fbpx
ಮನೋರಂಜನೆ

ಅಣ್ಣಾವ್ರ ಕನಸು ಇಂದು ಈಡೇರಿತು…!

ಕನ್ನಡ ಚಿತ್ರ ರಂಗದ ಎಲ್ಲಾ ಕಲಾವಿದರ ಐಕ್ಯತೆಯ ಸಂಕೇತವಾಗಿರುವ ಕಲಾವಿದರ ಸಂಘ ಸ್ವಂತಕ್ಕೊಂದು ಕಟ್ಟಡ ಹೊಂದಬೇಕು ಎನ್ನುವುದು ಡಾ. ರಾಜ್ ಕುಮಾರ್ ಅವರ ಉತ್ಕಟ ಬಯಕೆಯಾಗಿತ್ತು. ಕಲಾವಿದರ ಸಂಘ ಬಹು ಕಾಲದಿಂದ ಅಸ್ತಿತ್ವದಲ್ಲಿದ್ದರೂ ಅದಕ್ಕೊಂದು ಸ್ವಂತದ ಕಟ್ಟಡ ಇಲ್ಲ ಎಂಬ ಕೊರಗು ಸದಾ ಕಲಾವಿದರೆಲ್ಲರನ್ನೂ ಕಾಡುತ್ತಿತ್ತು. ಆದರೀಗ ಚಾಮರಾಜಪೇಟೆಯ ಸಾಹಿತ್ಯ ಪರಿಷತ್ತಿನ ಎದುರಲ್ಲಿಯೇ ಸುಸಜ್ಜಿತವಾದ ಕಟ್ಟಡ ನಿರ್ಮಾಣಗೊಂಡಿದೆ.

 

 

ಸ್ವಲ್ಪ ತಡವಾದರೂ ಕಲಾಪ್ರೇಮಿಗಳ ಸಹಕಾರದಿಂದ ಕಲಾವಿದರ ಸಂಘ ಸ್ವಂತ ಕಟ್ಟಡವೊಂದನ್ನು ಹೊಂದುವ ಮೂಲಕ ಕಲಾವಿದರೆಲ್ಲರ ಶಕ್ತಿ ಕೇಂದ್ರವಾಗಿ ಅಸ್ತಿತ್ವ ಪಡೆದುಕೊಂಡಿದೆ. ಇನ್ನು ಮುಂದೆ ಈ ಕಟ್ಟಡದಲ್ಲಿಯೇ ಕನ್ನಡ ಚಲನಚಿತ್ರ ಕಲಾವಿದರ ಸಂಘ ಅಧಿಕೃತವಾಗಿಯೂ ಕಾರ್ಯ ನಿರ್ವಹಿಸಲಿದೆ. ಇಂದು (ಫೆಬ್ರವರಿ ೮ರ ಗುರುವಾರ ಬೆಳಿಗ್ಗೆ ೯.೩೦ಕ್ಕೆ) ಈ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯಲ್ಲಿರುವ ಕಲಾವಿದರ ಸಂಘದ ಉದ್ಘಾಟನೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆಗಮಿಸಲಿದ್ದಾರೆ. ಈ ಸಮಯದಲ್ಲಿ ಚಲನಚಿತ್ರರಂಗಕ್ಕೆ ಸಂಬಂಧಿಸಿದ ಗಣ್ಯರು ಮತ್ತು ಮುತ್ಸದ್ದಿಗಳು ಹಾಜರಿರುತ್ತಾರೆ. ಈ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಈಗಾಗಲೇ ಎಲ್ಲಾ ತಯಾರಿಗಳು ಮುಗಿದಿವೆ…

 

ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಧ್ಯಕ್ಷತೆಯಲ್ಲಿ ಕಲಾವಿದರ ಸಂಘಕ್ಕೊಂದು ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿದ್ದರ ಬಗ್ಗೆ ಕನ್ನಡ ಚಲನ ಚಿತ್ರ ಕಲಾವಿದರೆಲ್ಲರೂ ಖುಷಿಗೊಂಡಿದ್ದಾರೆ. ಅದೆಷ್ಟೋ ಕಲಾವಿದರು ಸಂಘಟನೆಯ ಕೊರತೆಯಿಂದಾಗಿ ಕಡೆಗಾಲದಲ್ಲಿ ಹೊತ್ತಿನ ತುತ್ತಿಗೂ ಗತಿ ಇಲ್ಲದೆ ಕಂಗಾಲಾದ ಕಥೆಗಳಿವೆ. ಆದರೆ ಇನ್ನು ಮುಂದೆ ಈ ಸಂಘದ ಮೂಲಕ ಅಂಥಾ ಕಲಾವಿದರ ಬದುಕನ್ನು ಸಹನೀಯವಾಗಿಸುವಂಥಾ ಪ್ರಯತ್ನಗಳೂ ನಡೆಯಲೆಂದು ಆಶಿಸೋಣ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top