ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆ
ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಪಟ್ಟಣದಲ್ಲಿರುವ ಕಲ್ಲಿನ ಕೋಟೆಯು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಚಿತ್ರದುರ್ಗ ಕೋಟೆ ಎಂತಲೆ ಕರೆಯಲ್ಪಡುವ ಈ ಪ್ರಖ್ಯಾತ ಕೋಟೆಯು ಇಂದಿಗೂ ಸಹ ಇತಿಹಾಸ ಪ್ರಿಯ ಪ್ರವಾಸಿಗರ ಅತಿ ನೆಚ್ಚಿನ ಸ್ಥಳವಾಗಿ ಕಂಗೊಳಿಸುತ್ತದೆ. ಇದರ ಇತಿಹಾಸವನ್ನು ಸಂಕ್ಷೀಪ್ತವಾಗಿ ಕೆದಕಿದಾಗ ನಮಗೆ ತಿಳಿಯುವುದೇನೆಂದರೆ ಅಗಾಧವಾದ ಈ ಏಳು ಸುತ್ತಿನ ಕಲ್ಲಿನ ಕೋಟೆಯು ಒಂದೆ ಸಮಯದಲ್ಲಿ ನಿರ್ಮಾಣವಾಗದೆ ಕಾಲದ ಹಲವು ಸ್ತರಗಳಲ್ಲಿ ವಿವಿಧ ಆಡಳಿತಗಾರರ ಸುಪರ್ದಿಯಲ್ಲಿ ಹಂತ ಹಂತವಾಗಿ ನಿರ್ಮಾಣಗೊಂಡಿದೆ.
ಇದರ ನಿರ್ಮಾಣದಲ್ಲಿ ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಮೈಸೂರು ರಾಜರ ಅಧೀನದಲ್ಲಿದ್ದ ನಾಯಕರು ಅಥವಾ ಪಾಳೇಗಾರರು ಹೆಚ್ಚಾಗಿ ತಮ್ಮ ಕೊಡುಗೆಯನ್ನು ಈ ಕೋಟೆಯ ನಿರ್ಮಾಣದಲ್ಲಿ ಧಾರೆ ಎರೆದಿದ್ದಾರೆ. ನಂತರ ನಾಯಕರ ಕೊನೆಯ ಅರಸನಾಗಿದ್ದ ಮದಕರಿ ನಾಯಕನ ನಂತರ ಹೈದರಾಲಿ ಹಾಗೂ ಆತನ ಮಗನಾದ ಟಿಪ್ಪು ಈ ಕೋಟೆಯನ್ನು ತಮ್ಮೆ ತೆಕ್ಕೆಗೆ ತೆಗೆದುಕೊಂಡರು.
15 ರಿಂದ 18 ನೇಯ ಶತಮಾನದ ಮಧ್ಯದಲ್ಲಿ ನಿರ್ಮಾಣಗೊಂಡ ಈ ಕೋಟೆಯು ತನ್ನದೆ ಆದ ವೈಶಿಷ್ಟ್ಯವನ್ನು ಹೊಂದಿದ್ದು ಇತಿಹಾಸ ಪ್ರಿಯರನ್ನು ಆಕರ್ಷಿಸುತ್ತದೆ. ಶತ್ರುಗಳನ್ನು ತನ್ನ ಒನಕೆಯಿಂದ ಸೆದೆ ಬಡಿದೆ ಒಬವ್ವ ಎಂಬ ವೀರ ಮಹಿಳೆಯ ಕಥೆಯು ಈ ಕೋಟೆಯ ಜೊತೆ ನಂಟು ಹಾಕಿಕೊಂಡಿದೆ. ಇಂದಿಗೂ ಒಬವ್ವನ ಖಿಂಡಿ ಎಂಬ ರಂಧ್ರವನ್ನು ಕೋಟೆಯ ಗೋಡೆಯಲ್ಲಿ ಕಾಣಬಹುದು.
