fbpx
ಸಮಾಚಾರ

ಪ್ರಾಚೀನ ಕಾಲದಿಂದಲೂ ಕಿರಿಕಿರಿ ಅನುಭವಿಸುತ್ತಿರುವ ಕಾವೇರಿ..!

ಕರ್ನಾಟಕದ ಮಗಳು ಕಾವೇರಿಗೆ ಪ್ರಾಚೀನ ಕಾಲದಿಂದಲೂ ಕಿರಿಕಿರಿಗಳ ಕೋಟಲೆಗಳು ನಡೆದೇ ಇವೆ. ಕಾವೇರಿ ಅಪ್ಪಟ ಕರ್ನಾಟಕದ ಮಗಳು. ತವರಿನಲ್ಲಿ ಆಕೆ ಹರಿದುದಕ್ಕಿಂತಲೂ ಗಂಡನ ಮನೆಯಲ್ಲೇ ಸುದೀರ್ಘವಾಗಿ ಬಾಳಬೇಕೆಂಬ ಇಂದಿನ ಗಯ್ಯಾಳಿ ತಂತ್ರವನ್ನು ತಮಿಳರು ಆ ಕಾಲದಿಂದಲೇ ಪ್ರತಿಪಾದಿಸುತ್ತ ಬಂದಿದ್ದಾರೆ.

ಕಾವೇರಿಗೆ ಸಂಬಂಧಿಸಿದಂತೆ ಪುರಾಣ ಕಾಲದ ಒಂದು ಐತಿಹ್ಯವನ್ನು ಹಿರಿಯ ಸಾಹಿತಿ ಶೇಷನಾರಾಯಣ ತಮ್ಮ ಕಾವೇರಿ ಪುಸ್ತಕದಲ್ಲಿ ನೀಡುತ್ತಾರೆ. ಕಾವೇರಿ ಎಂಬ ಕನ್ಯೆಯನ್ನು ತಮಿಳು ಅಯ್ಯರ ಬ್ರಾಹ್ಮಣ ಕುಲಕ್ಕೆ ಸೇರಿದ ಅಗಸ್ತ ಋಷಿ ವರಿಸುತ್ತಾನೆ. ಹೀಗಾಗಿ ಕಾವೇರಿಯ ಸೌಭಾಗ್ಯ ಕನ್ನಡ ನಾಡಿನಿಂದ ತಮಿಳುನಾಡಿಗೆ ಸ್ಥಳಾಂತರಗೊಂಡಿತು. ಈ ವ್ಯಾಜ್ಯ ಪುರಾಣ ಕಾಲದಿಂದಲೂ ಇತಿಹಾಸಕ್ಕೆ ಮುಂದುವರಿಯಿತು.

1146ರಿಂದ 1163ರವರೆಗೆ ಚೋಳ ನಾಡನ್ನು (ತಮಿಳುನಾಡು) ಎರಡನೇ ರಾಜರಾಜನ್ ಪರಿಪಾಲಿಸುತ್ತಿದ್ದ. ಮೈಸೂರು ಪ್ರಾಂತವನ್ನು ಹೊಯ್ಸಳ (ಭೋಸಳ) ನರಸಿಂಹ, ಆಳುತ್ತಿದ್ದ. ಆಗ ಈ ದೊರೆ ಕಾವೇರಿಯ ನಡುವೆ ಕೃತಕ ಗುಡ್ಡಗಳನ್ನು ನಿರ್ಮಿಸಿ ನದಿಯ ಪಾತ್ರ ಬದಲಾಯಿಸಿ ಬಿಟ್ಟಿದ್ದ. ಹೀಗಾಗಿದ್ದರಿಂದ ಕಾವೇರಿ ನದಿಗೆ ನೀರಿನ ಪ್ರಮಾಣ ಕಡಿಮೆಯಾಗಿ ತಮಿಳುನಾಡಿನಲ್ಲಿ ಕ್ಷಾಮ ತಲೆದೋರಿತು. ಇದನ್ನು ಗಮನಿಸಿದ ಎರಡನೇಯ ರಾಜರಾಜನ್ ದಂಡೆತ್ತಿ ಬಂದು ನರಸಿಂಹ ಅರಸು ನಿರ್ಮಿಸಿದ್ದ ತಡೆಯನ್ನು ಒಡೆದು ಹಾಕಿದ. ಹಾಗೂ ತನ್ನ ನಾಡಿಗೆ ಕಾವೇರಿ ನೀರು ಹರಿಯಲು ಬಿಟ್ಟ. ಇದು ಇತಿಹಾಸದ ಕಾಲದ ಮಾತು.

