fbpx
ಮನೋರಂಜನೆ

ನನ್ನ ಉಸಿರಲಿ ದರ್ಶನ್ ಎಂಬ ಹೆಸರಿದೆ….

ನನ್ನ ಉಸಿರಲಿ ದರ್ಶನ್ ಎಂಬ ಹೆಸರಿದೆ
ಆ ಹೆಸರಿರುವವರೆಗೂ
ಈ ಉಸಿರು ನಿಲ್ಲಲ್ಲ
ಉಸಿರು ನಿಂತರೂ
ಆ ಹೆಸರಿನ ಮೇಲಿರೋ ಅಭಿಮಾನ ಯಾವತ್ತೂ ನಿಲ್ಲಲ್ಲ
ಪಕ್ಕಾ ಡಿ ಬಾಸ್ ಅಭಿಮಾನಿ ನಾನು…

 

ಹೀಗಂತ ಭಾವುಕವಾಗಿ ಬರೆದುಕೊಂಡಿದ್ದ ಆ ಹುಡುಗನನ್ನು ವಿಧಿಯೂ ಪರೀಕ್ಷೆಗೀಡುಮಾಡಿತ್ತಾ? ಹೀಗಂತಾ ದರ್ಶನ್ ಅಭಿಮಾನಿಗಳೇ ಕಣ್ಣೀರುಗರೆಯುತ್ತಿದ್ದಾರೆ. ಇದೆಲ್ಲದಕ್ಕೆ ಕಾರಣವಾಗಿರುವಾತ ರೇವಂತ್ ಎಂಬ ಹುಡುಗ. ಆತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ. ಶಿವಮೊಗ್ಗದ ರೇವಂತ್ ಆತನ ಸ್ನೇಹಿತರ ವಲಯದಲ್ಲಿ ದರ್ಶನ್ ಅಂತಲೇ ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ದರ್ಶನ್ ಅವರನ್ನು ಹಚ್ಚಿಕೊಂಡಿದ್ದಾತ. ಆದರೀಗ ಆತ ಕ್ಯಾನ್ಸರ್ ಎಂಬ ಯಮಸದೃಷ ಕಾಯಿಲೆಗೆ ಸಿಕ್ಕು ಕಡೇ ಕ್ಷಣಗಳನ್ನು ಎಣಿಸುತ್ತಿದ್ದಾನೆ.

 

 

ಹೀಗೆ ಸಾವಿನ ಸಮ್ಮುಖದಲ್ಲಿ ನರಳುತ್ತಾ ಮಲಗಿರೋ ಈ ಹುಡುಗನಿಗೆ ಕಡೇ ಘಳಿಗೆಯಲ್ಲಿ ತನ್ನ ಇಷ್ಟದ ನಟ ದರ್ಶನ್ ಅವರನ್ನು ನೋಡಿ ಕಣ್ಮುಂಬಿಕೊಳ್ಳಬೇಕೆಂಬ ಅದಮ್ಯ ಆಸೆ.

ಆರೋಗ್ಯವಂತನಾಗೇ ಇದ್ದ ರೇವಂತ್ ಇತ್ತೀಚೆಗಷ್ಟೇ ಕ್ಯಾನ್ಸರ್ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ. ಇದೀಗ ವೈದ್ಯರೇ ಈತನ ಆರೋಗ್ಯದ ವಿಚಾರದಲ್ಲಿ ಕೈ ಚೆಲ್ಲಿದ್ದಾರೆ. ತಾನಿನ್ನು ಹೆಚ್ಚು ದಿನ ಬದುಕೋದಿಲ್ಲ ಎಂಬ ಸತ್ಯ ತಿಳಿದಾದ ನಂತರ ರೇವಂತ್ ಅಕ್ಷರಶಃ ದರ್ಶನ್ ಜಪ ಆರಂಭಿಸಿದ್ದಾರೆ. ತನ್ನ ಸ್ನೇಹಿತರ ಬಳಿಯೆಲ್ಲ ಹೇಗಾದರೂ ಮಾಡಿ ದರ್ಶನ್ ಅವರನ್ನು ಒಂದು ಸಲ ನೋಡೋ ಅವಕಾಶ ಕಲ್ಪಿಸುವಂತೆ ಕನವರಿಸುತ್ತಿದ್ದಾನೆ..