ಚಿತ್ರದುರ್ಗ ಕೋಟೆ ಎಂದ ಕೂಡಲೇ ಸಹಜವಾಗಿ ನೆನಪಿಗೆ ಬರುವುದು ಚಿತ್ರದುರ್ಗದ ಪಾಳೆಗಾರರು. ಹತ್ತನೇ ಶತಮಾನದಲ್ಲಿ ಚಿತ್ರದುರ್ಗ ಪ್ರದೇಶಗಳನ್ನು ಆಳುತ್ತಿದ್ದ ಅರಸರು ಕ್ರಿ.ಶ. 1070ರಲ್ಲಿಯೇ ಕೋಟೆಕ್ಕಿಸಿದರೆಂದು ಉಲ್ಲೇಖವಿದೆ. ಅದಾದನಂತರ ಈಪ್ರದೇಶವನ್ನು ಆಳಿದವರು ಕಾಲಕಾಲಕ್ಕೆ ಅಭಿವೃದ್ದಿ ಪಡಿಸಿಕೊಂಡು ಬಂದಿದ್ದಾರೆ. ಈ ಕೋಟೆಯ ಕರ್ನಾಟಕದಲ್ಲಿಯೇ ಪ್ರಸಿದ್ದಿಯನ್ನು ಪಡೆದಿದೆ. ಈ ಕೋಟೆಯು ಬೆಟ್ಟವನ್ನೆಲ್ಲಾ ಬಳಸಿಕೊಂಡು ಏಳು ಸುತ್ತುಗಳಿಂದ ಕೂಡಿ ಏಳುಸುತ್ತಿನ ಕೋಟೆಯಾಗಿ ರಚನೆಯಾಗಿದೆ.
ಚಿತ್ರದುರ್ಗದ ಕೋಟೆಯ ಬಾಗಿಲುಗಳು :-
ಮೊದಲನೇ ಸುತ್ತಿನ ಕೋಟೆ:
ಮೊದಲನೇ ಸುತ್ತಿನ ಕೋಟೆ ಮೇಲುದುರ್ಗವನ್ನು ಸುತ್ತುವರೆದಿದೆ. ಏಕನಾಥೇಶ್ವರಿ ಮಂದಿರದ ಮುಂದೆ ಕೆಳಗಿನ ತಗ್ಗು ಪ್ರದೇಶದಲ್ಲಿ ಈ ಮೊದಲನೇ ಕೋಟೆ ಸುತ್ತಿಗೆ ಮಹಾದ್ವಾರವಿದೆ. ಇದನ್ನು ’ಏಕನಾಥೇಶ್ವರಿ ಬಾಗಿಲು’ [ಅಜ್ಜಿಯ ಬಾಗಿಲು] ಎಂದು ಕರೆಯುತ್ತಾರೆ. ಈ ದ್ವಾರದ ಒಳಭಾಗದಲ್ಲಿ ಎರಡೂ ಬದಿ ಪಹರೆ ದುರ್ಗಗಳಿವೆ. ಕೋಟೆಯ ಮೊದಲನೆಯ ಸುತ್ತಿನ ಮಧ್ಯ ಭಾಗದಲ್ಲಿ ಏಕನಾಥೇಶ್ವರಿ ಮಂದಿರ. ದೀಪಸ್ತಂಬ, ಓಕಳಿಹೊಂಡ, ಸಿಡಿಕಟ್ಟೆ, ಟಂಕಸಾಲೆ ಮುಂತಾದವುಗಳಿವೆ.
