದ್ದರಲ್ಲಿ ನಾಯಿ ಎಂದು ಚಿರತೆ ಮೈಸವರಿದ ಭೂಪ..!

ಚಿರತೆ ದೂರದಲ್ಲಿ ಕಣ್ಣಿಗೆ ಬಿದ್ದರೂ ಪತರುಗುಟ್ಟಿ ಹೋಗುವವರಿದ್ದಾರೆ. ಅಂಥದ್ದರಲ್ಲಿ ಮೈಸೂರಿನ ಬಾಳೆಮಂಡಿಯ ಮಾಲೀಕರೊಬ್ಬರು ಇಂಥ ಚಿರತೆಯ ಪಕ್ಕದಲ್ಲೇ ಮಲಗಿದ್ದಲ್ಲದೆ ಅದರ ಮೈ ಸವರಿಯೂ ಜೀವ ಉಳಿಸಿಕೊಂಡು ಬಂದಿದ್ದಾರೆ!

ಚಿರತೆಯು ಉತ್ತನಹಳ್ಳಿ ರಸ್ತೆಯ ರಾಜಣ್ಣ ಬಾಳೆಹಣ್ಣು ಮಂಡಿಯನ್ನು ಪ್ರವೇಶ ಮಾಡಿ, ಅಲ್ಲಿದ್ದ ನಾಯಿಯನ್ನು ತಿಂದು ಮುಗಿಸಿದೆ. ನಂತರ ಇಡೀ ರಾತ್ರಿ ಅದೇ ಮಂಡಿಯಲ್ಲೇ ಕಾಲ ಕಳೆದಿದ್ದು, ಅಲ್ಲೇ ಮಲಗಿದ್ದ ರಾಮಕೃಷ್ಣಪ್ಪ ಪಕ್ಕದಲ್ಲೇ ಚಿರತೆಯೂ ಮಲಗಿತ್ತು ಎನ್ನಲಾಗಿದೆ. ಈ ವೇಳೆ ರಾಮಕೃಷ್ಣಪ್ಪ ನಾಯಿ ಎಂದು ತಿಳಿದು ಚಿರತೆಯ ಬೆನ್ನು ಸವರಿದ್ದರು. ಆದರೆ ತಾನು ಬೆನ್ನು ಸವರಿದ್ದು ನಾಯಿ ಅಲ್ಲ, ಚಿರತೆ ಎಂದು ತಿಳಿದ ಬಳಿಕ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ.

ಚಾಮುಂಡಿ ಬೆಟ್ಟದಿಂದ ನಾಯಿಗಳ ವಾಸನೆ ಹಿಡಿದು ಬಂದ 6 ರಿಂದ 7 ವರ್ಷದ ಗಂಡು ಚಿರತೆ ಸೋಮವಾರ ತಡರಾತ್ರಿ 12ರ ಸುಮಾರಿಗೆ ಬಂಡಿಪಾಳ್ಯ ಬಳಿಯ ‘ಮೆ.ರಾಜಣ್ಣ ಬನಾನ ರಿಟೈನಿಂಗ್ ಕೇರ್’ ಬಾಳೆ ಮಂಡಿ ಹೊಕ್ಕಿದೆ. ಈ ಮಂಡಿಗೆ ಹಾಕಲಾಗಿರುವ ಜಾಲರಿಯ ಸಂದಿಯಿಂದ ಈ ಚಿರತೆ ಒಳಹೊಕ್ಕಿದೆ ಎನ್ನಲಾಗಿದೆ. ಮಂಡಿ ಮುಂದೆಯೇ ಇರುವ 2 ನಾಯಿಗಳು ರಾತ್ರಿ ಹೊತ್ತು ಮಂಡಿಯೊಳಗೆ ಮಲಗುತ್ತಿದ್ದವು.

ನಾಯಿ ಜಾಡು ಹಿಡಿದು ಒಳಬಂದಿದ್ದ ಚಿರತೆ ಕೊನೆಗೆ ರಾಮಕೃಷ್ಣ ಅವರ ಪಕ್ಕದಲ್ಲೇ ಬಿದ್ದುಕೊಂಡಿದೆ. ಬೆಳಗಿನ ಜಾವ ರಾಮಕೃಷ್ಣ ಅವರು ಮೂತ್ರ ವಿಸರ್ಜನೆಗೆಂದು ಹೊರ ಬಂದಿದ್ದು, ವಾಪಸ್ ಬಿದ್ದುಕೊಂಡಿದ್ದಾರೆ. ಈ ವೇಳೆ ಪಕ್ಕದಲ್ಲೇ ಮಲಗಿದ್ದ ಚಿರತೆಯನ್ನು ತಮ್ಮ ಪ್ರೀತಿಪಾತ್ರ ನಾಯಿಯೆಂದೇ ಮೈಸವರಿದ್ದಾರೆ. ಈ ವೇಳೆ ಮೀಸೆಯಿಂದಾಗಿ ಅನುಮಾನ ಬಂದು ಪರಿಶೀಲಿಸಿದಾಗ ಚಿರತೆ ಎನ್ನುವುದು ಖಚಿತವಾಗಿ ತಕ್ಷಣ ಹೊರಗೋಡಿ ಬಂದು ಬಾಗಿಲು ಹಾಕಿದ್ದಾರೆ. ನಂತರ ಮಂಡಿಯ ಇನ್ನೊಂದು ಬಾಗಿಲಿಂದ ರಾಮಕೃಷ್ಣ ಅವರು ಹೊರಗೋಡಿ ಬಂದ ಜೀವ ಉಳಿಸಿಕೊಂಡಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿರತೆಯನ್ನು ಸೆರೆಹಿಡಿದಿದ್ದು, ನಂತರ ಮೈಸೂರು ಮೃಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top