 

 

ಹಾಗಾದರೆ ಈ ಹುಡುಗ ಯಾರು, ಆತನ ಹಿನ್ನೆಲೆ ಏನು ಅಂತ ಹುಡುಕ ಹೋದರೆ ಒಂದಷ್ಟು ವಿಚಾರಗಳು ಜಾಹೀರಾಗುತ್ತವೆ. ಶಿವಮೊಗ್ಗದ ರೇವಂತ್ ಆರಂಭದಿಂದಲೂ ದರ್ಶನ್ ಅವರ ಪರಮ ಅಭಿಮಾನಿ. ಡಿ ಕಂಪೆನಿಯ ಶಿವಮೊಗ್ಗ ವಿಭಾಗದ ಹುಡುಗನಾತ. ಈಗ್ಗೆ ತಿಂಗಳ ಹಿಂದಷ್ಟೇ ದರ್ಶನ್ ಅವರನ್ನು ಬೆಂಗಳೂರಿಗೆ ಬಂದು ಭೇಟಿಯಾಗಿದ್ದ ಈತ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದ. ಆದರೆ ಆ ಹೊತ್ತಿಗಾಗಲೇ ಆತನಿಗೆ ಕ್ಯಾನ್ಸರ್ ಇತ್ತಂತೆ. ಈ ವಿಚಾರ ದರ್ಶನ್ ಅವರಿಗೆ ಗೊತ್ತಿರಲಿಲ್ಲ.

ಅಭಿಮಾನಿಗಳನ್ನು ಅಪಾರವಾಗಿ ಪ್ರೀತಿಸುವವರು ದರ್ಶನ್. ಅವರಿಗೆ ಶಿವಮೊಗ್ಗದ ಹುಡುಗ ರೇವಂತನ ಸ್ಥಿತಿಯೂ ಗೊತ್ತಿದೆ. ಬಹುಶಃ ದರ್ಶನ್ ಯಾವತ್ತೋ ಹೋಗಿ ಆತನನ್ನು ಮೈದಡವಿ ಮಾತಾಡಿಸುತ್ತಿದ್ದರು. ಆದರೆ ದರ್ಶನ್ ಹೋಗೋ ವಿಚಾರ ಗೊತ್ತಾದರೆ ದೃಷ್ಯ ಮಾಧ್ಯಮಗಳು ಟಾಂ ಟಾಂ ಬಾರಿಸುತ್ತವೆ. ಅಲ್ಲಿ ಅಪಾರವಾದ ಕ್ರೌಡು ಸೃಷ್ಟಿಯಾಗುತ್ತೆ. ಮೊದಲೇ ಮರಣಶಯ್ಯೆಯಲ್ಲಿರೋ ರೇವಂತನ ಮೇಲೂ ಅದರ ಪರಿಣಾಮವಾಗಬಹುದು.

 

 

ಇಷ್ಟೆಲ್ಲಾ ಮುಂದಾಲೋಚನೆ ಮಾಡಿರೋ ದರ್ಶನ್ ವೀಡಿಯೋ ಕಾಲ್ ಮೂಲಕ ರೇವಂತ್ ಜೊತೆ ಮಾತಾಡಲು ನಿರ್ಧರಿಸಿದ್ದಾರಂತೆ. ಈ ನಿರ್ಧಾರಕ್ಕೆ ದರ್ಶನ್ ಅಭಿಮಾನಿಗಳೂ ಸಹಮತ ವ್ಯಕ್ತ ಪಡಿಸಿದ್ದಾರೆ. ಅಂತೂ ಇನ್ನು ಕೆಲವೇ ಕ್ಷಣಗಳಲ್ಲಿ ರೇವಂತನ ಆಸೆ ಈಡೇರಲಿದೆ.

ದರ್ಶನ್ ಅಭಿಮಾನಿಗಳನ್ನು ವಿಪರೀತವಾಗಿ ಪ್ರೀತಿಸುವವರು. ಸಾವಿನೊಂದಿಗೆ ಸೆಣೆಸುತ್ತಿರೋ ತಮ್ಮ ಅಭಿಮಾನಿಯ ಆಸೆಯನ್ನು ಈಡೇರಿಸುವ ಬಗ್ಗೆ ಸಾಧ್ಯಂತವಾಗಿ ಆಲೋಚಿಸಿಯೇ ಅವರು ವೀಡಿಯೋ ಕಾಲ್ ಮೂಲಕ ಮಾತಾಡುವ ನಿರ್ಧಾರ ಮಾಡಿದ್ದಾರೆ. ಈ ಹುಡುಗನ ದರ್ಶನ್ ಪ್ರೀತಿ ನಿಜಕ್ಕೂ ಬೆರಗಾಗಿಸುವಂತಿದೆ. ಆತನ ಫೇಸ್ ಬುಕ್ ವಾಲ್ ತೆಗೆದರೂ ಅಲ್ಲೆ ದರ್ಶನ್ ಬಗೆಗಿನ ವಿಚಾರಗಳು, ಫೋಟೋಗಳೇ ರಾರಾಜಿಸುತ್ತವೆ. ಈ ಹುಡುಗ ದರ್ಶನ್ ಕಕ್ಕುಲಾತಿಯ ಪ್ರಭಾವದಿಂದಲಾದರೂ ಬದುಕಿಕೊಳ್ಳಲಿ ಅಂತ ಆತನ ಒಡನಾಡಿಗಳು, ದರ್ಶನ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top