ಏಕನಾಥೇಶ್ವರಿ ಮಂದಿರದಿಂದ ಮುಂದೆ ಸಾಗಿದರೆ ‘’ಭೂತನ ಬಾಗಿಲು’’ [ಹಿಡಿಂಬನಾಥ ಬಾಗಿಲು] ಇದ್ದು ಅಲ್ಲಿ ಹಿಡಿಂಬೇಶ್ವರ ಮಂದಿರವಿದೆ. ಈ ಪ್ರದೇಶದಲ್ಲಿ ಉಯ್ಯಾಲೆ ಕಂಬ, ಮುರುಘಾಮಠ, ಸಂಪಿಗೆಸಿದ್ದೇಶ್ವರ ದೇವಾಲಯ ಹಾಗೂ ಗಾಳಿಮಂಟಪ ಇವೆ. ಕಹಳೆ ಬತೇರಿ ಮತ್ತು ತುಪ್ಪಕೊಳದ ಬತೇರಿ ಸೇರಿಸುವ ಅಡ್ಡ ದ್ವಾರವನ್ನು ‘ಬಸವನ ಬಾಗಿಲು’ ಎಂದು ಹೇಳಲಾಗುತ್ತದೆ. ಈ ದ್ವಾರದಿಂದ ಗೋಪಾಲಸ್ವಾಮಿ ಮಂದಿರ ಮತ್ತು ಅರಮನೆಗೆ ಪ್ರವೇಶ ಕಲ್ಪಿಸಲಾಗಿದೆ. ತುಪ್ಪದ ಕೊಳದ ಬೆಟ್ಟ ಮತ್ತು ತಣ್ಣಿರು ದೊಣಿ ಬೆಟ್ಟಗಳ ಮಧ್ಯೆ ಇರುವ ಕೋಟೆ ಗೋಡೆಗೆ ಬಾಗಿಲಿದ್ದು ಅದನ್ನು ‘ಗರುಡಾಂಜನೇಯ ಬಾಗಿಲು’ ಎಂದು ಹೇಳಲಾಗುತ್ತದೆ. ತಣ್ಣಿರು ದೊಣೆ ಮತ್ತು ಒನಕೆ ಕಿಂಡಿಗಳಿಗೆ ಹೋಗುವ ದಾರಿಯ ಮಧ್ಯೆ ಇರುವ ಬಾಗಿಲನ್ನು ‘ನಾಗತಿ ಬಾಗಿಲು’ ಎಂದು ಹೇಳಲಾಗುತ್ತದೆ.
ಎರಡನೇ ಸುತ್ತಿನ ಕೋಟೆ:
ಏಕನಾಥೇಶ್ವರ ಬಾಗಿಲಿನಿಂದ ಮುಂದೆ ಸಾಗಿದರೆ ಎರಡೇ ಸುತ್ತಿನ ಕೋಟೆಯ ಮಹಾದ್ವಾರ ಇದೆ. ಈ ಮಹಾದ್ವಾರವನ್ನು ‘ಟೀಕಿನ ಬಾಗಿಲು’(ಕಸ್ತೂರಿ ರಂಗಪ್ಪನ ಬಾಗಿಲು) ಎಂದು ಹೇಳಲಾಗುತ್ತದೆ. ಬಾಗಿಲ ಪಕ್ಕದಲ್ಲಿ ದಿಡ್ಡಿ ಬಾಗಿಲಿದೆ. ಬಾಗಿಲಿನ ಚೌಕಟ್ಟಿನಲ್ಲಿ ಎರಡು ಗೂಡುಗಳಿದ್ದು ಒಳ ಭಾಗದಲ್ಲಿ ಎರಡು ಚಾವಡಿಗಳಿವೆ. ಚಾವಡಿ ಸ್ತಂಭಗಳ ಮೇಲೆ ಕಾಳಿಂಗ, ಆಂಜನೇಯ. ಗಣಪ ಶಿಲ್ಪಗಳಿವೆ. ಗೋಡೆಯಲ್ಲಿ ಬಂದೂಕು ಕಿಂಡಿಗಳು ಹಾಗೂ ಪಿರಂಗಿ ಗೂಡುಗಳಿವೆ. ಈ ಸುತ್ತನ್ನು ‘ಪಿರಂಗಿ ಸುತ್ತು’ ಕೋಟೆಯೆಂದು ಹೇಳಲಾಗುತ್ತದೆ. ಗರಡಿ ಮನೆ, ಮದ್ದಿನ ಮನೆ, ಕಲ್ಲಿನ ಕಣಜ ಹಾಗೂ ಬಿಚ್ಚುಗತ್ತಿ ಭರಮಣ್ಣನಾಯಕ ಸಮಾಧಿ ಇದೆ.
ಮೂರನೇ ಸುತ್ತಿನ ಕೋಟೆ:
ಮೂರನೇ ಸುತ್ತಿನ ಕೋಟೆಯ ಮಹಾದ್ವಾರಕ್ಕೆ ‘ಗಂಟೆ ಬಾಗಿಲು’ಎಂದು ಹೇಳಲಾಗುತ್ತದೆ. ಬಾಗಿಲ ಒಳಭಾಗದಲ್ಲಿ ಎರಡು ಚಾವಡಿಗಳು, ಮುಂಭಾಗದಲ್ಲಿ ಎರಡು ತಿರುಉಳ್ಳ ಕೋಟೆ ಗೋಡೆ ಹಾಗೂ ದ್ವಾರದ ಎಡಭಾಗಕ್ಕೆ ಬೆಟ್ಟದ ನೀರು ಹೊರಬರಲು ತೂಬು ಇದೆ.