ಇನ್ನು ಮೈಸೂರು ಯದುವಂಶದ ಮಹಾರಾಜರ ಆಡಳಿತಕ್ಕೆ ಒಳಪಟ್ಟಾಗ ಅಲ್ಲಿ ನಿಜವಾದ ಆಡಳಿತ ಸೂತ್ರ ಇದ್ದಿದ್ದು ಬ್ರಿಟಿಷ್ ರೆಸಿಡೆಂಟರಿಗೆ ಹಾಗೂ ಇಡೀ ಪ್ರಾಂತವನ್ನು ತಮ್ಮ ಅಂಕುಶದಿಂದ ನಿರ್ದೇಶಿಸುತ್ತಿದ್ದ ತಮಿಳು ಮೂಲದ ಅಧಿಕಾರಿಗಳಿಂದ. ಬಹುಶಃ ಸರ್.ಎಮ್ ವಿಶ್ವೇಶ್ವರಯ್ಯರವರಂತಹ ಕೆಲವೇ ಕೆಲವು ಜನ ಕನ್ನಡಿಗರನ್ನು ಬಿಟ್ಟರೆ ಇಡೀ ಆಡಳಿತ ತಮಿಳುಮಯ ಆಗಿತ್ತೆಂದರೆ ತಪ್ಪಾಗದು. ಹೀಗಾಗಿ ಮೈಸೂರು, ಮಂಡ್ಯ ಮೇಲುಕೋಟೆ, ಬೆಂಗಳೂರು, ಹಾಸನ ಇತ್ಯಾದಿ ಕಡೆಗಳಲ್ಲಿ ಅಯ್ಯರ, ಅಯ್ಯಂಗಾರರು ಚಟ್ಟಿಯಾರರು, ಮೊದಲಿಯಾರರು, ಇವರೆಲ್ಲ ಸ್ಥಾಯಿಯಾಗಿ ನಿಂತು ಕೆನೆ ಪದರಾಗಿ ಬಿಟ್ಟರು.

ಆ ಕಾಲಕ್ಕೆ ಕಾವೇರಿಯ ಬಗ್ಗೆ ತಮಿಳುನಾಡು ಎಷ್ಟೊಂದು ಕುಹಕವಾಗಿ ತನ್ನ ಬ್ರಿಟಿಷ್ ರೆಸಿಡೆಂಟ್‍ರ ಮೂಲಕ ಅಣಕವಾಡುತ್ತಿತ್ತೆಂದರೆ ಮೈಸೂರಿನ ಕಾವೇರಿ ಎಂಬುದು ಒಂದು ಸುಂದರ ಜಿಂಕೆ. ಮದರಾಸು ಪ್ರಾಂತ್ಯ ಹೆಬ್ಬಾವು ಇಲ್ಲವೇ ನುರಿತ ಬೇಟೆಗಾರ. ಒಂದೋ ಜಿಂಕೆ ಎರಡರಲ್ಲಿ ಒಂದಕ್ಕೆ ಒಲಿಯಬೇಕು ಇಲ್ಲವೇ ‘ಬಲಿಯಾಗಬೇಕು’. 1892, 1924 ಕಾವೇರಿ ಒಪ್ಪಂದಗಳು ಮತ್ತು ಕೆ.ಆರ್.ಎಸ್ ಆಣೆಕಟ್ಟು ನಿರ್ಮಾಣದಲ್ಲಿಯ ವಿಳಂಬ ಇವೆಲ್ಲವುಗಳನ್ನು ಸಮರ್ಥಿಸುತ್ತಿವೆ. ಇದು ಹೋಗಲಿ ತಮಿಳರು ಈಗಲೂ ಕೂಡ ಆಯಕಟ್ಟಿನ ಸ್ಥಳದಲ್ಲಿ ಕರ್ನಾಟಕದಲ್ಲಿ ಇದ್ದುಕೊಂಡು ತಮ್ಮ ನಾಡಿನ ಋಣವನ್ನು ತೀರಿಸುತ್ತಲೇ ಇದ್ದಾರೆ. ಈ ಮಾತನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮರ್ಪಕ ಉದಾಹರಣೆಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಿಳಿಗುಂಡ್ಲುವಿನಿಂದ ಪ್ರಾರಂಭಿಸಿ ಸುಪ್ರಿಂ ಕೋರ್ಟ್‍ವರೆಗೆ; ವಿಧಾನಸೌಧದಿಂದ ಚೆನ್ನೈನ ಸೆಕ್ರೆಟರಿಯೇಟ್‍ವರೆಗೆ ಗುಪ್ತ ಗಾಮಿನಿಯಾಗಿಯೇ ಈ ತಮಿಳು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಲೇ ಬಂದಿದ್ದಾರೆ. ಇವರನ್ನು ಆಯ ಕಟ್ಟಿನ ಜಾಗೆಯಲ್ಲಿ ಕೂಡ್ರಿಸಿದ ನಮ್ಮ ರಾಜ್ಯ ಸರ್ಕಾರಕ್ಕೆ ಏನೆನ್ನಬೇಕು? ಮೈಸೂರು ಮಹಾರಾಜರ ಕಾಲದಲ್ಲಿ ಅವರಿಗೆ ಬ್ರಿಟಿಷರ ತನ್ಮೂಲಕ ಮದರಾಸು ಪ್ರಾಂತದ ಭಯವಿತ್ತು. ಆದರೆ ಈ ಪ್ರಜಾಪ್ರಭುತ್ವದ ಕಾಲದಲ್ಲಿ ಇಂತಹ ಪ್ರಮಾದಗಳು ಸರಣಿಯಂತೆ ಸಂಭವಿಸುತ್ತಲೇ ಇವೆ. ಮೈಸೂರು ಪ್ರಾಂತದ ಬ್ರಿಟಿಷ್ ಚೀಫ್ ಕಮೀಷನರ್ ಆಗಿದ್ದ ಕಬ್ಬನ್ (ಬೆಂಗಳೂರಿನಲ್ಲಿ ಈತನ ಹೆಸರಿನಲ್ಲಿ ಕಬ್ಬನ್ ಪಾರ್ಕ್ ನಿರ್ಮಾಣವಾಗಿದೆ) ‘ ಮದರಾಸು ತೋಳಗಳಿಂದ ಮೈಸೂರನ್ನು ರಕ್ಷಿಸಲೇ ಬೇಕು’ ಎಂದು ತನ್ನ ಹಿರಿಯ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದ.

