fbpx
ಮನೋರಂಜನೆ

ಬಾಕ್ಸ್ ಆಫೀಸಿನಲ್ಲಿ ಸೆಣಸಾಡಲು ಒಂದೇ ದಿನ ಬರ್ತಿವೆ ಟಗರು ಮತ್ತು ರಾಜರಥ!

ಬಾಕ್ಸ್ ಆಫೀಸಿನಲ್ಲಿ ಸೆಣಸಾಡಲು ಒಂದೇ ದಿನ ಬರ್ತಿವೆ ಟಗರು ಮತ್ತು ರಾಜರಥ!

 

 

ಚಿತ್ರರಂಗದಲ್ಲಿ ಒಂದೇ ದಿನ ಎರಡು ಅಥವಾ ಎರಡಕ್ಕಿಂತ ಹೆಚ್ಚು ಚಿತ್ರಗಳು ರಿಲೀಸ್ ಆಗುವುದು ಹೊಸದೇನಲ್ಲ. ಆದರೆ ದೊಡ್ಡ ಸ್ಟಾರ್ ನಟರ ಚಿತ್ರಗಳು ಮತ್ತು ಮತ್ಯಾವುದೋ ಕಾರಣಕ್ಕೆ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರಗಳು ಒಂದೇ ದಿನ ತೆರೆಗೆ ಬರುವುದು ಅಪರೂಪ. ಈಗ ಅಂತಹ ಸಮಯ ಮತ್ತೆ ಬಂದಿದೆ. ಹೌದು ಶಿವಣ್ಣ ಅಭಿನಯದ ಬಹುನಿರೀಕ್ಷಿತ ಟಗರು ಮತ್ತು ರಂಗಿತರಂಗ ಖ್ಯಾತಿ ತಂಡದ ರಾಜರಥ ಚಿತ್ರ ಒಂದೇ ದಿನ ಬಾಕ್ಸ್ ಆಫೀಸ್ ನಲ್ಲಿ ಮುಖಾಮುಖಿಯಾಗುತ್ತಿವೆ.

 

 

ಟಗರು ಮತ್ತು ರಾಜರಥ ಎರಡು ಚಿತ್ರಗಳ ಬಿಡುಗಡೆಯ ದಿನಾಂಕ ಫೆಬ್ರವರಿ 23ಕ್ಕೆ ಫಿಕ್ಸ್ ಆಗಿವೆ. ಎರಡು ಚಿತ್ರತಂಡಗಳಿಂದ ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಹೊರಬಿದ್ದಿದೆ.. ಈ ಹಿಂದೆ ಈ ಎರಡು ಚಿತ್ರಗಳ ಬಿಡುಗಡೆ ದಿನಾಂಕ ಫಿಕ್ಸ್ ಆಗಿ ಮುಂದಕ್ಕೆ ಹೋಗಿತ್ತು. ಈಗ ಕಾಕತಾಳೀಯವೆಂಬಂತೆ ಒಂದೇ ದಿನ ಮುಖಾಮುಖಿಯಾಗುತ್ತಿವೆ. ಟಗರು ಚಿತ್ರ ಕಾಸ್ಟಿಂಗ್,ಮೇಕಿಂಗ್,ಹಾಡುಗಳು, ಟೀಸರ್ ನಿಂದಲೇ ಕ್ರೆಜ್ ಹುಟ್ಟಿಸಿದ್ದರೆ ರಂಗಿತರಂಗದಂತಹ ಮಾಸ್ಟರ್ ಕ್ಲಾಸ್ ಚಿತ್ರವನ್ನು ನೀಡಿದ್ದ ಭಂಡಾರಿ ಸಹೋದರರ ರಾಜರಥ ಚಿತ್ರದ ಮೇಲೂ ನಿರೀಕ್ಷೆ ಜೋರಾಗಿಯೇ ಇದೆ.

ಎರಡು ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ಅಖಾಡಕ್ಕೆ ಇಳಿಯುತ್ತಿರುವುದರಿಂದ ಕಲೆಕ್ಷನ್ ವಿಚಾರದಲ್ಲಿ ಎರಡು ಚಿತ್ರಗಳಿಗೂ ಏರುಪೇರಾಗಲಿದೆ ಎಂಬುದು ಸಿನಿ ಪಂಡಿತರ ಲೆಕ್ಕಾಚಾರ. ಅದು ಏನೇ ಇರಲಿ ಈ ಎರಡು ಚಿತ್ರಗಳ ನಡುವೆ ಸ್ಪರ್ಧೆ ನಡೆಯುತ್ತಿದೆ ಎಂದು ತಿಳಿದುಕೊಳ್ಳುವುದರ ಬದಲು ಎರಡು ಕನ್ನಡ ಚಿತ್ರಗಳು ಒಂದೇ ದಿನ ನೋಡುವ ಅವಕಾಶ ಸಿಕ್ಕಿದೆ ಎಂದ ಸಂತಸದಿಂದ ಎರಡು ಚಿತ್ರವನ್ನು ನೋಡಿ ಗೆಲ್ಲಿಸಿ.

 

 

ಕಡ್ಡಿಪುಡಿ ಸಿನಿಮಾದ ನಂತರ ಶಿವಣ್ಣ ದುನಿಯಾ ಸೂರಿ ಡೈರೆಕ್ಷನ್ ನಲ್ಲಿ ಅಭಿನಯಿಸುತ್ತಿರುವ ಟಗರು ಚಿತ್ರದಲ್ಲಿ ವಿಲನ್‌ಗಳಾಗಿ ಧನಂಜಯ್‌ ಮತ್ತು ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ ಮಾನ್ವಿತಾ ಮತ್ತು ಭಾವನಾ ಶಿವರಾಜಕುಮಾರ್’ಗೆ ನಾಯಕಿಯರಾಗಿ ನಟಿಸಿದ್ದಾರೆ. ಚರಣ್ ರಾಜ್ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ರಿಲೀಸ್ ಆಗಿರುವ ಮೇಕಿಂಗ್ ವಿಡಿಯೋಗಳು, ಟೀಸರ್ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿವೆ.

ಅಂದಹಾಗೆ ‘ರಾಜರಥ’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿಬಂದಿದ್ದು ಅನೂಪ್ ಭಂಡಾರಿ ನಿರ್ದೇಶಿದ್ದಾರೆ. ಚಿತ್ರದಲ್ಲಿ ನಿರೂಪ್ ಭಂಡಾರಿ ಮತ್ತು ಅವಂತಿಕ ಶೆಟ್ಟಿ ನಾಯಕ ನಾಯಕಿರಾಗಿ ಕಾಣಿಸಿಕೊಂಡಿದ್ದು ರವಿಶಂಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಖ್ಯಾತ ನಟ ಆರ್ಯ ಜೊತೆ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಕೂಡ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಚಿತ್ರಕ್ಕೆ ಕಥೆಬರೆದು ನಿರ್ದೇಶನ ಮಾಡಿರುವ ಅನೂಪ್ ಭಂಡಾರಿಯವರೇ ಸ್ವತಃ ಸಂಗೀತ ನಿರ್ದೇಶನವನ್ನು ಕೂಡ ನೀಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top