ನಾಲ್ಕನೇ ಸುತ್ತಿನ ಕೋಟೆ:
ನಾಲ್ಕನೇ ಸುತ್ತಿನ ಕೋಟೆ ಬಾಗಿಲಿಗೆ ‘ ಜಾಗಟೆ ಬಾಗಿಲು’(ವಿಷದ ಕತ್ತಿ ಬಾಗಿಲು) ಎಂದು ಕರೆಯಲಾಗಿದೆ. ಈ ಬಾಗಿಲಿಗೆ ಜಾಗಟೆ ಕಟ್ಟುತ್ತಿದ್ದರಂತೆ ಹಾಗಾಗಿ ಈ ಹೆಸರು ಬಂದಿರಬಹುದಾಗಿದೆ. ಈ ಕೋಟೆಯ ಸಂದುಗಳಲ್ಲಿ ಗೂಡುಗಳನ್ನು ಮಾಡಿ ಅದರಲ್ಲಿ ವಿಷ ತುಂಬಿದ ಆಯುಧಗಳನ್ನಿಟ್ಟು, ಶತ್ರುಗಳು ದಾಳಿಮಾಡಿದಾಗ ಈ ಆಯುಧಗಳನ್ನು ಬಳಸುತ್ತಿದ್ದರು. ಈ ನಾಲ್ಕನೇ ಸುತ್ತಿನ ಕೋಟೆ ಆವರಣದ ಮೂರನೇ ಮಹಾದ್ವಾರದ ಎಡಭಾಗದಲ್ಲಿ ಗೊಂಬೆ ಚಾವಡಿ ಮಂಟಪ ಇದೆ.
ಐದನೇ ಸಿತ್ತಿನ ಕೋಟೆ:
ಐದನೇ ಸುತ್ತಿನಕೋಟೆ ಬಾಗಿಲನ್ನು ‘ಕಾಮನ ಬಾಗಿಲು’ ಎಂದು ಹೇಳಲಾಗಿದೆ. ಈ ದಾರಿಯ ಮೂಲಕ ಶತ್ರುಗಳು ಕೋಟೆಯ ಒಳಗೆ ಪ್ರವೇಶಿಸುವುದು ಅಷ್ಟುಸುಲಭದ ಮಾತಲ್ಲ ಹಾಗಾಗಿ ಇದನ್ನು ‘ಹುಲಿಯ ಮುಖದ ಬಾಗಿಲು’ ಎಂದು ಹೇಳಲಾಗಿದೆ. ಈ ಕೋಟೆಯ ಪ್ರವೇಶದ ಗೋಡೆಯ ಮೇಲೆ ಏಳುಹೆಡೆಯ ಸರ್ಪ, ವಿಘ್ವೇಶ್ವರ, ಕುಂಭ, ಕಮಲ, ಬಸವ, ಶಿವಲಿಂಗ, ವೀರಭದ್ರ, ಗಂಡುಬೇರುಂಡ ಹಾಗೂ ಹಂಸದ ಉಬ್ಬು ಕೆತ್ತನೆಗಳಿವೆ. ಮಹಾದ್ವರಕ್ಕೆ ಹೋಗಲು ನಾಲ್ಕು ತಿರುವುಗಳಿವೆ. ಪಶ್ಚಿಮಕ್ಕೆ ನಡೆದರೆ ಕಾಮನ ಬಾಗಿಲು ಇದೆ. ಈ ಬಾಗಿಲ ಪಕ್ಕದಲ್ಲಿ ದಿಡ್ಡಿ ಬಾಗಿಲು ಇದೆ. ಹಿಂಭಾಗದಲ್ಲಿ ಇಟ್ಟಿಗೆಯಿಂದ ನಿರ್ಮಿಸಿದ ಕಟ್ಟಡದ ಅವಶೇಷಗಳಿವೆ.