ತಮಿಳುನಾಡಿನ ಪೂಂಪಟ್ಟಣದಿಂದ ತಂಜಾ ವೂರುವರೆಗಿನ 100 ಕಿಲೋ ಮೀಟರ್ ರಸ್ತೆಯ ಇಕ್ಕೆಲೆಯಲ್ಲಿ ಕಾವೇರಿ ನೀರು ಪಡೆದು ಸಮೃದ್ಧಿಗೊಂಡ ಹಸಿರಿನ ಹೊಲಗಳಿವೆ. ಇಂತಹ ವಿಸ್ತೀರ್ಣದ ಒಂದಾದರೂ ಉದಾಹರಣೆ ಮಂಡ್ಯ ಜಿಲ್ಲೆಯಲ್ಲಿ ಇದೆಯೇ? ಸುಪ್ರಿಂಕೋರ್ಟ್ ಕರ್ನಾಟಕದ ಪಾಲಿಗೆ ವಕ್ರವಾಗಿಯೇ ಪರಿಣಮಿಸಿದೆ. 1991 ರಲ್ಲಿ ನೀಡಿದ ಆದೇಶದಲ್ಲಿ ಹೀಗೆ ಹೇಳುತ್ತಿದೆ. ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ 205 ಟಿ.ಎಂ.ಸಿ ಅಡಿ ನೀರು ಇರುವಂತೆ ಕರ್ನಾಟಕ ತನ್ನ ಜಲಾಶಯಗಳಿಂದ ನೀರನ್ನು ಬಿಡುಗಡೆ ಮಾಡಬೇಕು. ಕರ್ನಾಟಕ ತನ್ನ ನೀರಾವರಿ ಪ್ರದೇಶವನ್ನು 11.2 ಲಕ್ಷ ಎಕರೆಗಳಿಗಿಂತ ಹೆಚ್ಚಿಸಬಾರದು. ಇಂತಹ ಆದೇಶ ತಮಿಳುನಾಡಿಗೆ ಇಲ್ಲ. ಇಂತಹ ಪರಂಪರೆ ಈಗಲೂ ಮುಂದುವರೆದಿದೆ. ದುರ್ದೈವದ ಮಾತೆಂದರೆ ನಿಸರ್ಗವೂ ಸಹ ಕರ್ನಾಟಕಕ್ಕೆ ಅನ್ಯಾಯ ಎಸಗಿದೆ. ಕರ್ನಾಟಕದಲ್ಲಿ ಕಾವೇರಿ ನದಿ ಹರಿಯುವ ಪಾತ್ರ ತಮಿಳುನಾಡಿಗಿಂತ 1314 ಮೀಟರ್‍ನಷ್ಟು ಎತ್ತರದಲ್ಲಿದೆ. ಇದು ಒಂದು ರೀತಿಯಲ್ಲಿ ಅನ್ಯಾಯವಲ್ಲವೇ?!