ಈ ಐದನೇ ಸುತ್ತಿನ ಕೋಟೆಯ ಸುತ್ತು ಬೃಹದಾಕಾರವಾಗಿದೆ. ಇದು ವೃತ್ತಾಕಾರದ ಹಾಗೂ ಚೌಕಾಕಾರದ ಬುರುಜುಗಳನ್ನು ಹೊಂದಿದೆ. ಹೊರಭಾಗದಲ್ಲಿ ವಿಶಾಲವಾದ ಕಂದಕಗಳಿವೆ. ನಾಲ್ಕು ಮತ್ತಿ ಐದನೇ ಸುತ್ತಿನ ನಡುವೆ ಎಣ್ಣೆ ಕೊಳ, ಮದ್ದು ಬೀಸುವಕಲ್ಲು, ರುಬ್ಬುವಗುಂಡು, ಒಂಟಿಕಲ್ಲು ಬಸವನಗುಡಿ, ಬನಶಂಕರಿ ಅಮ್ಮನ ಮಂದಿರ, ಅಮ್ಮನಗುಡಿ ಹಾಗೂ ಶಿವಾಲಯಗಳಿವೆ.
ಆರನೇ ಸುತ್ತಿನ ಕೋಟೆ:
ದುರ್ಗದ ಪೂರ್ವ ಭಾಗದಲ್ಲಿ ಆರನೇ ಸುತ್ತಿನ ಕೋಟೆ ಇದೆ. ಈ ಕೋಟೆಯಬಾಗಿಲಿಗೆ ‘ಗಾರೆಯ ಬಾಗಿಲು’ ಎಂದು ಹೇಳಲಾಗಿದೆ. ಈ ಬಾಗಿಲನ್ನು ನಯವಾದ ಗಾರೆಯಿಂದ ಲೇಪನ ಮಾಡಿರುವುದರಿಂದ ಇದನ್ನು ಈ ಹೆಸರಿನಿಂದ ಕರೆಯಲಾಗಿದೆ. ಈ ಕೋಟೆಯ ಹೊರಭಾಗದಲ್ಲಿ ಇರುವ ಕಂದಕವು ಕಾಮನ ಬಾಗಿಲಿನ ಮೊದಲನೇ ತಿರುವಿನ ಸಮೀಪದವರೆಗೂ ಹಾದು ಹೋಗಿದೆ.
ಏಳನೇ ಸುತ್ತಿನ ಕೋಟೆ:
ಈ ಏಳನೇ ಸುತ್ತು ಪರ್ವತದ ದಕ್ಷಿಣ ತಿದಿಯಿಂದ ಪೂರ್ವಕ್ಕೆ ಪ್ರಾರಂಭವಾಗಿ ಪೂರ್ವ ಮತ್ತು ಉತ್ತರ ಭಾಗಗಳ ಹಳೇ ಊರನ್ನು (ಹೊರ ಸುತ್ತು ಕೋಟೆಯ ಭಾಗವೇ ಹೊರ ಊರು) ಸೇರಿದಂತೆ ಪೂರ್ಣ ಪರ್ವತವನ್ನು ಸುತ್ತಿಕೊಂಡಿದೆ. ಈ ಏಳನೇ ಸುತ್ತಿನ ಕೋಟೆಗೆ ಐದು ಮುಖ್ಯ ಮಹದ್ವರಗಳವೆ. ಪೂರ್ವ ದಿಕ್ಕಿನ ಮುಖ್ಯ ದ್ವಾರಕ್ಕೆ ‘ರಂಗಯ್ಯನ ಬಾಗಿಲು’ (ನೀರ್ತಡಿ ರಂಗಯ್ಯಸ್ವಾಮಿ ಹೆಸರಿನಲ್ಲಿ) ಎಂದು ಹೇಳಲಾಗಿದೆ. ಈ ದ್ವಾರವು ಕಮಾನಿ ನಾಕಾರದಲ್ಲಿ ಇದ್ದು ನಾಲ್ಕು ದಿಕ್ಕುಗಳಿಗೂ ಬತೇರಿಗಳಿವೆ. ಪಿರಂಗಿ ಮತ್ತು ಕೋವಿ ಕಿಂಡಿಗಳಿವೆ ದ್ವಾರದ ಎರಡೂ ಬದಿಯಲ್ಲಿ ದಿಡ್ಡಿ ಬಾಗಿಲುಗಳಿವೆ. ಈಗ ಅವುಗಳನ್ನು ಶ್ರೀ ಸಿತಾರಾಮ ಮತ್ತು ಶ್ರೀ ಆಂಜನೇಯ ಸ್ವಾಮಿಗಳ ಮಂದಿರಗಳನ್ನಾಗಿ ಮಾಡಿದ್ದಾರೆ. ಒಳಭಾಗದಲ್ಲಿ ಎರಡು ಕಾವಲು ಚಾವಡಿಗಳಿದ್ದು ಈಗ ಅದನ್ನು ಪ್ರಾಚ್ಯವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ.
ಪರ್ವತದ ಪಶ್ಚಿಮ ದಿಕ್ಕಿನಲ್ಲಿ ಹನುಮನ ಮಂದಿರವಿರುವ ಸ್ಥಳದಲ್ಲಿ ಒಂದು ಮುಖ್ಯ ದ್ವಾರವಿದೆ. ಇದನ್ನು ‘ಹನುಮನ ಬಾಗಿಲು’ ಎಂದು ಹೇಳಲಾಗಿದೆ. ಈ ದ್ವಾರದಲ್ಲಿ ಎರಡು ಕಾವಲು ಚಾವಡಿಗಳಿವೆ. ಈ ದ್ವಾರಕ್ಕೆ ‘ಒನಕೆ ಕಿಂಡಿ ಬಾಗಿಲು’ ಎಂದು ಹೇಳಲಾಗಿದೆ.
ದುರ್ಗದ ಉತ್ತರಭಾಗದಲ್ಲಿರುವ ಮುಖ್ಯದ್ವಾರಕ್ಕೆ ‘ಆನೇಬಾಗಿಲು’ಎಂದು ಹೇಳಲಾಗಿದೆ. ಇದನ್ನು ಸಂತೇಬಾಗಿಲು, ಸಿದ್ಧಯ್ಯನ ಬಾಗಿಲು, ಫತೆ ಸರ್ವಾಜ ಎಂದು ಸಹ ಹೇಳಲಾಗಿದೆ. ಇದನ್ನು ಸಂತೇಬಾಗಿಲು, ಸಿದ್ಧಯ್ಯನಬಾಗಿಲು, ಫತ್ತೆ ದರ್ವಾಜ ಎಂದು ಸಹ ಹೇಳಲಾಗಿದೆ. ಇದರ ಪೂರ್ವ ಭಾಗದಲ್ಲಿ ಒಂದು ದ್ವಾರವಿದ್ದು ಇದನ್ನುಈಚೆಗೆ ಮುಚ್ಚಿ ಲಕ್ಷ್ಮೀ ನಾರಾಯಣ ಮಂದಿರವನ್ನಾಗಿ ನಿರ್ಮಿಸಿ ಅದರ ಪಕ್ಕದಲ್ಲೇ ಉತ್ತರಕ್ಕೆ ಶ್ರೀ ಆಂಜನೆಯಸ್ವಾಮಿ ಮಂದಿರ ಹಾಗೂ ದಕ್ಷಿಣಕ್ಕೆ ಶ್ರೀ ಗಣಪತಿ ಮಂದಿರ ನಿರ್ಮಿಸಲಾಗಗಿದೆ. ದ್ವಾರದ ಮೇಲ್ಭಾಗದಲ್ಲಿ ಶಿಲೆಯ ಎರಡು ಆನೆಗಳನ್ನು ಕೆತ್ತಲಾಗಿದೆ. ಈ ಆನೆಗಳಿರುವುದರಿಂದಲೇ ಇದನ್ನು ಆನೆಯ ಬಾಗಿಲು ಎಂದು ಹೇಳಲಾಗಿದೆ. ಈ ಬಾಗಿಲ ಹತ್ತಿರ ಪಾಳೆಗಾರರ ಕಾಲದಲ್ಲಿ ಹುಲಿ ಕಾಳಗ, ಕುಸ್ತಿ ಕಾಳಗ ಮುಂತಾದ ಕೆಲವು ಕ್ರೀಡೆಗಳು ನಡೆಯುತ್ತಿದ್ದವು ಎಂದು ಹೇಳಲಾಗಿದೆ. ಈ ದ್ವಾರದ ಇಕ್ಕಲುಗಳಲ್ಲಿ ಚಾವಡಿಗಳಿವೆ.