ತಮಿಳುನಾಡಿನ ಮುಂಗಾರಿನ ಕುರುವೈ ಹಾಗೂ ಹಿಂಗಾರಿನ ಸಾಂಬಾ ಬೆಳೆಗೆ ಯಾವುದೇ ನಿಯಂತ್ರಣವಿಲ್ಲ. ಒಂದು ಕೆ.ಜಿ ಭತ್ತ ಬೆಳೆಯಲು 15000 ಲೀಟರ್ ನೀರನ್ನು ಅವರು ಬಳಸುತ್ತಾರೆ. ಇದರಲ್ಲಿ ಪೋಲಾಗುವ ನೀರೇ ಜಾಸ್ತಿ. ಹೆಚ್ಚು ನೀರಿನಿಂದ ಶೇ20 ರಷ್ಟು ಭತ್ತದಲ್ಲಿ ಜೊಳ್ಳು ಕಾಳುಗಳೇ ಬರುತ್ತಿವೆ ಎಂಬುದು ಅಲ್ಲಿಯ ರೈತರೇ ಹೇಳುತ್ತಾರೆ. ಕಾವೇರಿ ನದಿ ಪಾತ್ರದಲ್ಲಿ ಹರಿಯುವ ಮಳೆ ನೀರನ್ನು ಸುಪ್ರಿಂಕೋರ್ಟ್ ಮತ್ತು ಕೇಂದ್ರ ಸರ್ಕಾರದ ಸಮಿತಿಗಳು ಲೆಕ್ಕಕ್ಕೆ ತೆಗೆದುಕೊಂಡಿವೆ. ಆದರೆ 400 ಕಿ.ಮೀ ನಷ್ಟು ಕಾವೇರಿ ನದಿ ತಮಿಳುನಾಡಿನಲ್ಲಿ ಹರಿಯುತ್ತಿದೆ. ಅಲ್ಲಿ ಮಳೆ ನೀರಿನಿಂದಲೇ ಅದು ಸುಮಾರು 250 ಟಿ.ಎಮ್.ಸಿ ಅಡಿ ನೀರನ್ನು ಸಂಗ್ರಹಿಸುತ್ತಿದೆ. ಅವರ ನ್ಯಾಯ ತೋಳನಂತೆಯೇ ಇದೆ. ನೈಋತ್ಯ ಮನ್ಸೂನಿನ ಮಳೆ ಪ್ರದೇಶವಾದ ಕರ್ನಾಟಕದಿಂದ ಕಾವೇರಿ ನದಿ ನೀರೂ ಬೇಕು. ಮತ್ತು ಈಶಾನ್ಯ ಮನ್ಸೂನಿನ ತಮ್ಮ ಸ್ವಂತ ಹಕ್ಕಿನ ಮಳೆ ನೀರೂ ಬೇಕು. ಯಾಕೆಂದರೆ ತಮಿಳುನಾಡು ಪುಣ್ಯವಂತರ ನಾಡು. ಸದಾ ಕಾಲವೂ ಅಲ್ಲಿಯ ಕಾವೇರಿಯಲ್ಲಿ ನೀರು ಇರಲೇ ಬೇಕು ಅಲ್ಲವೇ?

ಪೀಳಿಗೆಗಳು ಬರುತ್ತಲೇ ಇವೆ. ಆದರೂ ಕಾವೇರಿಯ ಕೂಗು ಕರ್ನಾಟಕದಲ್ಲಿ ಬಲವಾಗುತ್ತಲೇ ಇಲ್ಲ. ನಿಷ್ಠುರ ಗುಣದ ಜನನಾಯಕರು ಮತ್ತು ಕನ್ನಡದ ಮಣ್ಣನ್ನು ಪ್ರೀತಿಸುವ ಅಧಿಕಾರಿಗಳು, ವಕೀಲರು ಬೇಕು. ಏನೇ ಆದರೂ ಸಹ ನಾವಿನ್ನೂ ತಮಿಳುನಾಡಿನವರು ಕಾವೇರಿಯ ಬಗ್ಗೆ ಹೊಂದಿರುವ ಆಕ್ರಮಣಕಾರಿ ಧೋರಣೆಯನ್ನು ರೂಢಿಸಿಕೊಂಡಿಲ್ಲ. ಇದರ ಅರ್ಧದಷ್ಟು ನಮ್ಮಲ್ಲಿ ಬಂದರೂ ಸಾಕು. ತಮಿಳುನಾಡು ಎಂಬ ತೋಳ ಬೀದಿ ನಾಯಿಯಂತೆ ಬೆದರಿ ಓಡಿಹೋಗಬಲ್ಲದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top