ದುರ್ಗದ ಕೋಟೆಯ ದಕ್ಷಿಣ ಭಾಗದಲ್ಲಿ ಒಂದು ಕಮಾನು ಮಾದರಿಯಲ್ಲಿರುವ ಮುಖ್ಯದ್ವಾರವಿದೆ. ಅದನ್ನು’ಅಹೋಬಲ ನರಸಿಂಹಸ್ವಾಮಿ ಬಾಗಿಲು’, ಎನ್ನುತ್ತಾರೆ. ಇದರ ಸಮೀಪದಲ್ಲೇ ಜೋಡಿ ಬತೇರಿ ಬಾಗಿಲು ಇದೆ. ಇಲ್ಲಿಯ ಬಾಗಿಲು ಇಕ್ಕೆಲಗಳಲ್ಲಿ ಮೇಲೇ ಪಹರೆ ಚಾವಡಿಗಳಿವೆ. ಬಾಗಿಲು ಮುಂಭಾಗದಲ್ಲಿ ಜೋಡು ಬತೇರಿಗಳನ್ನು ಕಟ್ಟಲಾಗಿದೆ.
ದುರ್ಗದ ಕೋಟೆಯ ವಾಯುವ್ಯ ದಿಕ್ಕಿನಲ್ಲಿ ಒಂದು ಕಮಾನು ಮಾದರಿಯಲ್ಲಿರುವ ಮುಖ್ಯದ್ವಾರವಿದೆ. ಅದನ್ನು‘ಉಚ್ಚಂಗಿ ಬಾಗಿಲು’, ಉತ್ಸಾವಾಂಬ ಬಾಗಿಲು, ಸಿಹಿನೀರು ಹೊಂಡದ ಬಾಗಿಲು ಎಂದು ಹೇಳಲಾಗಿದೆ. ಉಚ್ಚಂಗಿಯಲ್ಲಮ್ಮ ಪಾಳೆಗಾರರ ವಂಶದೇವತೆ ಆದುದರಿಂದ ದೇವತೆ ಹೇಸರಿಗೆ ಈ ದ್ವಾರವನ್ನು ನಿರ್ಮಿಸಲಾಗಿದೆ. ದ್ವಾರದ ಬಳಿ ಎರಡು ಚಾವಡಿಗಳಿವೆ. ಊರಿನ ಒಳಗೆ ಹೋಗಲು ಮತ್ತೋದು ದ್ವಾರವಿದೆ. ಚೌಕಾರಾರದ ಅಂಕಣವನ್ನು ದಾಟಿದರೆ ಮತ್ತೋಂದು ಬಾಗಿಲು ಇದ್ದು ಇದರ ಪಕ್ಕದಲ್ಲಿ ಎರಡು ದಿಡ್ಡಿ ಬಾಗಿಲುಗಳಿವೆ.
ಒನಕೆ ಓಬವ್ವ
ಒನಕೆ ಓಬವ್ವಳ ಸಾಹಸಗಾಥೆ ಕನ್ನಡ ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ. ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, ಹೈದರ-ಅಲಿಯ ಸೈನ್ಯವು ಕೋಟೆಯನ್ನು ಸುತ್ತುವರೆದಿತ್ತು. ಒಬ್ಬ ಮಹಿಳೆಯನ್ನು ಕೋಟೆಯ ಕಿಂಡಿಯಿಂದ ಒಳ ಹೊಗುವುದನ್ನು ಕಂಡ ಹೈದರ-ಅಲಿಯು ತನ್ನ ಸೈನ್ಯವನ್ನು ಆ ಕಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ ಕಾವಲುಗಾರನ ಹಂಡತಿಯೇ ಓಬವ್ವ. ಅವಳು ಗಂಡನಿಗೆ ಊಟ ತರುತ್ತಾಳೆ. ಗಂಡನನ್ನು ಊಟಕ್ಕೆ ಕೂರಿಸಿ, ನೀರು ತರಲು ಹೋಗುತ್ತಾಳೆ. ಅಲ್ಲಿ ಹೈದರ-ಅಲಿಯ ಸೈನಿಕರನ್ನು ಕಿಂಡಿಯ ಮೂಲಕ ನುಸುಳುವದನ್ನು ಕಾಣುತ್ತಾಳೆ. ಎದೆಗುಂದದೆ ಕೈಯಲ್ಲಿದ್ದ ಒನಕೆಯಿಂದಲೇ ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದ ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತದೆ. ಓಬವ್ವನ ಸಮಯೋಚಿತ ಯುಕ್ತಿ ಮತ್ತು ಧೈರ್ಯವನ್ನು ಈಗಲೂ ಜನ ನೆನೆಯುತ್ತಾರೆ. ಈ ಘಟನೆಗೆ ಸಾಕ್ಷಿಯಾಗಿ ಈಗಲೂ ಆ ಕಿಂಡಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು. ಅದು ಚಿತ್ರದುರ್ಗದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ದುರ್ಗ ಎಂಬ ಹೆಸರಿಗೆ ಕಾರಣ
ಚಿತ್ರದುರ್ಗಕ್ಕೆ ಹಿಂದೆ ಅನೇಕ ಹೆಸರುಗಳಿದ್ದ ಬಗ್ಗೆ ದಾಖಲೆಗಳಿವೆ. ದ್ವಾಪರಯುಗದಲ್ಲಿ ಅದು ಹಿಡಿಂಬಪಟ್ಟಣ ಎನಿಸಿತ್ತು. ಕದಂಬರ ಕಾಲದಲ್ಲಿ ಚಂದ್ರವಳ್ಳಿ ಎಂಬ ಹೆಸರು ಪಡೆಯಿತು. ಚಾಲುಕ್ಯರ ಕಾಲದಲ್ಲಿ ಅದು ಸೂಳ್ಗಲ್ಲಾಯಿತು. ಹೊಯ್ಸಳರು ಅದನ್ನು ಪೆರುಮಾಳೆಪುರ ಎಂದರು. ವಿಜಯನಗರ ಕಾಲದಲ್ಲಿ ಅದು ಬೆ(ಚಿ?)ಮ್ಮತ್ತನಕಲ್ಲು ಅಥವಾ ಬೆಮ್ಮತ್ತನೂರಾಯಿತು. ಪಾಳೆಯಗಾರರ ಕಾಲದಲ್ಲಿ ಅದು ಛತ್ರಕಲ್ದುರ್ಗ ಎಂಬುದು ಚಿತ್ರಕಲ್ದುರ್ಗವಾಯಿತು. ಟಿಪ್ಪು ಸುಲ್ತಾನ್ ಅದನ್ನು ಫರ್ರಕಾಬಾದ್ ಎಂದು ಕರೆದನು. ಬ್ರಿಟೀಷರ ಕಾಲದಲ್ಲಿ ಅದಕ್ಕೆ ಚಿತ್ತಲ್ಡ್ರುಗ್ ಎಂದು ಹೆಸರಿತ್ತು. ಈಚೆಗೆ ಅದು ಚಿತ್ರದುರ್ಗ ಎಂಬ ಹೆಸರನ್ನು ಪಡೆದಿದೆ. ಹೀಗೆ ಇತಿಹಾಸದ ಬೇರೆ ಬೇರೆ ಕಾಲಘಟ್ಟಗಳಲ್ಲಿ ಚಿತ್ರದುರ್ಗಕ್ಕೆ ಸೂಳ್ಗಲ್ಲು, ಚೂಳಂಗಲ್ಲು, ಚಿಮ್ಮತ್ತಿನೂರು, ಚಿಮ್ಮತ್ತಿನಕಲ್ಲು, ಚಿಮತುರಕಲ್ಲು, ಚಿತ್ರಕಲ್ಲುದುರ್ಗ, ಚಿಟಲ್ಡ್ರುಗ್, ಫರ್ರುಕಾಬಾದ್ ಮುಂತಾದ ಹೆಸರುಗಳಿಂದ ಕರೆಯಲಾಗಿದೆ
ಚಿತ್ರದುರ್ಗ ಬೆಂಗಳೂರಿನಿಂದ ಸುಮಾರು 205 ಕಿ.ಮೀ ಗಳಷ್ಟು ಅಂತರದಲ್ಲಿದ್ದು ಬಸ್ಸು ಹಾಗೂ ರೈಲಿನ ಮೂಲಕ ಸುಲಭವಾಗಿ ತೆರಳಬಹುದು. ಪುಣೆ ನಗರವನ್ನು ಬೆಂಗಳೂರಿನಿಂದಿಗೆ ಜೋಡಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ರ ಮೂಲಕ ನೇರವಾಗಿ ಚಿತ್ರದುರ್ಗವನ್ನು ತಲುಪಬಹುದು.
-Rajani MR
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
